ಬೆಂಗಳೂರು: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ (ನೇಗೇರಿಯಾ ಫೌಲೇರಿಯಾ)ದ ಭೀತಿ ಜೋರಾಗಿದೆ. ಈ ಹಿನ್ನೆಲೆಯಲ್ಲಿಯೇ ಪ್ರಸಿದ್ದ ಪುಣ್ಯ ಸ್ಥಳ ಶಬರಿ ಮಲೆಗೆ ತೆರಳುವ ರಾಜ್ಯದ ಭಕ್ತರಿಗೆ ಆರೋಗ್ಯ ಇಲಾಖೆ ಕೆಲವು ಮುನ್ನೆಚ್ಚರಿಕೆ ಕ್ರಮ ಹಾಗೂ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಭಕ್ತರು ಶಬರಿ ಮಲೆಯಲ್ಲಿ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು. ವೈರಸ್‌ನಿಂದ ಹೇಗೆ ಬಚಾವ್ ಆಗಬೇಕು ಎಂಬ ಸಲಹೆ ಸೂಚನೆಗಳನ್ನು ಅದರಲ್ಲಿ ತಿಳಿಸಲಾಗಿದೆ.

ಶಬರಿ ಮಲೆಯಲ್ಲಿ ಅಯ್ಯಪ್ಪಸ್ವಾಮಿಯ ದೇವಸ್ಥಾನ ಒಂದೆಡೆಯಾದರೆ, ಇನ್ನೊಂದೆಡೆ ಪವಿತ್ರ ಪಂಪಾನದಿಯ ಸ್ನಾನ ಸಾಕಷ್ಟು ಮಹತ್ವವನ್ನು ಪಡೆದಿದೆ. ಈ ನದಿಯಲ್ಲಿ ಸ್ನಾನ ಮಾಡಿದರೆ ಪಾಪ ವಿಮೋಚನೆಯಾಗಿ ಎಲ್ಲ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಎಲ್ಲರಲ್ಲಿದೆ. ಆದರೆ ಕೇರಳದಲ್ಲಿ ತಲೆದೂರಿರುವ ವೈರಸ್ ಕಾಟ ಅಯ್ಯಪ್ಪ ಮಾಲಾಧಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದರೆ ಇದೇ ವಿಚಾರಕ್ಕೆ ಪ್ರತಿಧ್ವನಿಯೊಂದಿಗೆ ಮಾತನಾಡಿರುವ ಬೆಂಗಳೂರಿನ ಮಾಲಾಧಾರಿಗಳು ಎಲ್ಲಾ ಸುಳ್ಳು, ಏನೂ ಆಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಆ ರೀತಿಯ ಭಯದ ಪರಿಸ್ಥಿತಿಯಿಲ್ಲ. ಮಾಲಾಧಾರಿಗಳು ಎಲ್ಲರೂ ಕಡ್ಡಾಯವಾಗಿ ವ್ರತದ ನಿಯಮಗಳನ್ನು ಚಾಚೂ ತಪ್ಪದೇ ಪಾಲನೆ ಮಾಡಿದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಯ್ಯಪ್ಪ ಮಾಲಾಧಾರಿಯೊಬ್ಬರು ತಿಳಿಸಿದ್ದಾರೆ. ಶಬರಿ ಮಲೆ ಘಟ್ಟ ಪ್ರದೇಶವಾಗಿರುವ ಕಾರಣಕ್ಕೆ ಅಲ್ಲಿ ಜನರು ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಜನಜಂಗುಳಿ ಇರುತ್ತದೆ. ಆದರೆ ಅಲ್ಲಿಗೆ ಭೇಟಿ ನೀಡಿದವರೂ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ಇನ್ನೋರ್ವ ಭಕ್ತರು ಜನರಲ್ಲಿ ಮನವಿ ಮಾಡಿದ್ದಾರೆ.

ಅಲ್ಲದೇ ಶಬರಿ ಮಲೆಯ ಖ್ಯಾತಿಯಿಂದ ಅಪಾರ ಪ್ರಮಾಣದಲ್ಲಿ ಜನರು ಅಲ್ಲಿಗೆ ಹೋಗುತ್ತಿದ್ದಾರೆ. ಅವರನೆಲ್ಲ ನಿಯಂತ್ರಣ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ, ಹೀಗಾಗಿಯೇ ವೈರಸ್, ಅಮೀಬಾ ಎಂಬ ಜೀವಿಗಳ ಹೆಸರಿನಲ್ಲಿ ಜನರನ್ನು ಭಯ ಬೀಳಿಸಲಾಗುತ್ತಿದೆ. ಶಬರಿಗೆ ಹೋಗುವ ಜನರನ್ನು ಬೇರೆ ಬೇರೆ ದೇವಸ್ಥಾನಗಳಿಗೆ ಕಳುಹಿಸೋಕೆ ಹೀಗೆಲ್ಲ ಏನೇನೋ ಹೇಳುತ್ತಿದ್ದಾರೆ ಎಂಬ ಸ್ಫೋಟಕ ಹೇಳಿಕೆಯನ್ನು ಮಾಲಾಧಾರಿಗಳು ನೀಡಿದ್ದಾರೆ.












