• Home
  • About Us
  • ಕರ್ನಾಟಕ
Wednesday, January 28, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಪ್ರಜ್ವಲ” ಪಾಳೆಗಾರಿಕೆಯ ಬೇರುಗಳು ಮತ್ತು ಉದಾರವಾದಿ ಕುರುಡುಗಳು

ಪ್ರತಿಧ್ವನಿ by ಪ್ರತಿಧ್ವನಿ
August 2, 2025
in ಕರ್ನಾಟಕ, ರಾಜಕೀಯ, ಶೋಧ
0
ಪ್ರಜ್ವಲ” ಪಾಳೆಗಾರಿಕೆಯ ಬೇರುಗಳು ಮತ್ತು ಉದಾರವಾದಿ ಕುರುಡುಗಳು
Share on WhatsAppShare on FacebookShare on Telegram

(ಪಾಳೆಗಾರಿಕೆಯ ಅಸಹ್ಯ ಅತಿರೇಕಕ್ಕೆ ಪ್ರಥಮ ಹಂತದಲ್ಲಿ ಶಿಕ್ಷೆಯಾಗಿದೆ. ಆದರೆ ಪ್ರಜಾತಂತ್ರದಲ್ಲೂ ಮುಂದುವರೆದಿರುವ ಕುಟುಂಬ ಪಾಳೆಗಾರಿಕೆ?… ಹಳೆಯ ಲೇಖನ ಹಂಚಿಕೊಳ್ಳಬೇಕೆನಿಸಿತು….)

ADVERTISEMENT

ಪ್ರಜ್ವಲ್ ರೇವಣ್ಣ ನಡೆಸಿರುವ ಅಮಾನುಷ, ಅನಾಗರಿಕ, ಲೈಂಗಿಕ ಹಿಂಸಾಚಾರ ಮತ್ತು ಅತ್ಯಾಚಾರಗಳು ಇಡೀ ದೇಶವನ್ನೇ ದಿಗ್ಬ್ರಾಂತಗೊಳಿಸಿದೆ. ಈಗ ಅದನ್ನು ದಕ್ಕಿಸಿಕೊಳ್ಳಲು ದೇವೇಗೌಡರ ಕುಟುಂಬ ಮಾಡುತ್ತಿರುವ ಪ್ರಯತ್ನ, ಎಗ್ಗುಸಿಗ್ಗಿಲ್ಲದ ಬಿಜೆಪಿ ಏಕಕಾಲದಲ್ಲಿ ದೇವೇಗೌಡ ಕುಟುಂಬಕ್ಕೆ ಬೆಂಬಲವನ್ನು ಕೊಡುತ್ತಾ ಮತ್ತು ಜೆಡಿಎಸ್ ಎದುರಿಸುತ್ತಿರುವ ಈ ಬಿಕ್ಕಟ್ಟಿನಿಂದ ಲಾಭ ಪಡೆಯುವ ಶಡ್ಯಂತ್ರಗಳನ್ನು ಹೆಣೆಯುತ್ತಿದೆ. ಕಾಂಗ್ರೆಸ್ ಪಕ್ಷವೂ ಈ ಪ್ರಕರಣದಲ್ಲಿ ಜೆಡಿಎಸ್ ಅನ್ನು ಅಮಾನ್ಯಗೊಳಿಸಿ ತನ್ನ ನೆಲೆಯನ್ನು ವಿಸ್ತರಿಸಿಕೊಳುವ ಎಲ್ಲಾ ಅವಕಾಶಗಳನ್ನು ಕಾಣುತ್ತಿದೆ ಮತ್ತು ತನ್ನ ಸರ್ಕಾರದ ಮೂಲಕ ಆ ನಿಟ್ಟನಲ್ಲಿ ಕ್ರಮ ತೆಗೆದುಕೊಳ್ಳುತ್ತಿದೆ .

ಇಂಥಾ ಕೊಳಕು ರಾಜಕೀಯ ಸಂದರ್ಭದಲ್ಲಿ ಅಮಾಯಕ ಮತ್ತು ಅಸಹಾಯಕ ಹೆಣ್ಣುಮಕ್ಕಳ ಮಾನ-ಪ್ರಾಣಗಳು ರಾಜಕೀಯದ ದಾಳವಾಗದಂತೆ ನೋಡಿಕೊಳ್ಳಲು ಮತ್ತು ಪ್ರಜ್ವಲ ರೇವಣ್ಣ ಆದಿಯಾಗಿ ಸಂಬಂಧ ಪಟ್ಟ ಎಲ್ಲಾ ಅಪರಾಧಿಗಳಿಗೂ ಶಿಕ್ಷೆಯಾಗುವಂತೆ ಒತ್ತಡ ತರಲು ನಾಡಿನ ಎಲ್ಲಾ ಪ್ರಗತಿಪರ ಮತ್ತು ಆರೋಗ್ಯಕರ ಮನಸ್ಸುಗಳೂ ಧ್ವನಿ ಎತ್ತುತ್ತಿರುವುದು ಒಂದು ಸಮಾಧಾನಕರ ಸಂಗತಿ.

Prajwal Revanna Convicted: ಅತ್ಯಾಚಾರ ಪ್ರಕರಣ: ಪ್ರಜ್ವಲ್ ಗೆ ಜೀವಾವಧಿ ಕಾರಾಗೃಹ ವಾಸದ ಶಿಕ್ಷೆ.!#prajwalrevanna

ಹಾಸನದಲ್ಲಿ ಮೇ 30ರಂದು ಬೃಹತ್ ಆಗ್ರಹ ಸಮ್ಮೇಳನವನ್ನೂ ಒಳಗೊಡಂತೆ ಸರ್ಕಾರದ ಮೇಲೆ ಮತ್ತು ಪಕ್ಶಗಳ ಮಲೆ ಒತ್ತಡ ತರಲು ಹಲವಾರು ಪ್ರತಿಭಟನೆಗಳು ರೂಪುಗೊಳ್ಳುತ್ತಿರುವುದೊ ಕೂಡಾ ಆಶಾದಾಯಕ ಬೆಳವಣಿಗೆಯಾಗಿದೆ.

ಆದರೆ ಇದೇ ಸಂದರ್ಭದಲ್ಲಿ ಕೆಲವು ಅಹಿತಕರವಾದ ಮತ್ತು ಕೆಲವು ಆಳವಾದ ಪ್ರಶ್ನೆಗಳನ್ನು ನಾಗರಿಕ ಸಮಾಜ ಕೇಳಿಕೊಳ್ಳಬೇಕಿದೆ.

1.ಪ್ರಜ್ವಲ ಪ್ರಕರಣದಲ್ಲಿನ ಅಮಾನುಷ ವಿಕೃತಿ ಮತ್ತು ಪ್ರಮಾಣಗಳು ಎಲ್ಲರಿಗೂ ಶಾಕ್ ಮಾಡಿವೆ. ಹೀಗಾಗಿಯೇ ಪ್ರಾರಂಭದಲ್ಲಿ ದೇವೇಗೌಡರ ಮತ್ತು ಕುಮಾರಸ್ವಾಮಿಯವರೂ ರೇವಣ್ಣ ಕುಟುಂಬದಿಂದ ಅಂತರ ಕಾಪಾಡಿಕೊಳ್ಳುವ ಮಾತಾಡಿದ್ದರು. ಈ ಪ್ರಕರಣದ ವಿಕೃತಿ ಮತ್ತು ಪ್ರಮಾಣಗಳು ಅತಿರೇಕವೇ ಆಗಿದ್ದರೂ ಅದು ಸಾಧ್ಯವಾಗಿದ್ದು ಅದರ ಆಳದಲ್ಲಿರುವ ಶಿಕ್ಷಾ ಭೀತಿಯಲ್ಲದ ಅಧಿಕಾರ ಮದ. ಅದನ್ನು ಸಾಧ್ಯಗೊಳಿಸಿರುವ ಬಲಿಷ್ಟ ಜಾತಿ ಬಲ. ಅದರ ಮೂಲಕ ಪಡೆದಿರುವ ಅಧಿಕಾರ ಮತ್ತು ಸಂಪತ್ತು..ಇತ್ಯಾದಿಗಳು.

ಪ್ರಬಲ ಜಾತಿಗಳ ಜಾತಿ ಪ್ರತಿಷ್ಠೆಗಳು ಜಾತಿ ಆಧಾರಿತ ಸಾಮಾಜಿಕ ಅಧಿಕಾರದ ಅಭಿವ್ಯಕ್ತಿಯಾಗಿವೆ. ಈ ಪಾಳೇಗಾರಿ ಜಾತಿ ಪ್ರತಿಷ್ಠೆಗೆ ಮುಕ್ಕು ಬರುತ್ತದೆ ಎಂದಾದರೆ ಮಾನವೀಯ ಮೌಲ್ಯಗಳು, ಕಾನೂನುಗಳು ಸಂವಿಧಾನ ಎಲ್ಲವೂ ಹಿನ್ನೆಲೆಗೆ ಸರಿಯುತ್ತವೆ. ಪ್ರಜ್ವಲನ ವಿಕೃತಿಯ ಬಗ್ಗೆ ಅಸಮಾಧಾನವಿದ್ದರೂ, ಪ್ರಜ್ವಲ ಜಾತಿ ಪ್ರತಿಷ್ಠೆಯ ಪ್ರತೀಕವಾದರೆ ಶತಾಯ ಗತಾಯ ಆತನನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತದೆ.

ಕುಮಾರಸ್ವಾಮಿಯವರು ಮಾಡುತ್ತಿರುವ ಕಸರತ್ತು, ದೇವೇಗೌಡರ ಮೌನ, “ಅಪರಾಧ ಸಾಬೀತಾದರೆ ಶಿಕ್ಷೆಗೆ ನಮ್ಮ ತಕರಾರಿಲ್ಲ” ಎಂಬ ಪಾಳೇಗಾರಿ ಎಚ್ಚರಿಕೆಗಳು ಇವೆಲ್ಲಾ ಪ್ರಜ್ವಲನ ಸಾಮಾಜಿಕ ವಿಕೃತಿಯನ್ನು ಜಾತಿ ಮತ್ತು ಪಕ್ಷದ ಪ್ರತಿಷ್ಟೆ ಯ ಪ್ರಶ್ನೆಯನ್ನಾಗಿಸುವ ಪ್ರತಿತಂತ್ರದ ಭಾಗವೇ ಆಗಿದೆ. ಒಮ್ಮೆ ಅದು ಜಾತಿ ಪ್ರತಿಷ್ಠೆಯ ಪ್ರಶ್ನೆಯಾದರೆ ಪಕ್ಷಾತೀತ ಜಾತಿ ಬೆಂಬಲವೂ ಸಿಗುತ್ತದಲ್ಲವೇ?

ಹೀಗಾಗಿ ಏನು ಮಾಡಿದರೂ ದಕ್ಕಿಸಿಕೊಳ್ಳಬಹುದು ಎಂಬ ದರ್ಪದ ಮೂಲವಿರುವುದು ಈ ಸಾಮಾಜಿಕ-ರಾಜಕೀಯ ವಿದ್ಯಮಾನದಲ್ಲಿ. ಪ್ರಜ್ವಲನ ಅತಿರೇಕ ಮತ್ತ ವಿಕೃತಿಯ ಪ್ರಮಾಣಗಳು ಈ ವಿದ್ಯಮಾನದ ಪ್ರತಿಫಲ.

ಆದರೆ ಸಮಾಜ ಪ್ರಜ್ವಲನ ಅತಿರೇಕವನ್ನ ಅಸಹ್ಯಸಿಕೊಳ್ಳುವ ರೀತಿ, ಪ್ರಜಾತಂತ್ರದ ಮುಸುಕಿನಲ್ಲಿರುವ ಈ ಪಾಳೆಗಾರಿಕೆ ರಾಜಕೀಯ ಮತ್ತು ಆರ್ಥಿಕತೆಗಳನ್ನು ವಿರೋಧಿಸುವುದಿಲ್ಲ? ಪ್ರಜಾತಂತ್ರದ ಮುಸುಕಿನಲ್ಲಿ ಬೇರುಬಿಟ್ಟಿರುವ ಈ ಉಳಿಗಮಾನ್ಯ ಪಾಳೆಗಾರಿಕೆ ನಾಶವಾಗದೆ ಅದರ ಅತಿರೇಕದ ವಿದ್ಯಮಾನಗಳಾಗಿರುವ ಪ್ರಜ್ವಲನ ವಿಕೃತಿಗಳಿಗೆ ಕಡಿವಾಣ ಹಾಕಬಹುದೇ?

2.ಅಷ್ಟೆ ಮುಖ್ಯವಾದ ಪ್ರಶ್ನೆ ಈ ಊಳಿಗಮಾನ್ಯ ದರ್ಪ, ಪುರಷಾಹಂಕಾರ, ಅಧಿಪತ್ಯಗಳು ಕೇವಲ ಜೆಡಎಸ್ ಗೆ ಮಾತ್ರ ಸೀಮಿತವೇ? ಪ್ರಜ್ವಲನಷ್ಟು ಪ್ರಮಾಣದಲ್ಲ ಮತ್ತು ವಿಕೃತಿಯಲ್ಲಿ ಅಲ್ಲದಿದ್ದರೂ ಅದರ ಪೂರ್ವಭಾವಿ ಹಂತಗಳು ವಿಶೇಶವಾಗಿ ಮಹಿಳಯರ ಬಗೆಗನ ಧೋರಣೆ ಮತ್ತು ಅಧಿಕಾರ ದುರ್ಬಳಕೆಗಳು ಎಲ್ಲಾ ಪಕ್ಷಗಳಲ್ಲೂ ಇವೆಯಲ್ಲವೇ? ಆ ಧೋರಣೇಯಿಂದಾಗಿಯೇ ಪ್ರಜ್ವಲನನ್ನು ಉಳಿಸಿಕೊಳ್ಳಲು ಪಕ್ಷಾತೀತ ಪ್ರಯತ್ನಗಳು ನಡೆಯುತ್ತಿಲ್ಲವೇ?

