ನಾ ದಿವಾಕರ
ಭಾರತ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ. ಬಿಹಾರದ ಚುನಾವಣೆಗಳು ಇದನ್ನು ಮತ್ತಷ್ಟು ಸ್ಪಷ್ಟಪಡಿಸಿವೆ. ಫ್ಯಾಸಿಸಂ, ಬ್ರಾಹ್ಮಣಶಾಹಿ, ಮನುವಾದ ಈ ವಿದ್ಯಮಾನಗಳನ್ನು ದಾಟಿ, ದೇಶದಲ್ಲಿ ಆಗುತ್ತಿರುವ ವ್ಯತ್ಯಯ ಮತ್ತು ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ನವ ಉದಾರವಾದ ಮತ್ತು ಮಾರುಕಟ್ಟೆ ನೀತಿಗಳು ತಳಸಮಾಜದಲ್ಲಿ ಸೃಷ್ಟಿಸಿರುವ ತಲ್ಲಣಗಳನ್ನು ವರ್ತಮಾನದ ಜೀವನ, ಜೀವನೋಪಾಯಗಳ ವ್ಯಾಪ್ತಿಯಿಂದ ಹೊರತಾಗಿ, ಇಂದಿನ ಭಾರತವನ್ನು ಪ್ರಧಾನವಾಗಿ ಪ್ರತಿನಿಧಿಸುವ ಯುವ ಸಮಾಜವನ್ನು ಕಾಡುತ್ತಿರುವ ಭವಿಷ್ಯದ ಪ್ರಶ್ನೆಗಳನ್ನು ಗಂಭೀರವಾಗಿ ಅವಲೋಕನ ಮಾಡಬೇಕಿದೆ. ಸಂವಿಧಾನದ ಚೌಕಟ್ಟಿನೊಳಗೇ ಕರಾಳ ಕಾಯ್ದೆಗಳನ್ನು ಜಾರಿಗೊಳಿಸಿರುವ ಭಾರತದ ಪ್ರಭುತ್ವ, ಚುನಾವಣೆ-ಜನಪ್ರಾತಿನಿಧ್ಯದ ಪ್ರಜಾಪ್ರಭುತ್ವವನ್ನು ಗ್ರಾಂಥಿಕವಾಗಿ ಪಾಲಿಸುತ್ತಿದ್ದರೂ, ತಾತ್ವಿಕ ನೆಲೆಯಲ್ಲಿ ಸಮಾಜವನ್ನು ಜಾತಿ, ಧರ್ಮ ಹಾಗೂ ಆರ್ಥಿಕ ಸ್ಥಾನಮಾನಗಳ ನೆಲೆಯಲ್ಲಿ ವಿಭಜಿಸುವ ಹೊಸ ವಿಧಾನಗಳನ್ನು ಕಂಡುಕೊಂಡಿದೆ.
ಇದು ಹಿಂದುತ್ವ ರಾಜಕಾರಣದ ಮೂಲ ಮಂತ್ರವಾಗಿದ್ದು ಇದಕ್ಕೆ ಪೂರಕವಾಗಿ ಮಾರುಕಟ್ಟೆ ಆರ್ಥಿಕತೆಯನ್ನು ಸ್ವಾಗತಿಸುವ ಮೂಲಕ, ತಳಸಮಾಜದಲ್ಲಿ ತಾಂಡವಾಡುತ್ತಿರುವ ಅಸಮಾನತೆಗಳನ್ನು ಸಮ್ಮಾನಿಸುವ ಒಂದು ಅರ್ಥವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ. ಈ ಪ್ರತಿಪಾದನೆಯನ್ನು ವ್ಯಾಖ್ಯಾನಿಸುವ ಹಾಗೂ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಜನತೆಗೆ ವ್ಯವಸ್ಥಿತವಾಗಿ ತಲುಪಿಸುವ ಬೌದ್ಧಿಕ ಚಿಂತನಾಧಾರೆಗಳನ್ನೂ ಸೃಷ್ಟಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತದ ಸಂವಿಧಾನ, ತಾತ್ವಿಕವಾಗಿ ಸಮಾನತೆ, ಸಮಾಜವಾದ ಮತ್ತು ಜಾತ್ಯತೀತತೆಯನ್ನು ಪ್ರತಿಪಾದಿಸಿದರೂ, ಈ ಹೊಸ ವ್ಯವಸ್ಥೆಯ ಮಾದರಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ. ಚುನಾಯಿತ ಸರ್ಕಾರಗಳು ಅನುಸರಿಸುವ ಆರ್ಥಿಕ-ಆಡಳಿತ ನೀತಿಗಳು ಇಲ್ಲಿ ನಿರ್ಣಾಯಕವಾಗುತ್ತವೆ.

