
ಬೆಂಗಳೂರು: ಎಲ್ಲಾ ಇಂಧನ ಸಂಪನ್ಮೂಲಗಳು, ಪ್ರಸರಣಗಳು ಮತ್ತು ಭಾಗೀದಾರರನ್ನು ಒಗ್ಗೂಡಿಸುವ ಹಾಗೂ ಪರಸ್ಪರ ಮಾಹಿತಿ ವಿನಿಮಯ ಸಾಧ್ಯವಾಗಿಸುವ ಡಿಜಿಟಲ್ ಮೂಲಸೌಕರ್ಯವಾದ ‘ಡಿಜಿಟಲ್ ಇಂಧನ ಗ್ರಿಡ್ ‘ಅನ್ನು ಭಾರತ ಅಧಿಕೃತ ಮೂಲಸೌಕರ್ಯವಾಗಿ ಅಳವಡಿಸಿಕೊಳ್ಳಬೇಕು ಎಂದು ಎಫ್ಐಡಿಇ ಸಂಸ್ಥೆಯ ಸಹಸಂಸ್ಥಾಪಕ ಸುಜಿತ್ ನಾಯರ್ ಸಲಹೆ ನೀಡಿದರು.
ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಬೆಂಗಳೂರು ಟೆಕ್ ಶೃಂಗದಲ್ಲಿ “ಭವಿಷ್ಯದ ಇಂಧನ ಕ್ಷೇತ್ರ” ಕುರಿತು ಅವರು ಮಾತನಾಡಿದರು.

ಸಾಂಪ್ರದಾಯಿಕ ಗ್ರಿಡ್ಗಳ ಸ್ಥಾನದಲ್ಲಿ ಡಿಜಿಟಲ್ ಗ್ರಿಡ್ ಗಳು ಬಂದರೆ ಸ್ವತ್ತುಗಳ ಕುರಿತಾದ ಮಾಹಿತಿಯನ್ನು ಡಿಜಲೀಕರಣಗೊಳಿಸಬಹುದು. ಇದರಿಂದ ನೈಜ ಸಮಯದಲ್ಲಿ ಡೇಟಾ ವಿನಿಮಯ ಸಾಧ್ಯವಾಗುತ್ತದೆ. ನವೀಕರಿಸಬಹುದಾದ ಇಂಧನ ಮತ್ತು ಇ.ವಿ.ಯಂತಹ ವಿಕೇಂದ್ರೀಕೃತ ಇಂಧನ ಮೂಲಗಳನ್ನು ಸಮಗ್ರಗೊಳಿಸಬಹುದು. ಅನುಕೂಲಕರ ಪಿ2ಪಿ ವ್ಯಾಪಾರ ಮತ್ತು ಹೊಸ ಇಂಧನ ಸೇವೆಗಳಿಗೆ ಅವಕಾಶವೂ ದೊರೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ, ಇಂಧನ ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಸ್ಟಾರ್ಟಪ್ ಗಳ ಪ್ರಮುಖರು ಪ್ರವರ್ಧಮಾನಕ್ಕೆ ಬರುತ್ತಿರುವ ಹಸಿರು ಇಂಧನ ಕ್ಷೇತ್ರದ ಕುರಿತು ಚರ್ಚಿಸಿದರು. ಕೈಗಾರಿಕಾ ತ್ಯಾಜ್ಯ ನೀರಿನಿಂದ ಜಲಜನಕ ಇಂಧನ ತಯಾರಿಕೆ, ವೇಗದ ಇ.ವಿ. ಚಾರ್ಜಿಂಗ್ ಪರಿಹಾರ, ಬಿಲ್ಲಿಂಗ್ ನಿರ್ವಹಣೆಯಲ್ಲಿ ಆಟೊಮೇಶನ್ನಂತಹ ಸ್ಟಾರ್ಟಪ್ ಗಳ ಪರಿಚಯ ಮಾಡಿದರು.