3.ಜೆಡಿಎಸ್ ಈಗ ಬಿಜೆಪಿಯ ಜೊತೆ ಸಕ್ಯದಲ್ಲಿರುವುದೂ ಕೂಡಾ ಪ್ರಗತಿಪರ ಸಮುದಾಯಕ್ಕೆ ಯಾವುದೇ ಮುಲಾಜಿಲ್ಲದೆ ಪ್ರಜ್ವಲನ ಪ್ರಕರಣವನ್ನು ಎದುರಿಸಲು ಸುಲಭವಾಗಿದೆ.

ಆದರೆ ಜೆಡಿಎಸ್ ಪ್ರಜ್ವಲನ ಈ ಕುಕೃತ್ಯಗಳಿಗೆ ಕನಿಷ್ಟ ಹತ್ತು ವರ್ಷಗಳ ಇತಿಹಾಸವಿದೆ. ಅದು ದೇವೇಗೌಡರ ಸಕಲ ಕುಟುಂಬಗಣಕ್ಕೂ ತಿಳಿದಿತ್ತು. ಕಾಂಗ್ರೆಸ್ ಮತ್ತು ಬಿಜೆಪಿಗೂ ತಿಳಿದಿತ್ತು. ಆದರೂ ಅದು 2019 ರಲ್ಲಿ ಪ್ರಜ್ವಲನನ್ನು ಹಾಸನದ ಕಾಂಗ್ರೆಸ್- ಜೆಡಿಎಸ್ ಜಂಟಿ ಅಭ್ಯರ್ಥಿ ಮಾಡಲು ಅಡ್ಡಿ ಮಾಡಲಿಲ್ಲ. 2024 ರಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಮಾಡಲು ಅಡ್ಡಿಯಾಗಲಿಲ್ಲ. ಈಗಲೂ ಜೆಡಿಎಸ್ ಕಾಂಗ್ರೆಸ್ಸಿನ ಸಖ್ಯದಲ್ಲಿದ್ದಿದ್ದರೆ ಇದು ಇಷ್ಟು ಬಹಿರಂಗವಾಗುತ್ತಿತ್ತೇ? ಮತ್ತು ಪ್ರಗತಿಪರ ಸಮುದಾಯವಾಗಿ ನಾವು ಇಷ್ಟೆ ತೀವ್ರ ಬಹಿರಂಗ ಆಕ್ರೋಶದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದೆವೇ ?

  1. ಜೆಡಿಎಸ್ ಹೆಸರಿನಲ್ಲೇ ಸೆಕ್ಯುಲಾರ್ ಎಂಬ ಹೆಸರಿರುವುದರಿಂದ ಜೆಡಿಎಸ್ ಪಕ್ಷವನ್ನು ಬಹಳ ಕಾಲ ಎಡ ಮತ್ತು ಜಾತ್ಯತೀತ ಐಕ್ಯರಂಗಗಳಲ್ಲಿ ಸೆಕ್ಯುಲಾರ್ ಕೋಟಾದಲ್ಲಿ ಪ್ರಮುಖ ಪಕ್ಷವಾಗಿ ಈ ದೇಶದ ಫ್ಯಾಸಿಸ್ಟ್ ವಿರೋಧಿ ರಾಜಕಾರಣ ಹಾಗೂ ಉದಾರವಾದಿ ಪಂಡಿತಗಣ ಪರಿಗಣಿಸುತ್ತಾ ಬಂದಿತ್ತು.

ಆದರೆ ಊಳಿಗಮಾನ್ಯ ದರ್ಪ, ಪುರುಷಾಧಿಪತ್ಯ, ಬಲಿಷ್ಟ ಜಾತಿ ಕೊಡುವ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಅಧಿಕಾರ ಇವುಗಳನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಕೂಡಾ ಸೆಕ್ಯುಲಾರ್ ಆಗಿರಲು ಸಾಧ್ಯವೇ? ಸೆಕ್ಯುಲಾರ್ ಎಂದರೆ ಬಿಜೆಪಿಯ ಚುನಾವಣಾತ್ಮಕ ವಿರೋದ ಮಾತ್ರವೇ ? ಇಂಥಾ ಬ್ರಾಹ್ಮಣೀಕರಣಗೊಳ್ಳುತ್ತಿರುವ ಬಲಿಷ್ಠ ಜಾತಿಗಳ ಪಕ್ಷ ಊಳಿಗಮಾನ್ಯ ಪಾಳೆಗಾರಿಕೆ ಮತ್ತು ಪುರುಷಾಧಿಪತ್ಯವನ್ನೇ ತತ್ವ ಪ್ರಣಾಳಿಯನ್ನಾಗಿಸಿಕೊಂಡಿರುವ ಬಿಜೆಪಿ ಮತ್ತು ಸಹಜ ಮಿತ್ರರಾಗುವುದು ಕಷ್ತವೇನಲ್ಲ ಎಂಬುದು ಕರ್ನಾಟಕದಲ್ಲಿ ಎರಡು ಮೂರು ಬಾರಿ ರುಜುವಾತಾಗಿಲ್ಲವೇ? ಪ್ರಜಾತಾಂತ್ರಿಕವಾಗದೆ ಸೆಕ್ಯುಲಾರ್ ಆಗಲು ಸಾಧ್ಯವೇ? ಆ ಅರ್ಥದಲ್ಲಿ ಕಾಂಗ್ರೆಸ್ ಕೂಡಾ ಎಷ್ಟು ಸೆಕ್ಯುಲಾರ್ ಎಂಬ ಪ್ರಶ್ನೆಗಳು ಈಗಲಾದರೂ ಬರಬೇಕಲ್ಲವೇ?

ಶೂದ್ರ ಮೇಲ್ಚಲನೆ- ಗೇಟ್ ಕೀಪರ್ ಗಳಲ್ಲ- ಸ್ಟೇಕ್ ಹೋಲ್ಡರುಗಳು

ಭಾರತದ ಸಾಮಾಜಿಕ ವಿದ್ಯಮಾನದಲ್ಲಿ ಬ್ರಾಹ್ಮಣ್ಯದಿಂದ ಅವಮಾನ ಹಾಗೂ ತಾರತಮ್ಯಗಳಿಗೆ ಪ್ರಧಾನವಾಗಿ ಗುರಿಯಾದವರು ದಲಿತರು. ನಂತರದ ಸ್ಥಾನದಲ್ಲಿ ಅಸ್ಪ್ರುಶ್ಯರಲ್ಲದ ಶೂದ್ರ ಜಾತಿಗಳು.

ಆದರೆ ಇತಿಹಾಸದಲ್ಲಿ ಈ ಶೂದ್ರ ಜಾತಿಗಳ ಮೇಲ್ ಸ್ಥರಗಳಿಗೆ, ಭೂಮಿ ಒಡೆತನ ಮತ್ತು ಅದರಿಂದಾಗ ಶಿಕ್ಷಣ ಮತ್ತ ಅಧಿಕಾರಗಳು ಸಿಗುತ್ತದ್ದಂತೆ ಬ್ರಾಹ್ಮೆಣೀಕರಣಗೊಳ್ಳತೊಡಗಿದವು. ಬಲಿಷ್ಠ ಜಾತಿಗಳ ಬಡಸ್ಥರ ಗಾಲ ಬದುಕಿನಲ್ಲಿ ಯಾವ ವ್ಯತ್ಯಾಸಗಳು ಬರದಿದ್ದರೂ ಜಾತಿ ಪ್ರತಿಷ್ಠೆಯ ಸಾಂಕೇತಿಕ ಮೇಲರಿಮೆಯ ಶಿಕಾರಿಗಳಾದರು.

ಗ್ರಾಮೀಣ ಪ್ರದೇಶದಲ್ಲಿ ಭಾರತೀಯ ಫ್ಯಾಸಿಸಂನ ಸಾಧನವಾದ ಬ್ರಾಹ್ಮಣ್ಯದ ಪ್ರಧಾನ ವಾಹಕರು ಈ ಮಲ್ಚಲನೆಯುಳ್ಳ ಉಳೀಗಮಾನ್ಯ ಜಾತಿಗಳ ಬಲಿಷ್ಟರೇ ಆಗತೊಡಗಿದರು. ಹೀಗಾಗಿ 90 ರ ನಂತರ ಹಿಂದೂತ್ವದ ಮುಕವಾಡದ ಬ್ರಾಹ್ಮಣ್ಯದ ರಾಜಕಾರಣದಲ್ಲಿ ಈ ಮೇಲ್ಸ್ಥರದ ಶೂದ್ರ ಜಾತಿಗಳು ಒಳಗೊಂಡರು. ಗೇಟ್ ಕೀಪರ್ ಗಳಾಗಿ ಅಲ್ಲ. ಸ್ಟೇಕ್ ಹೋಲ್ಡರುಗಳಾಗಿ .

ಪ್ರಬಲಜಾತಿಗಳ ಮೇಲ್ ಸ್ಥರದಲ್ಲಿ ಕಳೆದ ಮೂರು ನಾಲಕ್ಕು ದಶಕಗಳಲ್ಲಿ ಈ ಬ್ರಾಹ್ಮಣಮುಖಿ ಚಾಲನೆ ನಡೆಯುತ್ತಿದೆ. ಈ ಶೂದ್ರ ಜಾತಿಗಳ ಮೇಲ್ಸ್ತರದ ಈ ಹಿಂದೂತ್ವವಾದಿ, ಬಂಡಾವಾಳವಾದಿ, ಸಮಾಜವಾದಿ ವಿರೋಧಿ ಚಲನೆಯನ್ನು ಗುರುತಿಸದೆ ಹಳೇಯ ಮಾರ್ಕರ್ ಗಳಲ್ಲಿ ಮಾತ್ರ ಈ ವಿದ್ಯಮಾನವನ್ನು ವ್ಯಖ್ಯಾನ ಮಾಡುವ ಒಂದು ಉದಾರವಾದಿ ಕುರುಡು ಪಂಡಿತ ವಲಯದಲ್ಲಿ ವ್ಯಾಪಕವಾಗಿದೆ. ಈ ಕುರುಡು ಕೂಡ ಪ್ಯಾಸಿಸ್ಟ್ ವಿರೋಧಿ ಹೊರಾಟ ಕಟ್ಟವಲ್ಲಿ ಅಡ್ಡಿಯಾಗಬಹುದು.

ಏಕೆಂದರೆ ಬಿಜೆಪಿಗೆ ಪ್ರಬಲ ಶೂದ್ರ ಜಾತಿಗಳ ಮೇಲ್ಸ್ತರದಲ್ಲಿ ಸಿಗುತ್ತಿರುವ ಬೆಂಬಲ ಕೇವಲ ಚುನಾವಣಾತ್ಮಕವಾದುದಲ್ಲ. ಅದು ಸೈದ್ಧಾಂತಿಕ ಪುರುಷವಾದಿ, ಬ್ರಾಹ್ಮಣವಾದಿ -ದಲಿತ ವಿರೋಧಿ , ಪ್ರಜಾತಂತ್ರ ವಿರೋಧಿ ನೆಲೆಯದು.

ಹೀಗಾಗಿ ಬಿಜೆಪಿಗಾಗಲೀ, ಜೆಡಿಎಸ್ ಗಾಗಲೀ ಪ್ರಜ್ವಲನ ಪ್ರಕರಣ ಹೆಚ್ಚೆಂದರೆ ಪುರುಷಾತಿರೇಕವೇ ವಿನಾ ಮಹಿಳಾ ಶೋಷಣೆಯಲ್ಲ. ಪಾಳೇಗಾರಿಕೆಯಲ್ಲ.

Rahulgandi : ಮೋದಿ ಪ್ರಜ್ವಲ್ ರೇವಣ್ಣ ಕೈ ಇಡಿದು ಮತ ಹಾಕಿ ಅಂತಾರೆ #pratidhvani #watch  #prajwalrevannacase

ಆದ್ದರಿಂದ ಪ್ರಜ್ವಲನ ಪ್ರಕರಣದಲ್ಲಿ ಸಾಮಾಜಿಕ ಪ್ರತಿರೋಧವು ಕೇವಲ ಅದರ ಅತಿರೇಕದಿಂದ ಮಾತ್ರ ಪ್ರೇರಿತಗೊಳ್ಳದೇ ಅದರ ಸಾಮಾಜಿಕ ಬೇರುಗಳನ್ನು ಕಿತ್ತುಹಾಕುವ ದಿಕ್ಕಿನಲ್ಲಿ ಸಾಗುವ ಅಗತ್ಯವಿದೆ.

