ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ನವೆಂಬರ್ 20ರ ಬಳಿಕ ಒಂದಾದ ಮೇಲೆ ಒಂದರಂತೆ ಸಂಚಲನಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಅವರಿಗೆ ತಮ್ಮ ಕುರ್ಚಿ ಬಿಟ್ಟುಕೊಡಬೇಕು. ಪಕ್ಷ ಅಧಿಕಾರಕ್ಕೆ ಬರುವಲ್ಲಿ ಡಿಕೆಶಿ ಶ್ರಮವೂ ಇದೆ ಎಂದು ಡಿಕೆ ಬಣ ಹೇಳುತ್ತಿದೆ.

ಇತ್ತ ನಾವು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಬಿಟ್ಟು ಕೊಡುವುದಿಲ್ಲ. ಅವರ ನಾಯಕತ್ವಕ್ಕೆ ಧಕ್ಕೆಯಾದರೆ ನಾವು ಸುಮ್ಮನಿರೋದಿಲ್ಲ ಎನ್ನುವುದು ಸಿದ್ದು ಟೀಂನ ಖಡಕ್ ಮಾತುಗಳಾಗಿವೆ. ಈ ನಡುವೆಯೇ ಡಿಕೆಶಿ ಪರ ಈಗಾಗಲೇ ಒಂದು ರೌಂಡ್ ದೆಹಲಿ ಯಾತ್ರೆ ಮಾಡಿಬಂದಿರುವ ಹಲವು ಶಾಸಕರು, ಸಚಿವರು ಸಿದ್ದು ನಾಯಕತ್ವದ ಬಗ್ಗೆ ಅಪಸ್ವರ ಎತ್ತಿದ್ದಾರೆನ್ನಲಾಗಿದೆ.
ನಿನ್ನೆಯಷ್ಟೇ ಈ ಎಲ್ಲ ವಿಚಾರಗಳ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸುದೀರ್ಘ ಚರ್ಚೆಯಲ್ಲಿ ರಾಜ್ಯದಲ್ಲಿನ ಕೈ ನಾಯಕರ ಹೇಳಿಕೆಗಳು ಹಾಗೂ ಚಟುವಟಿಕೆಗಳ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಅಲ್ಲದೆ ಸಿಎಂ ಭೇಟಿಯ ಬಳಿಕ ರವಿವಾರ ಡಿಕೆ ಶಿವಕುಮಾರ್ ಕೂಡ ಖರ್ಗೆ ಮನೆ ಕದತಟ್ಟುವ ಸಾಧ್ಯತೆಗಳಿವೆ.

ಪ್ರಸ್ತುತ ನಡೆಯುತ್ತಿರುವ ರಾಜಕೀಯದ ಬಗ್ಗೆ ಅದರಲ್ಲೂ ನಾಯಕತ್ವದ ಕುರಿತು ಗಟ್ಟಿಯಾದ ನಿಲುವನ್ನು ಹೈಕಮಾಂಡ್ ತಿಳಿಸಲಿ. ಹೀಗೆಯೇ ಪರಿಸ್ಥಿತಿ ಮುಂದುವರೆದರೆ ರಾಜ್ಯದ ಆಡಳಿತದ ಮೇಲೆ ನೇರ ಪರಿಣಾಮ ಬೀರುತ್ತದೆ. ಆಡಳಿತ ಯಂತ್ರವೂ ಹಳ್ಳಿ ತಪ್ಪುವ ಸಾಧ್ಯತೆಗಳಿವೆ, ಇದರಿಂದ ಅಧಿಕಾರಿಗಳಲ್ಲೂ ಗೊಂದಲ ಉಂಟಾಗಿ ಅವರೂ ಸಹ ನಿರಾಸಕ್ತರಾಗುವ ಲಕ್ಷಣಗಳು ಕಂಡು ಬರುತ್ತಿವೆ. ಈ ಎಲ್ಲ ವಿಚಾರಗಳ ಬಗ್ಗೆ ಗಂಭೀರವಾಗಿ ಯೋಚಿಸಿ ನಿರ್ಧರಿಸಿ ಎಂದು ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷರ ಬಳಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಸಂಪುಟ ವಿಸ್ತರಣೆ, ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಹಾಗೂ ತಾಲೂಕಾ ಪಂಚಾಯತಿ ಚುನಾವಣೆಗಳಲ್ಲಿ ಪಕ್ಷದ ಭಾಗಿದಾರಿಕೆಯ ವಿಚಾರದಲ್ಲಿ ಉಭಯ ನಾಯಕರು ಚರ್ಚಿಸಿದ್ದಾರೆ. ಪ್ರಮುಖವಾಗಿ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಬಗ್ಗೆ ಇಬ್ಬರು ಸಮಾಲೋಚಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿನ ಈ ಗೊಂದಲವನ್ನು ಆದಷ್ಟು ಬೇಗನೇ ಸರಿಪಡಿಸಿ, ಇಲ್ಲವಾದರೆ ಮುಂಬರುವ ಚುನಾವಣೆಗಳಲ್ಲಿ ಇನ್ನಷ್ಟು ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಬಹುದು ಎಂದು ಸಿಎಂ ಹೇಳಿದ್ದಾರೆನ್ನಲಾಗಿದೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಭಾರತಕ್ಕೆ ಬಂದ ಬಳಿಕ ಇನ್ನೊಮ್ಮೆ ಈ ಎಲ್ಲ ಸಂಗತಿಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಮಾಡೋಣ ಎಂದು ಖರ್ಗೆ ಅಭಯ ನೀಡಿದ್ದಾರೆ ಎನ್ನಲಾಗಿದೆ. ಆದರೆ ಸಿದ್ದರಾಮಯ್ಯ ಅವರು ಖರ್ಗೆ ಅವರೊಂದಿಗಿನ ರಹಸ್ಯ ಸಭೆಯ ಬಗ್ಗೆ ಮಾಧ್ಯಮಗಳಿಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಈ ಎಲ್ಲ ವಿಚಾರಗಳ ಬಗ್ಗೆ ಮಾತುಕತೆಯಾಗಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಈ ಎಲ್ಲ ರಾಜಕೀಯ ಬೆಳವಣಿಗೆಗೆ ಬ್ರೇಕ್ ಹಾಕಲು ಹಾಗೂ ಸಚಿವ ಸಂಪುಟ ವಿಸ್ತರಣೆಯ ವಿಚಾರ ರಾಹುಲ್ ಗಾಂಧಿ ಹೆಗಲಿಗೇರಿದಂತಾಗಿದೆ.










