ಉಡುಪಿ: ಪ್ರಧಾನಿ ನರೇಂದ್ರ ಮೋದಿ ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚ ಹಾಗೂ ಸುವರ್ಣ ತೀರ್ಥ ಮಂಟಪವನ್ನು ಅನಾವರಣಗೊಳಿಸಿದ್ದಾರೆ.

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿಯಾಗಿದ್ದು, ಈ ವೇಳೆ ಪರ್ಯಾಯ ಮಠಾಧೀಶರಾದ ಪುತ್ತಿಗೆ ಮಠದ ಶ್ರೀಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೇಷ್ಠವಾದ ಬಿರುದು ನೀಡಿ ಗೌರವಿಸಿದ್ದಾರೆ.

ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸ್ಕೃತದಲ್ಲಿ ಹಾಡಿ ಹೊಗಳಿದ ಪುತ್ತಿಗೆ ಮಠದ ಶ್ರೀಗಳು, ರಾಷ್ಟ್ರ ರಕ್ಷಾ ಕವಚ ಹಾಗೂ ಶ್ರೀಕೃಷ್ಣನ ಫೋಟೋ ನೀಡಿ ಭಾರತ ಭಾಗ್ಯವಿದಾತ ಎಂದು ಬಿರುದು ಸಮರ್ಪಿಸಿ ಗೌರವಿಸಿದ್ದಾರೆ. ಶ್ರೀಗಳ ಗೌರವ ಸ್ವೀಕರಿಸಿದ ಪ್ರಧಾನಿ ಮೋದಿ ಶ್ರೀ ಕೃಷ್ಣನ ದಿವ್ಯ ದರ್ಶನ, ಭಗವದ್ಗೀತೆ ಮಂತ್ರದ ಆಧ್ಯಾತ್ಮಿಕ ಅನುಭೂತಿ, ಸಂತರು, ಗುರುಗಳ ಉಪಸ್ಥಿತಿ ಎಲ್ಲವೂ ಲಭಿಸಿರುವುದು ನನ್ನ ಪರಮ ಸೌಭಾಗ್ಯ ಎಂದಿದ್ದಾರೆ.