ಅದಾಗಬೇಕೆಂದರೆ ಪ್ರಬಲ ಜಾತಿಗಳ ಮೇಲ ಸ್ಥರದ ಈ ರಾಜಕೀಯ ಚಲನೆಯನ್ನು ಉದಾರವಾದಿ ಕುರುಡಿನಿಂದ ಹೊರಬಂದು ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಅಂತಾ ಒಂದು ಉದಾರವಾದಿ ಕುರುಡು ಹಾಗೂ ಭಾರತದ ಅಬ್ರಾಹ್ಮಣ ಆದರೆ ಬಲಿಷ್ಟ ಊಳಿಗಮಾನ್ಯ ಜಾತಿಗಳೊಳಗಿನ ಬ್ರಾಹ್ಮಣಾಮುಖಿ ಚಲನೆಯನ್ನು ನಿರಾಕರಿಸುವ ಧೋರಣೆಯೂ ಕರ್ನಾಟಕದ ಖ್ಯಾತ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಬರೆದಿರುವ ದೇವೇಗೌಡರ ಜೀವನ ಚರಿತ್ರೆ Furrows In A Field- The Unexplored Life Of HD Devegowda“ ಯಲ್ಲಿ ಎದ್ದುಕಾಣಿಸುತ್ತದೆ.

ಪ್ರಸ್ತುತ “ಸೆಕ್ಯುಲಾರ್” ಸಂದರ್ಭದ ವಿಪರ್ಯಾಸಗಳನ್ನು, ಹಾಗೂ ಅದನ್ನು ಗುರುತಿಸಲಾಗದ ಉದಾರವಾದಿ ಕುರುಡುಗಳನ್ನು ಅರ್ಥಮಾಡಿಕೊಳ್ಳಲು ದೇವೇಗೌಡರ ಬದುಕಿನ ಬಗ್ಗೆ ಸುಗತರ ಪುಸ್ತಕದ ವಿಮರ್ಶೆ ಸಹಾಯ ಮಾಡುತ್ತದೆಂದು ನನಗೆ ಅನಿಸುತ್ತದೆ.

ಹೀಗಾಗಿ ಈ ಬಾರಿಯ ಅಂಕಣದಲ್ಲಿ ಅದರ ಸ್ಥೂಲ ತಾತ್ಪರ್ಯವನ್ನು ಓದುಗರೊಂದಿಗೆ ಕಂಚಿಕೊಳ್ಳುತ್ತಿದ್ದೇನೆ.

(ಈ ಪುಸ್ತಕದ ಬಗೆಗಿನ ನನ್ನ ವಿಮರ್ಶೆಯು ವರ್ಷದ ಕೆಳಗೆ ಪುಸ್ತಕ ವಿಮರ್ಶೆಗೆ ಮುಡಪಾಗಿರುವ “ಬಹುವಚನ” ದಲ್ಲಿ ಪ್ರಕಟಗೊಂಡಿತ್ತು.)

ನೇಗಿಲ ಗೆರೆಗಳು ಮೂಡಿಸುವ ಅಂತಿಮ ಚಿತ್ತಾರ

ದೇವೇಗೌಡರ ಬದುಕಿನ ಬಗ್ಗೆ ನಾಡಿನ ಪ್ರಖ್ಯಾತ ಹಾಗೂ ಹಿರಿಯ ಪತ್ರಕರ್ತ, ಮಾಧ್ಯಮ ಸಮೂಹಗಳ ಮಾಜಿ ಸಂಪಾದಕ ಸುಗತ ಶ್ರೀನಿವಾಸರಾಜು ಅವರು ಬರೆದಿರುವ ಪುಸ್ತಕ Furrows In A Field- The Unexplored Life Of HD Devegowda“ ಎಂಬ ಇಂಗ್ಲೀಶ್ ಪುಸ್ತಕವನ್ನು ಕನ್ನಡದ ಖ್ಯಾತ ಕವಯತ್ರಿ ಮತ್ತು ಹೆಸರಾಂತ ಅನುವಾದಕಿ ರೋಸಿ ಡಿಸೋಜಾ ಅವರು:

” ಎಚ್.ಡಿ. ದೇವೇಗೌಡರ ಬದುಕು ಮತ್ತು ದುಡಿಮೆ-ನೇಗಿಲ ಗೆರೆಗಳು”

ಎಂಬ ಶೀರ್ಷಿಕೆಯಲ್ಲಿ ಅತ್ಯಂತ ಚಂದವಾಗಿ ಕನ್ನಡೀಕರಿಸಿದ್ದಾರೆ.

ಸುಗತ ಶ್ರೀನಿವಾಸರಾಜುರವರು ಈ ಕೃತಿಯಲ್ಲಿ ದೇವೇಗೌಡರ ಬದುಕಿನ ಕಥನದ ಜೊತೆಗೆ ಸ್ವಾತಂತ್ರೋತ್ತರ ಭಾರತದಲ್ಲಿ ದೇವೇಗೌಡರೆಂಬ ಒಂದು ವಿದ್ಯಮಾನ ಘಟಿಸಲು ಕಾರಣವಾದ ಸಂದರ್ಭದ ಕಥನವನ್ನು ಕೂಡ ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಅತ್ಯಂತ ಪರಿಶ್ರಮದಿಂದ ಮಾಡಿದ್ದಾರೆ.

ಹಾಸನದ ಹೊಳೆನರಸೀಪುರದ ಹರದನಹಳ್ಳಿ ಎಂಬ ಕುಗ್ರಾಮಕ್ಕೇ ಸೇರಿದ, ಭಾರತೀಯ ವರ್ಣಾಶ್ರಮ ವ್ಯವಸ್ಥೆಯಲ್ಲಿ ಕೆಳಹಂತದ ಶೂದ್ರ ವರ್ಣಕ್ಕೆ ಸೇರಿದ ಹಾಗೂ ಬಡತನದ ತುಂಬುಕುಟುಂಬದಲ್ಲಿ ಹುಟ್ಟಿದ, ಇಂಗ್ಲೀಷ್, ಜಾತಿ ಅಥವಾ ಹಣಕಾಸಿನ ಯಾವ ಬಲವೂ ಇಲ್ಲದ ದೇವೇಗೌಡ ಎಂಬ ಒಬ್ಬ ವ್ಯಕ್ತಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ತಾಲ್ಲುಕು ಪತ್ತಿನ ಸಹಕಾರ ಸಂಘದಿಂದ ರಾಜಕಾರಣವನ್ನು ಪ್ರಾರಂಭಿಸಿ ಹಂತಹತವಾಗಿ ಮೇಲೇರುತ್ತಾ ಸೋಲು-ಗೆಲುವು, ರಾಜಕೀಯದ ತಂತ್ರ-ಕುತಂತ್ರಗಳಿಗೆ ಬಲಿಯಾಗುತ್ತಾ , ಪ್ರತಿತಂತ್ರ ರೂಪಿಸಿ ಮೇಲೇರುತ್ತಾ ಅತ್ಯುನ್ನತವಾದ ಪ್ರಧಾನಿ ಗದ್ದುಗೆಯನ್ನು ಮುಟ್ಟಿದ ಕಥನವನ್ನು ಈ ಕೃತಿಯಲ್ಲಿ ಸುಗತ ಕಟ್ಟಿಕೊಡುತ್ತಾರೆ. ಮತ್ತು ಅದು ದೇವೇಗೌಡರನ್ನು ಉದಾಹರಣೆಯನ್ನಾಗಿರಿಸಿಕೊಂಡು ಭಾರತದ ಪ್ರಜಾತಂತ್ರವು ಎದುರಿಸುತ್ತಿರುವ ಏಳು-ಬೀಳುಗಳನ್ನು ಹೇಳುವ ಕಥನವೂ ಆಗಿದೆ. ಏಕೆಂದರೆ ಈ ಕಥನವು ಎಷ್ಟು ವ್ಯಕ್ತಿ ಕೇಂದ್ರಿತ ಕಥನವೋ ಅಷ್ಟೆ ಸಂದರ್ಭದ ಕಥನವೂ ಆಗಿದೆ. ಹಾಗೆ ಆಗುವಂತೆ ಲೇಖಕರು ಪ್ರಜ್ನಾಪೂರ್ವಕವಾಗಿ ಶ್ರಮಿಸಿದ್ದಾರೆ.

Prajwal Revanna Convicted:ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟ #pratidhvani

ಈ ಕೃತಿಗಾಗಿ ಸುಗತ ಅವರು ದೇವೇಗೌಡರ ಜೊತೆ ಹಲವಾರು ದಿನಗಳ ಕಾಲ ಸುದೀರ್ಘ ಮಾತುಕತೆಯಲ್ಲಿ ತೊಡಗಿಕೊಂಡಿದ್ದು ಮಾತ್ರವಲ್ಲದೆ, ಅವರ ರಾಜಕೀಯ ಜೀವನದಲ್ಲಿ ಬೇರೆಬೇರೆ ಹಂತಗಳಲ್ಲಿ ಜೊತೆಗಿದ್ದ ರಾಜಕೀಯ ಮತ್ತು ವೈಯಕ್ತಿಕ ಸ್ನೇಹಿತರು, ಅವರು ರಾಜ್ಯದಲ್ಲಿ ಮಂತ್ರಿ ಮತ್ತು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಪ್ರಧಾನಿಯಾಗಿದ್ದಾಗ ಅವರ ಜೊತೆಗೆ ಕೆಲಸ ಮಾಡಿದ ಹಲವಾರು ಉನ್ನತಾಧಿಕಾರಿಗಳನ್ನು ಒಳಗೊಂಡಂತೆ 83 ಜನರ ಸುದೀರ್ಘ ಸಂದರ್ಶನ ಮಾಡಿದ್ದಾರೆ. ಹಾಗೆಯೇ ದೇವೇಗೌಡರ ಬಗ್ಗೆ ಮತ್ತು ಅವರ ಕಾಲದ ಬಗ್ಗೆ ಉಲ್ಲೇಖವಿರುವ ಹಲವಾರು ಸಮಕಾಲೀನರ ಬರಹಗಳನ್ನು, ವರದಿಗಳನ್ನು ಪರಾಂಬರಿಸಿದ್ದಾರೆ. ದೇವೇಗೌಡರು 1962 ರಲ್ಲಿ ಮೊದಲ ಬಾರಿಗೆ ಸ್ವತಂತ್ರ ಉಮೇದುವಾರರಾಗಿ ಶಾಸನಸಭಾ ಸದಸ್ಯರಾಗಿ ಆಯ್ಕೆಯಾದ ಮೇಲೆ ಮಾಡಿದ ಮೊದಲ ಭಾಷಣದಿಂದ ಹಿಡಿದು, 1972-78 ರವರೆಗೆ ಅವರು ವಿರೋಧ ಪಕ್ಷದ ನಾಯಕರಾಗಿ ವಿಧಾನ ಸಭೆಯಲ್ಲಿ ಮಾಡಿದ ಭಾಷಣಗಳು, ಎತ್ತಿದ ಪ್ರಶ್ನೆಗಳನ್ನು, 1992 ರಲ್ಲಿ ಅವರು ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾದಾಗ ಮಾಡಿದ ಭಾಷಣದಿಂದ ಹಿಡಿದು, 96-97 ರ ನಡುವೆ 10 ತಿಂಗಳ ಕಾಲ ಪ್ರಧಾನಿಯಾಗಿದ್ದಾಗ ಸಂಸತ್ತಿನಲ್ಲಿ ಮತ್ತು ದೇಶ-ವಿದೇಶಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಮಾಡಿದ ಭಾಷಣಗಳು, 1997 ರಲ್ಲಿ ಪ್ರಧಾನಿಯಾಗಿ ರಾಜೀನಾಮೆ ನೀಡಿದ ನಂತರ ಸಂಸತ್ ಸದಸ್ಯರಾಗಿ ಅವರು ಈವರೆಗೆ ಸಂಸತ್ತಿನಲ್ಲಿ ವಿವಿಧ ವಿಷಯಗಳಲ್ಲಿ ಮಾಡುತ್ತಲೇ ಬಂದಿರುವ ಮಧ್ಯಪ್ರವೇಶಗಳ ಕಡತಗಳನ್ನು ಸುಗತ ಅವರು ಅಧ್ಯಯನ ಮಾಡಿದ್ದಾರೆ ಮತ್ತು ಅವನ್ನು ತಮ್ಮ ಬರಹಕ್ಕೆ ಸಮರ್ಥನೆಯಾಗಿ ವಿಪುಲವಾಗಿ ಉಲ್ಲೇಖಿಸುತ್ತಾರೆ.

ಇದರ ಜೊತೆಗೆ ಅವರು 1969 ರಲ್ಲಿ ಇಂದಿರಾ ಕಾಂಗ್ರೆಸ್ಸಿಗೆ ವಿರುದ್ಧವಾದ ಸಂಸ್ಥಾ ಕಾಂಗ್ರೆಸ್ಸನ್ನು ಸೇರಿದಾಗ, ನಂತರ 1977 ರಲ್ಲಿ ಜನತಾ ಪಕ್ಷವಾದ ಮೇಲೆ ಅದರ ರಾಜ್ಯ ಅಧ್ಯಕ್ಷರಾಗಿ, ಆ ನಂತರ ಜನತಾ ದಳದ ಮುಖ್ಯಸ್ಥರಾಗಿ ರಾಷ್ಟ್ರೀಯ ನಾಯಕರುಗಳಾದ ಮೊರಾರ್ಜಿ ದೇಸಾಯಿ, ಚಂದ್ರ ಶೇಖರ್ ಇನ್ನಿತರರ ಜೊತೆ ನಡೆಸಿದ ನಿರಂತರ ಪತ್ರ ಸಂವಾದಗಳ ಸಹಾಯವನ್ನು ಸುಗತ ತೆಗೆದುಕೊಂಡಿದ್ದಾರೆ. ಒಮ್ಮೊಮ್ಮೆ ಅನಗತ್ಯ, ಅತಿ ದೀರ್ಘ ಎನಿಸಿದರೂ ಇದರಿಂದ ಈ ಬಯಾಗ್ರಫ಼ಿಗೆ ವಿಶಾಲವಾದ ಭಿತ್ತಿ ಮತ್ತು ಒಂದು ಅಧಿಕೃತತೆ ಬಂದೊದಗಿದೆ.

