ಬೆಂಗಳೂರು: ನಂದಿನಿ ಬ್ರ್ಯಾಂಡ್ ಹೆಸರಲ್ಲಿ ರಾಜ್ಯದಲ್ಲಿ ಕಲಬೆರೆಕೆ ತುಪ್ಪ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

KMF ಡಿಸ್ಟ್ರಿಬ್ಯೂಟರ್ ಮಹೇಂದ್ರ, ಪುತ್ರ ದೀಪಕ್, ತಮಿಳುನಾಡಿನ ಮುನಿರಾಜು, ಅಭಿ ಅರಸು ಬಂಧಿತ ಆರೋಪಿಗಳು. ಈ ಆರೋಪಿಗಳು ಅಸಲಿ ತುಪ್ಪವನ್ನ ತಮಿಳುನಾಡಿಗೆ ತೆಗೆದುಕೊಂಡು ಹೋಗುತ್ತಿದ್ದರು. ಬಳಿಕ ಅಸಲಿ ತುಪ್ಪಕ್ಕೆ ಫಾರ್ಮ್ ಆಯಿಲ್, ತೆಂಗಿನ ಎಣ್ಣೆ ಬೆರೆಸಿ ಮಾರಾಟ ಮಾಡುತ್ತಿದ್ದರು. ಈ ಕಲಬೆರೆಕೆ ಮಾರಾಟದ ಬಗ್ಗೆ KMF ವಿಜಲನ್ಸ್ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಬಳಿಕ ಅಧಿಕಾರಿಗಳು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.

ಸಿಸಿಬಿ ಪೊಲೀಸರು ಚಾಮರಾಜಪೇಟೆಯ ನಂಜಾಂಬ ಅಗ್ರಹಾರದ ಕೃಷ್ಣ ಎಂಟರ್ ಪ್ರೈಸಸ್ ಮಾಲೀಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಗೋಡೌನ್ ಹಾಗೂ ಅಂಗಡಿಗಳ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ 8,136 ಲೀಟರ್ ಕಲಬೆರಕೆ ತುಪ್ಪ, ವಶಕ್ಕೆ ಪಡೆಯಲಾಗಿತ್ತು.
ಬಳಿಕ ಮತ್ತಷ್ಟು ಕಡೆ ದಾಳಿ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದು, ಸ್ಕ್ಯಾಚೆಟ್ ಮತ್ತು ಪ್ಲ್ಯಾಸ್ಟಿಕ್ ಬಾಟಲ್ ನಲ್ಲಿ ತುಪ್ಪ ತುಂಬಿ ನಗರದಾದ್ಯಂತ ಮಾರಾಟ ಮಾಡುತ್ತಿದ್ದದ್ದನ್ನ ಬಯಲಾಗಿದೆ.
ಸದ್ಯ ಬಂಧಿತರಿಂದ ಬರೋಬ್ಬರಿ 1.26 ಕೋಟಿ ಮೌಲ್ಯದ 8 ಸಾವಿರ ಲೀಟರ್ ನಕಲಿ ನಂದಿನಿ ತುಪ್ಪ, ನಾಲ್ಕು ವಾಹನಗಳು ತೆಂಗು ಹಾಗೂ ಫಾರ್ಮ್ ಆಯಿಲ್, ನಕಲಿ ತುಪ್ಪ ತಯಾರು ಮಾಡುವ ಯಂತ್ರಗಳು ಸೇರಿ 1 ಕೋಟಿ 26 ಲಕ್ಷದ 95 ಸಾವಿರ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.













