ಕೃಷಿ ಮೇಳ ಕುರಿತ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್

ಧಾರವಾಡ, ಆ.30: ಕೃಷಿ ಮೇಳವು ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳು, ನೂತನ ಬೆಳೆ ಪದ್ಧತಿಗಳು ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ಮಾಹಿತಿ ನೀಡುವ ಪ್ರಮುಖ ವೇದಿಕೆಯಾಗಿದೆ. ಕೃಷಿ ಮೇಳವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಕಾರ್ಮಿಕ ಇಲಾಖೆಯ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾ ಭವನದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕೃಷಿ ಮೇಳದ ಕುರಿತು ಸಭೆ ಜರುಗಿಸಿ ಅವರು ಮಾತನಾಡಿದರು.
ಕೃಷಿ ಮೇಳಕ್ಕೆ ಆಗಮಿಸುವ ರೈತರು ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಮೇಳವನ್ನು ಅರ್ಥಪೂರ್ಣವಾಗಿ ಆಯೋಜಿಸಬೇಕು. ಮೇಳಕ್ಕೆ ಆಗಮಿಸುವ ರೈತರಿಗೆ, ಪ್ರಗತಿಪರ ರೈತರಿಗೆ ವಿಶೇಷ ಉಪನ್ಯಾಸಗಳ ಲಾಭ ಸಿಗಬೇಕು. ಮೇಳಕ್ಕೆ ಆಗಮಿಸುವ ಲಕ್ಷಾಂತರ ರೈತರಿಗೆ ಕೃಷಿ ಸುಧಾರಣೆ, ಅಭಿವೃದ್ಧಿ, ಉತ್ತಮ ಕೃಷಿ ಅಭ್ಯಾಸಗಳು ಗೊತ್ತಾಗಬೇಕು. ಅದರ ಲಾಭ ಎಲ್ಲರಿಗೂ ಸಿಗಬೇಕು ಎಂದು ಹೇಳಿದರು.
ಕೃಷಿ ಮೇಳವು ವಾಣಿಜ್ಯ ಚಟುವಟಿಕೆಗಳಿಗೆ, ವ್ಯಾಪರಗಳಿಗೆ ಸೀಮಿತವಾಗಬಾರದು. ಜನಜಂಗುಳಿ ಸೇರುವ ಜಾತ್ರೆಯಾಗದೇ ನಿಜವಾಗಿಯೂ ರೈತರ ಜಾತ್ರೆಯಾಗಿ ಕೃಷಿ ಮೇಳವು ಯಶಸ್ವಿಯಾಗುವಂತೆ ಮಾಡಬೇಕು. ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಂದಾಜು 1 ಲಕ್ಷ ಹೇಕ್ಟೆರ್ ಬೆಳೆ ನಾಶವಾದ ವರದಿಯಾಗಿದೆ. ಈ ಕುರಿತು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು, ತಜ್ಞರು ಮತ್ತು ಕೃಷಿ ವಿದ್ಯಾರ್ಥಿಗಳು ಕ್ಷೇತ್ರ ಭೇಟಿ ಮೂಲಕ ರೈತರ ಜಮೀನುಗಳಿಗೆ ತೆರಳಿ, ಕಾರಣ ತಿಳಿದು ಅಧ್ಯಯನ ಮಾಡಬೇಕು. ಕೃಷಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವಲ್ಲಿ ವಿಶ್ವವಿದ್ಯಾಲಯ ಮುಖ್ಯ ಪಾತ್ರ ವಹಿಸಬೇಕೆಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಮೇಳದ ವಿವಿಧ ಮಳಿಗೆಗಳ ಆಯೋಜನೆ, ಸಾರಿಗೆ ವ್ಯವಸ್ಥೆ, ಭದ್ರತೆ, ಆರೋಗ್ಯ ಸೇವೆಗಳು ಮತ್ತು ಪ್ರಚಾರ ಕಾರ್ಯಗಳ ಬಗ್ಗೆ ವಿವರವಾಗಿ ಚರ್ಚಿಸಿದರು.
ಈ ವರ್ಷದ ಕೃಷಿ ಮೇಳದ ವಿಭಿನ್ನ ಕಾರ್ಯಕ್ರಮಗಳನ್ನು, ರೈತರ ಉಪಯೋಗಿ ಉಪನ್ಯಾಸಗಳನ್ನು ಆಯೋಜಿಸಬೇಕು. ಮುಖ್ಯವಾಗಿ ಜಿಲ್ಲೆಯಲ್ಲಿ ಬೆಳೆ ವಿಮೆ ಕುರಿತು ವೈಜ್ಞಾನಿಕ ಅಧ್ಯಯನವಾಗಬೇಕು. ಮತ್ತು ಮಾವು ವಿಮೆಯು ಎಲ್ಲ ರೈತರಿಗೆ ಸಕಾಲಕ್ಕೆ ಲಭಿಸುತ್ತಿಲ್ಲ. ವಿಮೆ ಪರಿಹಾರದ ಹಣ ವಿಮೆ ತುಂಬಿದ ಒಬ್ಬ ರೈತನಿಗೆ ದೊರೆತರೆ ಅದೇ ಪಕ್ಕದ ಗ್ರಾಮದ ರೈತರಿಗೆ ಮಾವು ವಿಮೆ ಸಿಗುತ್ತಿಲ್ಲ ಎಂಬ ದೂರಿದೆ. ಈ ಕುರಿತು ಸಮರ್ಪಕ ಅಧ್ಯಯನವಾಗಬೇಕು ಎಂದರು.