ಇವೆಲ್ಲವನ್ನು ಆಧರಿಸಿ ಲೇಖಕರು ತಾವು ಕಂಡುಕೊಂಡ ದೇವೇಗೌಡರನ್ನು ಓದುಗರಿಗೆ ಪದರ, ಪದರವಾಗಿ ಪರಿಚಯಿಸುತ್ತಾ ಹೋಗುತ್ತಾರೆ.

“ದೇವೇಗೌಡರು ವಿಧಿ ಬರೆಯುವ ಗೆರೆಗಳಲ್ಲಿ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದರೂ ಅವರ ರೈತ ಹಿನ್ನೆಲೆ, ಮತ್ತು ಅವರ ದೈವಭೀರು ಪ್ರಾಮಾಣಿಕತೆಗಳು ಕೊಟ್ಟ ಅವಕಾಶಗಳಿಂದ ಭಾರತದ ರಾಜಕಾರಣದಲ್ಲಿ ದೇವೇಗೌಡರು ವಿಶಿಷ್ಟವಾದ ನೇಗಿಲಗೆರೆಗಳನ್ನು ಎಳೆದರು”

ಎಂಬುದು ಸುಗತ ಅವರು ಈ ಕೃತಿಯಲ್ಲಿ ಹೇಳುವ ಕಥೆಯ ಸಾರ.

Prajwal Revanna Convicted | ಪ್ರಜ್ವಲ್​ ರೇವಣ್ಣಗೆ ಮುಳುವಾದ ಆ ಹೇಳಿಕೆ ಏನು? #pratidhvani

ಎಲ್ಲಕ್ಕಿಂತ ಮುಖ್ಯವಾಗಿ ಶೂದ್ರ ಹಿನ್ನೆಲೆಯಿಂದ ಬಂದ ದೇವೇಗೌಡರಿಗೆ ಇತರ ಪ್ರಧಾನಿಗಳಿಗೆ ಹಾಗೂ ಬಹುಪಾಲು ಪ್ರಖ್ಯಾತ ನಾಯಕರಿಗೆ ಇದ್ದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಂಡವಾಳವಿರಲಿಲ್ಲ. ಹೀಗಾಗಿ ಇತರರಿಗೆ ಸುಲಭವಾಗಿ ದಕ್ಕಿದ್ದನ್ನು ಗೌಡರು ಕೇವಲ ತಮ್ಮ ಪರಿಶ್ರಮ ಹಾಗೂ ಬದ್ಧತೆಗಳಿಂದ ಪಡೆದುಕೊಂಡರು ಎಂಬುದನ್ನು ಸುಗತ ಅವರು ತಮ್ಮ ಕೃತಿಯಲ್ಲಿ ವಕೀಲರೋಪಾದಿಯಲ್ಲಿ ಪ್ರತಿಪಾದಿಸುತ್ತಾರೆ.

ಈ ಬಗೆಯ ಸಾಂಸ್ಕೃತಿಕ ಬಂಡವಾಳಗಳು ಇಲ್ಲದಿದ್ದರಿಂದಲೇ ದೇವೇಗೌಡರ ಸಾಧನೆಗೆ ಸಿಗಬೇಕಿದ್ದಷ್ಟು ಮಾನ್ಯತೆ ಮತ್ತು ಪ್ರಚಾರ ಸಿಕ್ಕಿಲ್ಲ ಎಂಬುದು ಲೇಖಕರ ಮತ್ತೊಂದು ಮುಖ್ಯ ಪ್ರತಿಪಾದನೆಯಾಗಿದೆ. ಹಾಗೆ ನೋಡಿದರೆ ಈ ಕೃತಿಯು ಆ ಕೊರತೆಯನ್ನು ಸಮರ್ಥವಾಗಿ ನೀಗಿಸುತ್ತದೆ. ಮತ್ತು ಅದೇ ಈ ಕೃತಿಯ ಮುಖ್ಯ ಆಶಯವೆಂದೂ ಕೆಲವೊಮ್ಮೆ ಭಾಸವಾಗುತ್ತದೆ. ಹಾಗೂ ಆದ್ದರಿಂದಲೇ ಅದು ಪರೋಕ್ಷವಾಗಿ ಕೃತಿಯ ಮಿತಿಯೂ ಆಗಿಬಿಟ್ಟಿದೆ.

ಇದಕ್ಕಾಗಿ ಲೇಖಕರು ಮುಖ್ಯಮಂತ್ರಿಯಾಗಿ ಕೃಷ್ಣ ಮತ್ತು ಕಾವೇರಿ ಯೋಜನೆಗಳಲ್ಲಿ ದೇವೇಗೌಡರ ಪಾತ್ರವನ್ನು ವಿಸ್ತೃತವಾಗಿ ಅಂಕಿಅಂಶಗಳೊಂದಿಗೆ ಸಕಾರಣವಾಗಿಯೇ ಪ್ರತಿಪದಿಸುತ್ತಾರೆ. ಆಗ ಕೃಷ್ಣ ಮೇಲ್ದಂಡೆ ಯೋಜನೆಯ ಜಾರಿಯ ಜವಾಬ್ದಾರಿ ಹೊತ್ತುಕೊಂಡಿದ್ದ ಅಧಿಕಾರಿ ಜಾಮ್‌ದಾರ್ ಅವರನ್ನು ವಿಸ್ತೃತವಾಗಿ ಉಲ್ಲೇಖಿಸುತ್ತಾರೆ. ಅದೇ ಕಾರಣಕ್ಕಾಗಿಯೇ ಕೃತಿಯ ಅರ್ಧ ಭಾಗ ದೇವೇಗೌಡರು ಪ್ರಧಾನಿಯಾಗಿ ರಾಜ್ಯಭಾರ ಮಾಡಿದ ಹತ್ತು ತಿಂಗಳಲ್ಲಿ ಮಾಡಿದ ಸಾಧನೆಯ ಬಗ್ಗೆ ಮೀಸಲಾಗಿದೆ.

ಕಾಶ್ಮೀರ ಹಾಗೂ ಈಶಾನ್ಯ ಭಾರತಗಳ ಜನರ ವಿಶ್ವಾಸ ಗೆಲ್ಲುವ ಕ್ರಮಗಳು, ಕೃಷಿಗೆ ಒತ್ತುಕೊಡುತ್ತಲೇ ವಿದೇಶಿ ಬಂಡವಾಳ ಆಕರ್ಷಿಸುವ ಕೈಗಾರಿಕಾ ನೀತಿಗೆ, ನಗರಾಭಿವೃದ್ಧಿಗೆ ಒತ್ತು ಕೊಡುವ ದೃಷ್ಟಿಕೋನಗಳು, ಫ಼ರಕ್ಕಾ ಯೋಜನೆಯ ಮೂಲಕ ಬಾಂಗ್ಲಾ ದೇಶದೊಂದಿಗೆ ಅಂತರ ರಾಷ್ಟ್ರೀಯ ನದಿ ನೀರು ಹಂಚಿಕೆ, ನರ್ಮದಾ ಮತ್ತು ತೆಹ್ರಿ ಅಣೆಕಟ್ಟು ವಿವಾದದ ನಿಭಾವಣೆ ಇತ್ಯಾದಿಗಳನ್ನು ಲೇಖಕರು ಒಂದೊಂದಾಗಿ ವಿವರಿಸುತ್ತಾ ಒಂದು ರೀತಿಯ ದೇವೇಗೌಡ ಇಸಂ ಬಗ್ಗೆ ಮೋಹಕ್ಕೆ ಬಿದ್ದವರಂತೆ ಬಣ್ಣಿಸುತ್ತಾರೆ.

ಹಾಗೆಯೇ, ಸ್ವಾತಂತ್ರೋತ್ತರ ಭಾರತದ ಪ್ರಜಾತಂತ್ರದಲ್ಲಿ ಬೇರುಬಿಟ್ಟಿರುವ ಸ್ಥಾಪಿತ ಹಿತಾಸಕ್ತಿಗಳು ಹೇಗೆ ದೇವೇಗೌಡರಂತವರನ್ನು ಮೆಟ್ಟಿಲುಗಳಂತೆ ಬಳಸಿಕೊಂಡು ವಂಚಿಸುತ್ತಾರೆ ಎಂಬುದನ್ನು ಕೂಡ ಸುಗತ ಮನಕರಗುವಂತೆ ಚಿತ್ರಿಸುತ್ತಾರೆ.

ಹಾಗೆ ನೋಡಿದರೆ ಸಾಧಕ ದೇವೇಗೌಡರ ಜೊತೆಗೆ ವಂಚಿತ ಹಾಗೂ ಬಲಿಪಶುವಾಗುವ ದೇವೇಗೌಡರ ಚಿತ್ರಣ ಜೊತೆಜೊತೆಗೆ ಸಾಗುತ್ತಾ ಓದುಗರಲ್ಲಿ ಕಥಾನಾಯಕನ ಬಗ್ಗೆ ಅಪಾರ ಸಹಾನುಭೂತಿಯನ್ನು ಹುಟ್ಟಿಸುತ್ತದೆ.

ಇಡೀ ಕೃತಿಯ ಅತಿ ದೊಡ್ಡ ಅಧ್ಯಾಯ ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ಸಂಬಂಧದ ಕುರಿತಾಗಿರುವುದು ಮಾತ್ರವಲ್ಲದೆ ಹೇಗೆ ದೇವೇಗೌಡರು ತಮ್ಮ ಜಾತಿ ಬಲ ಹಾಗೂ ಸಂಖ್ಯಾಬಲವನ್ನು ಹೆಗಡೆಯವರ ರಾಜಕೀಯ ಏಳಿಗೆಗೆ ವಿನಿಯೋಗಿಸಿದರೂ ಹೆಗಡೆಯವರು ಮಾತ್ರ ತಮ್ಮ ಚಾಣಾಕ್ಷತನದಿಂದ ದೇವೇಗೌಡರ ರಾಜಕೀಯ ಏಳಿಗೆಗೆ ಕಾಲಕಾಲಕ್ಕೆ ಅಡ್ಡ ಗಾಲು ಹಾಕುತ್ತಾ ಬಂದರು ಎಂಬುದನ್ನು ಸಣ್ಣಪುಟ್ಟ ವಿವರಗಳನ್ನು ಕೂಡ ಒಳಗೊಂಡು ಸಚಿತ್ರವಾಗಿ ಕಟ್ಟಿಕೊಡುತ್ತದೆ. ಹಾಗೆಯೇ ದೇವೇಗೌಡರು ಪ್ರಧಾನಿಯಾದಾಗ ಯಾವುದೇ ಕಾರಣವಿಲ್ಲದೆ ಹೇಗೆ ಕಾಂಗ್ರೆಸ್ ಪಕ್ಷ ತನ್ನ ಒಳಬಣ ರಾಜಕಾರಣದ ಭಾಗವಾಗಿ ನಯವಂಚನೆ ಮಾಡಿ ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಅನ್ಯಾಯಯುತವಾಗಿ ಕೆಳಗಿಳಿಸಿದರು ಎಂಬುದನ್ನೂ ಸಹ ವಿವರಿಸುತ್ತಾರೆ.

ಪುಸ್ತಕದ ಕಥನವು ತಾಂತ್ರಿಕವಾಗಿ 1999ಕ್ಕೆ ಬಂದು ನಿಂತರೂ ಒಟ್ಟಾರೆ ದೇವೇಗೌಡರ ಬದುಕು ಮತ್ತು ಹೋರಾಟ ಹಾಗೂ ವಿದ್ಯಮಾನಗಳ ಮಹತ್ವವನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ ಕೊನೆಯ ಅಧ್ಯಾಯಗಳು 1933 ರಿಂದ 2021 ರ ವರೆಗೂ ಚಾಚಿಕೊಳ್ಳುತ್ತವೆ. ಅದರ ಭಾಗವಾಗಿಯೇ ದೇವೇಗೌಡರು ಹೇಗೆ ದೈವನಿಷ್ಟ ಸೆಕ್ಯುಲಾರ್ ವ್ಯಕ್ತಿಯಾಗಿದ್ದರು ಎಂಬುದನ್ನು ವಿವರಿಸುತ್ತಾ ಗುಜರಾತ್ ಹತ್ಯಕಾಂಡವಾದಾಗ ದೇವೇಗೌಡರು ಪ್ರಧಾನಿ ವಾಜಪೇಯಿಯವರಿಗೆ ಬರೆದ ಪತ್ರಗಳ ಹಾಗೂ ಸದನದಲ್ಲಿ ವಾಜಪೇಯಿಯವರ ಸೆಕ್ಯುಲಾರ್ ಮುಖವಾಡವನ್ನು ಕಿತ್ತುಹಾಕಿದ ಭಾಷಣಗಳ ಪಠ್ಯವನ್ನು ಲೇಖಕರು ಒದಗಿಸುತ್ತಾರೆ.

