
ಬೆಂಗಳೂರು: ಜಾಗತಿಕ ಸೆಮಿಕಂಡಕ್ಟರ್ ವಲಯದ ಮಾರುಕಟ್ಟೆ ಇನ್ನು ಮೂರು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ಡಾಲರ್ (ಸುಮಾರು ರೂ 88 ಲಕ್ಷ ಕೋಟಿ) ಮೌಲ್ಯಕ್ಕೇರಲಿದ್ದು, ಭಾರತಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ‘ಸೆಮಿಕಂಡಕ್ಟರ್ ಪ್ರಾಡಕ್ಟ್ ಗ್ರೂಪ್’ ಸಂಸ್ಥೆಯ ಮುಖ್ಯಸ್ಥ ಡಾ. ಸೂರಜ್ ರಂಗರಾಜನ್ ಗುರುವಾರ ಹೇಳಿದ್ದಾರೆ.
‘ಬೆಂಗಳೂರು ಟೆಕ್ ಶೃಂಗದ ಕೊನೆಯ ದಿನ ‘ಭವಿಷ್ಯವನ್ನು ರೂಪಿಸುವ ಯಂತ್ರಗಳು: ಪಿಸಿಬಿ ಅಸೆಂಬ್ಲಿ ಉತ್ಕೃಷ್ಟತೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಸೆಮಿಕಂಡಕ್ಟರ್ ಗಳ ತಯಾರಿಕಾ ವಾತಾವರಣ ಆಶಾದಾಯಕವಾಗಿದೆ ಎಂದರು.

ಸೆಮಿಕಂಡಕ್ಟರ್ ಹಾಗೂ ಪಿಸಿಬಿ ಬೋರ್ಡ್ ಗಳ ವಿನ್ಯಾಸ ಮತ್ತು ಉತ್ಪಾದನೆಗೆ ಜಗತ್ತಿನಲ್ಲೇ ಅತಿ ಹೆಚ್ಚು ಶೇಕಡ 75ರಷ್ಟು ಸಹಾಯಧನವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಪರಿಸ್ಥಿತಿ ಉತ್ತೇಜನಕಾರಿಯಾಗಿದ್ದು ಈ ನಿಟ್ಟಿನಲ್ಲಿ ಜಾಗತಿಕ ಪಾಲುದಾರಿಕೆಗೆ ಉತ್ಸಾಹದಾಯಕ ವಾತಾವರಣವಿದೆ ಎಂದು ವಿವರಿಸಿದರು.
ಸೆಮಿಕಂಡಕ್ಟರ್ ಗಳ ಗುಣಮಟ್ಟದ ದೃಷ್ಟಿಯಿಂದ ಜಾಗತಿಕ ವಲಯದಲ್ಲಿ ಹಲವು ಮಾನದಂಡಗಳಿವೆ. ಈ ಮಾನದಂಡಗಳ ಎಲ್ಲ ಹಂತಗಳನ್ನು ಪೂರೈಕೆದಾರರು ದಾಟಿ ಬರಬೇಕಿದೆ. ಈ ನಿಟ್ಟಿನಲ್ಲಿ ಜಾಗತಿಕ ಮಾನದಂಡಗಳನ್ನು ಉತ್ಪಾದಕರು ತಲುಪಲು ಅನುಕೂಲಕರ ವಾತಾವರಣ ನಿರ್ಮಾಣವಾಗುವುದು ಅತ್ಯವಶ್ಯ ಎಂದು ಹೇಳಿದರು.

‘ಲ್ಯಾಮ್ ರಿಸರ್ಚ್’ ಸಂಸ್ಥೆಯ ಭಾರತೀಯ ಮುಖ್ಯಸ್ಥ ಅಲೋಕ್ ಜೈನ್, ಭಾರತದಲ್ಲಿ ತಂತ್ರಜ್ಞಾನ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಬೇಡಿಕೆ ಇದೆ. ಮುಂದಿನ ತಲೆಮಾರಿನ ತಂತ್ರಜ್ಞಾನ ಅಭಿವೃದ್ಧಿಯತ್ತ ಹೆಚ್ಚಿನ ಆದ್ಯತೆ ಅಗತ್ಯ ಎಂದರು.

‘ಕ್ಯಾಸ್ಟೆಕ್ ಎಕ್ವಿಪ್ ಮೆಂಟ್’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಜ್ಯೋತಿನಗರ ಮಾತನಾಡಿ, ಶೈಕ್ಷಣಿಕ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಉದ್ದೇಶಗಳು ಭಿನ್ನವಾಗಿರುತ್ತವೆ. ಇವುಗಳನ್ನು ಉದ್ಯಮಕ್ಕೆ ಹೇಗೆ ಅಳವಡಿಸಬೇಕು ಎಂಬುದು ಅತಿ ಮುಖ್ಯ ಎಂದರು.










