
ಚುನಾಯಿತ ಸರ್ಕಾರ ಮತ್ತು ಪರಾಜಿತ ಪಕ್ಷಗಳು ಸಮಾನ ಉತ್ತರದಾಯಿತ್ವ ಹೊಂದಿರುತ್ತವೆ
ನಾ ದಿವಾಕರ
ಪ್ರಜಾಪ್ರಭುತ್ವದ ಅಂತಃಸತ್ವ ಇರುವುದು ಚುನಾವಣೆಗಳಲ್ಲಾಗಲೀ, ಪಕ್ಷಗಳ ಜಯಾಪಜಯಗಳಲ್ಲಾಗಲೀ ಅಥವಾ ಆಳ್ವಿಕೆಯ ಅವಕಾಶ ಕಲ್ಪಿಸುವ ಬಹುಮತದಲ್ಲಾಗಲೀ ಅಲ್ಲ. ಈ ಆಡಳಿತ ವ್ಯವಸ್ಥೆಯ ಔದಾತ್ಯ ಇರುವುದು , ಈ ವ್ಯವಸ್ಥೆಯನ್ನು ಜನತೆಯ ಪರವಾಗಿ ಪ್ರತಿನಿಧಿಸುವ ರಾಜಕೀಯ ಪಕ್ಷಗಳ ಸಂವಿಧಾನ ಬದ್ಧತೆ, ಕಾನೂನಾತ್ಮಕ ಶಿಸ್ತು, ಶಾಸನಾತ್ಮಕ ಪ್ರಾಮಾಣಿಕತೆ, ಜನಪರ ಕಾಳಜಿ ಹಾಗೂ ತಳಮಟ್ಟದವರೆಗೂ ವ್ಯಾಪಿಸುವ ಸಂವೇದನಾಶೀಲ ಜನಸ್ಪಂದನದಲ್ಲಿ. ಈ ಗುಣಗಳನ್ನು ಅಳವಡಿಸಿಕೊಳ್ಳದ ಯಾವುದೇ ರಾಜಕೀಯ ಪಕ್ಷವಾದರೂ, ಜನಮನ್ನಣೆ ಕಳೆದುಕೊಂಡು, ರಾಜಕೀಯವಾಗಿ ಅಂಚಿಗೆ ತಳ್ಳಲ್ಪಟ್ಟು ಅಂತಿಮವಾಗಿ ನೆಪ ಮಾತ್ರಕ್ಕೆ ಬ್ಯಾನರ್ಗಳ ಅಡಿ ಉಳಿದುಕೊಳ್ಳುತ್ತವೆ. ಮಾರುಕಟ್ಟೆ ಮತ್ತು ಬಂಡವಾಳ ಇಂತಹ ಪಕ್ಷಗಳಿಗೆ ರಕ್ಷಾಕವಚವಾಗಿ ಕಾಪಾಡುವುದು ಬೇರೆ ವಿಚಾರ.
ಈ ಗುಣಗಳನ್ನು ಅಳವಡಿಸಿಕೊಂಡು, ಅನುಸರಿಸಬೇಕಾದರೆ ಪಕ್ಷಗಳಲ್ಲಿ ಮತ್ತು ಮುಂಚೂಣಿ ನಾಯಕರಲ್ಲಿ ಎಲ್ಲ ಸ್ತರಗಳ, ಎಲ್ಲ ವಲಯಗಳ ಸಾಮಾನ್ಯ ಜನತೆಯ ನಾಡಿಮಿಡಿತವನ್ನು ಅರಿಯುವ ಕ್ಷಮತೆ ಇರಬೇಕಾಗುತ್ತದೆ. ಜನರ ಕಷ್ಟ ಸುಖಗಳಿಗೆ, ಸಂಕಟಗಳಿಗೆ, ನಿತ್ಯ ಬದುಕಿನ ಜಟಿಲ ಸಂಕಷ್ಟಗಳಿಗೆ ಸ್ಪಂದಿಸಿ, ಸಮಸ್ಯೆಗಳನ್ನು ನಿವಾರಿಸಲು ಸಂವಿಧಾನ ಮತ್ತು ಸಾಂವಿಧಾನಿಕ ಕಾನೂನು, ಕಾಯ್ದೆ, ಸಾಮಾಜಿಕ-ಆರ್ಥಿಕ ಯೋಜನೆಗಳು ನೆರವಾಗುತ್ತವೆ. ಇವುಗಳನ್ನು ಜನತೆಗೆ ತಲುಪಿಸುವುದಷ್ಟೇ ರಾಜಕೀಯ ಪಕ್ಷಗಳ ಉದ್ದೇಶವಾದರೆ, ಅದು ರವಾನೆಯ ಚುನಾಯಿತ ಸೇತುವೆಯಾಗಿ ಮಾತ್ರ ಕಾಣುತ್ತದೆ. ಇದನ್ನೂ ಮೀರಿದಂತೆ, ನೈತಿಕತೆಯ ನೆಲೆಯಲ್ಲಿ ಜನಪರ ಕಾಳಜಿ, ನೊಂದ ಜನಗಳ ಬಗ್ಗೆ ಕಳಕಳಿ ಇದ್ದಾಗ, ಆಡಳಿತ ವ್ಯವಸ್ಥೆ ನೈಜ ಪ್ರಜಾಪ್ರಭುತ್ವ ಎನಿಸಿಕೊಳ್ಳುತ್ತದೆ.
