“ನನಗೆ ಕಮ್ಯುನಿಸ್ಟ್ ಸಿದ್ಧಾಂತದ ಬಗ್ಗೆ ಮಾತನಾಡುವ ಶಕ್ತಿ ಇದೆ. ವಂದೇ ಮಾತರಂ ಬಗ್ಗೆಯೂ ಮಾತನಾಡಬಲ್ಲೇ, ಯಧಾ ಯಧಾಯ ಧರ್ಮಸ್ಯ ಶ್ಲೋಕದ ಬಗ್ಗೆಯೂ ಮಾತನಾಡಬಲ್ಲೆ. ಭಗವದ್ಗೀತೆ, ಚಾಣಕ್ಯ ನೀತಿ ಬಗ್ಗೆ ಮಾತನಾಡಬಲ್ಲೇ. ಸಮಯ ಬಂದಾಗ ಈ ಬಗ್ಗೆ ಚರ್ಚೆ ಮಾಡುತ್ತೇನೆ. ನಾನು ಯಾರಿಗೂ ನೋಯಿಸಲು ಬಯಸುವುದಿಲ್ಲ. ನನ್ನ ಧರ್ಮವನ್ನು ನಾನು ಬಿಡಲು ತಯಾರಿಲ್ಲ.

ನಾನು ಹುಟ್ಟಿದ್ದು ಹಿಂದೂವಾಗಿ. ಜೊತೆಗೆ ಕ್ರೈಸ್ತ, ಇಸ್ಲಾಂ, ಜೈನ ಸಿದ್ಧಾಂತದ ಮೇಲೂ ನಂಬಿಕೆ ಹೊಂದಿರುವವನು. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು ಎಂದು ನಂಬಿರುವವನು ನಾನು. ಸೂರ್ಯ, ಚಂದ್ರ, ಬೆಳಕು, ನೀರಿಗೆ ಜಾತಿ, ಧರ್ಮದ ಬೇಧವಿಲ್ಲ. ಪ್ರವಾದಿ ಮೊಹಮದ್ ಪೈಗಂಬರ್ ಅವರ ದಿವ್ಯವಾಣಿ ಬಗ್ಗೆ, ಬುದ್ಧ-ಬಸವಣ್ಣನ ತತ್ವದ ಬಗ್ಗೆ ಅರಿತಿರುವವನು ನಾನು” ಎಂದರು.
“ನನ್ನ ಈ ಹೇಳಿಕೆಯಲ್ಲಿ ರಾಜಕಾರಣ ಮಾಡಬಹುದು, ಕೆಸರೆರಚಾಟ ಮಾಡಬಹುದು ಎಂದು ಭಾವಿಸಿದ್ದರೆ ಅದು ಸುಳ್ಳು. ಓಹ್ ಗಾಡ್ ಗಿವ್ ಮಿ ಸ್ಟ್ರೇಂತ್ ಟು ಬಿ ಪ್ರೊಟೆಕ್ಟೆಡ್ ಫ್ರಂ ಮೈ ಫ್ರೆಂಡ್ಸ್. ಸೋ ದಟ್ ಐ ಕ್ಯಾನ್ ಟೇಕ್ ಕೇರ್ ಮೈ ಎನಿಮೀಸ್ (ಓ ದೇವರೇ, ನನ್ನ ಸ್ನೇಹಿತರಿಂದ ನನ್ನನ್ನು ಕಾಪಾಡಿಕೊಳ್ಳುವ ಶಕ್ತಿಯನ್ನು ನನಗೆ ಕೊಡು. ಉಳಿದಂತೆ ನನ್ನ ಶತ್ರುವನ್ನು ನಾನು ನೋಡಿಕೊಳ್ಳುತ್ತೇನೆ) ಎಂಬ ಪ್ಲೇಟೋ ಅವರ ಮಾತಿನ ಮೇಲೆ ನಂಬಿಕೆ ಹೊಂದಿರುವವನು” ಎಂದು ಹೇಳಿದರು.