ರಾಜಕೀಯ ಅರ್ಥಶಾಸ್ತ್ರ ಮತ್ತು ಆಳ್ವಿಕೆ
ವಿಪರ್ಯಾಸವೆಂದರೆ, ಭಾರತದ ಬಹುತೇಕ ರಾಜಕೀಯ ಪಕ್ಷಗಳು ಈ ರಾಜಕೀಯ ಅರ್ಥಶಾಸ್ತ್ರದ (Political Economy) ಒಳಸುಳಿಗಳನ್ನು ಪರಾಮರ್ಶಿಸುವುದಿಲ್ಲ. ಎಡಪಕ್ಷಗಳಿಗೆ ಈ ಅರ್ಥಶಾಸ್ತ್ರದ ಅರಿವು ಮತ್ತು ಪ್ರಭಾವದ ಪರಿವೆ ಇದ್ದರೂ, ಸ್ವಂತ ನೆಲೆಯಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿ, ಗೆಲ್ಲುವ ಸಾಮರ್ಥ್ಯವನ್ನು ಕಳೆದುಕೊಂಡಿರುವುದರಿಂದ (ಕೇರಳ ಹೊರತಾಗಿ), ತಾತ್ವಿಕ ನೆಲೆಯಲ್ಲಿ ಈ ಚಿಂತನೆಯನ್ನು ತಳಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಿಸುವಲ್ಲಿ ಸಾಂಘಿಕವಾಗಿ ವಿಫಲವಾಗಿವೆ. ಕಾಂಗ್ರೆಸ್-ಬಿಜೆಪಿ ಸೇರಿದಂತೆ, ಉಳಿದೆಲ್ಲಾ ರಾಷ್ಟೀಯ-ಪ್ರಾದೇಶಿಕ ಪಕ್ಷಗಳಿಗೂ ಸಹ ಅಧಿಕಾರ ರಾಜಕಾರಣವೇ ಪ್ರಧಾನ ಗುರಿಯಾಗಿದ್ದು, ವರ್ತಮಾನದ ಭಾರತವನ್ನು, ವಿಶೇಷವಾಗಿ ಶೋಷಿತ ಜನರನ್ನು, ಯುವ ಸಮೂಹವನ್ನು ದಿಕ್ಕುತಪ್ಪಿಸುತ್ತಿರುವ ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಶಕ್ತಿಗಳನ್ನು ಎದುರಿಸಲು ಅಗತ್ಯವಾದ ನಿರೂಪಣೆಗಳನ್ನು (Narrtives) ಸೃಷ್ಟಿಸಲಾಗುತ್ತಿಲ್ಲ.
ಬಿಜೆಪಿ ಮತ್ತು ಸಂಘಪರಿವಾರ ರೂಪಿಸುತ್ತಿರುವ ನಿರೂಪಣೆಗಳನ್ನು ಮನುವಾದಿ/ಫ್ಯಾಸಿಸ್ಟ್-ಬ್ರಾಹ್ಮಣಶಾಹಿ ಎಂದು ನಿರ್ವಚಿಸುವುದು ಸಮರ್ಥನೀಯವೇ ಆದರೂ, ಈ ವ್ಯಾಖ್ಯಾನಗಳಿಗೆ ಪ್ರತಿಕ್ರಿಯಿಸುವುದಕ್ಕಿಂತಲೂ ಹೆಚ್ಚಾಗಿ, ವರ್ತಮಾನದ ಯುವ ಸಮಾಜ ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ತಲ್ಲಣಗಳನ್ನು ಹಾಗೂ ಸಾಂಸ್ಕೃತಿಕ ತಲ್ಲಣಗಳನ್ನು ಬಿಂಬಿಸುವ ಹೊಸ ನಿರೂಪಣೆಗಳನ್ನು ಸೃಷ್ಟಿಸುವುದು ಇವತ್ತಿನ ಅಗತ್ಯತೆಯಾಗಿದೆ. ಏಕೆಂದರೆ ಈ ಪ್ರಕ್ರಿಯೆಯ ಭಾಗವಾಗಿ ಅವುಗಳಿಂದ ಹೊರತಾಗಿ ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆ ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣಗಳನ್ನು ಸೃಷ್ಟಿಸುತ್ತಿದೆ. ಇದು ಸಾಧ್ಯವಾಗಬೇಕಾದರೆ, ಬಿಜೆಪಿಯೇತರ ಪಕ್ಷಗಳು ರಾಜಕೀಯ ಅರ್ಥಶಾಸ್ತ್ರದ ನೆಲೆಯಲ್ಲಿ ವಿಶ್ಲೇಷಣೆಗಳನ್ನು ಕೈಗೊಳ್ಳಬೇಕಿದೆ.