ಭಾರತದ ಪ್ರಜಾತಂತ್ರದ ಪಯಣ
ಪ್ರಜಾಪ್ರಭುತ್ವ ಎಂದರೆ ಕೇವಲ ಮತದಾನ ಮತ್ತು ಚುನಾವಣೆ ಅಲ್ಲ, ಅದನ್ನೂ ದಾಟಿದ ಒಂದು ಮುಂಗಾಣ್ಕೆ ಮತ್ತು ಆತ್ಮಪ್ರತ್ಯಯಗಳನ್ನು ಅದು ಒಳಗೊಂಡಿರಬೇಕಾಗುತ್ತದೆ . ಸ್ವತಂತ್ರ ಭಾರತದ 77 ವರ್ಷಗಳ ಚರಿತ್ರೆಯಲ್ಲಿ ಈ ಔದಾತ್ಯಗಳನ್ನು ಅಕ್ಷರಶಃ ಪಾಲಿಸಿದ ವಾತಾವರಣವನ್ನು 1975ರವರೆಗೂ ಕೊಂಚ ವ್ಯತ್ಯಯಗಳೊಂದಿಗೆ ಗುರುತಿಸಲು ಸಾಧ್ಯ. ಈ ಆಡಳಿತಾವಧಿಯನ್ನು ಮತ್ತು ಪ್ರಾತಿನಿಧಿತ್ವ ವಹಿಸಿದ ರಾಜಕಾರಣಿಗಳನ್ನು ಮೊದಲ ಪೀಳಿಗೆಯ ನಾಯಕರು ಎಂದು ವರ್ಗೀಕರಿಸಬಹುದು. ಹಲವು ದುಬಾರಿ ಪ್ರಮಾದಗಳು ನಡೆದಿದ್ದರೂ, ಒಟ್ಟಾರೆಯಾಗಿ ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರ ವಿಶ್ವಾಸ ಗಟ್ಟಿಯಾಗಿ ಉಳಿಸಿಕೊಳ್ಳಲಾಗಿತ್ತು. ಕೆಲವು ಅಪಭ್ರಂಶಗಳು ಇದ್ದುದನ್ನು ಅಲ್ಲಗಳೆಯಲಾಗುವುದಿಲ್ಲ.
1975 ಈ ಎಲ್ಲ ಔದಾತ್ಯಗಳನ್ನೂ ಅನುಷಂಗಿಕಗೊಳಿಸಿದ, ಅಧಿಕಾರ ಗಳಿಸುವುದನ್ನೇ ಪರಮೋದ್ದೇಶವನ್ನಾಗಿ ಮಾಡಿದ, ಅಧಿಕಾರದಲ್ಲಿ ಉಳಿಯಬೇಕಾದರೆ ತತ್ವ ಸಿದ್ಧಾಂತಗಳನ್ನೂ ಬಲಿಕೊಟ್ಟು, ಎಲ್ಲ ರೀತಿಯ ತಂತ್ರಗಳನ್ನೂ ಅನುಸರಿಸುವ ಮಾದರಿಯನ್ನು ರೂಪಿಸಿದ ಒಂದು ನಿರ್ಣಾಯಕ ವರ್ಷ. ತುರ್ತುಪರಿಸ್ಥಿತಿ ಇದನ್ನು ಆಗುಮಾಡಿದ ಒಂದು ಶಾಸನಾತ್ಮಕ ದುಸ್ಸಾಹಸ. ಆಗ ಬದಲಾದ ಭಾರತ ಮತ್ತು ಭಾರತದ ರಾಜಕಾರಣ, ತುರ್ತುಪರಿಸ್ಥಿತಿಯ ಅತಿರೇಕಗಳಿಂದ ಪಾಠ ಕಲಿಯುವ ಹಾದಿಯಲ್ಲಿ ಮುನ್ನಡೆಯಲಿಲ್ಲ. ಬದಲಾಗಿ ಹಲವು ಕವಲುಗಳಲ್ಲಿ ಒಡೆದ ರಾಜಕೀಯ ಕ್ಷೇತ್ರ ಪಕ್ಷಾತೀತವಾಗಿ ಅಧಿಕಾರ ಕೇಂದ್ರಿತ, ತತ್ವ ರಹಿತ, ಸಾಂವಿಧಾನಿಕ ನೈತಿಕತೆಯನ್ನು ಮರೆತ ಒಂದು ಮುಕ್ತ ಮಾರುಕಟ್ಟೆಯಾಗಿ ಪರಿಣಮಿಸಿತ್ತು. ಈ ಹೊಸ ಯುಗದ ಉಗಮವಾದದ್ದು 1980ರ ನವ ಉದಾರವಾದ-ಜಾಗತೀಕರಣ ಮತ್ತು ತದನಂತರದ ಕೋಮುವಾದಿ-ಮತೀಯ ರಾಜಕಾರಣದ ಮೂಲಕ.

