ಬೆಂಗಳೂರು: ವರ್ಡ್ ಪವರ್ ಈಸ್ ವರ್ಲ್ಡ್ ಪವರ್ (ಮಾತಿನ ಶಕ್ತಿಯೇ ವಿಶ್ವದ ಶಕ್ತಿ). ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ನ್ಯಾಯಾಧೀಶರಾಗಲಿ, ರಾಷ್ಟ್ರಪತಿಗಳಾಗಲಿ, ನಾನಾಗಲೀ, ಯಾರೇ ಆಗಲಿ, ಕೊಟ್ಟ ಮಾತಿಗೆ ತಕ್ಕಂತೆ ನಡೆದು ಸಾಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʼಸಂವಿಧಾನ ಪ್ರಜಾಪ್ರಭುತ್ವದ ಆತ್ಮ. ಸಂವಿಧಾನಕ್ಕೆ ನಮ್ಮನ್ನು ನಾವು ಸಮರ್ಪಿಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಂಡಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರ ಎದೆಯ ಮೇಲೆ ತ್ರಿವರ್ಣ ಧ್ವಜ, ಎದೆಯೊಳಗೆ ಸಂವಿಧಾನವಿದೆ. ನೂರು ವರ್ಷಗಳ ಹಿಂದೆ ಮಹಾತ್ಮಾ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿದರು. ಈಗ ನಮ್ಮ ರಾಜ್ಯದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆʼ.

ʼಈ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದೆ. ಆದರೆ ಅವರು ದೆಹಲಿಗೆ ಹೋಗಬೇಕು ಎಂದು ಪ್ರಯಾಣ ಬೆಳೆಸಿದರು. ಗಾಂಧಿಜೀ ಅವರ ನೇತೃತ್ವದ ಬೆಳಗಾವಿ ಎಐಸಿಸಿ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷ ಬೆಳಗಾವಿಯಲ್ಲಿ ನಾವು ಗಾಂಧಿ ಭಾರತ ಕಾರ್ಯಕ್ರಮ ಮಾಡಿದೆವು. ಆಗ ನಡೆಸಿದ ಸಮಾವೇಶಕ್ಕೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಹೆಸರಿಟ್ಟು, ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದೇವೆ ಎಂದರು.

ಮಾತು ಮುಂದುವರಿಸಿದ ಅವರು, ನಾನು ಬೇರೆ ವಿಚಾರವಾಗಿ ಮಾತನಾಡಲು ಹೋಗುವುದಿಲ್ಲ. ನಾನು ಏನೇ ಹೇಳಿದರೂ ಅದನ್ನು ಬೇರೆ ರೀತಿ ತಿರುಗಿಸಿ ಅರ್ಧ ಗಂಟೆ ಚರ್ಚೆ ಮಾಡುತ್ತಾರೆ. ನಾನು ಇಂದಿರಾ ಗಾಂಧಿ ಅವರ ಕಾರ್ಯಕ್ರಮದ ವೇಳೆ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿದೆ. ಅದರ ಮೇಲೆ ಅರ್ಧ ಗಂಟೆ ಚರ್ಚೆ ಮಾಡಿದರು. ನಂತರ ವಿಶ್ವ ಮೀನುಗಾರಿಕೆ ದಿನದ ಕಾರ್ಯಕ್ರಮದಲ್ಲಿ ನನಗೆ ಗಾಳ ಹಾಕಿ ಮೀನು ಹಿಡಿಯುವುದು ಗೊತ್ತು ಎಂದು ಹೇಳಿದ್ದನ್ನು ಮತ್ತೊಂದು ರೀತಿ ಚರ್ಚೆ ಮಾಡಿದರು. ನಾನು ಆ ಕಡೆ ನೋಡಿದರೆ ಒಂದು ರೀತಿ, ಈ ಕಡೆ ನೋಡಿದರೆ ಒಂದು ರೀತಿ, ದಿಟ್ಟಿಸಿ ನೋಡಿದರೆ ಮತ್ತೊಂದು ಅರ್ಥ, ನಕ್ಕರೆ ಮಗದೊಂದು ಅರ್ಥ ಕಲ್ಪಿಸುತ್ತಿದ್ದಾರೆ ಎಂದು ಹೇಳಿದರು.