ಹಾಗೆಯೇ 2006 ರಲ್ಲಿ ದೇವೇಗೌಡರ ಮಗ ಎಚ್.ಡಿ. ಕುಮಾರಸ್ವಾಮಿಯವರು ತಂದೆಯ ನಿಲುವಿಗೆ ವಿರುದ್ಧವಾಗಿ ಬಿಜೆಪಿಯೊಂದಿಗೆ ಕೈಗೂಡಿಸಿದಾಗ ದೇವೇಗೌಡರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಸಿದುಹೋಗಿದ್ದರು ಎಂಬ ಹೃದಯವಿದ್ರಾವಕ ಚಿತ್ರಣವನ್ನು ಕೃತಿ ನೀಡುತ್ತದೆ.

ಅದೇ ಸಮಯದಲ್ಲಿ ಕಾಶ್ಮೀರ, ಈಶಾನ್ಯ ಭಾರತ, ನೀರಾವರಿ ಯೋಜನೆಗಳ ವಿಷಯದಲ್ಲಿ ದೇವೇಗೌಡರು ತೆಗೆದುಕೊಂಡ ಮುಂದೊಡಗನ್ನೇ ಇತರ ಪ್ರಧಾನಿಗಳು ಮುಂದುವರೆಸಿದ್ದರೂ ದೇವೇಗೌಡರ ಹೆಸರನ್ನು ಪ್ರಸ್ತಾಪಿಸದೆ ಹೇಗೆ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬುದನ್ನು ಲೇಖಕರು ಎತ್ತಿ ತೋರಿಸುತ್ತಾರೆ.

ಈ ಎಲ್ಲಾ ಕಾರಣಗಳಿಂದಾಗಿ ಹೇಗೆ ದೇವೇಗೌಡರು ಈಗಲೂ ವಂಚಿತ ನಾಯಕರಾಗಿದ್ದಾರೆ ಎಂಬುದನ್ನು ಓದುಗರಿಗೆ ಮನದಟ್ಟು ಮಾಡಿಸುತ್ತಾ ಕೃತಿಯನ್ನು ಮುಗಿಸುತ್ತಾರೆ.

ಸುಗತ ಅವರು ಈ ಕೃತಿಯು ದೇವೇಗೌಡರ ಬಗ್ಗೆ, ಅವರ ಸಾಧನೆಗಳ ಬಗ್ಗೆ ಪ್ರಧಾನ ಧಾರೆ ಮಾಧ್ಯಮಗಳು ಹೇಳದಿದ್ದ, ಅಥವಾ ಅವಗಣನೆ ಮಾಡಿದ್ದ ಹಲವಾರು ವಿಷಯಗಳನ್ನು ಮನವರಿಕೆಯಾಗುವ ರೀತಿಯಲ್ಲಿ ಪರಿಚಯಿಸುತ್ತದೆ. ದೇವೇಗೌಡರ ಬಗ್ಗೆ ಅಭಿಮಾನ ಮೂಡಿಸುವುದರ ಜೊತೆಗೆ ಇಂಥಾ ಸಾಧ್ಯತೆಗಳನ್ನು ಹತ್ತಿಕ್ಕುವ ಭಾರತೀಯ ಸಮಾಜದ ಸ್ಥಾಪಿತ ಹಿತಾಸಕ್ತಿಗಳ ಬಗ್ಗೆ ಜಿಗುಪ್ಸೆ ಮೂಡಿಸುತ್ತದೆ.

Siddaramaiah on DeveGowda: ಗರ್ವಭಂಗ ಮಾಡ್ತೀನಿ ಅಂದ್ರು.. ಅವ್ರ ಬಾಯಲ್ಲಿ ಈ ಮಾತು ನಿರೀಕ್ಷೆ ಮಾಡಿರ್ಲಿಲ್ಲ

ಲೇಖಕರ ಪ್ರಕಾರ ದೇವೇಗೌಡ ಎಂಬ ದೊಡ್ಡ ಜೀವ ಭಾರತದ ಪ್ರಜಾತಂತ್ರದಲ್ಲಿ ಒಂದು ವಿದ್ಯಮಾನವಾಗಿ ಬೆಳೆದು ನಿಲ್ಲಲು ಕಾರಣ ಅವರ ಕಾರ್ಯಶ್ರದ್ಧೆ, ಕಾಯುವಿಕೆ, ರಾಜಕೀಯ ಚಾಣಾಕ್ಶತೆ ಮತ್ತು ವಿಧಿ ಬರಹದಲ್ಲಿ ಮತ್ತು ಜ್ಯೋತಿಷ್ಯದಲ್ಲಿ ಇರುವ ಆಳವಾದ ನಂಬಿಕೆಗಳು. ಅದೇ ರೀತಿ ಅವರು ಎಡ ಅಥವಾ ಬಲ ಎಂಬ ಯಾವುದೇ ಸಿದ್ಧಾಂತಗಳಿಗೆ ಆತುಕೊಳ್ಳದೆ ತಮ್ಮ ಗ್ರಾಮಜನ್ಯ ಹಾಗೂ ರೈತ ಸಂವೇದನೆಯ ಸಾಮಾನ್ಯ ಜ್ನಾನ ಹಾಗೂ ಒಳಿತು ಕೆಡುಕುಗಳ ಪ್ರಜ್ನೆಯೇ ಅವರಿಂದ ದೊಡ್ದ ಸಾಧನೆಗಳನ್ನು ಮಾಡಿಸಿತು ಎಂಬ ಬೀಸು ತೀರ್ಮಾನವನ್ನು ಕೂಡಾ ಲೇಖಕರು ನೀಡುತ್ತಾರೆ.

ಉದಾರವಾದಿ ವಕಾಲತ್ತು ಮರೆಸುವ ಉಳಿಗಮಾನ್ಯತೆಯ ಮುಖ

ಆದರೆ ಲೇಖಕರ ದೃಷ್ಟಿಕೋನ ಮತ್ತು ಅಧ್ಯಯನಕ್ಕೆ ಮತ್ತು ನಿರೂಪಣೆಗೆ ಅನುಸರಿಸಿರುವ ರೀತಿಯಿಂದಾಗಿ ಕೃತಿಯಲ್ಲಿ ಹಲವಾರು ಮಿತಿಗಳಿರುವುದನ್ನು ಕೂಡ ಗಮನದಲ್ಲಿಟ್ಟುಕೊಳ್ಳುವುದು ಅಷ್ಟೆ ಮುಖ್ಯ ಎಂದು ನನಗನಿಸುತ್ತದೆ.

ಜೀವನಕಥನಗಳು ಅತ್ಮಕಥೆಗಳಲ್ಲ. ಏಕೆಂದರೆ ಆತ್ಮಕಥೆಗಳು ಲೇಖಕರು ತಮ್ಮನ್ನು ತಾವು ನೋಡಿಕೊಳ್ಳುವ ರೀತಿ. ಅವೆಲ್ಲವನ್ನು ಓದುಗರು ಒಪ್ಪಿಕೊಳ್ಳಲೇ ಬೇಕೆಂದೇನೂ ಇಲ್ಲ. ಅದನ್ನು ಒಂದು ಕಥೆಯಾಗಿ ಓದಬಹುದು. ಕಲಿಯಬಹುದು.

ಆದರೆ ಇತರರು ಮತ್ತೊಬ್ಬರ ಬಗ್ಗೆ ಬರೆಯುವ ಆತ್ಮಕಥನಗಳು, ಅದರಲ್ಲೂ ಸುಗತ ಅವರಂಥ ಹಿರಿಯ ಪತ್ರಕರ್ತರು ಅಪಾರ ಅಧ್ಯಯನದೊಂದಿಗೆ ಬರೆದಿರುವಂಥ ಇಂಥಾ ಕೃತಿಗಳು ವ್ಯಕ್ತಿಯ ಬಗ್ಗೆ ಮಾತ್ರವಲ್ಲದೆ ವಿದ್ಯಮಾನಗಳ ಬಗ್ಗೆ ಒಂದು ಅಧಿಕಾರವಾಣಿಯಲ್ಲಿ ಒಂದು ಅಭಿಪ್ರಾಯವನ್ನು ಹುಟ್ಟುಹಾಕುತ್ತವೆ.

ಆದರೆ ಅಂಥಾ ಜೀವನಕಥನಗಳನ್ನು ವ್ಯಕ್ತಿಯ, ವಿದ್ಯಮಾನಗಳ ಎಲ್ಲಾ ಮಗ್ಗಲುಗಳನ್ನೂ ಹಿಡಿದುಕೊಡದೆ ಕಥಾನಾಯಕನ ದೃಷ್ಟಿಕೋನಕ್ಕೆ ಪೂರಕವಾಗಿ ಮಾತ್ರವೇ ವಿವರಗಳನ್ನು ಹೆಕ್ಕಿ ತೆಗೆದರೆ ಅದರ ಏಕಪಕ್ಷೀಯತೆಯೇ ಅದರ ಮಿತಿಯೂ ಆಗಿಬಿಡುತ್ತದೆ.

ಸುಗತ ಅವರ ಅಪಾರ ಪರಿಶ್ರಮ ಮತ್ತು ವಿದ್ವತ್ತನ್ನು ಮೆಚ್ಚಿಕೊಳ್ಳುತ್ತಲೇ ಈ ಕೃತಿಯಲ್ಲೂ ಅಂಥಾ ಒಂದು ಮಿತಿ ಇರುವುದನ್ನು ಓದುಗರು ಗಮನಿಸಲೇ ಬೇಕಾಗುತ್ತದೆ.

ಉದಾಹರಣೆಗೆ ಈ ಕೃತಿಯನ್ನು ಬರೆಯಲು ಲೇಖಕರು ಸಂದರ್ಶನ ಮಾಡಿರುವ ವ್ಯಕ್ತಿಗಳೆಲ್ಲರು ದೇವೇಗೌಡರ ಪ್ರತ್ಯಕ್ಷ ಅಥವಾ ಪರೋಕ್ಷ ಅಭಿಮಾನಿಗಳು ಅಥವಾ ಪೂರಕ ಅಭಿಪ್ರಾಯ ಉಳ್ಳವರೇ ಆಗಿದ್ದಾರೆ. ಹೀಗಾಗಿ ದೇವೇಗೌಡರ ಮತ್ತು ಅವರು ಹಾದುಹೋದ ಸಂದರ್ಭದ ವಿವರಗಳು ಏಕಪಕ್ಷೀಯವಾಗುತ್ತದೆ ಮತ್ತು ಒಂದೆರೆಡು ಕಡೆ ತಪ್ಪಾಗಿಯೂ ಅಭಿವ್ಯಕ್ತವಾಗುತ್ತದೆ.

ಅದೇ ರೀತಿ ಕೃತಿಯಲ್ಲಿ ಲೇಖಕರು ಕಥೆ ಹೇಳಲು ಅನುಸರಿಸುವ ರೀತಿ ತಟಸ್ಥ ನಿರೂಪಕನದ್ದು. ಇದು ವಿರುದ್ಧ ಮಗ್ಗಲುಗಳನ್ನು ನಿಶ್ಪಕ್ಷಪಾತವಾಗಿ ಪರಿಚಯಿಸಿ, ಸರಿತೂಗಿ ಒಂದು ಮೌಲಿಕ ತೀರ್ಮಾನಕ್ಕೆ ಬರುವ ರೀತಿಯದ್ದು.

ಆದರೆ ಇಲ್ಲಿ ಲೇಖಕರು ಹಲವಾರು ಬಾರಿ ತಟಸ್ಥ ನ್ಯಾಯಾಧೀಶನ ಪಾತ್ರದಿಂದ ಆಚೆ ಬಂದು ಕಕ್ಷಿದಾರನ ಪರವಾಗಿ ಸ್ವಪಕ್ಷೀಯ ವಕಾಲತ್ತು ಮಾಡುತ್ತಾರೆ

ಲೇಖಕರು ಅದೇ ಅಭಿಪ್ರಯ/ ಕಥನವನ್ನು ಅದರ ತದ್ವಿರುದ್ಧ ಮಗ್ಗಲನ್ನು ಪರಿಚಯಿಸಿ ಹೇಗೆ ಅದು ಅನ್ಯಾಯ ಅಥವಾ ಅಸಂಬದ್ದ ಎಂಬುದನ್ನು ಸ್ಥಾಪಿಸಿ ಆ ನಂತರ ತಮ್ಮ ಅಭಿಪ್ರಾಯವನ್ನು ಹೇಳುವ ಮಾರ್ಗವನ್ನು ಅನುಸರಿಸಿದ್ದರೆ ಕೃತಿಯ ಮೌಲ್ಯ ಇನ್ನಷ್ಟು ಹೆಚ್ಚುತ್ತಿತ್ತು.

ಲೇಖಕರು ಹೀಗೆ ಒಮ್ಮೊಮ್ಮೆ ತಮ್ಮ ಕಥಾನಾಯಕನ ಅಭಿಮಾನಿಯಾಗಿ ಏಕಪಕ್ಷೀಯವಾಗುವುದರಿಂದ ಕಥನ ಕ್ರಮದಲ್ಲಿ ಹಲವು ಅಸಂಗತಗಳು ಮತ್ತು ಸಮಸ್ಯೆಗಳು ’ಕಬಾಬ್ ಮೆ ಹಡ್ಡಿ’ ಯಂತೆ ಎದುರಾಗಿ ತೊಂದರೆ ಕೊಡುತ್ತದೆ.

