
ಯಲಹಂಕದಲ್ಲಿ ರಸ್ತೆ ತಡೆದು ಗುಂಡಿ ಮುಚ್ಚುವ ಕಾರ್ಯಕ್ರಮ

ಬೆಂಗಳೂರು: ಯಲಹಂಕ ಹಳೆ ನಗರ, ಕೆಂಪೇಗೌಡ ವಾರ್ಡ್ ನಂಬರ್ 01 ರಲ್ಲಿ ಇಂದು ಬೆಳಿಗ್ಗೆ ರಸ್ತೆ ತಡೆ ನಡೆಸಲಾಯಿತು. ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಿಸಬೇಕೆಂದು ನೇತೃತ್ವ ವಹಿಸಿದ್ದ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಆಗ್ರಹಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಕಾಟಾಚಾರಕ್ಕೆ, ಅವೈಜ್ಞಾನಿಕವಾಗಿ ಹಾಗೂ ಕಳಪೆ ಡಾಂಬರೀಕರಣ ಕೆಲಸ ಮಾಡಿದ್ದು, ಕ್ಷೇತ್ರದ ಎಲ್ಲಾ ರಸ್ತೆಗಳಲ್ಲೂ ಈಗಾಗಲೇ ಗುಂಡಿಗಳು ಬಿದ್ದಿದೆ ಎಂದು ಅವರು ಆಕ್ಷೇಪಿಸಿದರು.
ಇದರಿಂದ ಸಾಕಷ್ಟು ರಸ್ತೆ ಅಪಘಾತಗಳು ಹಾಗೂ ಸಾವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ರಸ್ತೆ ತಡೆದು ಗುಂಡಿ ಮುಚ್ಚುವ ಹೋರಾಟ ನಡೆಸಲಾಯಿತು. ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಅವರ ನೇತೃತ್ವದಲ್ಲಿ ಚಳವಳಿ ಹಮ್ಮಿಕೊಳ್ಳಲಾಗಿತ್ತು. ಹೋರಾಟದಲ್ಲಿ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
‘ಇಡೀ ಬೆಂಗಳೂರನ್ನು ಗುಂಡಿ ಮಾಡಿದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ’, ವಾಹನ ಸವಾರರಿಗೆ ತೊಂದರೆ ಕೊಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ‘ಬ್ರಾಂಡ್ ಬೆಂಗಳೂರು ಎಂದು ಹೇಳಿ ಬ್ಯಾಡ್ ಬೆಂಗಳೂರು ಮಾಡಿದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾg’ದ ಘೋಷಣೆ ಕೂಗಿದರು. ಮುಚ್ಚಿಸಿ ಮುಚ್ಚಿಸಿ ಗುಂಡಿ ಮುಚ್ಚಿಸಿ ಘೋಷಣೆ ಕೂಗಿದರು.