ಯುವ ಜನಾಂಗದ ದೃಷ್ಟಿಕೋನ
ಭಾರತದ ಯುವ ಸಮೂಹ ಈ ಸೂಕ್ಷ್ಮ ಬದಲಾವಣೆಗಳನ್ನು ವರ್ತಮಾನದ ಸಂದರ್ಭದಲ್ಲಿಟ್ಟು ನೋಡಬೇಕಿದೆ. ಸೈದ್ಧಾಂತಿಕವಾಗಿ ಈ ಜನಾಂಗವನ್ನು ಆಕರ್ಷಿಸುವ ಮಾರ್ಕ್ಸ್‌ವಾದ, ಅಂಬೇಡ್ಕರ್‌ವಾದ, ಲೋಹಿಯಾವಾದ ಮೊದಲಾದ ಸೈದ್ಧಾಂತಿಕ ಚಿಂತನೆಗಳು ಭವಿಷ್ಯವನ್ನು ಕಟ್ಟಲು ನೆರವಾಗುವ ಬೌದ್ಧಿಕ ಪರಿಕರಗಳಷ್ಟೆ. ಪ್ರಭುತ್ವದೊಡನೆ ಸಂಘರ್ಷಕ್ಕಿಳಿಗಾದ ಇವು ಅಸ್ತ್ರಗಳೂ ಆಗುತವೆ. ಆದರೆ ಇದನ್ನು ಡಿಜಿಟಲ್ ಯುಗದ ಭಾರತದಲ್ಲಿ ಅನುಸರಿಸುವಾಗ, ಸಮಕಾಲೀನ ಪರಿಸ್ಥಿತಿಗಳನ್ನು ಗಂಭೀರವಾಗಿ ಅರಿತು ಮುನ್ನಡೆಯಬೇಕಿದೆ. ಭಾರತ ಬದಲಾಗುತ್ತಿದೆ ಎನ್ನುವುದಕ್ಕಿಂತಲೂ ರೂಪಾಂತರಗೊಳ್ಳುತ್ತಿದೆ. ವಿದ್ಯಾರ್ಥಿ ಯುವ ಸಮೂಹ ಕೇವಲ ಮೂರು ದಶಕಗಳ ಮುನ್ನ ಎದುರಿಸುತ್ತಿದ್ದ ಜಟಿಲ ಸವಾಲುಗಳು ಇಂದು ಭಿನ್ನ ರೂಪ ಪಡೆದಿವೆ. ಆಳ್ವಿಕೆಯ ಧೋರಣೆ ಮತ್ತು ರಾಜಕೀಯ ಪಕ್ಷಗಳ ಗುರಿ ಬದಲಾಗಿವೆ.
ಈ ಬದಲಾವಣೆಯ ಹಂತದಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಿರುವುದು, ರಾಜಕೀಯ ಪರಿಭಾಷೆಯಲ್ಲಿ ನಾವು ವ್ಯಾಖ್ಯಾನಿಸುತ್ತಿರುವ ಫ್ಯಾಸಿಸಂ, ಮನುವಾದ ಇತ್ಯಾದಿಗಳಿಗೆ ಮೂಲ ತಳಪಾಯ ಒದಗಿಸುತ್ತಿರುವುದು ನವ ಉದಾರವಾದದ ಬಂಡವಾಳಶಾಹಿ ಅರ್ಥವ್ಯವಸ್ಥೆ. ತಳ ಸಮುದಾಯಗಳ ಸಂಸ್ಕೃತೀಕರಣ (Sanskritisation) ಪ್ರಕ್ರಿಯೆಯು ಒಂದು ಹಂತಕ್ಕೆ ಆಳವಾಗಿದ್ದು, ಈ ಸಮಾಜಗಳೇ ನವ ಉದಾರವಾದವನ್ನು ಒಪ್ಪಿಕೊಳ್ಳುವ ಹಂತ ತಲುಪಿವೆ. ಸಾಮಾಜಿಕ ಮೇಲ್ ಚಲನೆ, ಆರ್ಥಿಕ ಪ್ರಗತಿ ಹಾಗೂ ನಗರೀಕರಣಕ್ಕೆ ತೆರೆದುಕೊಂಡ ಈ ಸಮಾಜಗಳು ಮತ್ತು ಶೋಷಿತ ಸಮಾಜವನ್ನು ಪ್ರತಿನಿಧಿಸುವ ಸಮುದಾಯಗಳೂ ಸಹ, ವಾಸ್ತವಗಳಿಗೆ ವಿಮುಖವಾಗಿರುವುದನ್ನು ಯುವ ಜನಾಂಗ ಸೂಕ್ಷ್ಮವಾಗಿ ಗಮನಿಸಬೇಕಿದೆ.

ಸಂವಿಧಾನದ ಆಸರೆಯಲ್ಲಿ
ಭಾರತದ ಸಂವಿಧಾನ ಮತ್ತು ಅದರ ಆಶಯಗಳು ಮೂಲತಃ ಸಮಾಜವಾದ, ಸಮಾನತೆ ಮತ್ತು ಜಾತ್ಯತೀತತೆಯೇ ಆದರೂ, ಈ ಆಶಯಗಳನ್ನು ಮೀರಿ ನಡೆಯುವ ಅಧಿಕಾರವನ್ನು ಸಂಸದೀಯ ಪ್ರಜಾತಂತ್ರದ ಆಳ್ವಿಕೆಗಳು ಪಡೆಯುತ್ತವೆ. ಈ ಮೌಲ್ಯಗಳನ್ನು ರಕ್ಷಿಸುವ ನೈತಿಕ-ಸಾಂವಿಧಾನಿಕ ಜವಾಬ್ದಾರಿ ಚುನಾಯಿತ ಸರ್ಕಾರಗಳ ಮೇಲಿರುತ್ತವೆ. 2014ರ ನಂತರದ ಬದಲಾದ ಭಾರತವನ್ನು ಗಮನಿಸಿದರೆ, ಇದರ ಸೂಕ್ಷ್ಮವೂ ಅರ್ಥವಾಗುತ್ತದೆ. ಉದ್ಯೋಗ ಮೀಸಲಾತಿ, ಶೈಕ್ಷಣಿಕ ಅವಕಾಶ, ಪ್ರಾಥಮಿಕ ಹಂತದಿಂದ ಉನ್ನತ ವ್ಯಾಸಂಗದವರೆಗೆ ಶಿಕ್ಷಣದ ಸಮಾನ ಅವಕಾಶಗಳು, ಧಾರ್ಮಿಕ-ಉಪಾಸನಾ ಸ್ವಾತಂತ್ರ್ಯ- ಮೂಲಭೂತ ಮಾನವ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಇವೆಲ್ಲವನ್ನೂ ಸಂವಿಧಾನ ಖಾತ್ರಿಗೊಳಿಸಿದರೂ, ಸಂವಿಧಾನದ ಚೌಟ್ಟಿನೊಳಗೆ ಈ ಆಶಯಗಳನ್ನು ಮೀರುವಂತಹ ಕಾನೂನುಗಳನ್ನು ರಚಿಸಲು ಅವಕಾಶ ಇರುತ್ತದೆ.