ಪ್ರಜಾಪ್ರಭುತ್ವದ ತಾತ್ವಿಕ ಅಡಿಪಾಯ
ʼ ಪಕ್ಷಾಂತರ ಮಾಡಿರಬಹುದು ತತ್ವಾಂತರ ಮಾಡಿಲ್ಲ ʼ ಎಂಬ, ಈಗ ನಮ್ಮ ನಡುವೆ ಇಲ್ಲದ, ರಾಜಕೀಯ ಮುತ್ಸದ್ದಿಯೊಬ್ಬರ ಮಾತುಗಳು ಈ ಬದಲಾದ ಭಾರತೀಯ ರಾಜಕಾರಣದ ಸ್ಪಷ್ಟ ಚಿತ್ರಣ ನೀಡುತ್ತದೆ. ಸಮಾಜವಾದ, ಸಮತಾವಾದ, ರಾಷ್ಟ್ರೀಯವಾದ, ಅಂಬೇಡ್ಕರ್ವಾದ ಇವೆಲ್ಲವೂ ರಾಜಕೀಯ ಅಂಗಳದಲ್ಲಿ ಅನುಕೂಲಕ್ಕೆ ತಕ್ಕಂತೆ ಆಶ್ರಯಿಸಬಹುದಾದ ಭೂಮಿಕೆಗಳಾಗಿ ಪರಿವರ್ತನೆಯಾದದ್ದು ಈ ಕವಲು ಹಾದಿಯ ಲಕ್ಷಣಗಳು. ಈ ವಿಭಿನ್ನ ʼವಾದʼಗಳನ್ನು ರಾಜಕೀಯವಾಗಿ ಆಶ್ರಯಿಸಿದವರು, ಆಚರಣೆಯಲ್ಲಿ ಅದರ ದಾರ್ಶನಿಕ ಕರ್ತರನ್ನು ಅನುಸರಿಸುವ ʼವಾದಿʼ ಗಳಾಗಿ ಮುಂದುವರೆಯಲಿಲ್ಲ. ಮೂಲತಃ ಈ ʼವಾದಗಳುʼ ವಿಶ್ವವಿದ್ಯಾಲಯಗಳ ಹಾಗೆ, ʼವಾದಿʼ ಎನ್ನುವುದು ಅಲ್ಲಿ ಗಳಿಸಬಹುದಾದ ಪದವಿ ಹುದ್ದೆಗಳ ಹಾಗೆ. ಇದರ ಜ್ವಲಂತ ನಿದರ್ಶನವನ್ನು ʼ ಹಿಂದುತ್ವವಾದ ʼವನ್ನು ಅಪ್ಪಿಕೊಂಡ ʼ ಸಮಾಜವಾದಿ ʼಗಳಲ್ಲಿ ಕಾಣಬಹುದು. ಪದವಿಗಳು ಬಳಕೆಯಾಗುತ್ತಿವೆ, ವಿಶ್ವವಿದ್ಯಾಲಯಗಳು ಅನಾಥವಾಗುತ್ತಿವೆಎ.
ಈ ʼತತ್ವನಿಷ್ಠ ಪಕ್ಷಾಂತರಗಳೇʼ 21ನೆ ಶತಮಾನದ ಭಾರತೀಯ ರಾಜಕಾರಣದ ಭೂಪಟವನ್ನು ಪಲ್ಲಟಗೊಳಿಸಿದೆ. ಕಾಂಗ್ರೆಸ್, ಬಿಜೆಪಿ , ಜೆಡಿಎಸ್ ಮತ್ತು ಇತರ ಎಲ್ಲ ರಾಜಕೀಯ ಪಕ್ಷಗಳೂ ಸಹ ತೆರೆದ ಬಾಗಿಲಿನ ಕಚೇರಿಗಳನ್ನೇ ಹೊಂದಿದ್ದು, ಪಕ್ಷ ನಿಷ್ಠೆ ಎನ್ನುವ ಔದಾತ್ಯವೂ ಸಹ ಇಂದು ಇಲ್ಲವಾಗಿದೆ. ಪಕ್ಷದ ಸದಸ್ಯರ, ನಾಯಕರ ʼ ಮೂಲ ಮತ್ತು ವಲಸಿಗ ʼ ಚಹರೆಗಳನ್ನು ಗುರುತಿಸಲೂ ಸಾಧ್ಯವಾಗದ ಹಾಗೆ, ಪಕ್ಷಾಂತರ ಎನ್ನುವುದು ಅಧಿಕಾರ ರಾಜಕಾರಣವನ್ನು ಅಪ್ಪಿಕೊಳ್ಳುವ ಒಂದು ಸಾಂವಿಧಾನಿಕ ಕ್ರಿಯೆಯಾಗಿ ಬದಲಾಗಿದೆ. ಇದರ ಮೂಲ ಕಾರಣವನ್ನು ರಾಜಕೀಯ ಅಂಗಳಕ್ಕಿಂತಲೂ, ನವ ಉದಾರವಾದ-ಬಂಡವಾಳಶಾಹಿ ಆರ್ಥಿಕತೆಯ ಕಾರ್ಪೊರೇಟ್ ಮಾರುಕಟ್ಟೆಯಲ್ಲಿ ಮತ್ತು ಅಲ್ಲಿ ಸೃಷ್ಟಿಯಾಗುವ ಭ್ರಷ್ಟಾಚಾರದ ಕೂಪಗಳಲ್ಲಿ ಗುರುತಿಸುವುದು ಸುಲಭ. ಏಕೆಂದರೆ ರಾಜಕೀಯ ಹಿತಾಸಕ್ತಿಯನ್ನು ಮೀರಿದ ಮಾರುಕಟ್ಟೆ ಹಿತಾಸಕ್ತಿ, ಚುನಾಯಿತ ಪ್ರತಿನಿಧಿಗಳ ಆದ್ಯತೆಗಳನ್ನು ನಿರ್ಧರಿಸುತ್ತದೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲೇ ಭಾರತ ಆತ್ಮನಿರ್ಭರತೆಯತ್ತ, ವಿಕಸನದ ಹಾದಿಯಲ್ಲಿ ಸಾಗುತ್ತಿದೆ. ಆರ್ಥಿಕ ನೀತಿಗಳು, ಹಣಕಾಸು ನಿರ್ವಹಣೆಯ ಮಾದರಿ ಹಾಗೂ ಬಂಡವಾಳಶಾಹಿ ಮಾರುಕಟ್ಟೆಯ ಹಿತಾಸಕ್ತಿ ರಕ್ಷಣೆಯ ವಿಚಾರದಲ್ಲಿ ಎಡಪಕ್ಷಗಳನ್ನು ಹೊರತುಪಡಿಸಿ ಉಳಿದೆಲ್ಲ ಪಕ್ಷಗಳೂ ಒಂದೇ ನೀತಿಯನ್ನು ಅನುಸರಿಸುತ್ತವೆ. ಸಿಪಿಎಂ ಆಳ್ವಿಕೆಯ ಕೇರಳದಲ್ಲೂ ತೀರಾ ಭಿನ್ನವಾದ ಅಥವಾ ನವ ಉದಾರವಾದದಿಂದ ಹೊರತಾದ ಆರ್ಥಿಕ ನೀತಿಯನ್ನು ಅನುಸರಿಸುವುದಿಲ್ಲ, ಇದರಿಂದ ಸೃಷ್ಟಿಯಾಗುವ ಅಸಮಾನತೆ, ಅಸಮಾಧಾನಗಳನ್ನು ಸಮತೋಲನಗೊಳಿಸುವ ಪರ್ಯಾಯ ಜನಕಲ್ಯಾಣ ನೀತಿಗಳನ್ನು ಅನುಸರಿಸಲಾಗುತ್ತದೆ. ಸಮಾಜವಾದದ ನೆರಳಿನ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾಡುತಿರುವುದೂ ಇದನ್ನೇ. ಬಹುಮಟ್ಟಿಗೆ ಎಲ್ಲ ಪ್ರಾದೇಶಿಕ ಪಕ್ಷಗಳೂ ಸಹ ಆರ್ಥಿಕತೆಯ ವಿಚಾರದಲ್ಲಿ ಸಹಮತ ಹೊಂದಿರುವುದೇ, ಭಾರತದಲ್ಲಿ ಪರ್ಯಾಯ ಆರ್ಥಿಕ ನೀತಿ ರೂಪುಗೊಳ್ಳದಿರುವುದರ ಮೂಲ ಕಾರಣವಾಗಿದೆ.
