ಬೆಂಗಳೂರು: ಕನ್ನಡದ ಕೊತ್ತಲವಾಡಿ ಸಿನಿಮಾ ವಿವಾದ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಚಿತ್ರದ PRO ಹರೀಶ್ ಸೇರಿದಂತೆ ಐವರ ವಿರುದ್ಧ ನಟ ಯಶ್ ತಾಯಿ ಹಾಗೂ ಸಿನಿಮಾದ ನಿರ್ಮಾಪಕಿ ಪುಷ್ಪ ಪೊಲೀಸರಿಗೆ ದೂರು ನೀಡಿದ್ದು, FIR ದಾಖಲಾಗಿದೆ.

ಕೊತ್ತಲವಾಡಿ ಸಿನಿಮಾ ಪ್ರಚಾರಕ್ಕೆ ಅರಸು ಕ್ರಿಯೆಷನ್ ನ ಹರೀಶ್‌ಗೆ 65 ಲಕ್ಷ ರೂ. ಹಣ ನೀಡಿದ್ದೆ. ಆದರೆ ಸಿನಿಮಾ ಪ್ರಚಾರ ಮಾಡದೆ ಹರೀಶ್ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಅಲ್ಲದೇ ಸಿನಿಮಾ ಬಗ್ಗೆ ನೆಗಿಟಿವ್ ಪ್ರಚಾರ ಮಾಡಿದ್ದಾರೆ. ಇದನ್ನ ಪ್ರಶ್ನಿಸಿದ್ದಕ್ಕೆ ತನ್ನ ಸಂಗಡಿಗರ ಜೊತೆ ಸೇರಿ ನನಗೆ ಹೆಚ್ಚುವರಿ ಹಣ ನೀಡಬೇಕೆಂದು ಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕಿ ಪುಷ್ಪ ದೂರು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದರು.
ನಿರ್ಮಾಪಕಿ ಪುಷ್ಪ ನೀಡಿದ ದೂರಿನ ಸಂಬಂಧ PRO ಹರೀಶ್ ಅರಸು, ಸಂಗಡಿಗರಾದ ಮನು, ನಿತಿನ್, ಸಹನಟರಾದ ಮಹೇಶ್ ಗುರು, ಸ್ವರ್ಣಲತಾ ವಿರುದ್ಧ ಪೊಲೀಸರು ವಂಚನೆ ಮತ್ತು ಬೆದರಿಕೆ ಆರೋಪ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಆಗಸ್ಟ್ 1ರಂದು ಕೊತ್ತಲವಾಡಿ ಸಿನಿಮಾ ರಾಜ್ಯಾದ್ಯಂತ ತೆರೆ ಕಂಡಿತ್ತು. ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಬಳಿಕ ಸಿನಿಮಾ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ ತಮಗೆ ಸರಿಯಾಗಿ ಸಂಭಾವನೆ ನೀಡಿಲ್ಲ ಎಂದು ಚಿತ್ರದ ಸಹನಟ ಮಹೇಶ್ ಗುರು ಆರೋಪ ಮಾಡಿದ್ದರು.









