ಬಿಗ್ ಬಾಸ್ ಕನ್ನಡ ಸೀಸನ್ 12 ದಿನದಿಂದ ದಿನಕ್ಕೆ ಹೆಚ್ಚೆಚ್ಚು ಮನೋರಂಜನೆ ನೀಡುತ್ತಿದ್ದು, ಈ ವಾರ ಅತಿಥಿಗಳ ಆಗಮನದಿಂದ ಬಿಗ್ ಬಾಸ್ ಮನೆ ಮತ್ತಷ್ಟು ಕಳೆ ಕಟ್ಟಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ತ್ರಿವಿಕ್ರಂ, ಮೋಕ್ಷಿತಾ ಪೈ, ರಜತ್, ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ಈ ವಾರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿರುವ ಉಗ್ರಂ ಮಂಜು ಅವರ ಬ್ಯಾಚುಲರ್ ಪಾರ್ಟಿ ಆಚರಿಸಿದ್ದಾರೆ.

ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕಿರುವುದು ಬಿಗ್ ಬಾಸ್ ಮನೆಯ ಈಗಿನ ಸ್ಪರ್ಧಿಗಳ ಕರ್ತವ್ಯವಾಗಿತ್ತು. ಹೀಗಾಗಿ ಎಲ್ಲರೂ ಅವರನ್ನು ಚೆನ್ನಾಗಿ ನೋಡಿಕೊಂಡರೆ ಗಿಲ್ಲಿ ಮಾತ್ರ ಮೊದಮೊದಲು ತಮ್ಮ ಮಾತಿನಿಂದಲೇ ಅವರಿಗೆ ಟಾರ್ಚರ್ ಕೊಟ್ಟಿದ್ದಾರೆ. ಇದರಿಂದ ಸಿಟ್ಟಾದ ಮಂಜು ಹಾಗೂ ರಜತ್ ಪದೇ ಪದೇ ಗಿಲ್ಲಿ ಮೇಲೆ ಕೂಗಾಡಿದ್ದಾರೆ.

ಮೊದಮೊದಲು ಅತಿಥಿಗಳ ಕೂಗಾಟಕ್ಕೆ ಜಗ್ಗದ ಗಿಲ್ಲಿ ಬಳಿಕ ತಮ್ಮ ನಡೆಯಿಂದ ಇತರ ಸ್ಪರ್ಧಿಗಳಿಗೆ ತೊಂದರೆಯಾಗುತ್ತಿರುವುದನ್ನು ಅರಿತು ಮನೆ ಮಂದಿಗಾಗಿ ಎಲ್ಲವನ್ನೂ ಸಹಿಸಿಕೊಂಡರು. ಗಿಲ್ಲಿ ಬೇಸರ ಮಾಡಿಕೊಂಡು ಕುಳಿತ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈ ವಿಡಿಯೋ ನೋಡುತ್ತಿದ್ದಂತೆ ಗಿಲ್ಲಿ ಅಭಿಮಾನಿಗಳು ಸಿಕ್ಕಾಪಟ್ಟೆ ಕೋಪಗೊಂಡಿದ್ದು, ಮಾಜಿ ಸ್ಪರ್ಧಿಗಳು ತಮ್ಮ ಸಾಮಾಜಿಕ ಜಾಲತಾಣದ ಕಮೆಂಟ್ ಬಾಕ್ಸ್ ಆಫ್ ಮಾಡಿಕೊಳ್ಳವಷ್ಟು ಕಮೆಂಟ್ ಮಾಡಿ ಗುಡುಗಿದ್ದಾರೆ. ಜೊತೆಗೆ ಗಿಲ್ಲಿನ ಕುಗ್ಗಿಸೋಕೆ ಬಿಗ್ ಬಾಸ್ ತಂಡದವರೇ ಅತಿಥಿಗಳ ಹೆಸರಿನಲ್ಲಿ ಮಾಜಿ ಸ್ಪರ್ಧಿಗಳನ್ನು ಕಳಿಸಿದ್ದಾರೆ ಎನ್ನುವ ಆರೋಪ ಜೋರಾಗಿಯೇ ಕೇಳಿ ಬರುತ್ತಿದೆ. ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಇದೇ ಚರ್ಚೆಯಾಗುತ್ತಿದ್ದು, ನೆಟ್ಟಿಗರು ಬಿಗ್ ಬಾಸ್ ತಂಡಕ್ಕೆ ಹಾಗೂ ವಾಹಿನಿಗೆ ಇದೇ ಪ್ರಶ್ನೆ ಕೇಳುತ್ತಿದ್ದಾರೆ. ಈ ಬಗ್ಗೆ ಈ ವಾರಾಂತ್ಯಕ್ಕೆ ಸ್ಪಷ್ಟನೆ ಸಿಗುವ ಸಾಧ್ಯತೆ ಇದೆ.













