ಗದಗ, ನವೆಂಬರ್ ೦೩: ಹೋಟೆಲ್‌ವೊಂದರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಲಕ್ಷಾಂತರ ರೂಪಾಯಿ ಹಣ ಸುಟ್ಟು ಕರಕಲಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ಲಕ್ಷ್ಮೇಶ್ವರ ಪಟ್ಟಣದ ರಂಭಾಪೂರಿ ನಗರದ ಬಸಪ್ಪ ಭಜಂತ್ರಿ ಎನ್ನುವವರಿಗೆ ಸೇರಿದ ಟೀ ಅಂಗಡಿಯಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಅಗ್ನಿ ಅವಘಡ ಸಂಭವಿಸಿದೆ. ಎಂದಿನಂತೆ ಇಂದು ಬೆಳಗ್ಗೆ ಟೀ ಮಾಡುವ ವೇಳೆ ಏಕಾಏಕಿ ಸಿಲಿಂಡರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬಹುತೇಕ ಅಂಗಡಿ ಆವರಿಸಿದೆ.

ಈ ಬೆಂಕಿ ದುರಂತದಲ್ಲಿ ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ನೋಟುಗಳು ಸುಟ್ಟು ಕರಕಲಾಗಿದ್ದು, ಟೀ ಅಂಗಡಿ ಸಾಮಾಗ್ರಿ ಹಾಗೂ ತಿಂಡಿ-ತಿನಿಸುಗಳು ಸೇರಿದಂತೆ ಅನೇಕ ವಸ್ತುಗಳು ಬೆಂಕಿಗಾಹುತಿಯಾಗಿದೆ. ಸದ್ಯ ಸ್ಥಳೀಯರ ಸಹಾಯದಿಂದ ಬೆಂಕಿ ಆರಿಸಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