ಈ ದ್ವಂದ್ವವನ್ನು ಬಳಸಿಕೊಂಡೇ ಬಿಜೆಪಿ ತನ್ನ 11 ವರ್ಷಗಳ ಆಳ್ವಿಕೆಯಲ್ಲಿ ಗೋಹತ್ಯೆ ನಿಷೇಧ, ಮತಾಂತರ ನಿಷೇಧ, ಶಿಕ್ಷಣದ ಕಾರ್ಪೋರೇಟೀಕರಣ, ಆರೋಗ್ಯ ಸೇವೆಯ ವಾಣಿಜ್ಯೀಕರಣ, ಇವುಗಳಿಗೆ ಪೂರಕವಾದ ಕಾಯ್ದೆಗಳನ್ನು ಜಾರಿಮಾಡುತ್ತಾ ಬಂದಿದೆ. ಉದ್ಯೋಗ ಮೀಸಲಾತಿ ಸಂವಿಧಾನದ ನಿಯಮಾನುಸಾರ ಅಧಿಕೃತವಾಗಿ ಅನುಸರಿಸಿದರೂ, ಸಹ ಉದ್ಯೋಗಾವಕಾಶಗಳೇ ಇಲ್ಲದಂತಹ ಕಾರ್ಪೋರೇಟೀಕರಣ ಪ್ರಕ್ರಿಯೆ ಜಾರಿಯಲ್ಲಿದೆ. ಈ ಅವಕಾಶಗಳು ಲಭ್ಯವಿರುವ ಕ್ಷೇತ್ರಗಳಲ್ಲೂ ಸಾರ್ವಜನಿಕ ಉದ್ದಿಮೆಗಳು ಮಾರುಕಟ್ಟೆ ಪಾಲಾಗುತ್ತಿದ್ದು, ಕೃಷಿ ವಲಯವೂ ಸಹ ಇದೇ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿರುವ ಮೂರು ಕರಾಳ ಕೃಷಿ ಕಾಯ್ದೆಗಳಲ್ಲಿ ಕಾಣಬಹುದು. ನೂತನ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಿತರಕ್ಷಣೆಗೆ ಕಡೆಯ ಆದ್ಯತೆ ನೀಡುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಈ ದೃಷ್ಟಿಯಿಂದ ನೋಡಿದಾಗ, ಸಂವಿಧಾನವನ್ನು ನಿತ್ಯ ಪಠಿಸುತ್ತಾ, ಸಾಂವಿಧಾನಿಕ ಹಕ್ಕುಗಳಿಗಾಗಿ ಪ್ರತಿಯೊಂದು ಹಂತದಲ್ಲೂ ಹೋರಾಡುತ್ತಲೇ ಬಂದಿರುವ ವಿದ್ಯಾರ್ಥಿ ಯುವಜನರು, ಇದರಿಂದಾಚೆಗಿನ ಅಪಾಯಕಾರಿ ಬೆಳವಣಿಗೆಗಳನ್ನು ಗುರುತಿಸಬೇಕಿದೆ. ಉನ್ನತ ಶಿಕ್ಷಣ ಸಾಮಾನ್ಯರ ಕೈಗೆಟುಕದಂತಾಗಿರುವುದು, ಉತ್ತಮ ಆರೋಗ್ಯ ಸೌಲಭ್ಯಗಳೆಲ್ಲವೂ ಮಾರುಕಟ್ಟೆಯ ವಶದಲ್ಲಿರುವುದು, ಔದ್ಯೋಗಿಕ ಕ್ಷೇತ್ರವನ್ನು ಬಂಡವಾಳಶಾಹಿಗಳೇ ಆಕ್ರಮಿಸಿರುವುದು, ಈ ಸಾಂವಿಧಾನಿಕ ನಿಯಮಗಳನ್ನು ನಿಷ್ಫಲಗೊಳಿಸುತ್ತವೆ. ಎಂಬ ಸೂಕ್ಷ್ಮ ಅರಿವು ನಮಗಿರಬೇಕಿದೆ. ಎಲ್ಲ ಸರ್ಕಾರಗಳೂ ಮೀಸಲಾತಿ ಹೆಚ್ಚಿಸಲು ಉತ್ಸುಕವಾಗಿರುತ್ತವೆ, ಆದರೆ ಅವಕಾಶಗಳನ್ನು ಸೃಷ್ಟಿಸುವ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಈ ವಿರೋಧಾಭಾಸವನ್ನು ಯುವಜನಾಂಗ ಕೂಲಂಕುಷವಾಗಿ ಪರಿಶೀಲಿಸಿ, ಮುನ್ನಡೆಯಬೇಕಿದೆ.