ಜಾತಿಯೆಂಬ ಸಾಮಾಜಿಕ-ರಾಜಕೀಯ ಬಂಡವಾಳ

ಉದಾಹರಣೆಗೆ :

ಲೇಖಕರು ಇತರ ಸ್ಥಾಪಿತ ಶ್ರೀಮಂತ ಹಾಗೂ ಮೇಲ್ಜಾತಿ ನಾಯಕರಿಗೆ ಹೋಲಿಸಿದರೆ ದೇವೇಗೌಡರು ಹೇಗೆ ಸಬಾಲ್ಟರ್ನ್ ಸಾಮಾಜಿಕ ಹಿನ್ನೆಲೆಯವರಾಗಿದ್ದರು ಎಂಬ ಬೈನರಿಯನ್ನು ಸಾಬೀತು ಮಾಡುವ ಕ್ರಮದಲ್ಲಿ ಒಕ್ಕಲಿಗರು ವರ್ಣಾಶ್ರಮದಲ್ಲಿ ಅತ್ಯಂತ ಕೆಳಜಾತಿ ಎಂದು ಬರೆಯುತ್ತಾರೆ. ಮತ್ತು ಅದರಿಂದಲೇ ಅವರಿಗೆ ಮೇಲ್ಜಾತಿಗಳಿಗೆ ಲಭ್ಯವಿದ್ದ ಯಾವುದೇ ಸಾಮಾಜಿಕ ಅಥವಾ ಸಾಂಸ್ಕೃತಿಕ ಬಂಡವಾಳವಿರಲಿಲ್ಲ ಎಂದು ಪ್ರತಿಪಾದಿಸುತ್ತಾರೆ.

ಆದರೆ ಇದು ಅರ್ಧ ಸತ್ಯವೆಂಬುದನ್ನು ತಾವೇ ಮುಂದಿನ ಅಧ್ಯಾಯಗಳಲ್ಲಿ ಅನುದ್ಧಿಶ್ಯವಾಗಿ ಸಾಬೀತುಗೊಳಿಸುತ್ತಾರೆ.

ದೇವೇಗೌಡರು ಡಿಪ್ಲೋಮ ಓದುವಾಗ ಇದ್ದ 16 ವಿದ್ಯಾರ್ಥಿಗಳಲ್ಲಿ ಒಂಭತ್ತು ಬ್ರಾಹ್ಮಣರಾಗಿದ್ದರೆ, ದೇವೇಗೌಡರನ್ನೂ ಒಳಗೊಂಡಂತೆ ಇದ್ದ ನಾಲ್ವರು ಒಕ್ಕಲಿಗರೇ ಎರಡನೇ ಸ್ಥಾನದಲ್ಲಿದ್ದರು. ಇತರ ಹಿಂದುಳಿದ ಜಾತಿಗಳಾಗಲೀ ಅಥವಾ ದಲಿತರಾಗಲೀ ಯಾರೂ ಇರಲಿಲ್ಲ.

ಹಾಗೆಯೇ ದೇವೇಗೌಡರು ಸಿವಿಲ್ ಕಾಂಟ್ರಾಕ್ಟ್ ಪ್ರಾರಂಭಿಸಿದಾಗ ಮತ್ತು ರಾಜಕಾರಣ ಪ್ರರಂಭಿಸಿದಾಗ ಅವರ ಮಡದಿ ಚನ್ನಮ್ಮನವರ ಶ್ರೀಮಂತ ತವರಿನಿಂದ ಧನ ಸಹಾಯ ಪಡೆದರು ಎಂಬುದನ್ನು ಕಾಣಿಸುತ್ತಾರೆ. ಆ ಶ್ರೀಮಂತಿಕೆಯು ಭೂಮಾಲೀಕತ್ವದ ಮೂಲದ್ದಾಗಿದ್ದು ಮೈಸೂರು ಭಾಗದ ಹಲವಾರು ಒಕ್ಕಲಿಗರು ಐತಿಹಾಸಿಕ ಕಾರಣಗಳಿಗಾಗಿ ಆ ವೇಳೆಗಾಗಲೇ ಡಾಮಿನೆಂಟ್ ಕಾಸ್ತ್ ಆಗಿದ್ದರು. ಸಬಾಲ್ಟರ್ನ್ ಅಲ್ಲ ಎಂಬುದನ್ನು ಸುಗತರ ಕಥನವೇ ಹೇಳುತ್ತದೆ.

ಹೀಗಾಗಿ ದೇವೇಗೌಡರು ಕುಟುಂಬ ಸಾಮಾಜಿಕ ಬಂಡವಾಳವಿದ್ದ ಡಾಮಿನೆಂಟ್ ಕಾಸ್ಟಿಗೆ ಸೇರಿದ್ದರೂ ಬಡತನದಲ್ಲಿತ್ತು ಎಂಬುದು ಸೂಕ್ತವಾದ ಹೇಳಿಕೆಯಾಗುತ್ತದೆ.

ಸ್ಟೇಜ್‌ ಮುಂದೆ ಕೂಗ್ತಿದ್ದವರ ಮೇಲೆ ಗದರಿದ ಸಿದ್ರಾಮಯ್ಯ #pratidhvani

ಸಾಮಾಜಿಕ ನ್ಯಾಯವಿರೋಧಿಗಳು ಆದರ್ಶವಾದದ್ದು ಹೇಗೆ?

ಹಾಗೆಯೇ ದೇವೇಗೌಡರು ರಾಜಕಾರಣದಲ್ಲಿ ಸದಾ ಸ್ಥಾಪಿತ ಪಕ್ಷಗಳ ಜೊತೆಗಲ್ಲದೆ, ಯಾವುದಾದಾರೂ ಹೊಸ ತಾತ್ವಿಕತೆಯಲ್ಲಿ ತೊಡಗಿಕೊಂಡಿದ್ದ ಪಕ್ಷಗಳ ಜೊತೆಗಿರುತ್ತಿದ್ದರು ಎಂದು ಲೇಖಕರು ಹೇಳುತ್ತಾರೆ. ಅದಕ್ಕೆ 1969 ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ದೇವೇಗೌಡರು ಇಂದಿರಾ ಕಾಂಗ್ರೆಸ್ ವಿರುದ್ಧವಾಗಿ ಸಂಸ್ಥಾ ಕಾಂಗ್ರೆಸ್ ಸೇರಿದ್ದನ್ನು ಹಾಗೂ ಆ ನಂತರ ಜನತಾ ಪಕ್ಷ ಸೇರಿದ್ದನ್ನು ಉಲ್ಲೇಖಿಸುತ್ತಾರೆ.

ಇದು ದೇವೇಗೌಡರ ಹೇಳಿಕೆಯಲ್ಲ. ಲೇಖಕರ ವಿಶ್ಲೇಷಣೆ.

ಆದರೆ ಈ ಆಯ್ಕೆಯನ್ನು ಇಷ್ಟು ಸರಳವಾಗಿ ವಿಶ್ಲೇಷಿಸಬಹುದೇ?

ಹಿಂತಿರುಗಿ ನೋಡಿದರೆ ಕಾಂಗ್ರೆಸ್ ಒಡೆದಾಗ ಕಾಂಗ್ರೆಸ್ (ಒ) ಆಗಿ ರೂಪುಗೊಂಡವರೆಲ್ಲಾ ಆಗ ಇಂದಿರಾಗಾಂಧಿ ತೋರುತ್ತಿದ್ದ ಎದಪಂಥೀಯ ಒಲವನ್ನು ವಿರೋಧಿಸುತ್ತಿದ್ದ ಊಳಿಗಮಾನ್ಯ ಶಕ್ತಿಗಳೇ. ಇಂದಿರಾಗಾಂಧಿಯವರ ಎಡ ಘೋಷಣೆಗಳೂ ಕೂಡು ಹುಸಿಯೆಂದು ಅ ನಂತರ ಸಾಬೀತಾದರೂ ಆಗ ಇಂದಿರಾ ವಿರೋಧವಂತೂ ಇದ್ದದ್ದು ಅದರ ಭೂಹೀನರ ಪರ ಬಡಜನರ ಪರ ನಿಲುವುಗಳಿಂದ.

ಆ ನಂತರದ ಜನತಾ ಪಕ್ಷವು ಇಂದಿರಾ ಸರ್ವಾಧಿಕಾರದ ವಿರುದ್ಧ ರೂಪುಗೊಂಡಿದ್ದರೂ ಕರ್ನಾಟಕದಲ್ಲಂತೂ ದೇವರಾಜು ಅರಸು ನೇತೃತ್ವದ ಕಾಂಗ್ರೆಸ್ಸು ಊಳಿಗಮಾನ್ಯ ಶಕ್ತಿಗಳನ್ನು ದುರ್ಬಲಗೊಳಿಸುವ ರಾಜಕಾರಣದಲ್ಲಿ ತೊಡಗಿತ್ತು.

1972 ರಲ್ಲಿ ದೇವೇಗೌಡರು ಕರ್ನಾಟಕದ ಶಾಸಸಭೆಯಲ್ಲಿ ಕಾಂಗ್ರೆಸ್(ಓ) ನಾಯಕರಾಗಿ ವಿರೋಧ ಪಕ್ಷದ ನಾಯಕರಾಗಿದ್ದರು. ಆಗ ವಿಧಾನ ಸಭೆಯಲ್ಲಿ ಸಮಾಜವಾದಿ ಪಕ್ಷದ ಮೂವರು ಸದಸ್ಯರು ಮತ್ತು ಕಮ್ಯುನಿಸ್ತ್ ಪಕ್ಷದ ಮೂವರು ಸದಸ್ಯರು ಸಹ ವಿರೋಧಿಗಳ ಸಾಲಿನಲ್ಲಿದ್ದರು.

ದೇವೇಗೌಡರು ಅರಸು ಅವರೊಂದಿಗೆ ಸ್ನೇಹದಲ್ಲಿದ್ದರು ಮತ್ತು ಅವರ ಸರ್ಕಾರದ ಭ್ರಷ್ಟಾಚಾರಗಳನ್ನು ಮಾತ್ರ ಬಯಲುಗೊಳಿಸುತ್ತಿದ್ದರೇ ವಿನಾ ಅವರ ಜನಪರ ನೀತಿಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ ಎಂದು ಲೇಖಕರು ವಕಾಲತ್ತು ವಹಿಸುತ್ತಾರೆ.

ಇದು ಸತ್ಯ. ಆದರೆ ಅರ್ಧ ಸತ್ಯವೆಂದು ಮತ್ತೊಂದು ಉದಾಹರಣೆಗೆ ಸಾಬೀತು ಪಡಿಸುತ್ತದೆ.

ಅರಸು ಅವರ ಭೂ ಸುಧಾರಣೆಯ ಮೂಲ ಕರಡು ಅಷ್ಠೊಂದು ಕ್ರಾಂತಿಕಾರಿಯಾಗೇನೂ ಇರಲಿಲ್ಲ. ಅದರ ಅಂತರ್ಗತ ಭೂ ಮಾಲೀಕ ಪರತೆಯನ್ನು ವಿರೋಧಿಸಿ ವಿರೋಧಿಗಳ ಸಾಲಿನಲ್ಲಿದ್ದ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ಸರ್ಕಾರದ ವಿರುದ್ಧ ಸಂಘರ್ಷ ಹೂಡುತ್ತಾರೆ. ಅದರ ಪರಿಣಾಮವಾಗಿಯೇ ಕಕ್ಕಿಲ್ಲಾಯ ಅವರ ನೇತೃತ್ವದಲ್ಲಿ ಸದನ ಸಮಿತಿಯೊಂದು ನೇಮಕವಾಗಿ ಅದರ ಶಿಫ಼ಾರಸ್ಸನ್ನು ಸಂಪೂರ್ಣವಾಗಿ ಅರಸು ಸರ್ಕಾರ ಒಪ್ಪಿಕೊಂಡ ನಂತರ ಭೂ ಸುಧಾರಣೆ ನೀತಿಗೆ ಇದ್ದಿದ್ದರಲ್ಲಿ ಸ್ವಲ್ಪ ಕ್ರಾಂತಿಕಾರಿ ಸ್ವರೂಪ ಬರುತ್ತದೆ. ಇದು ದೇವರಾಜು ಅರಸು ಅವರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳಾಗಿದ್ದ ಸಮಾಜವಾದಿ ಮತ್ತು ಕಮ್ಯುನಿಸ್ಟ್ ಪಕ್ಷಗಳು ವಹಿಸಿದ ಪಾತ್ರ.

ಆದರೆ ದೇವೇಗೌಡರ ನೇತೃತ್ವದ ಕಾಂಗ್ರೆಸ್ (ಒ) ಪಕ್ಷ ಅಧಿಕೃತ ವಿರೋಧ ಪಕ್ಷವಾಗಿದ್ದರೂ ಇದರ ಬಗ್ಗೆ ಮೌನ ವಹಿಸಿತು. ಲೇಖಕರೇ ಹೇಳುವಂತೆ ಮುಂದೆ ಜನತ ಪಕ್ಷವಾದಾಗಲೂ ದೇವೇಗೌಡರಿಗೆ ಜೆಪಿಯವರ ಸಂಪೂರ್ಣ ಕ್ರಾಂತಿ ಪರಿಕಲ್ಪನೆಯ ಬಗ್ಗೆ ವಿರೋಧವೂ ಇರಲಿಲ್ಲ. ಸಮ್ಮತಿಯೂ ಇರಲಿಲ್ಲ.

