ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುಲು ಪರದಾಡುತ್ತಾ ಹತಾಶೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮನಸ್ಸೋ ಇಚ್ಛೆ ಮಾತಾನಾಡುತ್ತಾ ರಾಜ್ಯದ ರೈತರು ಮತ್ತು ಜನರನ್ನು ದಾರಿತಪ್ಪಿಸಲು ದುಸ್ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಸಿದ್ದರಾಮಯ್ಯನವರು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲರಾಗಿ, ಕೇಂದ್ರ ಸರ್ಕಾರದ ಮೇಲೆ ಬೆರಳು ತೋರಿ ಪಲಾಯನವಾದ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಉಲ್ಲೇಖಿಸಿದ ಸಂಸತ್ತಿನ ಉತ್ತರದಲ್ಲಿ 30.06.25 ರವರೆಗಿನ ದತ್ತಾಂಶ ಮಾತ್ರ ಇದೆ. ಆದರೆ, ಎಥೆನಾಲ್ ಸರಬರಾಜು ವರ್ಷವು ನವೆಂಬರ್ನಿಂದ ಪ್ರಾರಂಭವಾಗಿ ಅಕ್ಟೋಬರ್ನಲ್ಲಿ ಕೊನೆಗೊಳ್ಳುತ್ತದೆ. ಸಂಸತ್ತಿನಲ್ಲಿ ನೀಡಲಾದ ದತ್ತಾಂಶವು 30.06.2025 ರವರೆಗಿನದ್ದು ಮಾತ್ರ ಎಂದಿದ್ದಾರೆ.
2024-25 ರಲ್ಲಿ ಕರ್ನಾಟಕದಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ (OMC) ಗಳಿಗೆ ಒಟ್ಟು 139.8 ಕೋಟಿ ಲೀಟರ್ ಎಥೆನಾಲ್ಅನ್ನು ಪೂರೈಸಿವೆ. ಮುಖ್ಯಮಂತ್ರಿಗಳಾಗಿ ತಾವು ಮಾತನಾಡುವ ಮೊದಲು, ದತ್ತಾಂಶಗಳನ್ನ ಸರಿಯಾಗಿ ಅರ್ಥ ಮಾಡಿಕೊಂಡು, ತಮ್ಮ ಅಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದು, ಅರ್ಥಮಾಡಿಕೊಂಡು ನಂತರ ಮಾತನಾಡಬೇಕು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ಇರುವುದು ನಿಜಕ್ಕೂ ರಾಜ್ಯದ ದುರಂತ. 2004-2014 ರ ಸಾಲಿನಲ್ಲಿ ಕಬ್ಬು ಬೆಳೆದ ರೈತರಿಗೆ ಸರಿಯಾದ ಸಮಯದಲ್ಲಿ ಹಣ ಪಾವತಿಯಾಗುತ್ತಿರಲಿಲ್ಲಾ, ಈ ವಿಳಂಬ ಧೋರಣೆಯಿಂದ ರೈತರು ಸಂಕಷ್ಟದಲ್ಲಿದ್ದರು. ಅತಿ ಕಡಿಮೆ FRP/MSP, 2005 ರಲ್ಲಿಯೇ ಎಥೆನಾಲ್ ಮಿಶ್ರಣದ ಪ್ರಸ್ತಾಪವನ್ನು ಮಾಡಿದ್ದರೂ, ಎಥೆನಾಲ್ ಬಗ್ಗೆ ಕಿಂಚಿತ್ತೂ ಯೋಚನೆಯೂ ಮಾಡಿರಲಿಲ್ಲಾ ಎಂದು ಆರೋಪಿಸಿದರು.

2013-14 ರಲ್ಲಿ ಕಬ್ಬು ಬೆಳೆ ಖರೀದಿ 57,104 ಕೋಟಿ ರೂ.ಗಳಷ್ಟಿತ್ತು, ಆದರೆ 2024-25ರ ಮೌಲ್ಯ 1,02,687 ಕೋಟಿ ರೂಪಾಯಿ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಮೂಲಕ 2013-14 ರಲ್ಲಿ 210 ರೂ.ಗಳಷ್ಟಿತ್ತು, ಆದರೆ 2025-26ರ ಸಕ್ಕರೆ ಹಂಗಾಮಿನಲ್ಲಿ ಶೇ. 10.25% ರಷ್ಟು ಚೇತರಿಕೆಯೊಂದಿಗೆ ₹355/ಕ್ವಿಂಟಲ್ಗೆ ಏರಿಕೆಯಾಗಿದೆ. ಇದು ನಮ್ಮ ಸರ್ಕಾರದ ಬದ್ಧತೆ ಸಿದ್ದರಾಮಯ್ಯನವರೇ. ಹೆಚ್ಚುವರಿ ಸಕ್ಕರೆಯನ್ನು ಸಮತೋಲನಗೊಳಿಸಲು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ.
