ಬೆಂಗಳೂರು: ಶಿಕ್ಷಣವು ಯಾವುದೇ ಜಾತಿ, ಧರ್ಮ, ಅಥವಾ ಭೌಗೋಳಿಕ ಗಡಿಗಳನ್ನು ಮೀರಿದ ಬೌಂಡರಿಲೆಸ್ ವಿಷಯವಾಗಿದ್ದು, ದೇಶದ ಪ್ರಗತಿಗೆ ಶಿಕ್ಷಣವೇ ಏಕೈಕ ಮಾರ್ಗ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ದೇಶದ ಪ್ರಥಮ ಶಿಕ್ಷಣ ಸಚಿವರಾದ ಡಾ. ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಅಂಗವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ʼಶಿಕ್ಷಣ ಸಚಿವನಾಗಿ, ಇಡೀ ದೇಶಕ್ಕೆ ಶೈಕ್ಷಣಿಕವಾಗಿ ಹೆಚ್ಚು ಒತ್ತನ್ನು ನೀಡಿದ ಮಹಾನ್ ವ್ಯಕ್ತಿಯ ಹುಟ್ಟುಹಬ್ಬವನ್ನು ಶಿಕ್ಷಣ ದಿನಾಚರಣೆಯಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಈ ದಿನಾಚರಣೆಗೆ ಗೌರವ ಸಲ್ಲಬೇಕಾದರೆ, ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆʼ ಎಂದರು.

ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಮಾತನಾಡಿದ ಅವರು, ʼನಾನು ಸಚಿವನಾದ ತಕ್ಷಣ ಪಠ್ಯಪುಸ್ತಕ ಪರಿಷ್ಕರಣೆಗೆ ಸಹಿ ಹಾಕಿದ್ದೇನೆ. ಮಕ್ಕಳಿಗೆ ಶಿಕ್ಷಣ ಇರಬೇಕೇ ಹೊರತು, ಪಠ್ಯಪುಸ್ತಕದಲ್ಲಿ ಯಾವುದೇ ಜಾತಿ-ಧರ್ಮಕ್ಕೆ ಸಂಬಂಧಿಸಿದ, ದಾರಿ ತಪ್ಪಿಸುವ ವಿಚಾರಗಳಿಗೆ ಅವಕಾಶ ನೀಡಬಾರದು ಎಂಬ ದೃಢ ನಿಲುವು ನಮ್ಮದಾಗಿದೆ. ಈ ಕೆಲಸ ಮಾಡುವಾಗ ಟೀಕೆ-ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲʼ ಎಂದು ಸ್ಪಷ್ಟಪಡಿಸಿದರು.

ಇನ್ನು ರಾಜ್ಯದಲ್ಲಿ ಈ ಹಿಂದೆ ಕೇವಲ 308 ಇದ್ದ ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಸಂಖ್ಯೆಯನ್ನು ನಮ್ಮ ಸರ್ಕಾರ ಒಂದೇ ಬಾರಿಗೆ 900ಕ್ಕೆ ಏರಿಸಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಗ್ರಾಮೀಣ ಭಾಗದಲ್ಲಿರುವ ಸುಮಾರು 6,000 ಗ್ರಾಮ ಪಂಚಾಯತಿಗಳಲ್ಲಿ 6,000 ಕೆಪಿಎಸ್ ಶಾಲೆಗಳನ್ನು ಸ್ಥಾಪಿಸುವ ಗುರಿ ಇದೆ ಎಂದರು.

ಕೆಪಿಎಸ್ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಮತ್ತು 6ನೇ ತರಗತಿಯಿಂದ ಕೌಶಲ್ಯ ಅಭಿವೃದ್ಧಿ (ಸ್ಕಿಲ್) ತರಗತಿಗಳನ್ನು ಪ್ರಾರಂಭಿಸಲಾಗುವುದು. ಜೊತೆಗೆ, ಎಲ್.ಕೆ.ಜಿ.ಯಿಂದ 12ನೇ ತರಗತಿಯವರೆಗೆ ಮಕ್ಕಳ ದಾಖಲಾತಿಯಾದರೆ, ಅವರಿಗೆ ಬಟ್ಟೆ, ಊಟ, ಪುಸ್ತಕ, ಮತ್ತು ಉಚಿತ ಬಸ್ ಸೌಕರ್ಯ ದೊರೆಯಲಿದೆ ಎಂದು ತಿಳಿಸಿದರು. ಇದೇ ವೇಳೆ, ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ಪೌಷ್ಟಿಕತೆಯನ್ನು ಒದಗಿಸಲು ನೆರವು ನೀಡುತ್ತಿರುವ ಅಜೀಂ ಪ್ರೇಮ್‌ಜಿ ಫೌಂಡೇಷನ್‌ಗೆ ಸಚಿವರು ಧನ್ಯವಾದ ಸಲ್ಲಿಸಿದರು.













