ಚಿಕ್ಕಮಗಳೂರು: ಸಾಕು ಮಗಳೇ ತಾಯಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಂಡಿಮಠ ಗ್ರಾಮದಲ್ಲಿ ನಡೆದಿದೆ. ಕುಸುಮ (62 ) ಕೊಲೆಯಾದ ದುರ್ದೈವಿ. ಸುಧಾ (35 ) ಕೊಲೆಯ ಆರೋಪಿ ಎಂದು ಗುರುತಿಸಲಾಗಿದೆ.

ಮೂಲತಃ ಹಾವೇರಿ ಜಿಲ್ಲೆಯವರಾದ ಕುಸುಮ, ಸುಮಾರು ವರ್ಷಗಳ ಹಿಂದೆಯೇ ಬಾಳೆಹೊನ್ನೂರಿಗೆ ಬಂದಿದ್ದರು. ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಕುಸುಮ ಹಾವೇರಿಯಲ್ಲಿ ಒಂದೂವರೆ ಎಕರೆ ಜಮೀನು ಹಾಗೂ ಮನೆ ಇದ್ದರೂ ಕೂಡ ಬಾಳೆಹೊನ್ನೂರಿನಲ್ಲಿಯೇ ವಾಸವಿದ್ದರು. ತಂಗಿ ಮಗಳು ಸುಧಾಳನ್ನು ಕುಸುಮ ಸಾಕಿಕೊಂಡಿದ್ದರು. ಸುಧಾಳನ್ನು ತನ್ನ ಸ್ವಂತ ಮಗಳೆಂದೇ ಭಾವಿಸಿದ್ದರು. ಆದರೆ ಆಸ್ತಿಯ ಆಸೆಗೆ ಬಿದ್ದಿದ್ದ ಸುಧಾ ಜಮೀನಿಗಾಗಿ ತನ್ನ ಸಾಕು ತಾಯಿಯ ಕಥೆಯನ್ನೇ ಮುಗಿಸಿದ್ದಾಳೆ ಎನ್ನಲಾಗಿದೆ.

ಮೊದಲು ಮಲಗಿದಲ್ಲಿಯೇ ಕುಸುಮ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಬಳಿಕ ನಡೆದ ತನಿಖೆಯಲ್ಲಿ ಇದೊಂದು ಕೊಲೆ ಎಂದು ತಿಳಿದು ಬಂದಿದ್ದು, ಸಾಕು ಮಗಳು ಸುಧಾ ಕೊಲೆಯ ಆರೋಪಿ ಎನ್ನುವುದು ಬಹಿರಂಗಗೊಂಡಿದೆ. ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