ಮುಂದೆ 1984 ರಲ್ಲಿ ವಂಕಟಸ್ವಾಮಿ ವರದಿಯು ಒಕ್ಕಲಿಗ ಸಮುದಾಯವನ್ನು ಪ್ರಬಲ ಜಾತಿಗಳೆಂಬ ಆಧಾರದಲ್ಲಿ ಹಿಂದುಳಿದ ಜಾತಿಗಳ ಮೀಸಲಾತಿಯಿಂದ ಹೊರಗಿಟ್ಟಾಗ ದೇವೇಗೌಡರ ನಿಲುವು ಮತ್ತು ವರ್ತನೆಗಳನ್ನು ಲೇಖಕರು ಅಷ್ಟಾಗಿ ವಿಶ್ಲೇಷಣೆ ಮಾಡಲು ಹೋಗದಿರುವುದೂ ಕೂಡ ಪುಸ್ತಕದ ಮಿತಿಯಾಗಿ ಕಾಣಿಸುತ್ತದೆ.

ಆದರೆ ಲೇಖಕರು ಒತ್ತಿ ಹೇಳುವ ಒಂದು ಅಂಶ ನಿಜ. ಕಾಂಗ್ರೆಸ್ (ಒ)ನ ಆಗಿನ ಇನ್ನಿತರ ಹಿರಿಯ ನಾಯಕರಾಗಿದ್ದ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ನಿಜಲಿಂಗಪ್ಪ, ಜತ್ತಿ ಯವರುಗಳು ಕೂಡ ಇಷ್ಟೆ ಬಲಿಷ್ಟ ಜಾತಿ ಪರವಾದ ನಿಲುವನ್ನು ಹೊಂದಿದ್ದರೂ ಮಾಧ್ಯಮಗಳು ಮತ್ತು ಸಾರ್ವಜನಿಕರು ದೇವೇಗೌಡರನ್ನು ವಿಮರ್ಶಿಸಿದಷ್ಟು ವಿಮರ್ಶೆ ಮಾಡಲಿಲ್ಲ.

ಇಂಗ್ಲೀಷ್ ಹಾಗೂ ಕಾರ್ಪೊರೇಟ್ ಮಾಧ್ಯಮಗಳ ಈ ಬ್ರಾಹ್ಮಣೀಯ ಸೋಗಲಾಡಿತನವನ್ನು ಲೇಖಕರು ಉದ್ದಕ್ಕೂ ಚೆನ್ನಾಗಿಯೇ ಬಯಲು ಮಾಡುತ್ತಾರೆ. ಅಷ್ಟರ ಮಟ್ಟಿಗೆ ಅದು ಸರಿ.

ಆದರೆ ಅದು ದೇವೇಗೌಡರು ಮಾಡಿದ ಅದೇ ತಪ್ಪುಗಳಿಗೆ ಹೇಗೆ ಸಮರ್ಥನೆಯಾಗುತ್ತದೆ?

ದೇವೇಗೌಡರು ರಾಜಕಾರಣದಲ್ಲಿ ಮೊರಾರ್ಜಿ ದೇಸಾಯಿಯವರನ್ನು ತಮ್ಮ ಅತ್ಯಂತ ಮೆಚ್ಚಿನ ಗುರುವನ್ನಾಗಿ ಮಾನ್ಯ ಮಾಡುತ್ತಿದ್ದರು. ಅದಕ್ಕೆ ಅವರಿಬ್ಬರಲ್ಲಿ ಇದ್ದ ದೈವ ಶ್ರದ್ಧೆ ಹಾಗೂ ಮುಲಾಜಿಲ್ಲದ ನಡವಳಿಕೆಗಳ ಸಾಮ್ಯತೆ ಕಾರಣವಿರಬಹುದು ಎಂದು ಲೇಖಕರು ಸೂಚಿಸುತ್ತಾರೆ. ಆದರೆ ಮುರಾರ್ಜಿ ದೇಸಾಯಿಯವರು ಭಾರತದ ರಾಜಕಾರಣ ಕಂದ ಅತ್ಯಂತ ಪ್ರತಿಗಾಮಿ, ಊಳಿಗಮಾನ್ಯ ಹಿತಾಸಕ್ತಿಯುಳ್ಳ, ಸಮಾಜವಾದ ಹಾಗೂ ಸೆಕ್ಯುಲಾರಿಸಂನ ಕಡುವಿರೋಧಿಗಳಲ್ಲಿ ಒಬ್ಬರು ಎಂಬುದನ್ನು ಲೇಖಕರು ಏಕೆ ಹೇಳುವುದಿಲ್ಲ ಎಂಬುದು ಅಸ್ಪಷ್ಟ.

ಅದೇ ರೀತಿ ಕುಟುಂಬ ರಾಜಕಾರಣದ ಬಗ್ಗೆಯೂ ಲೇಖಕರು ದೇವೇಗೌಡರಿಗೆ ಸಂಪೂರ್ಣ ರಿಯಾಯತಿ ಕೊಡುತ್ತಾರೆ. ಇಡಿ ಪುಸ್ತಕದಲ್ಲಿ ದೇವೇಗೌಡರ ಕುಟುಂಬ ರಾಜಕಾರಣ ಮತ್ತು ವ್ಯಾಮೋಹದ ಬಗ್ಗೆ ವಿಮರ್ಶಾತ್ಮಕವಾದ ಕೇವಲ ನಾಲ್ಕು ಸಾಲುಗಳಿವೆ!.

ಆದರೆ ಉಪಸಂಹಾರದಲ್ಲಿ ಆ ನಾಲ್ಕು ಸಾಲುಗಳನ್ನು ನುಂಗಿಹಾಕುವಂತ ಸಮರ್ಥನೆಗಳನ್ನು ಲೇಖಕರು ಒದಗಿಸುತ್ತಾರೆ.

ಕಾಂಗ್ರೆಸ್ಸನ್ನೊ ಒಳಗೊಂಡಂತೆ ಎಲ್ಲಾ ಪ್ರಾದೇಶಿಕ ಪಕ್ಷಗಳಲ್ಲೂ ಸ್ಥಾಪಕ ಕುಟುಂಬಗಳಿಗೆ ಮಾತ್ರ ಪಕ್ಷವನ್ನು ಉಳಿಸುವ ಬಂಧವಿರುತ್ತದಾದ್ದರಿಂದ ಅದು ಅನಿವಾರ್ಯ ಎಂಬ ವಿಚಿತ್ರ ಪ್ರಜಾತಂತ್ರ ವಿರೋಧಿ ತರ್ಕ ಮಾಡುತ್ತಾರೆ.

ಇಲ್ಲಿ ದೇವೇಗೌಡರನ್ನು ಕುಟುಂಬ ರಾಜಕಾರಣಕ್ಕಾಗಿ ದೂಷಿಸುವವರು ಇತರ ಪಕ್ಷಗಳನ್ನು ದೂಷಿಸದ ಸೋಗಲಾಡಿತನದ ಬಗ್ಗೆ ಲೇಖಕರು ಗಮನ ಸೆಳೆಯುವುದು ಸರಿಯಾಗಿಯೇ ಇದೆ. ಆದರೆ ಅದು ದೇವೇಗೌಡರ ಮಾಡುತ್ತಿರುವ ಅದೇ ತಪ್ಪಿಗೆ ಅದು ಸಮರ್ಥನೆಯೇ ?

ಮತ್ತೊಮ್ಮೆ ಇದೇ ತರ್ಕವನ್ನು ಲೇಖಕರು ದೇವೇಗೌಡರ ಪಕ್ಷವು ಬಿಜೆಪಿ ಯೊಂದಿಗೆ ಮಾಡಿಕೊಂಡ ಅಥವಾ ಮಾಡಿಕೊಳ್ಳುತ್ತಿರುವ ಮೈತ್ರಿಯ ತಪ್ಪನ್ನು ಗೌಣಗೊಳಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ.

ಸೆಕ್ಯುಲಾರ್ ಎಂದು ಹೇಳಿಕೊಳುವ ಎಲ್ಲಾ ಪಕ್ಷಗಳು ಒಂದಲ್ಲ ಒಂದು ಕಾಲದಲ್ಲಿ ಗೌಡರಿಗಿಂತ ಮೊದಲೇ ಬಿಜೆಪಿಯೊಂದಿಗೆ ಮೈತಿ ಮಾಡಿಕೊಂಡಿದ್ದರೂ ಕೇವಲ ದೇವೇಗೌಡರ ಪಕ್ಷ ಮಾಡಿಕೊಂಡ ಮೈತ್ರಿಯ ಬಗೆಗಿನ ವಿಮರ್ಶೆಯ ಸೋಗಲಾಡಿತನ ಮಾತ್ರ ಪುಸ್ತಕದಲ್ಲಿ ಟೀಕೆಗೆ ಗುರಿಯಾಗುತ್ತದೆ.

Rahulgandi : ಮತದಾರ ಪಟ್ಟಿಯಲ್ಲಿ ಹೇಗೆ  ಅಕ್ರಮ ಆಯ್ತು #pratidhvani #watch #rahulgandhi #narendramodi

ದೇವೇಗೌಡರ ಮತ್ತವರ ಪಕ್ಷದ ಮಿತಿಗಳೇನೇ ಆಗಿದ್ದರೂ ದೇವೇಗೌಡರು ಪ್ರಧಾನಿಯಾದ 10 ತಿಂಗಳಲ್ಲಿ ತೋರಿದ ಕ್ರಿಯಾಶೀಲತೆಯನ್ನು ಮಾಧ್ಯಮಗಳು ಮತು ದೇಶ ಅವಗಣನೆ ಮಾಡಿವೆ ಮತ್ತು ಅದಕ್ಕೆ ಸಮಾಜದ ಸ್ಥಾಪಿತ ಪೂರ್ವಗ್ರಹಗಳೇ ಕಾರಣ ಎಂಬುದು ಅಕ್ಷರಶಃ ಸತ್ಯ.

ದೇವೇಗೌಡರು ಮಾಡಿದ್ದಷ್ಟನ್ನು ಇತರ ಕುಲೀನರು ಮಾಡಿದ್ದರೆ ಅವರ ಸುತ್ತಾ ಸೃಷ್ಟಿಯಾಗುತ್ತಿದ್ದ ಪ್ರಭಾ ವಲಯವೇ ಬೇರೆ. ಅಷ್ಟರಮಟ್ಟಿಗೆ ದೇವೇಗೌಡರಿಗಾದ ಅನ್ಯಾಯವನ್ನು ಈ ಪುಸ್ತಕ ಸರಿಪಡಿಸುತ್ತದೆ.

ಆದರೂ ಕೃತಿಯುದ್ದಕ್ಕೂ ಸುಗತರಂಥ ಅಧ್ಯಯನಶೀಲ ಪತ್ರಕರ್ತರು ದೇವೇಗೌಡರ ಪ್ರಧಾನಿಯಾಗಿ ಕೈಗೊಂಡ ಎಲ್ಲಾ ಕ್ರಮಗಳನ್ನು ಅಷ್ಟೊಂದು ಅವಿಮರ್ಶಾತ್ಮಕವಾಗಿ ಎಲ್ಲವನ್ನು ಅಪರೂಪದ ಸಾಧನೆಯೆಂದು ಬಣ್ಣಿಸಿರುವುದು ನಿರಾಶೆ ಮೂಡಿಸುತ್ತದೆ.

ಕಾಶ್ಮೀರದ ಕಣ್ಮಣಿ ಆರ್ಟಿಕಲ್ 370 ರದ್ದನ್ನು ಸಮರ್ಥಿಸಿದ್ದೇಕೆ?

ಉದಾಹರಣೆಗೆ :

ಕಾಶ್ಮೀರದಲ್ಲಿ ಸತತ ಏಳು ವರ್ಷಗಳಿಂದ ನಡೆಯದ ಚುನಾವಣೆಗಳನ್ನು 1996 ರಲ್ಲಿ ದೇವೇಗೌಡರು ನಡೆಸಿದ್ದು, ಹಾಗೂ ಆ ಭಯೊತ್ಪಾದಕ ಸಿಕ್ತ ರಾಜ್ಯಕ್ಕೆ ಯಾವ ಪ್ರಧಾನಿಯೂ ಭೇಟಿ ಕೊಡದಿದ್ದ ಸಂದರ್ಭದಲ್ಲಿ ನಾಲ್ಕು ಬಾರಿ ಭೇಟಿ ಕೊಟ್ಟು ತೆರೆದ ಜೀಪಿನಲ್ಲಿ ಪ್ರಯಾಣಿಸುತ್ತಾ ವಿಶ್ವಾಸ ತುಂಬಿದ್ದು ಎಲ್ಲವೂ ತನ್ನಂತೆ ತಾನೇ ಒಂದು ಸಾಧನೆಯೇ .

ಆದರೆ ಅದು ಜನರಲ್ಲಿ ವಿಶ್ವಾಸ ತುಂಬಿತೇ, ಚುನಾವಣೆ ನ್ಯಾಯ ಸಮ್ಮತವಾಗಿ ನಡೆಯಿತೇ?

ಇದರ ಬಗ್ಗೆ ದೇವೇಗೌಡರು ಹೇಳಿದ್ದನ್ನು ಮತ್ತು ಆ ಕ್ರಮದ ನೇರ ಫ಼ಲಾನುಭವಿಗಳನ್ನು ಹೇಳಿದ್ದನ್ನು ಮಾತ್ರವಲ್ಲದೆ ಅದಕ್ಕೆ ಬಲಿಪಶುಗಳಾದವರ ಅಥವಾ ಸ್ವತಂತ್ರ ವರದಿಗಳನ್ನು ಲೇಖಕರು ಪರಂಬರಿಸಿದ್ದರೆ ಕೃತಿ ಇನ್ನಷ್ಟು ಮೌಲಿಕವಾಗುತ್ತಿತ್ತು.