ಹೊಸ ಸವಾಲುಗಳು – ಹಳೆಯ ಕನಸುಗಳು
ಈ ಜಟಿಲ ಸಿಕ್ಕುಗಳ ನಡುವೆ ತಮ್ಮ ಭವಿಷ್ಯದ ಕನಸು ಕಾಣುತ್ತಿರುವ ಯುವ ಸಮೂಹಕ್ಕೆ ನಿತ್ಯ ಸಂಘರ್ಷಗಳಲ್ಲಿ ಮಾರ್ಕ್ಸ್ ಮತ್ತು ಅಂಬೇಡ್ಕರ್ ಅವರ ಆಲೋಚನೆಗಳು ರಕ್ಷಾಕವಚಗಳಾಗಿರುತ್ತವೆ. ಅದರೆ ವರ್ತಮಾನದ ಸಮಾಜದಲ್ಲಿ ಜನಪರ/ಪ್ರಗತಿಪರ ಎಂದು ಕರೆಯಲ್ಪಡುವ ಜನಾಂದೋಲನಗಳೂ ಸಹ ಸೈದ್ದಾಂತಿಕವಾಗಿ ವಿಘಟನೆಗೊಳಗಾಗಿದ್ದು, ಸಂಘಟನಾತ್ಮಕ ಆಶಯಗಳಿಗೂ, ಯುವ ಜನಾಂಗದ ಆದ್ಯತೆಗಳಿಗೂ ಅಪಾರ ಅಂತರ ಇರುವುದನ್ನು ಗಮನಿಸುತ್ತವೆ. ಅನೇಕ ಸಂದರ್ಭಗಳಲ್ಲಿ ಮಾರ್ಕ್ಸ್‌ವಾದ-ಅಂಬೇಡ್ಕರ್‌ವಾದ ಸಂಘಟನಾತ್ಮಕ ಒರಗು ಗೋಡೆಗಳಾಗಿ ( Rest Wall) ಪರಿಣಮಿಸುತ್ತವೆ. ಇಲ್ಲಿ ರೂಪುಗೊಳ್ಳುವ ನಾಯಕತ್ವ ಮತ್ತು ತಾತ್ವಿಕ ನೆಲೆಗಳು, ಮತ್ತೊಂದು ಮಗ್ಗುಲಿನ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ವಿಫಲವಾಗುತ್ತಿವೆ. ಸೈದ್ಧಾಂತಿಕ ಭಿನ್ನತೆ, ಸಾಂಘಿಕ ವಿಘಟನೆಗೆ ಮೂಲ ಕಾರಣವಾಗಿ ಪರಿಣಮಿಸುತ್ತದೆ.
ನಿರಂತರ ಸಂಘರ್ಷದಲ್ಲಿ ತೊಡಗಿರುವ ವಿದ್ಯಾರ್ಥಿ-ಯುವ ಸಮೂಹದ ಆದ್ಯತೆಗಳು ಪ್ರಧಾನವಾಗಿ ಕೈಗೆಟುಕುವ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸುಭದ್ರ ಭವಿಷ್ಯವನ್ನು ರೂಪಿಸಬಹುದಾದ ಉದ್ಯೋಗ. ಇವೆರಡೂ ಮಾರುಕಟ್ಟೆಯ ಜಗುಲಿಯಿಂದಲೇ ಪಡೆಯಬೇಕಾದ ಪರಿಸ್ಥಿತಿಯನ್ನು ಈ ಸಮಾಜವು ಎದುರಿಸುತ್ತಿದೆ. ಹಾಗಾಗಿಯೇ ವಿದ್ಯಾರ್ಜನೆಯನ್ನು ಮಧ್ಯದಲ್ಲೇ ತೊರೆದು ಮಾರುಕಟ್ಟೆಯಲ್ಲಿ ಅವಕಾಶಗಳಿಗಾಗಿ ಹಂಬಲಿಸುವವರಷ್ಟು ಸಂಖ್ಯೆಯಲ್ಲೇ, ವಿದ್ಯಾಭ್ಯಾಸದ ವೆಚ್ಚ ಸರಿದೂಗಿಸಲು ಗಿಗ್ ಕಾರ್ಮಿಕರಾಗಿ ದುಡಿಯುವವರ ಸಂಖ್ಯೆಯನ್ನೂ ಗುರುತಿಸಬಹುದು. ಈ ಪ್ರಕ್ರಿಯೆಯಲ್ಲಿ ಸಂಪೂರ್ಣ ಅಂಚಿಗೆ ತಳ್ಳಲ್ಪಡುವುದು ಮಹಿಳಾ ಸಮೂಹ ಎನ್ನುವುದೂ ಗಮನಿಸಬೇಕಾದ ಅಂಶ. ಹಾಗಾಗಿಯೇ ಭಾರತೀಯ ಮಹಿಳೆ ಮಾರುಕಟ್ಟೆ-ಜಾತಿ ಮತ್ತು ಲಿಂಗತ್ವ ಈ ಮೂರೂ ದಿಕ್ಕುಗಳಿಂದ ಶೋಷಿತಳಾಗಿದ್ದಾಳೆ.

