ಬೆಂಗಳೂರು: ಹರಿಯಾಣದಲ್ಲಿ ಆಗಿರುವ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ಸಾಕ್ಷಿ ಸಮೇತ ಬಯಲು ಮಾಡಿದ್ದಾರೆ. ಆದರೂ ಆಯೋಗ ಯಾಕೆ ಇದನ್ನು ತಡೆಗಟ್ಟುತ್ತಿಲ್ಲ. ಈಗಿರುವ ತಂತ್ರಜ್ಞಾನದಲ್ಲಿ ಈ ಅಕ್ರಮ ತಡೆಯಲು ಯಾಕೆ ಸಾಧ್ಯವಾಗಿಲ್ಲ? ಚುನಾವಣಾ ಆಯೋಗವು ಈ ಮತಗಳ್ಳತನ ಅಕ್ರಮದಲ್ಲಿ ಭಾಗಿಯಾಗಿದೆ ಎಂದು ಡಿ.ಕೆ ಶಿವಕುಮಾರ್ ಆರೋಪಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವ ಕ್ಷೇತ್ರದಲ್ಲಿ ಓರ್ವ ಮಹಿಳೆ ಬಳಿ 200 ಮತಗಳಿವೆ ಎಂದು ಮಾಡಿರುವ ಆರೋಪಕ್ಕೆ ಸ್ಪಷ್ಟನೆ ನೀಡಿದರು.

ಮತಪೆಟ್ಟಿಗೆಯಲ್ಲಿ 49 ಶೂನ್ಯಕ್ಕೆ ಸಮ, 51 ನೂರಕ್ಕೆ ಸಮ. ಕಾಂಗ್ರೆಸ್ ಅಭ್ಯರ್ಥಿಯಾದರೇನು, ಬಿಜೆಪಿ ಅಭ್ಯರ್ಥಿಯಾದರೇನು. ಎಲ್ಲಿ ಅಕ್ರಮ ನಡೆಡಿದೆಯೋ ಅದರ ಬಗ್ಗೆ ಮಾತನಾಡಿದ್ದೇವೆ. ಕೆಲವು ಕಡೆ ಅಕ್ರಮವನ್ನು ಮೀರಿ ನಾವು ಗೆದ್ದಿದ್ದೇವೆ. ಆಳಂದದಲ್ಲಿ ನಮ್ಮ ಅಭ್ಯರ್ಥಿ ಈ ಷಡ್ಯಂತ್ರ ಮೀರಿ ಗೆಲುವು ಸಾಧಿಸಿದ್ದಾರೆ ಎಂದರು.

ಸಂವಿಧಾನದಲ್ಲಿ ಗೌಪ್ಯ ಮತದಾನ ಎಂದು ಇರುವಾಗ ಮತಗಟ್ಟೆಗಳ ಸಿಸಿಟಿವಿ ದೃಶ್ಯಗಳನ್ನು ನೀಡಬೇಕು ಎನ್ನುವ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಮಾತನಾಡಿದ ಡಿಸಿಎಂ, ಮತದಾರ ಯಾರಿಗೆ ಮತಹಾಕಿದ ಎಂದು ತೋರಿಸದಿದ್ದರೂ, ಮತಗಟ್ಟೆಯೊಳಗೆ ಎಷ್ಟು ಮತದಾರರು ಹೋದರು, ಯಾವ ಸಮಯದಲ್ಲಿ ಹೋದರು ಎಂಬ ಮಾಹಿತಿ ನೀಡಲು ಸಮಸ್ಯೆ ಏನು? ಮಹಾರಾಷ್ಟ್ರದಲ್ಲಿ ಕೊನೆ ಒಂದು ಗಂಟೆ ಅವಧಿಯಲ್ಲಿ ಲಕ್ಷಾಂತರ ಮತ ಚಲಾವಣೆಯಾಗಿದೆ. ಈ ಮತಗಳನ್ನು ಯಾರು ಹಾಕಿದರು ಎಂಬುದು ದಾಖಲೆ ಬೇಕಲ್ಲವೇ? ಇದು ದೇಶದ ಮುಂದಿರುವ ಸವಾಲು ಎಂದು ಹೇಳಿದರು.













