ಬೆಳಗಾವಿ: ಚಳಿ ಹಾಗೂ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ಹಾಕಿದ್ದ ಹೊಗೆಯಿಂದ ಉಸಿರುಗಟ್ಟಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಮನ್ ನಗರದಲ್ಲಿ ನಡೆದಿದೆ. ರಿಹಾನ್ ಮತ್ತಿ (22), ಸರ್ಪರಾಜ್ ಹರಪ್ಪನಹಳ್ಳಿ (22) ಹಾಗೂ ಮೋಯಿನ್ ನಾಲಬಂದ್ (22) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಮೃತ ಯುವಕರು ಕಾರ್ಯಕ್ರಮಕ್ಕೆಂದು ಅಮನ್ ನಗರದ ಸಂಬಂಧಿಕರ ಮನೆಗೆ ಬಂದಿದ್ದರು. ನಿನ್ನೆ ತಡರಾತ್ರಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಯುವಕರು ಕೋಣೆಯೊಂದರಲ್ಲಿ ಬುಟ್ಟಿಯಲ್ಲಿ ಬೆಂಕಿ ಹಾಕಿ ಹೊಗೆ ಬರುವಂತೆ ಮಾಡಿಕೊಂಡು ಮಲಗಿದ್ದರು. ಅಲ್ಲದೇ ಬಹಳ ಚಳಿಯಿದ್ದ ಕಾರಣ ಆ ಕೋಣೆಯ ಕಿಟಕಿ ಹಾಕಿಕೊಂಡಿದ್ದರು.

ಮನೆಯಿಂದ ಗಾಳಿ ಹೊರಗೆ ಹೋಗದೇ ಮೂವರು ಯುವಕರು ಉಸಿರುಗಟ್ಟಿ ಮಲಗಿದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ ಮತ್ತೋರ್ವ ಯುವಕನ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













