ಬೆಂಗಳೂರು: ನಗರದಲ್ಲಿ ಮಟಮಟ ಮಧ್ಯಾಹ್ನವೇ ಎಟಿಎಂ ವಾಹನದ ದರೋಡೆ ನಡೆದಿದೆ. ಎಟಿಎಂಗೆ ಹಣ ಹಾಕುವ ವಾಹನದಿಂದ ಆಗಂತುಕರ ಗ್ಯಾಂಗ್ ಬರೋಬ್ಬರಿ 7 ಕೋಟಿ 11 ಲಕ್ಷ ದೋಚಿ ಎಸ್ಕೇಪ್ ಆಗಿದೆ.

ಇಂದು ಮಧ್ಯಾಹ್ನ ಸೌತ್ ಎಂಡ್ ಸರ್ಕಲ್ ಬಳಿ ಎಟಿಎಂಗೆ ಹಣ ಹಾಕಲು ಸಿಎಂಎಸ್ ವಾಹನದಲ್ಲಿ ನಾಲ್ವರು ಸಿಬ್ಬಂದಿ ಬಂದಿದ್ದರು. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ 7-8 ಜನರ ಗ್ಯಾಂಗ್, ನಾವು ಆರ್‌ಬಿಐನವರು ಎಂದು ಸಿಬ್ಬಂದಿಯನ್ನ ಹೆದರಿಸಿದ್ದಾರೆ. ಬಳಿಕ ಗನ್ ಮ್ಯಾನ್ ಸೇರಿದಂತೆ ಉಳಿದವರನ್ನೆಲ್ಲ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ಸಿಎಂಎಸ್ ಸೆಕ್ಯೂರಿಟಿ ವಾಹನದಲ್ಲಿ ಡ್ರೈವರ್ ಜೊತೆ ಡೈರಿ ಸರ್ಕಲ್ ಕಡೆಗೆ ಕರೆತಂದಿದ್ದಾರೆ. ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ವಾಹನ ನಿಲ್ಲಿಸಿ, ಹಣವನ್ನೆಲ್ಲ ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ.

ರಾಬರಿ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೆ ಸಿಎಂಎಸ್ ಸೆಕ್ಯೂರಿಟಿ ವಾಹನದಲ್ಲಿದ್ದ ನಾಲ್ವರನ್ನು ಸಿದ್ದಾಪುರ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ರಾಬರಿ ನಡೆಸಿ ಎಸ್ಕೇಪ್ ಆಗಿರುವ ಆಗಂತುಕರ ಹುಡುಕಾಟ ನಡೆಯುತ್ತಿದೆ.












