ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (Namma Metro Yellow Line) ಸೆಪ್ಟೆಂಬರ್ 10 ರಿಂದ ನಾಲ್ಕನೇ ರೈಲು ಸಂಚಾರ ಆರಂಭಿಸಲಿದೆ. ಇದರಿಂದ ರೈಲುಗಳ ನಡುವಿನ ಅಂತರವು 25 ನಿಮಿಷದಿಂದ 19 ನಿಮಿಷಕ್ಕೆ ಇಳಿಕೆಯಾಗಲಿದೆ. ಸೋಮವಾರದಿಂದ ಶನಿವಾರದವರೆಗೆ ಮೊದಲ ರೈಲು ಬೆಳಿಗ್ಗೆ 6 ಗಂಟೆಗೆ ಮತ್ತು ಭಾನುವಾರ 7 ಗಂಟೆಗೆ ಹೊರಡಲಿರುವ ಬಗ್ಗೆ ಬಿಎಂಆರ್ ಸಿಎಲ್ ಪ್ರಕಟಣೆ ಹೊರಡಿಸಿದ್ದು, ಇದರಿಂದ ಈ ಮಾರ್ಗದಲ್ಲಿ ಬೆಳಗ್ಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್ ಸಿಎಲ್) ಪ್ರಕಟಣೆ ಹೊರಡಿಸಿದ್ದು, 10ನೇ ಸೆಪ್ಟೆಂಬರ್‌ನಿಂದ ಜಾರಿಗೆ ಬರುವಂತೆ ಹಳದಿ ಮಾರ್ಗದಲ್ಲಿ 4ನೇ ರೈಲು ಸೆಟ್ ಅನ್ನು ಕಾರ್ಯಾಚರಣೆ ಆರಂಭಿಸಲಿದೆ. ಇದರಿಂದ ರೈಲುಗಳ ಟ್ರಿಪ್ ಅಂತರ 25 ನಿಮಿಷದಿಂದ 19 ನಿಮಿಷಕ್ಕೆ ತಗ್ಗಲಿದೆ. ಇನ್ನು ಪ್ರಯಾಣಿಕರು ಈ ವೇಳಾಪಟ್ಟಿ ಬದಲಾವಣೆಗಳನ್ನು ಗಮನಿಸಿ ಸಂಚರಿಸಬೇಕು ಎಂದು ಎಂದು ತಿಳಿಸಿದೆ.
ಬೆಂಗಳೂರಿನ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೂ ಹಳದಿ ಮಾರ್ಗದಲ್ಲಿ ಇದುವರೆಗೂ 3 ಮೆಟ್ರೋ ರೈಲುಗಳು 25 ನಿಮಿಷಕ್ಕೊಂದರಂತೆ ಸಂಚರಿಸುತ್ತಿದ್ದವು. ಈಗ ನಾಳೆಯಿಂದ ಮತ್ತೊಂದು ಹೊಸ ಮೆಟ್ರೋ ರೈಲು ಸೇರ್ಪಡೆಯಾಗುತ್ತಿದೆ. ಜತೆಗೆ ಹಳದಿ ಮಾರ್ಗದ ರೈಲುಗಳ ವೇಳಾಪಟ್ಟಿಯಲ್ಲಿಯೂ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ತುಸು ಬೇಗನೇ ಸಂಚಾರ ಆರಂಭವಾಗಲಿದೆ.

ಹಳದಿ ಮಾರ್ಗದ ಹೊಸ ವೇಳಾಪಟ್ಟಿ
- ಮೊದಲ ರೈಲು ಸಮಯ – ಸೋಮವಾರದಿಂದ ಶನಿವಾರದವರೆಗೆ ಮೊದಲ ವಾಣಿಜ್ಯ ಸೇವೆಯು ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗುತ್ತದೆ. (ಸೆಪ್ಟೆಂಬರ್ 9 ವರೆಗೂ 6.30 ಕ್ಕೆ ಆರಂಭವಾಗುತ್ತಿತ್ತು. ಭಾನುವಾರದಂದು ಮೊದಲ ರೈಲು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಲಿದೆ. ಕೊನೆಯ ರೈಲು ಸಮಯ – ಆರ್.ವಿ. ರಸ್ತೆಯಿಂದ ರಾತ್ರಿ 11:55 ಕ್ಕೆ, ಬೊಮ್ಮಸಂದ್ರದಿಂದ ರಾತ್ರಿ 10:42 ಕ್ಕೆ ಹೊರಡಲಿದೆ.

ಪ್ರಯಾಣಿಕರಿಗೆ ಕೊಂಚ ರಿಲೀಫ್
ಹಳದಿ ಮಾರ್ಗ ಆರಂಭವಾದ ದಿನದಿಂದ ಕೇವಲ 3 ರೈಲುಗಳು ಮಾತ್ರ ಸಂಚಾರ ನಡೆಸುತ್ತಿದ್ದು, ಇದರಿಂದ ಪ್ರಯಾಣಿಕರು ಮಟ್ರೋಗಾಗಿ 25 ನಿಮಿಷ ಕಾಯಬೇಕಾಗುತ್ತಿತ್ತು. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಭಾರೀ ಹೆಚ್ಚಿದ್ದ ಕಾರಣ ದಟ್ಟಣೆ ಹೆಚ್ಚಿತ್ತು. ಸದ್ಯ ಇದೀಗ ಈ ಮಾರ್ಗದಲ್ಲಿ ಮತ್ತೊಂದು ಹೊಸ ರೈಲು ಸಂಚಾರ ಮಾಡುವುದರಿಂದ ಒಂದು ರೈಲಿನಿಂದ ಇನ್ನೊಂದು ರೈಲಿನ ಅಂತರದ ಓಡಾಡ 19 ನಿಮಿಷಕ್ಕೆ ಇಳಿಕೆಯಾಗಲಿದೆ.ಇದರಿಂದ ಪ್ರಯಾಣಿಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.









