
ಬೆಂಗಳೂರು: ಕರ್ನಾಟಕಕ್ಕೆ ಬರಬೇಕಾಗಿದ್ದ ಅನುದಾನ ವಿಚಾರದಲ್ಲಿ ಒಕ್ಕೂಟ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರ ತನ್ನ ಬುಡಕ್ಕೆ ತಾನೇ ಕೊಡಲಿ ಪೆಟ್ಟು ಹಾಕಿಕೊಂಡಿದ್ದು, ಕೇಂದ್ರದ ವಿರುದ್ಧ ಮಾತನಾಡುವುದು ಹಾಸ್ಯಾಸ್ಪದ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ X ನಲ್ಲಿ ಬರೆದುಕೊಂಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ, ರಾಜ್ಯದ ಅಭಿವೃದ್ಧಿಯನ್ನು ಮೂಲೆಗುಂಪು ಮಾಡಿ, ಆರ್ಥಿಕ ಸ್ಥಿತಿಗತಿಗಳನ್ನು ಹಳ್ಳಕ್ಕೆ ತಳ್ಳಿ, ಇಂದು ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡಿ ನಿಂತಿದೆ. ರಾಜ್ಯಕ್ಕೆ ಅನುದಾನ ಇಲ್ಲ ಎಂದು ಆರೋಪ ಮಾಡುವ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಆರ್ಥಿಕತೆಯನ್ನು ಹಾಳು ಮಾಡಿ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಮಾರು 30ಕ್ಕೂ ಹೆಚ್ಚು ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿ, ರಾಜ್ಯದ ಜನರ ರಕ್ತ ಹೀರುತ್ತಿರುವ ಕಾಂಗ್ರೆಸ್ ಪಕ್ಷ, ರಾಜ್ಯಕ್ಕೆ ಬರುತ್ತಿರುವ ಎಲ್ಲಾ ಹಣವನ್ನು ಅವೈಜ್ಞಾನಿಕ ಗ್ಯಾರಂಟಿಗಳಿಗೆ ಬಳಸಿಕೊಳ್ಳುವ ಮೂಲಕ ಸುಭೀಕ್ಷವಾಗಿದ್ದ ರಾಜ್ಯದ ಆರ್ಥಿಕತೆಯನ್ನು ಹಾಳುಗೆಡವಿದೆ.
ಹೆಚ್ಚುವರಿ ಆದಾಯವಾಗಿದ್ದ ರಾಜ್ಯದಲ್ಲಿ ಇಂದು ₹80,000 ಕೋಟಿಗಳಷ್ಟು ಸಾಲ ಏರಿಕೆ, ₹8 ಲಕ್ಷ ಕೋಟಿಗೂ ಅಧಿಕ ಆರ್ಥಿಕ ಹೊರೆ, ಬಂಡವಾಳ ಶಾಹಿಗಳು ರಾಜ್ಯದಿಂದ ದೂರು ಹೋಗುವ ಪ್ರಸಂಗಕ್ಕೆ ಕಾರಣೀಭೂತರಾಗಿ ಇಂದು ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ

ಇನ್ನು ದೇಶದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿದ ಯುಪಿಎ, ತನ್ನ ಅವಧಿಯಲ್ಲಿ 27 ಕ್ಕೂ ಹೆಚ್ಚು ರೀತಿಯ ತೆರಿಗೆಗಳನ್ನು, ಕಂಡ ಕಂಡ ಹಾಗೆ ಜನರ ಮೇಲೆ ವಿಧಿಸಿ, ಜನರ ಬದುಕನ್ನೇ ಮೂರಾಬಟ್ಟೆ ಮಾಡಿ, ಬೀದಿಗೆ ತಳ್ಳಿದ ದಿನಗಳು ಇತಿಹಾಸ. ಆದರೆ, ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸಿ, 99% ವಸ್ತುಗಳ ಮೇಲಿನ ತೆರಿಗೆಯನ್ನು ಶೂನ್ಯ ಅಥವಾ 5% ಕ್ಕೆ ಇಳಿಸಿದೆ. ಆದಾಯ ತೆರಿಗೆ ಸ್ಲ್ಯಾಬ್ ಅನ್ನು ಹೆಚ್ಚಿಸಿದೆ.

ದುರಾಡಳಿತದಿಂದ ರಾಜ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. 2023-24ರಲ್ಲಿ ಸಿಎಜಿ ವರದಿಯಲ್ಲಿ ರಾಜ್ಯ ಮಾಡಿದ ಸಾಲವು ₹63,000 ಕೋಟಿಗಳಷ್ಟಿಗೆ ಏರಿಕೆ ಆಗಿದೆ, ಅಲ್ಲದೆ ಮೂಲಸೌಕರ್ಯ ನಿಧಿಯಿಂದ ಇತರ ಯೋಜನೆಗಳಿಗೆ ತಿರುಗಿಸಲ್ಪಟ್ಟಿರುವುದು ಬಹಿರಂಗವಾಗಿದೆ. ಇದು ನಿಮ್ಮ ಸರ್ಕಾರದ ಕೊಡುಗೆ ಎಂದು ತೆರಿಗೆ ತಾರತಮ್ಯ ಸಮರದಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.