
– ಬಳ್ಳಾರಿ ವಿಭಾಗದ ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ದಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ
– ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಲು ಕ್ರಮ ಕೈಗೊಳ್ಳಲು ಸೂಚನೆ
ಹೊಸಪೇಟೆ ನವೆಂಬರ್ 09: ಉತ್ತಮ ಮಳೆಯಿಂದಾಗಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ ವಿಫುಲ ನೀರಿನ ಲಭ್ಯತೆಯಿದ್ದು, ನೀರನ್ನು ಇಂಗಿಸುವ ಮೂಲಕ ಅಂತರ್ಜಲ ಅಭಿವೃದ್ದಿಗೆ ಆದ್ಯತೆ ನೀಡುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಹೊಸಪೇಟೆಯಲ್ಲಿ ಬಳ್ಳಾರಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿದರು.

ತುಂಗಭದ್ರಾ ನದಿ ಪಾತ್ರದಲ್ಲಿ ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ನೀರಿನ ಲಭ್ಯತೆ ಹೆಚ್ಚಾಗಿದ್ದು, ಈ ನೀರನ್ನು ಇಂಗಿಸುವ ಮೂಲಕ ಅಂತರ್ಜಲ ಅಭಿವೃದ್ದಿಗೆ ಆದ್ಯತೆ ನೀಡಬೇಕು. ನೀರಿದ್ದರೆ ನಾಳೆ, ಎನ್ನುವ ವಿನೂತನ ಕಾರ್ಯಕ್ರಮವನ್ನು ನಮ್ಮ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಸ್ವತಃ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಶ್ಲಾಘಿಸಿದ್ದಾರೆ. ಲಭ್ಯವಿರುವ ನೀರನ್ನು ಹಿಡಿದಿಡುವುದು ಹಾಗೂ ಆ ನೀರನ್ನು ಇಂಗಿಸುವ ಮೂಲಕ ಅಂತರ್ಜಲ ವೃದ್ದಿಗೆ ಅನುವು ಮಾಡಿಕೊಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಉತ್ತಮ ನೀರಿನ ಲಭ್ಯತೆಯಿದ್ದು ಈ ನೀರಿನ ಸಮರ್ಪಕ ಬಳಕೆಗೆ ಅಗತ್ಯವಿರುವಂತಹ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಮಗಾರಿಗಳನ್ನು ತ್ವರಿಗತಿಯಲ್ಲಿ ಮುಗಿಸಿ:
ಟೆಂಡರ್ ಆಗಿರುವಂತಹ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಹಲವಾರು ಪ್ರಕರಣಗಳಲ್ಲಿ ಗುತ್ತಿಗೆದಾರರು ಅವರ ವೈಯಕ್ತಿಕ ಸಮಸ್ಯೆಗಳಿಂದ ಕಾಮಗಾರಿಗಳನ್ನು ಪ್ರಾರಂಭಿಸಲು ವಿಳಂಭ ಧೋರಣೆ ತೋರುತ್ತಿದ್ದಾರೆ. ಕೆಲವರು ಅರ್ಧ ಕಾಮಗಾರಿ ಮುಗಿಸಿ, ಕಾಮಗಾರಿ ಪೂರ್ಣಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಗರ್ಭಗುಡಿ ಯೋಜನೆಯ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಾಣದೇ ಇರುವುದಕ್ಕೆ ಸಚಿವರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ಹಿಂದಿನ ಬಾರಿ ಹರಪನಹಳ್ಳಿ ಶಾಸಕರೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಸಂಧರ್ಭದಲ್ಲಿ ಅಲ್ಲಿನ ರೈತರ ಮನವಿಯ ಮೇರೆಗೆ ಏತ ನೀರಾವರಿ ಯೋಜನೆ ಮಂಜೂರು ಮಾಡಲಾಗಿತ್ತು. ಈ ಯೋಜನೆ ಪ್ರಾರಂಭಕ್ಕೆ ಟೆಂಡರ್ ಪ್ರಕ್ರಿಯೆ ಮುಗಿಸಲಾಗಿದೆ. ಆದರೆ ಈ ಯೋಜನೆಯ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಕ್ಕೆ ಅನಗತ್ಯ ವಿಳಂಬ ಮಾಡುತ್ತಿರುವುದಕ್ಕೆ ನೊಟೀಸ್ ನೀಡಬೇಕು. ಕಾಮಗಾರಿ ಪ್ರಾರಂಭಿಸದೇ ಇದ್ದಲ್ಲಿ ಆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆ ಇ ಆರ್ ಎಂ ಸಿ ಅನುದಾನದ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಮಾನ್ಯ ಸಚಿವರ ಆಪ್ತ ಕಾರ್ಯದರ್ಶಿಗಳಾದ ವೀರಭದ್ರ ಹಂಚಿನಾಳ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಉತ್ತರ ವಲಯದ ಪ್ರಧಾನ ಇಂಜಿನೀಯರ್ ವೆಂಕಟೇಶ್, ಬಳ್ಳಾರಿ ಕಾರ್ಯನಿರ್ವಾಹಕ ಅಭಿಯಂತರರಾದ ವೆಂಕಟೇಶ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.












