ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ನವೆಂಬರ್ ಕ್ರಾಂತಿಯ ಚರ್ಚೆಯ ನಡುವೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ದಿಢೀರ್ ದೆಹಲಿ ಪ್ರವಾಸ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ದೆಹಲಿ ಭೇಟಿ ಬಗ್ಗೆ ಸ್ವತಃ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿಲ್ಲ ಎಂದು ಸ್ಷಷ್ಟನೆ ನೀಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼನಾನು ಯಾರನ್ನೂ ಭೇಟಿ ಮಾಡುತ್ತಿಲ್ಲ. ಯಾರ ಜೊತೆಗೂ ಮಾತನಾಡುತ್ತಿಲ್ಲ, ಬಿಹಾರ ಚುನಾವಣೆ, ಮತಗಳ್ಳತನ ವಿಚಾರ ಸಂಬಂಧ ಜೂಮ್ ಸಭೆಯಲ್ಲಿ ಭಾಗವಿಸಿರುವೆʼ ಎಂದು ಹೇಳಿದರು.

ಇನ್ನು ರಾಜ್ಯದ ಜಲ ಯೋಜನೆಗಳ ಸಂಬಂಧ ಕಾನೂನು ತಂಡ ಹಾಗೂ ಅಧಿಕಾರಿಗಳ ಜೊತೆಗಿನ ಸಭೆಯ ಬಗ್ಗೆ ವಿವರಿಸಿದ ಅವರು, ʼಇದೊಂದು ಮಹತ್ವದ ಸಭೆ. ಇಂದಿನ ಸಭೆಯಲ್ಲಿ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಮಹದಾಯಿ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಶ್ಯಾಮ್ ದಿವಾನ್, ಅಡ್ವೊಕೇಟ್ ಜನರಲ್, ಮೋಹನ್ ಕಾತರಾಕಿ ಹಾಗೂ ನಮ್ಮ ಅಧಿಕಾರಿಗಳು ಸೇರಿ ಈ ಸಭೆ ಮಾಡಿದ್ದೇವೆ. ಮೇಕೆದಾಟು ಯೋಜನೆ ಸಂಬಂಧ ವಿನಾ ಕಾರಣ ಸಮಯಾವಕಾಶದ ನೆಪದಲ್ಲಿ ವಿಚಾರಣೆ ಮುಂದೂಡಿಕೊಂಡೇ ಹೋಗಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದೇನೆ. ನ್ಯಾಯಾಲಯದಲ್ಲಿ ವಿಶೇಷ ಪೀಠ ರಚನೆಗೆ ಮುಂದಾಗಿದ್ದು, ಈಗ ಸಮಯ ವ್ಯರ್ಥ ಮಾಡಬಾರದು ಎಂದು ಹೇಳಿದ್ದೇನೆ. ನಮ್ಮ ಸರ್ಕಾರದ ನಿರ್ಧಾರವನ್ನು ತಿಳಿಸಿದ್ದೇನೆʼ ಎಂದರು.

ಮಾತು ಮುಂದುವರಿಸಿದ ಅವರು, ʼಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಈಗಾಗಲೇ ರೈತರಿಗೆ ಭೂ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ. ಹೊಸ ಕಾಯ್ದೆ ಪ್ರಕಾರ ಇದಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕಿದೆ. ಬೇರೆ ರಾಜ್ಯಗಳಲ್ಲಿ ಈ ಪ್ರಾಧಿಕಾರ ರಚನೆ ಆಗಿವೆ. ಬಿಹಾರದಲ್ಲಿ ಪ್ರಾಧಿಕಾರದ ಮೂಲಕ ಸಾವಿರಾರು ಪ್ರಕರಣ ಬಗೆಹರಿಸಲಾಗಿದೆ. ಕಾನೂನು ಉಪಯೋಗಿಸಿಕೊಳ್ಳಬೇಕು. ಮಹದಾಯಿ ಯೋಜನೆ ಸಂಬಂಧ ಕೆಲವು ದಾಖಲೆ ಸಿದ್ಧಪಡಿಸಲು ಸೂಚಿಸಿದ್ದು, ಈ ಬಗ್ಗೆ ಹೆಚ್ಚು ಮಾಹಿತಿ ನೀಡಲು ಆಗುವುದಿಲ್ಲʼ ಎಂದರು.


