
*ಬೆಂಗಳೂರು, ಸೆ.07:
“ಬೂತ್ ಮಟ್ಟದಲ್ಲಿ ನಾಯಕರಾಗಿ ಬೆಳೆದು ನಿಮ್ಮ ಸಾಮರ್ಥ್ಯ ಪ್ರದರ್ಶಿಸಿದರೆ ಮಾತ್ರ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ. ಅಲ್ಲಿ ನಿಮ್ಮ ಶಕ್ತಿ ಸಾಬೀತು ಮಾಡಿದರೆ ದೊಡ್ಡ ಮಟ್ಟದ ನಾಯಕರಾಗಿ ಬೆಳೆಯಬಹುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸಭೆ ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದವರು, ಅವರ ವಿರುದ್ಧ ಹೋರಾಟ ಮಾಡಿದ್ದಕ್ಕೆ ನನಗೆ ಸಾತನೂರು ಕ್ಷೇತ್ರದಿಂದ ಟಿಕೆಟ್ ನೀಡಿದರು. ಏಕೆಂದರೆ ನನ್ನ ಸಂಘಟನೆಯ ಸಾಮರ್ಥ್ಯ ಅಷ್ಟು ಚೆನ್ನಾಗಿತ್ತು. ಯುವ ನಾಯಕನಾಗಿ ನಾನು ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದೆ. ಈ ರೀತಿ ನಾಯಕನಾಗಿ ಬೆಳೆದೆ” ಎಂದು ಹೇಳಿದರು.
“ಚುನಾವಣೆಗೆ ಹಣ ಮುಖ್ಯವಲ್ಲ, ನಿಮ್ಮ ಸಂಘಟನಾ ಸಾಮರ್ಥ್ಯ ಮುಖ್ಯ. ರತನ್ ಟಾಟಾ ಅವರು ಒಂದು ಮಾತು ಹೇಳುತ್ತಿದ್ದರು, ‘ವೇಗವಾಗಿ ಹೋಗಬೇಕು ಎಂದರೆ ಒಬ್ಬನೇ ಹೋಗು. ದೂರ ಕ್ರಮಿಸಬೇಕು ಎಂದರೆ ಜನರೊಟ್ಟಿಗೆ ಹೆಜ್ಜೆ ಹಾಕು’ ಎಂದು. ನೀವು ನಾಯಕರುಗಳ ಹಿಂದೆ ಓಡಾಡಿದರೆ ಪ್ರಯೋಜನವಿಲ್ಲ. ನೀವೇ ನಾಯಕರಾಗಿ ಹೊರಹೊಮ್ಮಬೇಕು” ಎಂದು ಕಿವಿ ಮಾತು ಹೇಳಿದರು.
“ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ಪಕ್ಷದಲ್ಲಿ ನಾಯಕರಾಗಿ ಬೆಳೆದವರು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಇವರು ಪಕ್ಷದ ಆಸ್ತಿಯಾಗಿ, ದೇಶದ ಆಸ್ತಿಗಳಾಗಿ ಬೆಳೆಯುತ್ತಾರೆ” ಎಂದರು.