ವಿರೋಧ ಪಕ್ಷಗಳ ಜವಾಬ್ದಾರಿಗಳು
ಈ ದೃಷ್ಟಿಯಿಂದ ನೋಡಿದಾಗ, ವಿರೋಧ ಪಕ್ಷಗಳು ಅನುಸರಿಸಬೇಕಾದ ಮಾರ್ಗ ಇಂದು ವಸ್ತುನಿಷ್ಠವಾಗಿ ಪರಾಮರ್ಶೆಗೊಳಾಗಬೇಕಿದೆ. ಪರ್ಯಾಯ ರಾಜಕಾರಣದ ಸಂಕಥನಗಳು ಕೇವಲ ಆಳ್ವಿಕೆಯನ್ನು ವಹಿಸಿಕೊಳ್ಳುವ ಮಟ್ಟಕ್ಕೆ ಸೀಮಿತವಾಗಿದ್ದು, ಅಲ್ಲಿ ವರ್ತಮಾನದ ಭಾರತಕ್ಕೆ, ಉಜ್ವಲ ಭವಿಷ್ಯದ ದೃಷ್ಟಿಯಿಂದ ಅಗತ್ಯವಾದ ಪರ್ಯಾಯ ಆರ್ಥಿಕತೆಯ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ. ಇದರಿಂದಾಚೆಗೂ ವಿರೋಧ ಪಕ್ಷಗಳಿಗೆ ಸರ್ಕಾರಗಳಷ್ಟೇ ಜವಾಬ್ದಾರಿ ಇರುವುದನ್ನು ರಾಜಕೀಯ ಪಕ್ಷಗಳು ಗುರುತಿಸಬೇಕಿದೆ. ವಿಪರ್ಯಾಸವೆಂದರೆ ಭಾರತದಲ್ಲಿ ಈ ಪರಂಪರೆಗೆ ಎಂದೋ ಅಂತ್ಯ ಹಾಡಲಾಗಿದೆ. ಸರ್ಕಾರದ ಆಡಳಿತ-ಆರ್ಥಿಕ ನೀತಿಗಳನ್ನು ಖಂಡಿಸುವ ಅಥವಾ ಟೀಕಿಸುವ ಪಕ್ಷಗಳು, ಜನಸಾಮಾನ್ಯರ ಮುಂದೆ ಪರ್ಯಾಯವೊಂದನ್ನು ಮಂಡಿಸದೆ ಇರುವುದು ಸಾಮಾನ್ಯ ಲಕ್ಷಣವಾಗಿದೆ. ಎಡಪಕ್ಷಗಳೂ ಸಹ ಈವರೆಗೆ ನವ ಉದಾರವಾದಕ್ಕೆ ಪರ್ಯಾಯವಾದ ಆರ್ಥಿಕತೆಯನ್ನು ಜನರ ಮುಂದೆ ಇಟ್ಟಿಲ.
ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳಿಗೆ ಐದು ಪ್ರಧಾನ ಕರ್ತವ್ಯಗಳನ್ನು ಗುರುತಿಸಬಹುದು. ಮೊದಲನೆಯದು ಸರ್ಕಾರದ ನೀತಿ-ಯೋಜನೆಗಳನ್ನು, ನಡವಳಿಕೆಗಳನ್ನು ನಿರಂತರ ನಿಷ್ಕರ್ಷೆಗೊಳಪಡಿಸಿ ಪರಾಮರ್ಶಿಸುವುದು. ಎರಡನೆಯದು ಈ ನೀತಿ-ಯೋಜನೆಗಳಿಗೆ ಪರ್ಯಾಯ ಒದಗಿಸುವಂತಹ ಸರ್ಕಾರದ ಭರವಸೆ ಉಂಟುಮಾಡುವುದು. ಮೂರನೆಯದು ಪ್ರಜಾಸತ್ತಾತ್ಮಕ ನಿಯಮಗಳನ್ನು ರಕ್ಷಿಸುವುದು. ನಾಲ್ಕನೆಯದು ಸಾರ್ವಜನಿಕ ಅಭಿಪ್ರಾಯಕ್ಕೆ ಅವಕಾಶಗಳನ್ನು ಕಲ್ಪಿಸಿ, ಮನ್ನಣೆ ನೀಡುವುದು. ಐದನೆಯದು ರಚನಾತ್ಮಕ ವಿಮರ್ಶೆಯನ್ನು ಉತ್ತೇಜಿಸುವುದು. ಭಾರತದ ಸಂದರ್ಭದಲ್ಲಿ ಕೊನೆಯ ಮೂರೂ ಕರ್ತವ್ಯಗಳಲ್ಲಿ ರಾಜಕೀಯ ಪಕ್ಷಗಳು ವಿಫಲವಾಗುತ್ತಿರುವುದನ್ನು ನಾಲ್ಕು ದಶಕಗಳ ಆಡಳಿತದಲ್ಲಿ ಗುರುತಿಸಬಹುದು.
