ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ ಕೇಸ್ ತನಿಖೆಗೆ ರಾಜ್ಯ ಸರ್ಕಾರ ಹೈ ಪವರ್ ಕಮಿಟಿ ರಚನೆ ಮಾಡಲಾಗಿದೆ.
ಫ್ರೀಡಂ ಪಾರ್ಕ್ ಬಳಿ ಇರುವ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯಲ್ಲಿ ನಡೆದ ಮಹತ್ವದ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,
ಸೆಂಟ್ರಲ್ ಜೈಲಿನಲ್ಲಿ ಐದು ಸಾವಿರ ಜನ ಅಪರಾಧಿಗಳಿದ್ದಾರೆ. ಸೆಲೆಬ್ರಿಟಿಗಳು, ವಿವಿಐಪಿ ಗಳು ಇರ್ತಾರೆ. ಹೀಗಾಗಿ ವಿಡಿಯೋ ವೈರಲ್ ತನಿಖೆಗೆ ಎಡಿಜಿಪಿ ಹಿತೇಂದ್ರ ನೇತೃತ್ವದಲ್ಲಿ ಹೈ ಪವರ್ ಕಮಿಟಿ ರಚಿಸಲಾಗಿದೆ ಎಂದು ತಿಳಿಸಿದರು.

ಕೇವಲ ಪರಪ್ಪನ ಅಗ್ರಹಾರ ಜೈಲು ಮಾತ್ರವಲ್ಲ ಎಲ್ಲಾ ಕಾರಾಗೃಹ ಪರಿಶೀಲಿಸಿ ಸಮಗ್ರ ವರದಿ ನೀಡಲು ಸೂಚಿಸಲಾಗಿದೆ. ಜೈಲಿನ ಪರಿಶೀಲನೆಯನ್ನು ಈ ಕಮಿಟಿ ಮಾಡಲಿದ್ದು, ಜೈಲಿನ ನ್ಯೂನತೆಯನ್ನು ಈ ಕಮಿಟಿ ತಿಳಿಸಬೇಕು ಎಂದು ಹೇಳಿದ್ದಾರೆ. ಈ ಕಮಿಟಿಯಲ್ಲಿ ಐಜಿ ಸಂದೀಪ್ ಪಾಟೀಲ್, ಎಸ್ ಪಿ ಅಮರ್ ನಾಥ್ ರೆಡ್ಡಿ, ರಿಶ್ಯಂತ್ ಇರಲಿದ್ದಾರೆ.

ಇನ್ನು ಐದು ವರ್ಷದ ಬಳಿಕ ಒಂದೇ ಜೈಲಿನಲ್ಲಿ ಅಧಿಕಾರಿಗಳು ಇರಬಾರದು. ಅವರನ್ನು ಅಲ್ಲಿಂದ ವರ್ಗಾವಣೆ ಮಾಡುತ್ತೇವೆ. ಸಿಬ್ಬಂದಿ ಕೊರತೆ ವಿಚಾರಕ್ಕೆ ಶೀಘ್ರದಲ್ಲೇ 197 ವಾರ್ಡರ್ಸ್, 22 ಜನ ಇನ್ಸ್ ಪೆಕ್ಟರ್, 3 ಜನ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ನೇಮಕ ಮಾಡುತೇವೆ ಎಂದು ಡಾ. ಜಿ ಪರಮೇಶ್ವರ್ ತಿಳಿಸಿದರು.