ಉತ್ತರ ಕರ್ನಾಟಕ ವಿಶೇಷವಾಗಿ ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟ, ಗದಗ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ ಎಂಬ ವರದಿ ಇದೆ. ಸರ್ಕಾರ ಮತ್ತು ಜಿಲ್ಲಾಡಳಿತಗಳು ವಿವಿಧ ಇಲಾಖೆಗಳ ಮೂಲಕ ರೈತರಿಗೆ ಅಗತ್ಯ ತಿಳುವಳಿಕೆ, ಸಹಾಯ, ಪರಿಹಾರಗಳನ್ನು ನೀಡಲಾಗುತ್ತಿದೆ. ಆದರೂ ಯಾವ ಕಾರಣಕ್ಕಾಗಿ ಮತ್ತು ಸಾಮಾಜಿಕ, ಆರ್ಥಿಕ, ಇತರ ಕಾರಣಗಳ ಕುರಿತು ವೈಜ್ಞಾನಿಕ ಅಧ್ಯಯನವಾಗಬೇಕು. ಅನೇಕ ರೈತರು ಜಮೀನುಗಳಲ್ಲಿ ಬಿತ್ತಿದ ಬೀಜಗಳು ಮೊಳಕೆ ಒಡೆಯುತ್ತಿಲ್ಲ, ಇದಕ್ಕೆ ಪರಿಹಾರ ನೀಡುವಂತೆ ಕೋರುತ್ತಾರೆ. ಇಂತಹ ಸಂದರ್ಭಗಳಲ್ಲಿ ಸರ್ಕಾರದ ನೀತಿ ಯಾವ ರೀತಿ ಇರಬೇಕೆಂಬುವುದರ ಬಗ್ಗೆ ಹಿರಿಯ ವಿಜ್ಞಾನಿಗಳಿಂದ ಅಧ್ಯಯನವಾಗಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ.ಎಲ್. ಪಾಟೀಲ ಅವರು ಮಾತನಾಡಿ, ಕೃಷಿ ಮೇಳವನ್ನು ಸೆಪ್ಟೆಂಬರ 13 ರಿಂದ ಸೆಪ್ಟೆಂಬರ 16 ರವರೆಗೆ ಆಯೋಜಿಸಲಾಗಿದೆ. ಈ ವರ್ಷದ ಕೃಷಿ ಮೇಳವು ಆಹಾರದ ಪೆÇೀಷಕಾಂಶಗಳು ಮತ್ತು ಮಣ್ಣಿನ ಬಗ್ಗೆ ಹಾಗೂ ತಳಿಗಳ ಬಗ್ಗೆ ಕೃಷಿ ಸಂಸ್ಕರಣೆ ಎಂಬ ವಿಷಯದ ಮೇಲೆ ಕೇಂದ್ರೀಕರಿಸಲಿದೆ ಎಂದು ತಿಳಿಸಿದರು.
ನವಲಗುಂದ ಶಾಸಕರಾದ ಎನ್.ಎಚ್. ಕೋನರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ.ರುದ್ರೇಶ ಘಾಳಿ, ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ ಅವರು ವೇದಿಕೆಯಲ್ಲಿದ್ದರು.

ಸಭೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.