ಇದರ ಜ್ವಲಂತ ನಿದರ್ಶನವನ್ನು ಕರ್ನಾಟಕದ ಪ್ರಸ್ತುತ ಸಂದರ್ಭದಲ್ಲಿ ಕಾಣಬಹುದು. ಆಡಳಿತಾರೂಢ ಕಾಂಗ್ರೆಸ್ ಪಕ್ಷ, ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ಭಿನ್ನ ಸಾಮಾಜಿಕ-ಆರ್ಥಿಕ ನೀತಿಗಳನ್ನು ಅನುಸರಿಸುತ್ತಿದೆ. ಗ್ಯಾರಂಟಿ ಯೋಜನೆಗಳು ಎಷ್ಟೇ ಟೀಕೆಗೊಳಗಾದರೂ ಜನಮನ್ನಣೆ ಗಳಸಿದೆ. ಆದರೆ ಆಡಳಿತಾತ್ಮಕವಾಗಿ ಸರ್ಕಾರಕ್ಕೆ ಆರ್ಥಿಕ ಬಿಕ್ಕಟ್ಟುಗಳನ್ನೂ ಸೃಷ್ಟಿಸಿದೆ. ಈ ದ್ವಂದ್ವವನ್ನು ತಾತ್ವಿಕ ನೆಲೆಯಲ್ಲಿ ಪರಾಮರ್ಶಿಸುವ ವ್ಯವಧಾನ ಇಲ್ಲದ ವಿರೋಧ ಪಕ್ಷಗಳು, ಜೆಡಿಎಸ್ ಮತ್ತು ಬಿಜೆಪಿ, ಸರ್ಕಾರದ ವಿರುದ್ದ ನಿರಂತರ ಹೋರಾಡುತ್ತಲೇ ಬಂದಿವೆ. ಆದರೆ ಈ ಹೋರಾಟಗಳ ತಾತ್ವಿಕ ನೆಲೆಗಳನ್ನು ಗಮನಿಸಿದಾಗ, ಎರಡೂ ಪಕ್ಷಗಳು ನೆಲದ ವಾಸ್ತವಗಳನ್ನಾಗಲೀ, ಶ್ರೀಸಾಮಾನ್ಯರ ನಾಡಿಮಿಡಿತವನ್ನಾಗಲೀ ಅರ್ಥಮಾಡಿಕೊಂಡಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ.

ಜನರ ನಾಡಿಮಿಡಿತದ ಅರಿವು
ಆಡಳಿತ ಪಕ್ಷಕ್ಕೆ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಸಾಗುವುದು ರಾಜಕೀಯ ಅನಿವಾರ್ಯತೆಯಾಗಿರುತ್ತದೆ. ಆದರೆ ಇದಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಅನ್ಯಾಯಗಳನ್ನು, ದೌರ್ಜನ್ಯ, ತಾರತಮ್ಯ ಮತ್ತು ಸಂಕಟಗಳನ್ನು ತಳಮಟ್ಟದವರೆಗೂ ತಲುಪಿ ನಿವಾರಿಸುವ ಇನ್ನೂ ದೊಡ್ಡ ಜವಾಬ್ದಾರಿಯೂ ಇರುತ್ತದೆ. ಮಹಿಳಾ ದೌರ್ಜನ್ಯ, ಜಾತಿ ತಾರತಮ್ಯ, ಅಸ್ಪೃಶ್ಯತೆ, ರೈತರ ಆತ್ಮಹತ್ಯೆ, ನಿರುದ್ಯೋಗ, ವಲಸೆ ಕಾರ್ಮಿಕರ ಸಮಸ್ಯೆ, ಮಾನವ ಹಕ್ಕು ಉಲ್ಲಂಘನೆ ಇವೇ ಮೊದಲಾದ ಜಟಿಲ ಸಿಕ್ಕುಗಳನ್ನು ಬಿಡಿಸಿ, ರಾಜ್ಯದ ಜನತೆಗೆ ಸುಖಿ ಸಮಾಜವನ್ನು ಸೃಷ್ಟಿಸುವ ಸಾಂವಿಧಾನಿಕ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ. ಈ ಜವಾಬ್ದಾರಿಯಲ್ಲಿ ಸರ್ಕಾರ ವಿಫಲವಾದಾಗ, ಆಡಳಿತವನ್ನು ಎಚ್ಚರಿಸುವ, ಜನಸಾಮಾನ್ಯರಲ್ಲಿ ಅರಿವು ಮೂಡಿಸುವ, ತಳಮಟ್ದದವರೆಗೂ ಸಮಾಜದಲ್ಲಿ ಜಾಗೃತಿ ಉಂಟುಮಾಡುವ ಸಾಂವಿಧಾನಿಕ ಜವಾಬ್ದಾರಿ ವಿರೋಧ ಪಕ್ಷಗಳ ಮೇಲಿರುತ್ತದೆ.
