ಬೆಂಗಳೂರು: ಕರ್ನಾಟಕ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ಬ್ರೇಕ್ ಫಾಸ್ಟ್ ರಾಜಕೀಯ ಜೋರಾಗಿದೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿತ್ತು. ಇದರ ಬೆನ್ನಲ್ಲೆ ಡಿಕೆಶಿ ತಮ್ಮ ಮನೆಗೆ ಮುಖ್ಯಮಂತ್ರಿಗಳನ್ನು ಬ್ರೇಕ್ ಫಾಸ್ಟ್ ಗೆ ಆಹ್ವಾನಿಸಿದ್ದಾರೆ.
ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ಮನೆಗೆ ಸಿದ್ದರಾಮಯ್ಯ ಬರಲಿದ್ದಾರೆ. ಈ ವೇಳೆ ಇಬ್ಬರು ಒಟ್ಟಿಗೆ ಬ್ರೇಕ್ ಫಾಸ್ಟ್ ಮಾಡಲಿದ್ದು, ರಾಜಕೀಯ ಚರ್ಚೆಯೂ ನಡೆಯಲಿದೆ.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಡಿಸಿಎಂ ಹಾಗೂ ಸಿಎಂ ಇಬ್ಬರು ಒಟ್ಟಿಗೆ ಉಪಹಾರ ಮಾಡಿ ತಮ್ಮ ಮಧ್ಯ ಭಿನ್ನಾಭಿಪ್ರಾಯ ಇಲ್ಲ. ತಾವು ಹೈಕಮಾಂಡ್ ಹೇಳಿದ್ದನ್ನು ಒಪ್ಪುವುದಾಗಿ ತಿಳಿಸಿ ಒಗ್ಗಟ್ಟಿನ ಸಂದೇಶ ರವಾನಿಸಿದ್ದರು. ಅದರ ಬೆನ್ನಲ್ಲೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಅವರನ್ನು ತಮ್ಮ ಮನೆಗೆ ಉಪಹಾರಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.
ಡಿಸಿಎಂ ಆಹ್ವಾನ ಒಪ್ಪಿದ ಸಿಎಂ ಸಿದ್ದರಾಮಯ್ಯ ತಮ್ಮ ಆಹ್ವಾನದಂತೆ ಮನೆಗೆ ಬರುವುದಾಗಿ ತಿಳಿಸಿದ್ದಾರೆ. ಇಂದು ಬೆಳಗ್ಗೆ 9.30ಕ್ಕೆ ಉಪಹಾರದ ಜೊತೆಗೆ ಒಂದಷ್ಟು ರಾಜಕೀಯ ಬೆಳವಣಿಗೆಗಳ ಚರ್ಚೆ ನಡೆಸಲಿದ್ದಾರೆ. ಇತ್ತ ಅಧಿಕಾರ ಹಂಚಿಕೆಗೆ ಕಿತ್ತಾಡಿದ್ದ ಉಭಯ ನಾಯಕರಿಂದ ಬ್ರೇಕ್ ಫಾಸ್ಟ್ ಪಾಲಿಟಿಕ್ಸ್ ಶುರುವಾಗಿದೆ ಎಂಬ ಚರ್ಚೆ ಜೋರಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರೋ ಡಿಕೆಶಿ, ನಾನು ಮತ್ತು ಮುಖ್ಯಮಂತ್ರಿಗಳು ಒಟ್ಟಾಗಿ, ಒಂದು ತಂಡವಾಗಿ ಕೆಲಸ ಮಾಡುತ್ತೇವೆ. ಅದನ್ನು ಮುಂದುವರಿಸುತ್ತೇವೆ. ಕರ್ನಾಟಕಕ್ಕೆ ನಾವು ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ, ನಮ್ಮ ಸಾಮೂಹಿಕ ಪ್ರಯತ್ನಗಳ ಬಲ ಹೆಚ್ಚಿಸುವ ಕುರಿತು ಚರ್ಚಿಸಲು ಮಾನ್ಯ ಮುಖ್ಯಮಂತ್ರಿಗಳನ್ನು ಉಪಾಹಾರಕ್ಕೆ ಆಹ್ವಾನಿಸಿದ್ದೇನೆ ತಿಳಿಸಿದ್ದಾರೆ.
ಇನ್ನು ಸಿಎಂ ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯಿಸಿರೋ ಬಿಜೆಪಿ ನಾಯಕ ಶ್ರೀರಾಮುಲು, ರಷ್ಯಾ-ಉಕ್ರೇನ್ ಮಧ್ಯೆ ಇದೇ ರೀತಿ ಮೂರು ತಿಂಗಳಿಗೊಮ್ಮೆ ಕದನ ವಿರಾಮ ಆಗುತ್ತದೆ ಆದರೆ ಯಾವಾಗ ಯಾರ ಮೇಲೆ ಯಾರೂ ಬಾಂಬ್ ಹಾಕುತ್ತಾರೋ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.