“73, 74 ನೇ ತಿದ್ದುಪಡಿಯ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದು ನೂರಾರು ನಾಯಕರು ಹುಟ್ಟಿಕೊಂಡರು. ಬೆಂಗಳೂರಿನಲ್ಲಿ ನೂತನ ಐದು ಪಾಲಿಕೆಗಳನ್ನು ರಚನೆ ಮಾಡಿರುವ ಕಾರಣಕ್ಕೆ ಸುಮಾರು 500 ಕ್ಕೂ ಹೆಚ್ಚು ಹೊಸ ನಾಯಕರು ಸಜ್ಜಾಗಲಿದ್ದಾರೆ. ನಾನು, ರಾಮಲಿಂಗಾರೆಡ್ಡಿ ಅವರು, ಬಿಜೆಪಿಯ ಸೋಮಣ್ಣ, ಸುರೇಶ್ ಕುಮಾರ್ – ಹೀಗೆ ಅನೇಕರು ಸ್ಥಳೀಯ ಸಂಸ್ಥೆಗಳ ಮೂಲಕವೇ ಬೆಳೆದವರು. ಮೊದಲ ವಿಧಾನಸಭಾ ಚುನಾವಣೆ ಎದುರಿಸಿದ ನಂತರ ಜಿಲ್ಲಾ ಪಂಚಾಯತಿ ಸದಸ್ಯನಾಗಿ ಆಯ್ಕೆಯಾದೆ. ನಂತರ ಜನರು ನನ್ನನ್ನು 8 ಬಾರಿ ಎಂಎಲ್ ಎಯಾಗಿ ಆಯ್ಕೆ ಮಾಡಿದ್ದಾರೆ” ಎಂದರು.
“ಎನ್ಎಸ್ ಯುಐ ಅಧ್ಯಕ್ಷನಾಗಿದ್ದ ಕೀರ್ತಿ ಗಣೇಶ್ ನನ್ನು ನಿಗಮ ಮಂಡಳಿ ಅಧ್ಯಕ್ಷನನ್ನಾಗಿ ಮಾಡಲಾಗಿದೆ. ಪಕ್ಷದ ಅನೇಕ ಘಟಕಗಳ ಜವಾಬ್ದಾರಿ ತೆಗೆದುಕೊಂಡವರಿಗೆ ಅತ್ಯುತ್ತಮ ಸ್ಥಾನಗಳನ್ನು ನೀಡಲಾಗಿದೆ. ಗ್ಯಾರಂಟಿ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ” ಎಂದು ಹೇಳಿದರು.

“ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ಎಲ್ಲಾ ಘಟಕಗಳು ಕೆಲಸ ಮಾಡಿದರೆ ನಾವು 2028 ರಲ್ಲಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ. ನಮ್ಮ ಸರ್ಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ನೀವು ಪಕ್ಷದ ಮುಖವಾಣಿಯಂತೆ ಕೆಲಸ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬೇಕು” ಎಂದರು.
“ನಾನು ಸಹ ಯುವ ಕಾಂಗ್ರೆಸ್ ಮೂಲಕ ಬೆಳೆದವನು. ಈ ದೇಶದ ಯುವಕರ ಶಕ್ತಿಯ ಬಗ್ಗೆ ನನಗೆ ಅರಿವಿದೆ. ಶಿಸ್ತು, ಪ್ರಾಮಾಣಿಕತೆ, ನೈತಿಕತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಬೆಳೆಯಲು ಸಾಧ್ಯ. ಶಿಸ್ತು ಬೆಳೆಸಿಕೊಳ್ಳದ ಹೊರತು ಬೆಳವಣಿಗೆ ಅಸಾಧ್ಯ ಎಂದು” ಸಲಹೆ ನೀಡಿದರು.
“ಕರ್ನಾಟಕದ ನೆಲ ಹಲವಾರು ಬದಲಾವಣೆಗಳನ್ನು ತಂದಂತಹ ಭೂಮಿ. ರಾಜೀವ್ ಗಾಂಧಿಯವರು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿ, ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಜವಾಬ್ದಾರಿ ತೆಗೆದುಕೊಂಡಿದ್ದು ಕರ್ನಾಟಕದಲ್ಲಿ, ಇಂದಿರಾಗಾಂಧಿಯವರಿಗೆ ಮರುಜನ್ಮ ನೀಡಿದ್ದು ಚಿಕ್ಕಮಗಳೂರು ಕ್ಷೇತ್ರ, ಸೋನಿಯಾಗಾಂಧಿಯವರು ಬಳ್ಳಾರಿಯಿಂದ ಗೆದ್ದು ಪಕ್ಷವನ್ನು ಮರು ಕಟ್ಟಿದರು” ಎಂದರು.