2013-14 ರಿಂದ 2024-25 ರವರೆಗೆ ಇಂಧನ ದರ್ಜೆಯ ಎಥೆನಾಲ್ ಉತ್ಪಾದನೆ ಮತ್ತು OMC ಗಳಿಗೆ ಪೂರೈಕೆ 26 ಪಟ್ಟು ಹೆಚ್ಚಾಗಿದೆ. 2013-14 ರಿಂದ, ಕಬ್ಬು ಆಧಾರಿತ ಡಿಸ್ಟಿಲರಿಗಳು ಮತ್ತು ಧಾನ್ಯ ಆಧಾರಿತ ಡಿಸ್ಟಿಲರಿಗಳು ₹2.18 ಲಕ್ಷ ಕೋಟಿಗಿಂತ ಹೆಚ್ಚು ಆದಾಯವನ್ನು ಗಳಿಸಿವೆ, ಇದರಲ್ಲಿ ಕಬ್ಬು ಆಧಾರಿತ ಡಿಸ್ಟಿಲರಿಗಳು (26.10.2025 ರಂತೆ) OMC ಗಳಿಗೆ ಎಥೆನಾಲ್ ಮಾರಾಟದಿಂದ ₹1.29 ಲಕ್ಷ ಕೋಟಿ ಗಳಿಸಿವೆ, ಇದು ಕಬ್ಬಿನ ಗಿರಣಿಗಳಿಗೆ ರೈತರ ಕಬ್ಬಿನ ಬಾಕಿಯನ್ನು ಸಕಾಲಿಕವಾಗಿ ಪಾವತಿಸಲು ಸಹಾಯ ಮಾಡಿದೆ. ರಫ್ತುಗಳನ್ನು ಸಕಾಲಿಕವಾಗಿ ಅನುಮತಿಸಲಾಗಿದೆ ಎಂದರು.

ಸಕ್ಕರೆ ಬೆಲೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ನಮ್ಮ ಸರ್ಕಾರದ ಬದ್ಧತೆ. ಕಳೆದ 10 ವರ್ಷದ ಅವಧಿಯಲ್ಲಿ 10 LMT ಗೆ ಅವಕಾಶ ನೀಡಲಾಗಿತ್ತು, ಈ ವರ್ಷ 15 LMT ಗೆ ಅವಕಾಶ ನೀಡಲಾಗುತ್ತಿದೆ. ಇಡೀ ದೇಶಕ್ಕೆ ಒಂದು ನೀತಿಯನ್ನು ಜಾರಿ ಮಾಡುವುದು ಕೇಂದ್ರ ಸರ್ಕಾರದ ಕೆಲಸ. ನೀವು ರಾಜ್ಯದಲ್ಲಿ ಬೆಳೆಗಾರರ ಬೇಡಿಕೆಯ ಪ್ರಕಾರವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿ ಕೇವಲ ಸುಳ್ಳು ಹೇಳಿಕೊಂಡು, ಸುಳ್ಳಿನ ಮನೆಯನ್ನು ಕರ್ನಾಟಕದಲ್ಲಿ ನಿರ್ಮಿಸಿಕೊಂಡು ಜನರನ್ನು ರೈತರನ್ನು ಬೀದಿಗೆ ತಳ್ಳುವ ನೀಚ ಕೆಲಸ ಮಾಡಿದ್ದೀರಾ ಎಂದು ಕಿಡಿಕಾರಿದರು.
ಅಂದು ವಿರೋಧ ಪಕ್ಷದಲ್ಲಿದ್ದಾಗ ಬೆಲೆ ನಿಗದಿ ಮಾಡಿ, ಆವರ್ತ ನಿಧಿ ಸ್ಥಾಪನೆ ಮಾಡಿ ಎಂದು ಸರ್ಕಾರಗಳಿಗೆ ಬಿಟ್ಟಿ ಸಲಹೆ ನೀಡಿದ ನೀವು, ಇದೀಗ ಅಧಿಕಾರದಲ್ಲಿರುವಾಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜಾರಿಕೊಳ್ಳುವುದೇ ನಿಮ್ಮ ಮೂಲಭೂತ ಕೆಲಸವಾಗಿದೆಯಾ ಸಿದ್ದರಾಮಯ್ಯನವರೇ? ಗ್ಯಾರಂಟಿಗಳು ಮಾತ್ರನೇ ನಿಮ್ಮ ಸರ್ಕಾರದ ಆಡಳಿತವಾಗಿದೆ ಹೊರೆತು ರಾಜ್ಯದ ಅಭಿವೃದ್ಧಿಯಲ್ಲ. ನಿಮ್ಮ ದುರಾಡಳಿತದ ಪರಮಾವಧಿಯಿಂದಲೇ ಇಂದು ರೈತರು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.