ಈ ಅಂಶವನ್ನು ವಿಭಿನ್ನ ಮಗ್ಗುಲುಗಳಲ್ಲಿ ನೋಡಿದಾಗ ನಮಗೆ ರಾಜ್ಯದಲ್ಲಿ ಸಂಭವಿಸುತ್ತಿರುವ ಮಹಿಳಾ ದೌರ್ಜನ್ಯಗಳು, ಅತ್ಯಾಚಾರಗಳು, ಬಾಲ್ಯ ವಿವಾಹದ ಮತ್ತು ಬಾಲ ವಿಧವೆಯರ ಹೆಚ್ಚಳ, ಸಾಮಾಜಿಕ ಅಪರಾಧಗಳ ಹೆಚ್ಚಳ ಮತ್ತು ಶಿಕ್ಷೆಯ ಪ್ರಮಾಣದ ಕುಸಿತ, ವಲಸೆ ಕಾರ್ಮಿಕರ ಜಟಿಲ ಸಮಸ್ಯೆ, ನಿರುದ್ಯೋಗ ಇವೇ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಕರ್ನಾಟಕದಲ್ಲಿ ಬಿಜೆಪಿ ಈ ಯಾವುದೇ ಸಮಸ್ಯೆಗಳ ವಿರುದ್ಧ ಜನಾಂದೋಲನ ಅಥವಾ ಪ್ರಚಾರಾಂದೋಲನ, ಅಭಿಯಾನ ಹಮ್ಮಿಕೊಂಡಿರುವುನ್ನು ಕಾಣಲಾಗುವುದಿಲ್ಲ. ಸಾಮಾಜಿಕ ಅಪರಾಧಗಳು ಸಂಭವಿಸಿದಾಗ , ಬಿಜೆಪಿಯ ನೀತಿಯನುಸಾರ ಆರೋಪಿಗಳು ಅಥವಾ ಸಂತ್ರಸ್ತರು ಜಾತಿ-ಧರ್ಮದ ಅಸ್ಮಿತೆಯ ಮೂಲಕವೇ ಗುರುತಿಸಲ್ಪಡುವುದರಿಂದ, ಅಸ್ಮಿತೆಗಳು ಕಾಣದ ದುರ್ಘಟನೆಗಳು ಕಾನೂನು ಸುವ್ಯವಸ್ಥೆಯ ವೈಫಲ್ಯವಾಗಿ ಮಾತ್ರ ಕಾಣುತ್ತದೆ.

ನಿರ್ದಿಷ್ಟ ಉದಾಹರಣೆಯಾಗಿ ನೋಡಿದರೆ, ದರ್ಮಸ್ಥಳದ ಸುತ್ತಲಿನ ಪ್ರದೇಶಗಳಲ್ಲಿ ನಡೆದಿರುವ ದೌರ್ಜನ್ಯಗಳ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಧಾರ್ಮಿಕ ಹಿತಾಸಕ್ತಿಗಳು ಮುಖ್ಯವಾಗುತ್ತವೆ, ಹಾಸನದ ದೌರ್ಜನ್ಯಗಳ ವಿಷಯದಲ್ಲಿ ರಾಜಕೀಯ ಹಿತಾಸಕ್ತಿ ಮುಖ್ಯವಾಗುತ್ತದೆ. ಎರಡೂ ಕಡೆ ಅನ್ಯಾಯಕ್ಕೊಳಗಾದ ಸಮಾಜ ಅಸಹಾಯಕತೆ, ಹತಾಶೆಯಿಂದ ಹೋರಾಟದ ಹಾದಿ ಹಿಡಿಯುತ್ತದೆ. ಆಡಳಿತಾರೂಢ ಪಕ್ಷಕ್ಕೆ ಹಾಸನದಲ್ಲಿ ಕಾಣುವಂತಹ ಕರಾಳ ಜಗತ್ತು ಧರ್ಮಸ್ಥಳದ ಪ್ರಕರಣಗಳಲ್ಲಿ ಕಾಣುವುದಿಲ್ಲ. ಇಲ್ಲಿ ಅಪರಾಧ ಎಸಗಿರುವುದು ಯಾರು ಎನ್ನುವುದೇ ನಿರ್ಣಾಯಕ, ಮಾನದಂಡವಾಗುವುದರಿಂದ, ಅನ್ಯಾಯಕ್ಕೊಳಗಾದ ಜನರು ರಾಜಕೀಯ ಚದುರಂಗದ ಆಟಕಾಯಿಗಳಾಗಿ ಮಾತ್ರ ಕಾಣುತ್ತಾರೆ. ಮೈಸೂರಿನ ವಸ್ತುಪ್ರದರ್ಶನ ಮೈದಾನದ ಬಳಿ ಅತ್ಯಾಚಾರಕ್ಕೀಡಾಗಿ, ಕೊಲೆಯಾಗಿರುವ (09-10-2025) ಒಂಬತ್ತು ವರ್ಷದ ಹಸುಳೆ , ಸೌಜನ್ಯಾಳ ಹಾಗೆಯೇ ಅನಾಥವಾಗಿಬಿಡುತ್ತದೆ.
