
ನವದೆಹಲಿ: ದೆಹಲಿಯಲ್ಲಿ ರಾಜ್ಯದ ಜಲ ಯೋಜನೆಗಳ ಸಂಬಂಧ ಕಾನೂನು ತಂಡ ಹಾಗೂ ಅಧಿಕಾರಿಗಳ ಜೊತೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲ ಯೋಜನೆಗಳ ಸಂಬಂಧ ಕೇಂದ್ರ ಸರ್ಕಾರದ ಮೇಲೆ ರಾಜಕೀಯವಾಗಿ ಒತ್ತಡ ಹಾಕುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿಲ್ಲ ಎನ್ನುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ʼಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಸಭೆ ಕರೆದರೂ ಅದನ್ನು ಮುಂದಕ್ಕೆ ಹಾಕುತ್ತಾರೆ. ನಮ್ಮ ರಾಜ್ಯದ ಬಿಜೆಪಿ ಸಂಸದರು ರಾಜ್ಯದ ಹಿತಕ್ಕಾಗಿ ಧೈರ್ಯವಾಗಿ ಹೋರಾಟ ಮಾಡದಿದ್ದರೆ, ಅವರು ನಮಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ. ನಾವು ರಾಜ್ಯ ಸರ್ಕಾರವಾಗಿ ನಮ್ಮ ಕರ್ತವ್ಯ ಮಾಡುತ್ತೇವೆ. ಸಂಸದರು ಒಂದೂ ದಿನ ಬಾಯಿ ಬಿಟ್ಟು ಮಾತನಾಡುತ್ತಿಲ್ಲ. ಈ ವಿಚಾರಣೆ ಮುಗಿಯಲಿ, ಚಳಿಗಾಲದ ಅಧಿವೇಶನದ ವೇಳೆ ಮತ್ತೆ ಬಂದು ಸಭೆ ನಡೆಸುತ್ತೇನೆʼ ಎಂದರು.

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ʼಸರ್ಕಾರ ಹಾಗೂ ಸ್ಥಳೀಯ ಸಚಿವರು ಸೇರಿ ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಅಲ್ಲಿನ ಬೆಲೆ, ದರಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಹೆಚ್ಚಿನ ಮಾಹಿತಿ ಇಲ್ಲ. ರಾಜ್ಯಕ್ಕೆ ಮರಳಿದ ನಂತರ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆʼ ಎಂದು ತಿಳಿಸಿದರು.













