ಪಾಟ್ನಾ: ದೇಶದ ರಾಜಕೀಯ ಪ್ರತಿಷ್ಠೆಯ ಕಣವಾಗಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಬಿಹಾರದ ಒಟ್ಟು 243 ಕ್ಷೇತ್ರಗಳಿಗೆ ನವೆಂಬರ್ 6 ಮತ್ತು ನವೆಂಬರ್ 11ರಂದು ಎರಡು ಹಂತದಲ್ಲಿ ಮತದಾನ ನಡೆದಿದ್ದು, ಇಂದು ಫಲಿತಾಂಶ ಹೊರಬೀಳಲಿದೆ.

ಈ ಬಾರಿಯ ಚುನಾವಣೆಯಲ್ಲಿ ಹಿಂದೆಂದೂ ನಡೆಯದ 67.13 ರಷ್ಟು ದಾಖಲೆಯ ಮತದಾನ ಆಗಿದೆ. ಇಂದು ಒಟ್ಟು 2616 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, ಈಗಾಗಲೇ ಬಿಹಾರ ರಾಜ್ಯದಾದ್ಯಂತ 38 ಜಿಲ್ಲೆಗಳ 46 ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದೆ. 243 ಕ್ಷೇತ್ರದ ವಿಧಾನಸಭೆಗೆ ಸರ್ಕಾರ ರಚನೆಗೆ 122 ಮ್ಯಾಜಿಕ್ ನಂಬರ್ ಆಗಿದೆ.

ಇನ್ನು ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಸರ್ಕಾರ ರಚನೆ ಆಗುವ ಬಗ್ಗೆ ಈಗಾಗಲೇ ವರದಿ ನೀಡಿದ್ದು, ಎನ್‌ಡಿಎ ಮೈತ್ರಿಕೂಟ ಹಾಗೂ ಮಹಾಘಟ್‌ಬಂಧನ್ ನಡುವಿನ ಜಿದ್ದಾಜಿದ್ದಿಯ ಪೈಪೋಟಿಯಲ್ಲಿ ಮತದಾರರು ಯಾರ ಕೈ ಹಿಡಿದಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.













