ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿ ಹೆಚ್ಚು ಸದ್ದು ಮಾಡುತ್ತಿರುವ ಹೊತ್ತಿನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಮನೆಯಲ್ಲಿ ವಿಶೇಷ ಪೂಜೆ ನಡೆದಿದೆ. ಅರಸಿಕೆರೆಯ ಪ್ರಸಿದ್ದ ಜೇನುಕಲ್ಲು ಸಿದ್ದೇಶ್ವರ ಪಾದುಕೆಗೆ ನಿನ ತಡರಾತ್ರಿ ಡಿಕೆಶಿ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ.
ರಾತ್ರಿ ಸುಮಾರು 9.30ರ ಸುಮಾರಿಗೆ ಸದಾಶಿವನಗರದ ಮನೆಗೆ ಜೇನುಕಲ್ಲು ಸಿದ್ದೇಶ್ವರ ಪಲ್ಲಕ್ಕಿ ವಾಹನ ಆಗಮಿಸಿತ್ತು. ಸುಮಾರು ಐವರು ಪೂಜಾರಿಗಳ ಸಮೇತ ಬಂದಿದ್ದ ಪಲ್ಲಕ್ಕಿ ವಾಹನದಲ್ಲಿದ್ದ ಸಿದ್ದೇಶ್ವರ ದೇವರ ಪಾದುಕೆಗೆ ಡಿಕೆಶಿ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಸುಮಾರು 1 ಗಂಟೆಗೂ ಹೆಚ್ಚು ನಡೆದ ಪೂಜೆ ಬಳಿಕ ಸಿದ್ದೇಶ್ವರ ಪಲ್ಲಕ್ಕಿ ವಾಹನ ವಾಪಸ್ ಹೊರಟಿತು.
ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ವಿಚಾರ ತೀವ್ರ ಚರ್ಚೆ ಬೆನ್ನಲ್ಲೆ ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ. ಇದೇ ವೇಳೆ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಸೇರಿದಂತೆ ಡಿಕೆಶಿ ಬಳಗದ ಸಿ.ಪಿ.ಯೋಗೇಶ್ವರ್, ಪ್ರಕಾಶ್ ಕೋಳಿವಾಡ್ ಹಾಗೂ ಯಾಸೀರ್ ಪಠಾಣ್, ಶ್ರೀನಿವಾಸ್ ಮಾನೆ, ಎಂಎಲ್ಸಿ ದಿನೇಶ್ ಗೂಳಿಗೌಡ, ಮಾಜಿ ಸಂಸದ ಶಿವರಾಮೇಗೌಡ, ಕಾಂಗ್ರೆಸ್ ಮುಖಂಡ ಆನಂದಗಡ್ಡದೇವರ ಮಠ ಡಿಕೆಶಿ ಬಂದು ಸಿದ್ದೇಶ್ವರ ಸ್ವಾಮಿ ಆಶೀರ್ವಾದ ಪಡೆದು ತೆರಳಿದರು. ಜತೆಗೆ ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.












