ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಮತದಾರರನ್ನು ಸೆಳೆಯಲು ಎನ್‌ಡಿಎ ಮೈತ್ರಿಕೂಟ ಹಾಗೂ ಮಹಾಘಟಬಂಧನ್ ನಾಯಕರು ಒಂದಾದ ಮೇಲೊಂದು ಆಕರ್ಷಕ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದ್ದಾರೆ.

ಇದೀಗ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಬಿಹಾರದ ಮಹಿಳಾ ಮತದಾರರನ್ನು ಸೆಳೆಯಲು ಬಹು ದೊಡ್ಡ ಭರವಸೆ ನೀಡಿದ್ದಾರೆ.
ಪಾಟ್ನಾದಲ್ಲಿ ಚುನಾವಣಾ ಪ್ರಚಾರದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಮಹಾಘಟಬಂಧನ್ ಮಹಾಮೈತ್ರಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 30,000 ರೂಪಾಯಿ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಇತ್ತೀಚೆಗೆ ಪ್ರಾರಂಭಿಸಲಾದ ‘ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ’ಯಡಿಯಲ್ಲಿ 25 ಲಕ್ಷ ಮಹಿಳಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರ 10,000 ರೂಪಾಯಿಗಳನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಆಡಳಿರೂಢ ಸರ್ಕಾರದ ವಿರುದ್ಧ ಪ್ರತಿತಂತ್ರ ರೂಪಿಸಿರುವ ಆರ್‌ಜೆಡಿ, ಮಹಿಳೆಯರಿಗೆ 30,000 ರೂಪಾಯಿ ನೆರವು ನೀಡುವುದಾಗಿ ಘೋಷಿಸಿದೆ. ಈ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದೆ.

ಇನ್ನು ನವೆಂಬರ್ 6ರಿಂದ ನವೆಂಬರ್ 11ವರೆಗೆ ಬಿಹಾರ ವಿಧಾನಸಭಾ ಚುನಾವಣೆಗೆ ಎರಡು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ.