ವಿದ್ಯಾರ್ಥಿ ಯುವ ಜನಾಂಗದ ಸಂಘರ್ಷವನ್ನು ನಿರ್ದೇಶಿಸುವ, ಹೋರಾಟಗಳನ್ನು ಸಂಘಟಿಸಿ ಮುನ್ನಡೆಸುವ ಸಂಘಟನೆಗಳು ಈ ಸೂಕ್ಷ್ಮ ತಾತ್ವಿಕತೆಗಳನ್ನು ಗಮನಿಸದೆ ಹೋದರೆ, ಬಹುಶಃ ಸ್ಥಾಪಿತ ಸಿದ್ಧಾಂತಗಳ ಸಂಕೋಲೆಗಳಲ್ಲಿ ಬಂಧಿಯಾಗಿಬಿಡುತ್ತವೆ. ದಾರ್ಶನಿಕರು ಬಿಟ್ಟುಹೋಗಿರುವ ಸಿದ್ಧಾಂತಗಳನ್ನು ಗೌರವಿಸುತ್ತಲೇ, ಸಮ್ಮಾನಿಸುತ್ತಲೇ, ಅದನ್ನೂ ದಾಟಿ ನೋಡುವ ದಾರ್ಷ್ಟ್ಯ ಮತ್ತು ದೂರಗಾಮಿ ದೃಷ್ಟಿಕೋನ ಇಂದಿನ ಯುವ ಜನಾಂಗಕ್ಕೆ ಅತ್ಯವಶ್ಯವಾಗಿ ಬೇಕಿದೆ. ನಮ್ಮ ದೃಷ್ಟಿಕೋನವು ಸಮೀಪದೃಷ್ಟಿಯಾದಷ್ಟೂ (Myopic view) ಹೋರಾಟಗಳು ಶಿಥಿಲವಾಗುತ್ತಾ, ಸಂಕುಚಿತವಾಗುತ್ತಲೇ ಹೋಗುತ್ತವೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಿಗಿ ಹಿಡಿತಕ್ಕೆ ಸಿಲುಕಿ, ನಿಷ್ಫಲವಾಗುತ್ತಾ ಹೋಗುತ್ತವೆ. ಅಥವಾ ವಿಘಟನೆಗೊಳಗಾಗಿ ನಿಷ್ಕ್ರಿಯವಾಗುತ್ತವೆ.
ಸೈದ್ಧಾಂತಿಕ ಬೇಲಿಗಳನ್ನು ದಾಟಿ
ಹಾಗಾಗಿಯೇ ಇಂದಿನ ಭಾರತದ ಯುವ ಜನಾಂಗ, ಸಿದ್ಧಾಂತಗಳ ಗೋಡೆಗಳನ್ನು ದಾಟಿ ನೋಡುವ ವಿವೇಕ ಬೆಳೆಸಿಕೊಳ್ಳಬೇಕಿದೆ. 2025ರ ಭಾರತವನ್ನು 1947ಕ್ಕೆ ಇರಲಿ, 1990ರ ಸನ್ನಿವೇಶಕ್ಕೂ ಹೋಲಿಸಲಾಗುವುದಿಲ್ಲ.ಈ ರೂಪಾಂತರಗೊಂಡ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಗ್ರಾಂಥಿಕವಾಗಿ ಸುಸ್ಥಿತಿಯಲ್ಲಿದೆ, ಆಚರಣಾತ್ಮಕವಾಗಿ ಆರೋಗ್ಯಕರವಾಗಿವೆ, ಆದರೆ ಆಂತರಿಕವಾಗಿ ಈ ಎರಡೂ ಉದಾತ್ತ ಮೌಲ್ಯಗಳು ಶಿಥಿಲವಾಗುತ್ತಲೇ ಇವೆ. ತತ್ಪರಿಣಾಮವಾಗಿ, ಈ ಎರಡೂ ಮೌಲ್ಯಗಳ ಫಲಾನುಭವಿಗಳಾಗಬೇಕಾದ, ಭವಿಷ್ಯದ ನಿರ್ಮಾತೃಗಳು ಅಂದರೆ ವಿದ್ಯಾರ್ಥಿ ಯುವ ಜನರು, ದಿಕ್ಕುಗಾಣದಂತಾಗಿದ್ದಾರೆ. ಈ ಜನಾಂಗಕ್ಕೆ ಸಂವಿಧಾನವನ್ನು ತಲುಪಿಸಿದ್ದೇವೆ ಆದರೆ ಅದರ ಕಾರ್ಯಾಚರಣೆಯಲ್ಲಿರುವ, ಅಗೋಚರ ಬದಲಾವಣೆಗಳನ್ನು, ನಕಾರಾತ್ಮಕ ಬೆಳವಣಿಗೆಗಳನ್ನು ಸಮರ್ಪಕವಾಗಿ ತಲುಪಿಸಲಾಗುತ್ತಿಲ್ಲ.

