ಬೆಂಗಳೂರು: RR ನಗರದ ಮೂಲಭೂತ ಸೌಕರ್ಯಗಳ ಕಾಮಗಾರಿಯಲ್ಲಿ 250 ಕೋಟಿ ರೂ. ಅವ್ಯವಹಾರ ಆರೋಪ ಸಂಬಂಧ ಲೋಕಾಯುಕ್ತ ಪೊಲೀಸರು ಜಿಬಿಎ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ಇಂದು ಬೆಳಗ್ಗೆ ಏಕಕಾಲಕ್ಕೆ ಜಿಬಿಎ ಪಶ್ಚಿಮ ವಲಯದ 8 ಕಚೇರಿಗಳು, ಐವರು ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. GBA ಮುಖ್ಯ ಕಚೇರಿ TVCC ಕಚೇರಿ, ಪಶ್ಚಿಮ ವಲಯದ RR ನಗರ ಮುಖ್ಯ ಇಂಜಿನಿಯರ್ ಕಚೇರಿ, ಕರ್ನಾಟಕ ಗ್ರಾಮೀಣ ಅಭಿವೃದ್ಧಿ ನಿಗಮದ ಕಚೇರಿ ಸೇರಿದಂತೆ ಮುಖ್ಯ ಇಂಜಿನಿಯರ್, ಸಹಾಯಕ ಇಂಜಿನಿಯರ್ ಮನೆ ಮೇಲೆ ದಾಳಿ ನಡೆಸಿ ಕಾಮಗಾರಿ ಅವ್ಯವಹಾರ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ..?
2019, 2020, 2021ರಲ್ಲಿ ರಾಜರಾಜೇಶ್ವರಿ ನಗರದಲ್ಲಿ ಸುಮಾರು 250 ಕೋಟಿ ರೂ. ವೆಚ್ಚದ ರಸ್ತೆ, ಚರಂಡಿ ಸೇರಿದಂತೆ ಅನೇಕ ಕಾಮಗಾರಿ ನಡೆದಿದೆ ಎಂದು ಬಿಲ್ ಪಾವತಿಯಾಗಿತ್ತು. ಆದರೆ ಕಾಮಗಾರಿಗಳನ್ನೇ ಮಾಡದೇ ಬಿಲ್ ಪಡೆದಿದ್ದಾರೆ, ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಇಂದು ಕಾಮಗಾರಿ ಸಂಬಂದಿಸಿದಂತೆ ದಾಖಲೆಗಳ ಪರಿಶೀಲನೆ ನಡೆಸಲು ದಾಳಿ ನಡೆಸಿದ್ದಾರೆ.


