ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸದ್ಯ ಸಿಎಂ ಬದಲಾವಣೆಯ ವಿಚಾರ ಚರ್ಚೆಯಲ್ಲಿರುವಾಗಲೇ ಮಾಜಿ ಸಂಸದ ಡಿ.ಕೆ ಸುರೇಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಸುರೇಶ್, ʼಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ತಪ್ಪುವುದಿಲ್ಲ. ಕೊಟ್ಟ ಮಾತಿನಂತೆ ನಡೆಯುವವರು ಸಿಎಂ ಸಿದ್ದರಾಮಯ್ಯ. ಅದೃಷ್ಟ ಇದ್ದರೆ ನಮ್ಮಣ್ಣ ಸಿಎಂ ಆಗುತ್ತಾರೆʼ ಎಂದು ಹೇಳಿದ್ದಾರೆ.

ಮಾತು ಮುಂದುವರಿಸಿದ ಅವರು, ʼಎಲ್ಲರೂ ಹೈಕಮಾಂಡ್ ಅಣತಿಯಂತೆಯೇ ಕೆಲಸ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಜ್ಯದಲ್ಲಿ ದೇಭವರಾಜ ಅರಸು, ಎಸ್.ಎಂ ಕೃಷ್ಣ ಎಲ್ಲರೂ ಹೈಕಮಾಂಡ್ ಅಣತಿಯಂತೆಯೇ ಕೆಲಸ ಮಾಡಿದ್ದಾರೆ. ಸರ್ಕಾರ ತರಲು ಹಗಲು ರಾತ್ರಿ ಕೆಲಸ ಮಾಡಿರುವುದೇ ಡಿ.ಕೆ ಶಿವಕುಮಾರ್. ಜವಾಬ್ದಾರಿ ತೆಗೆದುಕೊಂಡು ಕಾರ್ಯಕರ್ತರಿಗೆ ಚೈತನ್ಯ ತುಂಬಿದ್ದಾರೆ. ಡಿ.ಕೆ ಶಿವಕುಮಾರ್ ಪಕ್ಷಕ್ಕೆ ಹುಮ್ಮಸ್ಸು ತುಂಬಿದ್ದಾರೆ. ಜನರಿಗೆ ಕೊಟ್ಟ ಮಾತಿನಂತೆ ಆಡಳಿತ ಕೊಡುತ್ತಿದ್ದಾರೆʼ ಎಂದು ಡಿ.ಕೆ ಶಿವಕುಮಾರ್ ಅವರನ್ನು ಮನಸಾರೆ ಹೊಗಳಿದ್ದಾರೆ.












