ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಕಿತ್ತಾಟದ ನಡುವೆ ಇದೀಗ ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕನ ಪ್ರವೇಶವಾಗಿದೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಕೂಡ ತಾವು ಮುಂದಿನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎನ್ನುವುದನ್ನು ಬಹಿರಂಗವಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವಾಗಲೂ ಮುಖ್ಯಮಂತ್ರಿ ರೇಸ್‌ನಲ್ಲಿ ಇರುತ್ತೇನೆ. 2013ರಲ್ಲಿ ನಾನು ಪ್ರಾದೇಶಿಕ ಸಮಿತಿ ಅಧ್ಯಕ್ಷನಾಗಿದ್ದೆ. ಸರ್ಕಾರ ಅಧಿಕಾರಕ್ಕೆ ಬಂತು. ನಾನೊಬ್ಬನ್ನೇ ಸರ್ಕಾರ ತಂದೆ ಅಂತಾ ನಾನು ಯಾವತ್ತೂ ಎಲ್ಲಿಯೂ ಹೇಳಿಲ್ಲ. ಎಲ್ಲರೂ ಸೇರಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವು. ಜನ ಮತ ಹಾಕಿ ನಮ್ಮನ್ನು ಗೆಲ್ಲಿಸಿದರು. ಆ ಸಂದರ್ಭದಲ್ಲಿ ನಾನು ಸೋಲು ಕಂಡಿದ್ದೆ. ಒಂದು ವೇಳೆ ನಾನು ಗೆದ್ದಿದ್ದರೆ, ಏನಾಗುತ್ತಿತ್ತೋ ಗೊತ್ತಿಲ್ಲ ಎಂದು ಹೇಳಿದರು.

ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಬಗ್ಗೆ ಮಾತನಾಡಿದ ಅವರು, ಸದ್ಯ ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲ್ಲ. ನನಗೆ ಬೇಕಾದಾಗ ಅವರನ್ನು ಭೇಟಿ ಮಾಡುತ್ತೇನೆ. ಸಣ್ಣ ವಯಸ್ಸಿನಿಂದ ಅವರನ್ನು ನೋಡಿದ್ದೇನೆ. ಹೀಗಾಗಿ ನನಗೆ ಬೇಕು ಅನಿಸಿದಾಗ ನಾನು ಹೋಗಿ ಅವರನ್ನು ಭೇಟಿ ಮಾಡುತ್ತೇನೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಹೊರದೇಶ ಪ್ರವಾಸದಲ್ಲಿದ್ದಾರೆ. ಅಂತಹ ಬೆಳವಣಿಗೆ ಏನಾದರೂ ಇದ್ದರೆ ಅವರು ಬಂದ ಮೇಲೆಯೇ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.









