ಡಿ.ಕೆ. ಶಿವಕುಮಾರ್ ಅವರಿಗೆ 8 ವರ್ಷಕ್ಕಿಂತ ಹೆಚ್ಚು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ದಾಖಲೆ ಬರೆಯುವ ಇಚ್ಛೆ ಇದೆಯೇ ಎಂದು ಕೇಳಿದಾಗ, “ಆ ರೀತಿ ಏನೂ ಇಲ್ಲ. ಅಧಿಕಾರದ ದಾಖಲೆ ಮಾಡುವ ಕನಸು ಅವರದ್ದಲ್ಲ. ರಾಜಕಾರಣದಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ, ಜನರಿಗೆ ಆಗಲಿ, ಬೇರೆಯವರಿಗೆ ಆಗಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಆಗ ಶಾಶ್ವತವಾಗಿ ನಾಯಕರಾಗಿ ಉಳಿಯಲು ಸಾಧ್ಯ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ದೇವರಾಜ ಅರಸು, ನಿಜಲಿಂಗಪ್ಪ, ಎಸ್.ಎಂ. ಕೃಷ್ಣ ಸೇರಿದಂತೆ ಎಲ್ಲರೂ ಹೈಕಮಾಂಡ್ ಅಣತಿಯಂತೆ ಕೆಲಸ ಮಾಡಿದ್ದಾರೆ” ಎಂದರು.
ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂಬುದು ಶಿವಕುಮಾರ್ ಅವರ ಆಸೆಯೇ ಎಂದು ಕೇಳಿದಾಗ, “ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿರುವುದೇ ದೊಡ್ಡ ಸಾಧನೆ. ಪಕ್ಷ ಅಧೋಗತಿಯಲ್ಲಿದ್ದ ಸಂದರ್ಭದಲ್ಲಿ ಜವಾಬ್ದಾರಿ ತೆಗೆದುಕೊಂಡು ಪಕ್ಷಕ್ಕೆ ಚೈತನ್ಯ ತುಂಬಿದ್ದಾರೆ. ಕಾರ್ಯಕರ್ತರಿಗೆ ಹುಮ್ಮಸ್ಸು ಕೊಟ್ಟಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತಂದು, ಕೊಟ್ಟ ಮಾತಿನಂತೆ ನಡೆದು ಉತ್ತಮ ಆಡಳಿತ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.

ಕಾಂಗ್ರೆಸ್ ನೂರು ಕಚೇರಿಗಳ ಶಂಕುಸ್ಥಾಪನೆಗೆ ಹೈಕಮಾಂಡ್ ಸಹಕರಿಸುವಂತೆ ಕಾಣಿಸುತ್ತಿಲ್ಲವಲ್ಲಾ ಎಂದು ಕೇಳಿದಾಗ, “ಬಿಹಾರ ಚುನಾವಣೆ ಹಾಗೂ ಇತರೆ ವಿಚಾರವಾಗಿ ಅವರು ಕಾರ್ಯನಿರತರಾಗಿದ್ದ ಕಾರಣ ದಿನಾಂಕ ನೀಡಿರಲಿಲ್ಲ. ಅತೀ ಶೀಘ್ರದಲ್ಲಿ ಅದಕ್ಕೂ ಅವಕಾಶ ನೀಡುತ್ತಾರೆ” ಎಂದರು.
ಕೆಲವರಿಗೆ ಕೇವಲ ಅಧಿಕಾರ ಮಾತ್ರ ಮುಖ್ಯವಾಗಿದೆ ಎಂದು ಶಿವಕುಮಾರ್ ಅವರು ಹೇಳಿರುವುದನ್ನು ನೀವು ಯಾವ ರೀತಿ ವ್ಯಾಖ್ಯಾನ ಮಾಡುತ್ತೀರಿ ಎಂದು ಕೇಳಿದಾಗ, “ಅವರು ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಯಾರೇ ಆಗಿರಲಿ, ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಆಡಳಿತ ನಡೆಸುವವರ ಕರ್ತವ್ಯ. ಪಕ್ಷವಾಗಿ ಆ ಕೆಲಸ ಮಾಡಬೇಕು” ಎಂದು ತಿಳಿಸಿದರು.

ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಬಗ್ಗೆ ಪರಿಶೀಲನೆ ಮಾಡುವ ಸಮಯ ಬಂದಿದೆಯೇ ಎಂದು ಕೇಳಿದಾಗ, “ನನಗೆ ಈ ಬಗ್ಗೆ ಮಾಹಿತಿ ಇಲ್ಲ, ನೀವು ಏನು ಹೇಳುತ್ತೀರೋ ನಾನು ಅದನ್ನು ಕೇಳುವೆ” ಎಂದು ತಿಳಿಸಿದರು.










