
ಖಾಸಗಿ ಹಾಗೂ ಸರ್ಕಾರಿ ವಲಯದ ಹೆಣ್ಣುಮಕ್ಕಳಿಗೀಗೆ ಸಿಗಲಿದೆ ತಿಂಗಳಿಗೊಂದು ವೇತನ ಸಹಿತ ರಜೆ
ರಾಜ್ಯದ ಉದ್ಯೋಗಸ್ಥ ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್
ಸಂತೋಷ್ ಲಾಡ್ ಸತತ ಪ್ರಯತ್ನಕ್ಕೆ ಸಿಕ್ಕಿದೆ ಐತಿಹಾಸಿಕ ಪ್ರತಿಫಲ
ಹೆಣ್ಣುಮಕ್ಕಳ ಋತುಸ್ರಾವದ ಸಂಕಟಕ್ಕೆ ರಜೆಯ ಸಂತೋಷ ನೀಡಿದ ಲಾಡ್
ಮಹಿಳಾ ಸಬಲೀಕರಣ ಜೊತೆ ಮಹಿಳೆಯರಿಗೆ ಮಾನವೀಯ ನೆಲಗಟ್ಟಿನಲ್ಲಿ ಅನುಕೂಲ ಒದಗಿಸುವತ್ತ ಸಿದ್ದರಾಮಯ್ಯನವರ ಸರ್ಕಾರದ ಚಿತ್ತ
ಬೆಂಗಳೂರು : ಋತುಚಕ್ರ ರಜೆ ನೀತಿ – 2025ಕ್ಕೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಕಿತ ದೊರೆತಿದೆ. ಇದರೊಂದಿಗೆ ನಾಡಿನ ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರದ ರಜೆ ಕೊಡಿಸಲು ಮಾನ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ನಡೆಸಿದ ಸತತ ಪ್ರಯತ್ನಕ್ಕೆ ಫಲ ದೊರೆತಿದೆ.
ಈ ನೀತಿಯ ಜಾರಿಯೊಂದಿಗೆ ಪ್ರತಿತಿಂಗಳು ಋತು ಚಕ್ರದ ಅವಧಿಯಲ್ಲಿ ವೇತನ ಸಹಿತ ಒಂದು ದಿನದ ರಜೆ ಎಲ್ಲ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ಮಹಿಳೆಯರಿಗೆ ಸಿಗಲಿದೆ. ಈ ಮೂಲಕ ವರ್ಷಕ್ಕೆ 12 ವೇತನ ಸಹಿತ ರಜೆ ಸಿಕ್ಕಂತಾಗುತ್ತದೆ.

ಮೊದಲಿಂದಲೂ ಕೆಲಸ ಮಾಡುವ ಮಹಿಳೆಯರಿಗೆ, ಮಹಿಳಾ ಕಾರ್ಮಿಕರಿಗೆ ನೆರವಾಗುವ ಹಲವು ಯೋಜನೆಗಳನ್ನು ಕಾರ್ಮಿಕ ಇಲಾಖೆಯ ಮೂಲಕ ರೂಪಿಸುತ್ತಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ. ಇಂದು ಈ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದರ ಹಿಂದೆ ಸಚಿವ ಸಂತೋಷ್ ಲಾಡ್ ಅವರ ಅಪಾರ ಶ್ರಮವಿದೆ.
ಬೇರೆ ಬೇರೆ ರಾಜ್ಯಗಳಲ್ಲಿ, ದೇಶಗಳಲ್ಲಿ ಈ ವಿಷಯದಲ್ಲಿರುವ ರಜೆ ನೀತಿಗಳನ್ನೆಲ್ಲ ಕೂಲಂಕುಷವಾಗಿ ಅಧ್ಯಯನ ನಡೆಸಿರುವ ಸಂತೋಷ್ ಲಾಡ್ ಅವರು ಕರ್ನಾಟಕದಲ್ಲೂ ಈ ನೀತಿ ಸಮರ್ಪಕವಾಗಿ ಜಾರಿಗೆ ಬರುವಂತೆ ನೋಡಿಕೊಂಡಿದ್ದಾರೆ. ಸರ್ಕಾರಿ ವಲಯದಷ್ಟೇ ಅಲ್ಲದೇ ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೂ ಈ ನೀತಿಯ ಲಾಭ ಸಿಗಲಿದೆ. ಈಗಾಗಲೇ ಖಾಸಗಿ ವಲಯದ ಹಲವು ಸಂಸ್ಥೆಗಳು ರಾಜ್ಯ ಸರ್ಕಾರದ ಈ ನೂತನ ನೀತಿಗೆ ಒಮ್ಮತ ತೋರಿವೆ. ಇನ್ನಷ್ಟು ಸಂಸ್ಥೆಗಳಿಗೆ ಈ ಬಗ್ಗೆ ಕ್ರಮ ವಹಿಸುವಂತೆ ಮಾತುಕತೆ ನಡೆಸಲಾಗುತ್ತಿದೆ.
ಒಟ್ಟಿನಲ್ಲಿ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ತಮ್ಮ ಇಲಾಖೆಯ ಮೂಲಕ ಮಹಿಳಾ ಸಬಲೀಕರಣದ ಜೊತೆ ಅವರ ರಕ್ಷಣೆ, ಸುರಕ್ಷತೆ, ಗೌರವವನ್ನು ಸಹ ಕಾಪಾಡಲು ದೃಢ ಹೆಜ್ಜೆ ಇರಿಸಿರುವುದು ವ್ಯಾಪಕ ಶ್ಲಾಘನೆಗೆ ಪಾತ್ರವಾಗುತ್ತಿದೆ.
