ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಸಚಿವರಾದ ಹೆಚ್.ಸಿ ಮಹದೇವಪ್ಪ, ಕೆ.ಹೆಚ್ ಮುನಿಯಪ್ಪ ಹಾಗೂ ಶಾಸಕರಾದ ಹ್ಯಾರಿಸ್ ಅವರೊಂದಿಗೆ ಭಾಗವಹಿಸಿ ಪ್ರಜಾಪ್ರಭುತ್ವ ದಿನಾಚರಣೆಯೊಂದು ವಿಶೇಷವಾದ ಕಾರ್ಯಕ್ರಮವಾಗಿದೆ.

ನಾವೆಲ್ಲರೂ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ನಮ್ಮದು ಇಡೀ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಬಸವಣ್ಣನವರ ನಾಡಿನಲ್ಲಿ ನಾವಿದ್ದೇವೆ. ಬಸವಣ್ಣನವರು ಅನುಭವ ಮಂಟಪ ಮಾಡಿ ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎಂಬ ವ್ಯವಸ್ಥೆಯನ್ನು ಮಾಡಿದರು.

ಬ್ಯಾಲೆಟ್ ಎನ್ನುವುದು ಬುಲೆಟ್‌ಗಿಂತ ಶಕ್ತಿಶಾಲಿ. ನಾವೆಲ್ಲರೂ ಬ್ಯಾಲೆಟ್ ಕಾಲಘಟ್ಟದಲ್ಲೇ ಹುಟ್ಟಿದವರು. ಬ್ಯಾಲೆಟ್ ನಮಗೆ ಶಕ್ತಿ ಕೊಟ್ಟಿದೆ. ಜನರು ವೋಟ್ ಹಾಕಿದ್ದಕ್ಕೆ ನಾವು ಶಾಸಕರು, ಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಾಗಿ ನಿಮ್ಮ ಮುಂದೆ ಇದ್ದೇವೆ. ಪಂಚಾಯತ್‌ಯಿಂದ ಪಾರ್ಲಿಮೆಂಟ್‌ವರೆಗೆ ನಾಯಕರನ್ನು ಬೆಳೆಸುವುದು ನಮ್ಮ ಮೊದಲ ಕರ್ತವ್ಯವಾಗಿದೆ. ನಾಯಕರನ್ನು ಬೆಳೆಸದಿದ್ದರೆ ನಾವು ಯಶಸ್ಸನ್ನು ಕಾಣಲಿಕ್ಕೆ ಸಾಧ್ಯವಿಲ್ಲ. ನಾನು 7ನೇ ಕ್ಲಾಸ್ ಅಲ್ಲೇ ಚುನಾವಣೆಗೆ ನಿಂತಿದ್ದೆ. ಆಗ ನನ್ನ ಚಿಹ್ನೆ ನಕ್ಷತ್ರವಾಗಿತ್ತು. ಅಲ್ಲಿಂದ ಇಲ್ಲಿವರೆಗೆ ನಾನು ಬೆಳೆದಿದ್ದೇನೆ.

ಯುವ ನಾಯಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಮತದಾನದ ಶಕ್ತಿ ತಿಳಿಸಲು ಪ್ರಜಾಪ್ರಭುತ್ವ ದಿನಾಚರಣೆಯನ್ನು ನಾವು ಹಮ್ಮಿಕೊಂಡಿದ್ದೇವೆ. ಬ್ಯಾಲೆಟ್ ನಾಯಕರನ್ನು ತಯಾರು ಮಾಡುತ್ತದೆ. 18 ವರ್ಷಕ್ಕೆ ಮತದಾನದ ಹಕ್ಕನ್ನು ನೀಡಿದ್ದು ರಾಜೀವ್ ಗಾಂಧಿಯವರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಪ್ರಜಾಪ್ರಭುತ್ವದಲ್ಲಿ ಅತ್ಯಮೂಲ್ಯವಾಗಿವೆ. ನಿಮ್ಮ ಆಶೀರ್ವಾದದಿಂದ ನಾವು 135 ಸೀಟ್ ಗೆದ್ದಿದ್ದು, ಈ ಮೂಲಕ ನೀವು ದೇಶಕ್ಕೆ ದೊಡ್ಡ ಸಂದೇಶ ನೀಡಿದ್ದೀರಿ. ಈ ಪ್ರಜಾಪ್ರಭುತ್ವವನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸಬೇಕಿದೆ.
