
ಅಸಂಘಟಿತ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಾರ್ಮಿಕರಿಗೆ ಸೌಲಭ್ಯ, ಅನುಕೂಲತೆಗಳನ್ನು ತಿಳಿಸಲು ಪ್ರತಿ ಜಿಲ್ಲೆಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ರಾಜ್ಯದಲ್ಲಿನ ಪ್ರತಿಯೊಬ್ಬ ಕಾರ್ಮಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್. ಲಾಡ್ ಅವರು ಹೇಳಿದರು.
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಬೆಂಗಳೂರು ಸಾರಿಗೆ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ʼಮಂಡ್ಯ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮ” ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

16 ರಿಂದ 18 ತಾಸು ರಸ್ತೆಯಲ್ಲಿ ಸಂಚರಿಸಿ ಜೀವ ಪಣಕ್ಕಿಟ್ಟು ಸ್ವಿಗ್ಗಿ, ಜ್ಯೊಮೋಟೊ ಪ್ಲಾಟ್ ಫಾರಂಗಳಲ್ಲಿ ಕೆಲಸ ಮಾಡುತ್ತಿರುವ ಯುವಕರಿಗೆ ಹಾಗೂ ಕಾರ್ಮಿಕರಿಗೆ ಅಪಘಾತ ವಿಮೆ ನೀಡಲು ನೂತನ ಯೋಜನೆ ಜಾರಿಗೆ ತರಲಾಗಿದೆ. ಅಪಘಾತದಲ್ಲಿ ಮರಣ ಹೊಂದಿದರೆ 5 ಲಕ್ಷ ಪರಿಹಾರ, ಅಂಗವೈಫಲ್ಯತೆಯಾದರೆ ರೂ. 2 ಲಕ್ಷ ಪರಿಹಾರ ಹಾಗೂ ಗರಿಷ್ಠ 1 ಲಕ್ಷದಷ್ಟು ಆಸ್ಪತ್ರೆಗೆ ತಗಲುವ ವೆಚ್ಚವನ್ನು ಭರಿಸಲಾಗುವುದು ಎಂದರು.
ಕುಟುಂಬದ ಜವಾಬ್ದಾರಿ ನಿರ್ವಹಿಸುವ ಯುವಕರ ಜೀವ ಅಮೂಲ್ಯವಾದದ್ದು ಪ್ರತಿಯೊಬ್ಬರೂ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಲು ಮರೆಯದಿರಿ. ಹಾಗೆಯೇ ಪ್ರತಿ ತಿಂಗಳು ಜಿಲ್ಲೆಯಲ್ಲಿ ಹೆಲ್ಮೆಟ್ ಬಳಕೆಯಿಂದಾಗುವ ಸದುಪಯೋಗ ಕುರಿತು ಜಾಗೃತಿ ಕಾರ್ಯಕ್ರಗಳನ್ನು ಆಯೋಜಿಸಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಪ್ರಮುಖವಾಗಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಯುವಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಅವಕಾಶ ಕಲ್ಪಿಸಲು ಆಶಾದೀಪ ಯೋಜನೆಯನ್ನು ಜಾರಿಗೆ ತಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವ ಕಂಪನಿಗಳಿಗೆ, ಮಾಲೀಕರಿಗೆ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮಾಸಿಕ ವೇತನ ನೀಡಲು ಶೇಕಡಾ 50 ಧನಸಹಾಯವನ್ನು ಆಶಾದೀಪ ಯೋಜನೆಯಡಿ ಕಾರ್ಮಿಕ ಇಲಾಖೆಯಿಂದ ನೀಡಲಾಗುವುದು ಎಂದು ತಿಳಿಸಿದರು.
101 ಅಸಂಘಟಿತ ಕಸುಬು ಮಾಡುವ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ಲಕ್ಷಾಂತರ ಜನರಿಗೆ ಕಾರ್ಮಿಕ ಕಾರ್ಡ್ ವಿತರಿಸಲಾಗುತ್ತಿದ್ದೆ ಮುಂದಿನ ದಿನಗಳಲ್ಲಿ ಕೃಷಿ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಲಾಗುವುದು ಎಂದು ಹೇಳಿದರು. ಒಂದು ಸಿನಿಮಾ ಯಶಸ್ವಿಯಾಗಲು ಸಿನಿಮಾರಂಗದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಶ್ರಮವು ಪ್ರಮುಖವಾಗಿರುತ್ತದೆ. ಸಿನಿಮಾ ಕ್ಷೇತ್ರದ ಕಾರ್ಮಿಕರಿಗೆ ಅನುಕೂಲವಾಗಲು ನೂತನ ಸೌಲಭ್ಯ ಯೋಜನೆ ತರಲು ಕಾರ್ಮಿಕ ಇಲಾಖೆ ಮುಂದಾಗಿದೆ ಎಂದರು.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಮಾತನಾಡಿ, ಕಾರ್ಮಿಕರು ಶ್ರಮ ಜೀವಿಗಳು ಅವರಿಗೆ ಅನುಕೂಲವಾಗಬೇಕು ಹಾಗೂ ಅವರ ಮಕ್ಕಳಿಗೆ ಉದ್ಯೋಗ ದೊರೆಯಬೇಕು ಎಂದು ಅನೇಕ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆ ಜಾರಿಗೆ ತಂದಿದೆ ಮತ್ತು ಸ್ವತಃ ಇಲಾಖೆಯವರೇ ಜಿಲ್ಲೆಗಳಿಗೆ ಆಗಮಿಸಿ ಯೋಜನೆ, ಸೌಲಭ್ಯಗಳ ಅರಿವು ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎಲ್ಲಾ ವರ್ಗದಿಂದ 35 ಲಕ್ಷ ಜನ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ 101 ಅಸಂಘಟಿತ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಸೌಲಭ್ಯ ನೀಡುತ್ತಿದೆ. ಸರ್ಕಾರ ವೋಟಿಗಾಗಿ ಮತ್ತು ಒಂದು ಸಮುದಾಯದವರಿಗಾಗಿ ಸೌಲಭ್ಯಗಳನ್ನು ಜಾರಿಗೆ ತರುತಿಲ್ಲ. ರಾಜ್ಯದ ಪ್ರತಿ ಶ್ರಮಿಕರಿಗಾಗಿ, ಬಡವರಿಗಾಗಿ ಗ್ಯಾರಂಟಿ ಯೋಜನೆಯನ್ನು ಒಳಗೊಂಡಂತೆ ಯೋಜನೆಗಳನ್ನು ಜಾರಿಗೆ ತಂದಿರುವುದು. ಇತರೆ ತಪ್ಪು ಕಲ್ಪನೆಗಳನ್ನು ತೊರೆದು ಜನರ ಪರವಾಗಿ ಸರ್ಕಾರ ಕೈಗೊಂಡಿರುವ ಯೋಜಗಳನ್ನು ಪ್ರೋತ್ಸಾಹಿಸಿ ಎಂದರು.