“ದೇಶಕ್ಕೆ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಪ್ರಜಾಪ್ರಭುತ್ವ ನೀಡಿದ ಹೆಗ್ಗಳಿಕೆ ನಮ್ಮ ಪಕ್ಷಕ್ಕಿದೆ. ಬಿಜೆಪಿ, ಜೆಡಿಎಸ್ ನವರು ಇದರ ಬಗ್ಗೆ ಎಂದಾದರೂ ಮಾತನಾಡಿದ್ದಾರೆಯೇ? ಕಾಂಗ್ರೆಸ್ ಪಕ್ಷ ಈ ದೇಶವನ್ನು ತಳಮಟ್ಟದಿಂದ ಕಟ್ಟಿದೆ. ಕಾಂಗ್ರೆಸ್ ಪಕ್ಷ ಈ ದೇಶದ ಶಕ್ತಿಯಾಗಿದೆ. ದೇಶದ ಇತಿಹಾಸ ಕಾಂಗ್ರೆಸ್ ಪಕ್ಷದ ಇತಿಹಾಸ” ಎಂದರು.
“ನಾವು ತಂದಂತಹ ಒಂದೇ ಒಂದು ಜನಪರ ಕಾರ್ಯಕ್ರಮಗಳನ್ನು ನಿಲ್ಲಿಸಲು ಬಿಜೆಪಿ- ದಳಕ್ಕೆ ಸಾಧ್ಯವಾಗಿಲ್ಲ. ನರೇಗಾ, ಆಹಾರ ಭದ್ರತಾ ಕಾಯ್ದೆ, ಆರ್ ಟಿಐ ಸೇರಿದಂತೆ ನೂರಾರು ಕೆಲಸಗಳನ್ನು ಕಾಂಗ್ರೆಸ್ ದೇಶದ ಹಿತಕ್ಕಾಗಿ ಮಾಡಿದೆ” ಎಂದರು.

“ಮತದಾನ ನಮ್ಮ ಹಕ್ಕು ಎಂಬುದನ್ನು ನಾವು ಮರೆಯಬಾರದು. 21 ವರ್ಷದಿಂದ 18 ವರ್ಷಕ್ಕೆ ಮತದಾನದ ಹಕ್ಕನ್ನು ಕಡಿಮೆ ಮಾಡಿದ್ದು ರಾಜೀವ್ ಗಾಂಧಿಯವರು ದೇಶದಲ್ಲಿ ಮಾಡಿದ ಕ್ರಾಂತಿಕಾರಕ ಬದಲಾವಣೆ. ಈ ಕಾನೂನನ್ನು ಸಂಸತ್ತಿನಲ್ಲಿ ಮಂಡನೆ ಮಾಡುವಾಗ ಮಾತನಾಡಿದ್ದ ರಾಜೀವ್ ಗಾಂಧಿಯವರು, “10 ನೇ ತರಗತಿ ಮುಗಿದ ನಂತರ ದೇಶ ಕಾಯುವ ಸೈನಿಕನಾಗಿ ಗಡಿಗೆ ಕಳಿಸುತ್ತಾರೆ. ಇವರಿಗೆ ಮತದಾನ ಮಾಡುವ ಹಕ್ಕಿಲ್ಲವೇ? ಅದಕ್ಕೆ ಈ ಮಹತ್ವದ ತೀರ್ಮಾನ ಮಾಡಲಾಗಿದೆ. ಪ್ರಜಾಪ್ರಭುತ್ವ ಉಳಿಸುವ ದೊಡ್ಡ ಕ್ರಾಂತಿಕಾರಿ ಕೆಲಸ ಇದಾಗಿದೆ. ಯುವಕರಿಗೆ ಶಾಸಕರು, ಸಂಸದರನ್ನು, ಪಾಲಿಕೆ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶವಿಲ್ಲವಾಗಿದೆ. ಈ ತಿದ್ದುಪಡಿ ಎಲ್ಲರಿಗೂ ಮತದಾನದ ಹಕ್ಕು ನೀಡುತ್ತದೆ ಎಂದಿದ್ದರು” ಎಂದರು.

“ಬಿಜೆಪಿ ಕಳೆದ ವಿಧಾನಸಭಾ ಚುನಾವಣೆ ವೇಳೆ ಚಿಲುಮೆ ಸಂಸ್ಥೆ ಮೂಲಕ 7 ಸಾವಿರ ಖಾಸಗಿ ವ್ಯಕ್ತಿಗಳಿಗೆ ಬಿಎಲ್ ಓ ಸ್ಥಾನ ನೀಡಿ ಅಕ್ರಮ ಎಸಗಿತ್ತು. ನಾನು, ಸುರ್ಜೇವಾಲ ಅವರು ಇದರ ಬಗ್ಗೆ ಹೋರಾಟ ಮಾಡಿ ಅಕ್ರಮವನ್ನು ನಿಲ್ಲಿಸಿದೆವು. ರಾಹುಲ್ ಗಾಂಧಿಯವರು ಸಹ ಇದರ ಬಗ್ಗೆ ದನಿ ಎತ್ತಿ ನಮ್ಮ ಪರವಾಗಿ ಮಾತನಾಡಿದ್ದರು” ಎಂದು ಹೇಳಿದರು.