ದೂರದೃಷ್ಟಿಯ ಕೊರತೆ-ಕ್ರಾಂತಿಯ ಭ್ರಮೆ
ಆಡಳಿತಾರೂಢ ಪಕ್ಷಕ್ಕೆ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗುವ ಘಟನೆಗಳು, ವಿರೋಧ ಪಕ್ಷಗಳಿಗೆ ಸಾಮಾಜಿಕ ಪ್ರಶ್ನೆಯಾಗಿ ಕಾಣಬೇಕು, ಇಲ್ಲಿ ಯಾವುದೇ ಅಸ್ಮಿತೆಗಳ ಅಡ್ಡಗೋಡೆಯಿಲ್ಲದ ವಿಶಾಲ ದೃಷ್ಟಿ ಮತ್ತು ಹೃದಯ ವೈಶಾಲ್ಯ ಮುಖ್ಯವಾಗುತ್ತದೆ. ಜಾತಿ-ಮತ-ಧರ್ಮಗಳ ಅಸ್ಮಿತೆಗಳಿಂದಾಚೆಗೆ ಯೋಚಿಸದ ವಿರೋಧ ಪಕ್ಷಗಳು, ಕಾಂಗ್ರೆಸ್-ಬಿಜೆಪಿ-ಜೆಡಿಎಸ್, ಯಾವುದೇ ಆದರೂ ಸಹ ಅಂತಿಮವಾಗಿ, ಸಾಮಾಜಿಕ ಸಿಕ್ಕುಗಳನ್ನು ಮತ್ತು ಅದರೊಳಗೆ ನಿತ್ಯ ಸಂಭವಿಸುತ್ತಿರುವ ದೌರ್ಜನ್ಯ-ಅನ್ಯಾಯಗಳನ್ನು ಕೇವಲ ರಾಜಕೀಯ ಲಾಭ ನಷ್ಟಗಳ ಚೌಕಟ್ಟಿಗೆ ಸಿಲುಕಿಸಿ, ನಿರಾಳವಾಗಿದ್ದುಬಿಡುತ್ತವೆ. ರಾಜ್ಯ ಬಿಜೆಪಿ ಈ ನಿಟ್ಟಿನಲ್ಲಿ ಒಂದು ಮಾದರಿಯನ್ನೇ ಹಾಕಿಕೊಟ್ಟಿರುವುದು ರಾಜ್ಯದ ಜನತೆಯ ದೌರ್ಭಾಗ್ಯ. ಏಕೆಂದರೆ ಅಧಿಕಾರ ಗ್ರಹಣವೇ ಅಂತಿಮ ಗುರಿಯಾಗುವ ರಾಜಕಾರಣದಲ್ಲಿ ಇಂತಹ ಮಾದರಿಗಳು ಪೂರ್ವನಿದರ್ಶನಗಳಾಗಿ (precedents) ಪರಿಣಮಿಸುತ್ತವೆ.
ಕಾಂಗ್ರೆಸ್ ಸರ್ಕಾರದ ಎರಡೂವರೆ ವರ್ಷದ ಆಳ್ವಿಕೆಯಲ್ಲಿ ಹಲವು ಪ್ರಮಾದಗಳು ಸಂಭವಿಸಿರುವುದು, ಆಡಳಿತಾತ್ಮಕ-ಸಾಮಾಜಿಕ ಅನ್ಯಾಯಗಳು ಘಟಿಸಿರುವುದು ಸತ್ಯ. ಈ ಅನ್ಯಾಯಗಳ ಮೂಲವನ್ನು ಶೋಧಿಸಬೇಕಾದರೆ, ತಳಮಟ್ಟದವರೆಗಿನ ಜನತೆಯ ನಾಡಿಮಿಡಿತದ ಅರಿವು ಇರಬೇಕು. ಆಗ ಅಲ್ಲಿನ ನೋವು ಸಂಕಟಗಳ ಸತ್ಯದರ್ಶನವಾಗುತ್ತದೆ. ಈ ವಿವೇಚನೆ ಮತ್ತು ವ್ಯವಧಾನವನ್ನು ಕಳೆದುಕೊಂಡಿರುವ ಬಿಜೆಪಿ ಹಲವು ಜನಾಂದೋಲನ-ಅಭಿಯಾನ-ಪ್ರಚಾರಾಂದೋಲನಗಳನ್ನು ಹಮ್ಮಿಕೊಂಡಿದ್ದರೂ ಅಂತಿಮ ಗುರಿ ಇರುವುದು ಸರ್ಕಾರದ ಪದಚ್ಯುತಿ ಮತ್ತು ಮರಳಿ ಅಧಿಕಾರ ಗಳಿಸುವ ಹಂಬಲ. ಈ ಹಾದಿಯಲ್ಲಿ ಬಿಜೆಪಿ ಶತಮಾನಗಳಿಂದ ಚಾಲ್ತಿಯಲ್ಲಿರುವ ʼಕ್ರಾಂತಿʼ (Revolution) ಎಂಬ ಉದಾತ್ತ ಚಿಂತನೆಯನ್ನೇ ಅಪಭ್ರಂಶಗೊಳಿಸಿ, ಅಪಹಾಸ್ಯಕ್ಕೀಡುಮಾಡಿರುವುದು ಮತ್ತೊಂದು ದುರಂತ.
