ಬರೋಬ್ಬರಿ 25 ವರ್ಷಗಳ ಬಳಿಕ ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅಭಿನಯದ, ಮೆಹರುನ್ನಿಸಾ ರೆಹಮಾನ್ ನಿರ್ಮಾಣದ ಹಾಗೂ ಆರ್ ಶೇಷಾದ್ರಿ – ರಾಧಾ ಭಾರತಿ ನಿರ್ದೇಶನದ ʼಯಜಮಾನʼ ಚಿತ್ರ ಇದೇ ನವೆಂಬರ್ 7 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಮರು ಬಿಡುಗಡೆಯಾಗುತ್ತಿದೆ. ಜನಮೆಚ್ಚಿದ ಈ ಚಿತ್ರದ ಸೊಬಗನ್ನು ಈ ಬಾರಿ ಆಧುನಿಕ ತಂತ್ರಜ್ಞಾನದಿಂದ ಇನ್ನಷ್ಟು ಹೆಚ್ಚಿಸಲಾಗಿದೆ. ಮುನಿಸ್ವಾಮಿ ಎಸ್.ಡಿ ಈ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.

ಚಿತ್ರದ ರಜತೋತ್ಸವವನ್ನು ಸಂಭ್ರಮಿಸಲು ಕಲಾವಿದರ ಸಂಘದಲ್ಲಿ ಅದ್ಧೂರಿ ಸಮಾರಂಭ ಆಯೋಜಿಸಲಾಗಿದ್ದು, ಚಿತ್ರದ ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪ್ರತಿಯೊಬ್ಬರು ಕೂಡ ʼಯಜಮಾನʼ ಚಿತ್ರದ ಕುರಿತು ನೆನಪಿನ ಬುತ್ತಿ ಬಿಚ್ಚಿಟ್ಟರು.

ಯಜಮಾನದ ಕುರಿತು ಮಾತನಾಡಿದ ನಿರ್ಮಾಪಕ ರೆಹಮಾನ್, ಈ ಚಿತ್ರ ಆಗಲು ಪ್ರಮುಖ ಕಾರಣ ಗುರು ಸಮಾನರಾದ ವಿಷ್ಣುವರ್ಧನ್ ಹಾಗೂ ಕೆ.ವಿ.ನಾಗೇಶ್ ಕುಮಾರ್ ಅವರು. 130ಕ್ಕೂ ಹೆಚ್ಚು ಕಡೆ ಶತದಿನೋತ್ಸವ, 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಪ್ಪತ್ತೈದು ವಾರ ಹಾಗೂ 4 ಕಡೆಗಳಲ್ಲಿ 1 ವರ್ಷ ಈ ಸಿನಿಮಾ ಓಡಿದೆ. 25 ವರ್ಷಗಳ ಹಿಂದೆಯೇ 35 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದ ಚಿತ್ರವಿದು. ವಿಷ್ಣುವರ್ಧನ್, ಪ್ರೇಮ, ಶಶಿಕುಮಾರ್, ಅಭಿಜಿತ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ ಹೀಗೆ ಅನೇಕ ಕಲಾವಿದರ ಅದ್ಧೂರಿ ತಾರಾಬಳಗವಿರುವ ಈ ಚಿತ್ರವನ್ನು ಈಗ ಮುನಿಸ್ವಾಮಿ ಅವರು ಮರು ಬಿಡುಗಡೆ ಮಾಡುತ್ತಿದ್ದಾರೆ. ಹಿಂದೆ ನೀವು ನೀಡಿದ ಗೆಲುವಿಗಿಂತ ದೊಡ್ದ ಗೆಲುವನ್ನು ಈಗ ನೀಡಿ ಎಂದರು.

ʼಯಜಮಾನʼ ಚಿತ್ರವನ್ನು ಡಿಐ ಬಳಸಿ 4k ಡಿಜೆಟಲ್ ಪ್ರೊಜೆಕ್ಷನ್‌ಗೆ ತಯಾರು ಮಾಡಲಾಗಿದೆ. ಇಂದಿನ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡಿರುವ ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದು. ಇನ್ನು, ಮೋನೊ ಟ್ರ್ಯಾಕ್ ನಲ್ಲಿದ್ದ ಈ ಚಿತ್ರದ ಕಲಾವಿದರ ಧ್ವನಿಗಳನ್ನು ಸಹ 5.1 ಹಾಗೂ 7.1 ಡಿಜಿಟಲ್ ಸೌಂಡ್‌ಗೆ ಬಹಳ ಕಷ್ಟಪಟ್ಟು ವರ್ಗಾಯಿಸಲಾಗಿದೆ. ಹಾಡುಗಳಿಗೂ ಸಹ ಇದೇ ರೀತಿ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ. ನುರಿತ ತಂತ್ರಜ್ಞರನ್ನು ಕರೆಸಿ ಅವರಿಂದ ಈಗಿನ ಆಧುನಿಕ ರೀತಿಯಲ್ಲಿ ಸೌಂಡ್ ಎಫೆಕ್ಟ್ ಅಳವಡಿಸಲಾಗಿದೆ. ಇದಕ್ಕೆಲ್ಲಾ ಬಹಳ ಸಮಯ ಹಾಗೂ ಹಣ ಹಿಡಿಸಿದೆ. ಮುನಿಸ್ವಾಮಿ ಅವರು ಯಾವುದೇ ಕೊರತೆ ಬಾರದ ಹಾಗೆ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ನಿರ್ಮಾಪಕರ ಶ್ರಮವನ್ನು ಶ್ಲಾಘಿಸಿದರು.

ಇನ್ನು ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿರುವ ಮುನಿಸ್ವಾಮಿ ಮಾತನಾಡಿ, ನಾನು ಡಾ. ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಅವರ ಮೇಲಿನ ಪ್ರೀತಿಯಿಂದ ʼಯಜಮಾನʼ ಚಿತ್ರವನ್ನು ಈಗಿನ ತಂತ್ರಜ್ಞಾನವನ್ನು ಅಳವಡಿಸಿ ಮರು ಬಿಡುಗಡೆ ಮಾಡುತ್ತಿದ್ದೇನೆ. ನವೆಂಬರ್ 7ರಂದು 150ಕ್ಕೂ ಹೆಚ್ಚು ಕಡೆ ಬಿಡುಗಡೆಯಾಗಲಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಲ್ಲೇ ಈ ಚಿತ್ರವನ್ನು ವೀಕ್ಷಿಸಿ ಎಂದರು .

ಚಿತ್ರದಲ್ಲಿ ನಟಿಸಿರುವ ಶಶಿಕುಮಾರ್, ಅಭಿಜಿತ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಸಂಭಾಷಣೆ ಬರೆದಿದ್ದ ರವಿಶ್ರೀವತ್ಸ ಮುಂತಾದವರು ʼಯಜಮಾನʼ ಚಿತ್ರದ ಅನುಭವಗಳನ್ನು ಹಂಚಿಕೊಂಡರು. ಕೆ.ವಿ.ನಾಗೇಶ್ ಕುಮಾರ್, ಕೆ.ಮಂಜು ಹಾಗೂ ಶ್ರೇಯಸ್ ಮಂಜು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.