ಮಂಡ್ಯ ವಿಧಾನಸಭಾ ಕ್ಷೇತ್ರ ಶಾಸಕ ಪಿ.ರವಿಕುಮಾರ್ ಅವರು ಮಾತನಾಡಿ ಮಂಡ್ಯ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯ ಮಹತ್ವ ತಿಳಿದದ್ದು ಸಂತೋಷ್ ಲಾಡ್ ಅವರು ಅಧಿಕಾರಕ್ಕೆ ಬಂದಾಗ. ಬಡವರಿಗೆ ರಸ್ತೆ ಅಪಘಾತ ಉಂಟಾದರೆ ಅವರು ಹೋಗುವುದು ದೇವರ ಮೊರೆಗೆ. ಹಣ ಇಲ್ಲದವರ ಕಷ್ಟ ದೊಡ್ಡದು ಇದನ್ನು ಅರಿತು ಕಾರ್ಮಿಕ ಇಲಾಖೆ ಕಾರ್ಮಿಕರಿಗಾಗಿ ಅಪಘಾತ ವಿಮೆಯನ್ನು ಜಾರಿಗೆ ತಂದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಜನರ ತೆರಿಗೆ ಹಣವನ್ನು ಜನರಿಗೆ ನೀಡುವುದು ಖಂಡಿತ ತಪ್ಪಲ್ಲ, ಪಂಚ ಗ್ಯಾರಂಟಿ ಜನರ ಹಣವನ್ನು ಜನರಿಗೆ ನೀಡುತ್ತಿದ್ದೆ ಜನರ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರವನ್ನು ನಕಾರಾತ್ಮಕವಾಗಿ ಬಿಂಬಿಸದೆ ಆಶೀರ್ವದಿಸಿ ಎಂದರು.

ಮದ್ದೂರು ವಿಧಾನಸಭಾ ಕ್ಷೇತ್ರ ಶಾಸಕ ಕೆ. ಎಂ ಉದಯ್(Maddur MLA KM Uday), ಮೇಲುಕೋಟೆ ವಿಧಾನಸಭಾ ಕ್ಷೇತ್ರ ಶಾಸಕ ದರ್ಶನ್ ಪುಟ್ಟಣ್ಣಯ್ಯ(Melukote MLA Darshan Puttannayya), ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್ (Vijayalakshmi Raghunandan), ಜಂಟಿ ಕಾರ್ಮಿಕ ಆಯುಕ್ತರು ಹಾಗೂ ಜಂಟಿ ಕಾರ್ಯದರ್ಶಿ ಎಸ್. ಬಿ ರವಿಕುಮಾರ್ (SB Ravikumar), ಜಿಲ್ಲಾಧಿಕಾರಿ ಡಾ. ಕುಮಾರ (DC Dr. Kumar), ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ. ಆರ್ ನಂದಿನಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