2023ರಲ್ಲಿ ಅಧಿಕಾರ ಕಳೆದುಕೊಂಡ ಮೇಲೆ ಬಿಜೆಪಿ ನಾಯಕರ ಅತ್ಯಂತ ಪ್ರಮುಖ ಘೋಷಣೆಯನ್ನು ಈ ʼ ಕ್ರಾಂತಿ ʼ ಪದಬಳಕೆಯಲ್ಲಿ ಕಾಣಬಹುದು. ಪಕ್ಷದ ವರಿಷ್ಠ ನಾಯಕರೂ ಜುಲೈ, ಆಗಸ್ಟ್,,,,,,,,ಈಗ ಡಿಸೆಂಬರ್ನಲ್ಲೂ ರಾಜ್ಯದಲ್ಲಿ ʼ ಕ್ರಾಂತಿ ʼಉಂಟಾಗುತ್ತದೆ ಎಂದು ಹೇಳುತ್ತಲೇ ಬಂದಿದ್ದಾರೆ. ಈ ಸಂಭಾವ್ಯ ʼಮಾಸಿಕ ಕ್ರಾಂತಿʼ ಎಂದರೆ ಇಡೀ ವ್ಯವಸ್ಥೆಯೇ ಪಲ್ಲಟಗೊಂಡು, ನವ ಯುಗದ ಸೃಷ್ಟಿಯಾಗುತ್ತದೆ ಎಂದೇನೂ ಭಾವಿಸಬೇಕಿಲ್ಲ. ಕಾಂಗ್ರೆಸ್ ಸರ್ಕಾರ ಕುಸಿಯುತ್ತದೆ, ಬಿಜೆಪಿ-ಜೆಡಿಎಸ್ ಮೈತ್ರಿ ಮರಳಿ ಅಧಿಕಾರಕ್ಕೆ ಬರುತ್ತದೆ ಎಂದಷ್ಟೇ ಅರ್ಥ. ಅಂದರೆ ಕರ್ನಾಟಕದಲ್ಲಿ ʼ ಕ್ರಾಂತಿ ʼಎಂಬ ಪದ ತನ್ನ ಮೂಲಾರ್ಥವನ್ನು ಕಳೆದುಕೊಂಡು, ಕೇವಲ ಸರ್ಕಾರ ಬದಲಾವಣೆಯ ಸೀಮಿತ ಕೋಶದಲ್ಲಿ ಬಂಧಿಯಾಗಿದೆ.

ಇದು ವಿರೋಧ ಪಕ್ಷವೊಂದು ನಡೆದುಕೊಳ್ಳಬೇಕಾದ ಮಾದರಿಯಂತೂ ಅಲ್ಲ. ಆಳುವ ಪಕ್ಷದಷ್ಟೇ, ಕೆಲವೊಮ್ಮೆ ಅದನ್ನೂ ಮೀರಿದ, ಸಾಂವಿಧಾನಿಕ ಜವಾಬ್ದಾರಿ ವಿರೋಧ ಪಕ್ಷಕ್ಕೂ/ಪಕ್ಷಗಳಿಗೂ ಇದೆ ಎನ್ನುವ ವಿವೇಚನೆ ಮತ್ತು ವ್ಯವಧಾನ ರಾಜಕೀಯ ಪಕ್ಷಗಳಿಗೆ ಇರಬೇಕು. ಬಹುಮತದೊಂದಿಗೆ ಚುನಾಯಿತವಾಗಿರುವ ಸರ್ಕಾರ ಪದಚ್ಯುತವಾಗುವುದನ್ನು, ಅಸ್ಥಿರವಾಗುವುದನ್ನು, ಪಲ್ಲಟವಾಗುವುದನ್ನು ನಿರೀಕ್ಷಿಸುವುದು, ಅದಕ್ಕಾಗಿ ಹಾತೊರೆಯುವುದು , ಅಧಿಕಾರದ ಹಂಬಲದ ಸಂಕೇತವಾಗುತ್ತದೆಯೇ ಹೊರತು ಶಾಸನಾತ್ಮಕ ಜವಾಬ್ದಾರಿ ಎನಿಸಿಕೊಳ್ಳುವುದಿಲ್ಲ. ಈ ಸಂಭಾವ್ಯ ʼಕ್ರಾಂತಿʼಯ ನಿರೀಕ್ಷೆಯಲ್ಲಿ ಮತದಾರರು ಇಟ್ಟಿರುವ ವಿಶ್ವಾಸವನ್ನು ಮತ್ತು ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ಮರೆಯುವುದು, ಇಡೀ ರಾಜಕೀಯ ವಾತಾವರಣವನ್ನು ಅಸ್ತವ್ಯಸ್ತಗೊಳಿಸುತ್ತದೆ.
ಇಲ್ಲಿ ನಷ್ಟವಾಗುವುದು ಪ್ರಜಾಪ್ರಭುತ್ವದ ಪಾವಿತ್ರ್ಯತೆ ಮತ್ತು ಸಾಂವಿಧಾನಿಕ ಮೌಲ್ಯಗಳ ಔದಾತ್ಯ ಈಗಿನ ಸಂದರ್ಭದಲ್ಲಿ ವಿರೋಧ ಪಕ್ಷಗಳಾಗಿ, ಬಿಜೆಪಿ-ಜೆಡಿಎಸ್ ಇದ್ದರೂ, ಈ ಅರಿವು, ಪರಿವೆ, ಪರಿಜ್ಞಾನ ಎಲ್ಲ ರಾಜಕೀಯ ಪಕ್ಷಗಳಲ್ಲೂ ಇರಬೇಕಾಗುತ್ತದೆ. ಪರ್ಯಾಯ ದಿಕ್ಸೂಚಿ, ಮುಂಗಾಣ್ಕೆ ಮತ್ತು ಚಿಂತನೆ ಇಲ್ಲದ ರಾಜಕಾರಣ ಅಂತಿಮವಾಗಿ ಕೊನೆಯಾಗುವುದು ಅಧಿಕಾರ ಪೀಠಗಳಲ್ಲಿ. ಆದರೆ ಜನಸಾಮಾನ್ಯರ ದೃಷ್ಟಿಯಲ್ಲಿ ಇದು ಪ್ರಜಾತಂತ್ರದ ನೈತಿಕ ಅಧಃಪತನವಾಗಿ ಮಾತ್ರ ಕಾಣುತ್ತದೆ. ಡಾ. ಬಿ. ಆರ್. ಅಂಬೇಡ್ಕರ್ ಪದೇಪದೇ ಹೇಳುತ್ತಾ ಬಂದಿದ್ದ ʼ ಸಾಂವಿಧಾನಿಕ ನೈತಿಕತೆ ʼ (Constitutional Morality) ಮುಖ್ಯವಾಗುವುದು ಇಲ್ಲೇ.
-೦-೦-೦-೦-