ಅಸ್ತಿತ್ವವಾದಿ ರಾಜಕೀಯ ಪಕ್ಷಗಳಿಗೆ ಇದು ಮುಖ್ಯವಾಗುವುದೂ ಇಲ್ಲ. ಹಾಗೊಮ್ಮೆ ಆಗಿದ್ದರೆ ನವ ಉದಾರವಾದಿ ಆರ್ಥಿಕತೆಯ ವಿರುದ್ಧ, ಕಾರ್ಪೋರೇಟಿಕರಣ ಪ್ರಕ್ರಿಯೆಯ ವಿರುದ್ಧ ದೇಶವ್ಯಾಪಿ ಜನಾಂದೋಲನಗಳು ರೂಪುಗೊಳ್ಳುತ್ತಿದ್ದವು. ಉದ್ಯೋಗದ ಹಕ್ಕನ್ನು ಸಾಂವಿಧಾನಿಕವಾಗಿ, ಶಾಸನಬದ್ಧವಾಗಿ ಆಗ್ರಹಿಸುವ ಹೋರಾಟಗಳು ಕಾಣುತ್ತಿದ್ದವು. ಅಂಬೇಡ್ಕರ್‌ವಾದಿ ರಾಜಕೀಯ ಪಕ್ಷಗಳೇ, ಎಡಪಕ್ಷಗಳ ಜೊತೆಗೂಡಿ, ನವ ಉದಾರವಾದದ ವಿರುದ್ಧ ರಾಜಕೀಯ ಪ್ರಜ್ಞೆ ಮೂಡಿಸಲು, ತಳಸಮಾಜದ ತಳಪಾಯವನ್ನು ತಲುಪುತ್ತಿದ್ದವು. ವಿಪರ್ಯಾಸವೆಂದರೆ ಬಹುತೇಕ ರಾಷ್ಟ್ರೀಯ/ಪ್ರಾದೇಶಿಕ ಬೂರ್ಷ್ವಾ ಪಕ್ಷಗಳು ನವ ಉದಾರವಾದವನ್ನು ತಮ್ಮ ಪ್ರಣಾಳಿಕೆ ಅಥವಾ ಕಾರ್ಯಸೂಚಿಗಳ ಭಾಗವಾಗಿ ಪರಿಗಣಿಸುತ್ತಿಲ್ಲ.
ಮತ್ತೊಂದೆಡೆ ಮಹಿಳಾ ದೌರ್ಜನ್ಯ, ಜಾತಿ ತಾರತಮ್ಯಗಳು, ಅಸಮಾನತೆ, ಅಸ್ಪೃಶ್ಯತೆಯಂತಹ ಹೀನಾಚರಣೆಗಳು, ಅಲ್ಪಸಂಖ್ಯಾತರ ಮೇಲಿನ ನಿರಂತರ ದಾಳಿ ಇವೆಲ್ಲವೂ ರಾಜಕೀಯ ಸಿದ್ಧಾಂತಳಿಗೆ ಅನುಸಾರವಾಗಿ ಪರಿಗಣಿಸಲ್ಪಡುವುದರಿಂದ, ಅತ್ಯಂತ ಕ್ರೂರ ಅಪರಾಧಗಳನ್ನೂ ಸಾಪೇಕ್ಷವಾಗಿಯೇ (Relative terms) ನೋಡಲಾಗುತ್ತಿದೆ. ನ್ಯಾಯಕ್ಕಾಗಿ ಹೋರಾಡುವ ಕೆಲವೇ ದನಿಗಳನ್ನು ಅಪರಾಧಿಗಳನ್ನಾಗಿ ನೋಡಲಾಗುತ್ತಿದೆ. ಕೆಲವು ಸಂದರ್ಭಗಳಲ್ಲ ವಿದ್ಯಾರ್ಥಿ-ಯುವಜನಾಂಗವೂ ಅಪರಾಧಿ ಸ್ಥಾನದಲ್ಲಿ ನಿಲ್ಲುವ ಸಾಧ್ಯತೆಗಳಿವೆ. ಇದೇ ಸಮಾಜದಲ್ಲಿ ಆಳುವವರ ಪರ ನಿಲ್ಲುವ ಒಂದು ವರ್ಗವನ್ನೂ ನವ ಉದಾರವಾದ-ಬಲಪಂಥೀಯ ರಾಜಕಾರಣ ಸೃಷ್ಟಿಸಿದೆ. ಪ್ರತಿಷ್ಠಿತ ಜೆಎನ್‌ಯು ವಿಶ್ವವಿದ್ಯಾಲಯ ಒಂದು ಜ್ವಲಂತ ನಿದರ್ಶನವಾಗಿ ಕಾಣುತ್ತದೆ.

ಮುಂದಿನ ಹಾದಿ,,,,,
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಯುವ ಜನಾಂಗ ಸಾಗುವುದಾದರೂ ಯಾವ ದಿಕ್ಕಿನಲ್ಲಿ ? ಈ ಸಮಾಜಕ್ಕೆ ದಾರಿ ತೋರುವ ದಾರ್ಶನಿಕರು ಇತಿಹಾಸದ ಗರ್ಭ ಸೇರಿದ್ದಾರೆ. ಸಮಕಾಲೀನ ಭಾರತ ಈ ರೀತಿಯ ದಾರ್ಶನಿಕರನ್ನು ಸೃಷ್ಟಿಸಿಯೇ ಇಲ್ಲ. ಅನುಕರಣೀಯ ಮಾದರಿಗಳಿಲ್ಲದ ವಾತಾವರಣದಲ್ಲಿ ಯುವ ಜನಾಂಗ ಪ್ರಜಾಪ್ರಭುತ್ವ, ಸಮಾನತೆ, ಸಮನ್ವಯ ಮತ್ತು ಸಮಾಜವಾದದ ಕನಸು ಕಾಣುತ್ತಿದೆ. ಈ ಕನಸನ್ನು ನನಸು ಮಾಡುವ ಜವಾಬ್ದಾರಿ ಸರ್ಕಾರಗಳ ಮೇಲಿದ್ದರೂ ಅದು ಊಹಿಸಲಾಗದ ಸಾಧ್ಯತೆ. ಹಾಗಾದರೆ ಮುಂದಿನ ಹಾದಿ ಏನು ?