ಮಾಧ್ಯಮಗಳ ಮುಂದೆಯಲ್ಲ, ಪಕ್ಷದ ಕಚೇರಿಯಲ್ಲಿ ಸಭೆ ಕರೆಯಿರಿ, ಉತ್ತರ ನೀಡುತ್ತೇನೆ
“ನಾನು ಬಿಹಾರಕ್ಕೆ ಹೋದಾಗ ಅಲ್ಲಿ ಕೆಲವರು ನನ್ನನ್ನು ಕೇಳಿದರು. ನನ್ನ ಪಕ್ಷದ ಕೆಲವು ಹಿರಿಯ ನಾಯಕರು, ಸ್ನೇಹಿತರು ನನಗೆ ಬಹಳ ಸಲಹೆ ನೀಡಿರುವುದಕ್ಕೆ ಸಂತೋಷವಿದೆ. ನಾನು ಬೇರೆಯವರಿಗಿಂತ ದೊಡ್ಡವನಲ್ಲ. ಚಿಕ್ಕವನಾಗಿಯೇ ಇದ್ದೇನೆ. ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವುದಲ್ಲ, ಕಾಂಗ್ರೆಸ್ ಪಕ್ಷದ ಕಚೇರಿಗೆ ಬನ್ನಿ ಮಾತನಾಡೋಣ. ಯಾವ ರೀತಿ ಉತ್ತರ ಕೊಡಬೇಕೋ ಕೊಡುತ್ತೇನೆ. ಮಾಧ್ಯಮಗಳ ಮುಂದೆ ಮಾತನಾಡಿದರೆ ನಿಮಗೆ ತೃಪ್ತಿ ಸಿಗಬಹುದು. ಬೇರೆ ಪ್ರಯೋಜನವಿಲ್ಲ. ನಿಮ್ಮ ಉತ್ತಮ ಸಲಹೆಗಳನ್ನು ನಾನು ಸ್ವೀಕರಿಸುತ್ತೇನೆ. ನಾನು ನನ್ನ ಬದುಕನ್ನು ಬೇರೆಯವರಿಗೆ ಶಕ್ತಿ ತುಂಬಲು ಬಳಸುತ್ತೇನೆ. ಎಲ್ಲರ ಕಷ್ಟ ಕಾಲದಲ್ಲಿ ನಾನು ಅವರ ಜೊತೆಗೆ ನಿಂತಿದ್ದೆ. ನಾನು ಯಾವ ಹುದ್ದೆಯಲ್ಲಿದ್ದೇನೆ, ಯಾವ ಹುದ್ದೆಯಲ್ಲಿ ಇಲ್ಲ, ಯಾವ ಹುದ್ದೆಗೆ ಹೋಗುತ್ತೇನೆ, ಯಾವ ಹುದ್ದೆಗೆ ಹೋಗುವುದಿಲ್ಲ ಎಂಬುದು ಮುಖ್ಯವಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ” ಎಂದು ಸ್ಪಷ್ಟಪಡಿಸಿದರು.

“ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಮಾಧ್ಯಮಗಳು ನನ್ನನ್ನು ಬೆಳೆಸಿದ್ದು, ನೀವು ನನ್ನನ್ನು ಟೀಕೆ ಮಾಡಿದಾಗಲೂ ನಾನು ಅವುಗಳನ್ನು ಸ್ವಾಗತಿಸಿದ್ದೇನೆ. ನೀವು ಮಾರ್ಗದರ್ಶನ ನೀಡಿ ನನ್ನನ್ನು ತಿದ್ದಿದ್ದೀರಿ. ಬೇರೆಯವರು ಹೇಳಿದ್ದನ್ನೂ ನೀವು ಪ್ರಸಾರ ಮಾಡುತ್ತೀರಿ. ಆದರೂ ನಾನು ಮಾಧ್ಯಮಗಳನ್ನು ನನ್ನ ಹಿತೈಷಿಗಳು, ಮಾರ್ಗದರ್ಶಕರು ಎಂದು ಭಾವಿಸಿದ್ದೇನೆ” ಎಂದು ತಿಳಿಸಿದರು.