- ತತ್ವ ಸಿದ್ಧಾಂತಗಳನ್ನು ಗ್ರಾಂಥಿಕವಾಗಿ ಅಧ್ಯಯನ ಮಾಡಿ ಸಮೀಪದೃಷ್ಟಿಯಿಂದ (Myopic View) ನೋಡುವ ಧೋರಣೆಯಿಂದ ಹೊರಬರಬೇಕು.
- ಮಾರ್ಕ್ಸ್, ಅಂಬೇಡ್ಕರ್, ಲೋಹಿಯಾ ಎಲ್ಲ ಸಿದ್ಧಾಂತಗಳನ್ನೂ ಅರಿತು, ನಡುವೆ ಇರುವ ಸಂಘಟನಾತ್ಮಕ ಗೋಡೆಗಳನ್ನು ದಾಟಿ ನೋಡುವ ವಿವೇಕ ಬೆಳೆಸಿಕೊಳ್ಳಬೇಕು.
- ಕೇವಲ ಅಧ್ಯಯನ. ಭಾಷಣ, ಉಪನ್ಯಾಸಗಳಿಗೆ ಸೀಮಿತವಾಗದೆ, ಈ ಸಿದ್ಧಾಂತಗಳ ಒಳಸುಳಿಗಳನ್ನು ಸಮಕಾಲೀನ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಲು ಪರಸ್ಪರ –ಅನಭವಿಗಳೊಡನೆ ಸಂವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.
- ಈ ಸೈದ್ಧಾಂತಿಕ ಮಾರ್ಗಗಳನ್ನು ಹೋರಾಟಗಳಲ್ಲಿ ಅಳವಡಿಸುವಾಗ, ನಡುವೆ ಇರಬಹುದಾದ ಅಡ್ಡಗೋಡೆಗಳನ್ನು ಕೆಡವಿ, ಸಮಗ್ರ ದೃಷ್ಟಿಕೋನವನ್ನು ರೂಢಿಸಿಕೊಳ್ಳಬೇಕು.
- ಯುವ ಜನಾಂಗ ಎದುರಿಸುವ ಸಮಸ್ಯೆಗಳು, ಸಿಕ್ಕುಗಳು ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಈ ದಾರ್ಶನಿಕರ ತತ್ವಗಳನ್ನು ಬಳಸುತ್ತಲೇ, ಈಗ ಚಾಲ್ತಿಯಲ್ಲಿರುವ ಆರ್ಥಿಕತೆಯ ಒಳಸೂಕ್ಷ್ಮಗಳನ್ನು, ಅಪಾಯಗಳನ್ನು ಹಾಗೂ ಸ್ವರೂಪವನ್ನೂ ವರ್ತಮಾನದ ನೆಲೆಯಲ್ಲಿಟ್ಟು ಅರ್ಥೈಸಬೇಕು. ಇದಕ್ಕೆ ಅಧ್ಯಯನ ಮತ್ತು ಸಂವಾದ ಎರಡೂ ಮುಖ್ಯ.

ಈ ಸೂತ್ರಗಳನ್ನು ಅಳವಡಿಕೊಳ್ಳುತ್ತಲೇ , ಹಿರಿಯ ತಲೆಮಾರಿನ ಅನುಭವಗಳಿಗೆ ಕಿವಿಯಾಗಿ, ವರ್ತಮಾನದ ಶೋಷಿತ ವರ್ಗಗಳಿಗೆ ಕಣ್ಣಾಗಿ, ಎಲ್ಲ ಅವಕಾಶವಂಚಿತ ಸಮಾಜಗಳಿಗೆ ಹೆಗಲಾಗುವ ಆಲೋಚನೆಯನ್ನು ರೂಢಿಸಿಕೊಳ್ಳಬೇಕು. ಇದು ಯುವ ಸಮಾಜದ ಮೇಲಿರುವ ದೊಡ್ಡ ಜವಾಬ್ದಾರಿ. ಸಾಮಾಜಿಕ ಚಳುವಳಿಗಳು, ಸಂಘಟನೆಗಳು ಮತ್ತು ಹಿರಿಯ ತಲೆಮಾರಿನ ಬೌದ್ಧಿಕ ವಲಯ ಈ ರಥವನ್ನು ಮುಂದಕ್ಕೆ ಎಳೆಯುವ ಜವಾಬ್ದಾರಿಯನ್ನು ಹೊರಬೇಕಿದೆ. ಭವಿಷ್ಯದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕಾದರೆ, ಇದು ಅತ್ಯಗತ್ಯ.
-೦-೦-೦-೦-೦-