ವಿಪರ್ಯಾಸವೆಂದರೆ 2019 ರಲ್ಲಿ ಕಾಶ್ಮೀರದ ವಿಶೇಶ ಸ್ಥಾನಮಾನವನ್ನು ರದ್ದು ಮಡಿದ ಮೋದಿ ಸರ್ಕಾರದ ಮಸೂದೆಯನ್ನು ದೇವೇಗೌಡರು ಖಂಡಿಸುತ್ತಾರೆ. ಆದರೆ ಅವರ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಅವರ ಪುತ್ರರಾದ ಕುಮಾರಸ್ವಾಮಿಯವರು ಅದರಿಂದಾಗಿ ಕಾಶ್ಮೀರದಲ್ಲ್ಲಿ ಶಾಂತಿ ಸ್ಥಾಪನೆಯಾಗುವುದಾದರೆ ಮಸೂದೆಯನ್ನು ಸಮರ್ಥಿಸುತ್ತೇವೆ ಎಂದು ಹೇಳಿಕೆಯಿತ್ತಿದ್ದರು.

ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಆಗ ಸಂಸತ್ ಸದಸ್ಯರಾಗಿದ್ದರು.

ಮಸೂದೆಯ ಪರವಾಗಿ ಆಗಲೀ, ಅಥವಾ ವಿರೋಧವಾಗಿಯಾಗಲೀ ಅವರು ಮತ ಚಲಾಯಿಸಿದ ದಾಖಲೆಗಳು ಸಂಸತ್ತಿನ ಕಡತಗಳಿಲ್ಲ.

ಇದನ್ನು ಗಮನಕ್ಕೆ ತೆಗೆದುಕೊಳ್ಳದೆ ಕಾಶ್ಮೀರದ ಬಗ್ಗೆ ದೇವೇಗೌಡರ ಮಮತೆಯನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ಹಾಗೆಯೇ ಈಶಾನ್ಯ ಭಾರತಕ್ಕೆ ವಿಶ್ವಾಸ ತುಂಬುವ ಕಾರ್ಯಕ್ರಮ ಹಾಗೂ ಅಲ್ಲಿ ಏಳು ದಿನಗಳ ಕಾಲ ಖುದ್ದು ಪ್ರವಾಸ ಮಾಡಿದ ದೇವೇಗೌಡರ ಕ್ರಮಗಳು ಭಾರತದ ಜನರಿಗೆ ಗೊತ್ತೇ ಇರಲಿಲ್ಲ ಎಂದರೂ ನಡೆಯುತ್ತದೆ. ಅದು ನಿಜಕ್ಕೂ ಪ್ರಶಂಸನೀಯ ದೂರಗಾಮಿ ಕ್ರಮ.

MP Rahul Gandhi: "ಸತ್ಯವೆಂದರೆ ಭಾರತದಲ್ಲಿ ಚುನಾವಣಾ ವ್ಯವಸ್ಥೆ ಈಗಾಗಲೇ ಸತ್ತಿದೆ..! #pmmodi #congress

ಆದರೆ ಕಾಶ್ಮೀರದ ಅಥವಾ ಈಶಾನ್ಯ ಭಾರತದ ಐತಿಹಾಸಿಕ ರಾಷ್ಟ್ರೀಯತಾ ಸಮಸ್ಯೆಗಳನ್ನು ಕೇವಲ ನಿರುದ್ಯೋಗದ ಸಮಸ್ಯೆ ಎಂದು ಅರ್ಥಮಾಡಿಕೊಂಡದ್ದನ್ನೇ ದೇವೇಗೌಡರು ಮುಂದುವರೆಸಿದ್ದು ಎರಡೂ ಭಾಗಗಳ ರಾಜಕೀಯ ಸಮಸ್ಯೆ ಮುಂದುವರೆಯಲು ಕಾರಣವಲ್ಲವೇ?

ಲೇಖಕರು ಅದರ ಬಗ್ಗೆ ಮೌನವಾಗಿರುವುದು ಕೂಡ ಸಮಸ್ಯಾತ್ಮಕ.

ಹಾಗೆಯೇ

ನರ್ಮದ ಯೋಜನೆ ಹಾಗೂ ತೆಹ್ರಿ ಅಣೆಕಟ್ಟು ಯೋಜನೆಯ ವಿರೋಧ: ವನ್ನು ದೇವೇಗೌಡರು ಯಶಸ್ವಿಯಾಗಿ ನಿಭಾಯಿಸಿದರು ಎಂದು ಲೇಖಕರು ದೇವೇಗೌಡರಿಗೆ ಪ್ರಮಾಣ ಪತ್ರ ಕೊಡುತ್ತಾರೆ. ಆದರೆ ಪುಸ್ತಕದಲ್ಲಿನ ವಿವರಗಳೇ ಸೂಚಿಸುವಂತೆ ಎರಡೂ ಯೋಜನೆಯನ್ನು ಮುಂದುವರೆಸಲು ದೇವೇಗೌಡರು ತೆಗೆದುಕೊಂಡ ತೀರ್ಮಾನಗಳು ಆದಿವಾಸಿ ವಿರೋಧಿ ಹಾಗೂ ಕಾರ್ಪೊರೇಟ್ ಪರವಾಗಿದ್ದವು ಮತ್ತು ಅವು ಅವರ ಸಾಧನೆಗಳ ಗರಿಗಳಲ್ಲ. ಬದಲಿಗೆ ಗೌಡರನ್ನೂ ಒಳಗೊಂಡಂತೆ ಭಾರತದ ಅಳುವ ವರ್ಗಗಳ ಜನವಿರೋಧಿ ದೃಷ್ಟಿಕೋನದ ವೈಫ಼ಲ್ಯದ ಕಪ್ಪುಚುಕ್ಕೆಗಳಾಗಿದ್ದವು.

ಲೇಖಕರು ಅದನ್ನು ಬಲ್ಲವರಾಗಿದ್ದೂ ಅದನ್ನು ಸಾಧನೆಯೆಂದು ಬಣ್ಣಿಸಿಬಿಡುತ್ತಾರೆ.

ಇವಲ್ಲದೆ ಸ್ಪಷ್ಟವಾಗಿ ನಗರ ಭೂ ಕಬಳಿಕೆ ಯೋಜನೆಗಳಾಗಿದ್ದ ಬೆಂಗಳೂರು ಮೈಸುರು ಕಾರಿಡಾರ್ ಯೋಜನೆ, ಐಟಿ ಕಂಪನಿಗಳಿಗಾಗಿ ನಗರ ಭೂ ಸ್ವಾಧೀನ ತಿದ್ದುಪಡಿ ನೀತಿ, ವಿದೇಶಿ ಬಂಡವಾಳಕ್ಕೆ ಪೈಪೋಟಿಯಲ್ಲಿ ರಿಯಾಯತಿ ಕೊಡುವುದು, ಕೊಜೆಂಟ್ರಿಕ್ಸ್ ಮತ್ತು ಎನ್ರಾನ್ ನಂತಹ ವಂಚಕ ಹಾಗೂ ಮೋಸದ ಕಂಪನಿಗಳಿಗೆ ಪರವಾನಗಿ ಕೊಟ್ಟಿದ್ದನ್ನು ಸಹ ಲೇಖಕರು ದೇವೇಗೌಡರ ಸಾಧನೆಯ ಪಟ್ಟಿಗೆ ಸೇರಿಸಿರುವುದು ಆಶ್ಚರ್ಯಕರವಾಗಿದೆ.

ಮತ್ತೊಂದು ವಿಸಂಗತಿಯೂ ಪುಸ್ತಕದಲ್ಲಿದೆ.

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯ ಭಾಗವಾಗಿ ಮುಸ್ಲಿಮರಿಗೆ ಮೀಸಲಾತಿಯನ್ನು 1959 ರಲ್ಲಿ ನಾಗನಗೌಡ ಸಮಿತಿಯ ವರದಿ ಕಾಲದಿಂದಲೂ ಒದಗಿಸಲಾಗುತ್ತಿದೆ. ಅದನ್ನು ಹಾವನೂರು ಸಮಿತಿ ನಿರಾಕರಿಸಿದಾಗ ಕರ್ನಾಟಕ ಹೈಕೋರ್ಟು ಮರುಸ್ಥಾಪಿಸುತ್ತದೆ. ನಂತರ ಹೆಗಡೆ ಸರ್ಕಾರದಲ್ಲೂ ಮುಸ್ಲಿಂ ಮೀಸಲಾತಿ ಮುಂದುವರೆಯುತ್ತದೆ.

1990 ರಲ್ಲಿ ಚಿನ್ನಪ್ಪ ರೆಡ್ಡಿ ಆಯೋಗ ಅತ್ಯಂತ ಸ್ಪಷ್ಟವಾಗಿ ಮುಸ್ಲಿಮರನ್ನು ಹಿಂದುಳಿದವರೆಂದು ಘೋಷಿಸಿ ಮೀಸಲಾತಿ ಶಿಫ಼ಾರಸು ಮಾಡುತ್ತದೆ.

ಅದನ್ನು ಆಧರಿಸಿ ಕಾಂಗ್ರೆಸ್ಸಿನ ವೀರಪ್ಪ ಮೊಯ್ಲಿ ಸರ್ಕಾರ 1994 ರ ಚುನಾವಣೆಗೆ ಮುನ್ನ ಶೇ. 4 ರಷ್ಟು ಮೀಸಲಾತಿ ಘೋಷಿಸಿ ಆದೇಶ ಹೊರಡಿಸುತ್ತದೆ.

ಆ ನಂತರ ಅಧಿಕಾರಕೆ ಬಂದ ದೇವೇಗೌಡರ ಸರ್ಕಾರವೂ ಅದೇ ನೀತಿಯನ್ನು ಮುಂದುವರೆಸುತ್ತದೆ.

ಆದರೆ ಲೇಖಕರು ದೇವೇಗೌಡರ ಪಕ್ಷ ಹೇಳುವಂತೆ ಅದು ದೇವೇಗೌಡರ ಕೊಡುಗೆ ಎಂಬಂತೆ ತಪ್ಪಾಗಿ ದಾಖಲಿಸುತ್ತಾರೆ.

ಬಾಬ್ರಿ ಮಸೀದಿ ನಾಶ ವಿರೋಧಿಸಿದವರು ರಾಮಮಂದಿರ ಸ್ವಾಗತಿಸುತ್ತಾರೆ?

ಸೆಕ್ಯುಲಾರಿಸಂ: ಬಗ್ಗೆ ದೇವೇಗೌಡರದ್ದು ನಿಸ್ಸಂಶಯವಾದ ಬದ್ಧತೆ ಎಂದು ಲೇಖಕರು ಮೇಲೆ ಹೇಳಲಾದ ಹಲವಾರು ಸಂಗತಿಗಳನ್ನು ಉಲ್ಲೇಖಿಸುತ್ತಾರೆ. ಆದರೆ ಗುಜರಾತ, ದೆಹಲಿ, ಮುಜಫ಼ರ್ ನಗರ ಹತ್ಯಾಕಾಂಡವನ್ನು ಮಾಡಿರುವ ಮತ್ತು ಮಾಡಿದ್ದನ್ನು ಸಮರ್ಥಿಸಿಕೊಳ್ಳುವ, ಮಣಿಪುರದಲ್ಲಿ ಜನಾಂಗೀಯ ನರಮೇಧವನ್ನು, ಈಶಾನ್ಯ ಭಾರತದಲ್ಲಿ ದೆಹಲಿ ದೌರ್ಜನ್ಯವನ್ನು ನಡೆಸುತ್ತಿರುವ, ಸಂವಿಧಾನವನ್ನು ಕೇಸರಿಕರಿಸುತ್ತಿರುವ, ರೈತ ಬದುಕನ್ನು ಕಾರ್ಪೊರೇಟ್ ಗುಲಾಮತನಕ್ಕೆ ತಳ್ಳುತ್ತಿರುವ ಮೋದಿ ನೇತೃತ್ವದ ಬಿಜೆಪಿ ಪಕ್ಷದೊಂದಿಗೆ ದೇವೇಗೌಡರ ನೇತೃತ್ವದಲ್ಲಿ ಅವರ ಪಕ್ಷವೇ ಹೊಂದಾಣಿಕೆ ಮಾಡಿಕೊಂಡಿದೆ.

2006 ರಲ್ಲಿ ಕನಿಷ್ಟ ಪಕ್ಷ ಮಾತು ಮುರಿದ ಮಗ ಎಂಬ ನೆಪವಾದರೂ ಇತ್ತು.

ಈಗ ದೇವಗೌಡರೇ ಕರ್ನಾಟಕದಲ್ಲಿ ಕೇಸರಿ-ಹಸಿರು ರಥದ ಸಾರಥಿ.

ಮೊನ್ನೆ ತಮ್ಮ 92 ನೇ ಜನ್ಮ ದಿನದಂದು ಅಭಿನಂದಿಸಿದ ಮೋದಿಗೆ ಪತ್ರ ಬರೆದಿರವ ದೇವೇಗೌಡರು ಮೂರನ ಬಾರಿ ಮೋದಿಯನ್ನು ಪ್ರಧಾನಿಯನ್ನಾಗ ಕಾಣುವುದೇ ತಮ್ಮ ಜೀವನದ ಆಶಯ ಎಂದು ಮರುಪತ್ರ ಬರೆದಿದ್ದಾರೆ.

ಹಾಲಿ ಚುನಾವಣೆಯಲ್ಲಿ ಮೋದಿಯವರು ದಿನ ಬೆಳಗಾದರೆ ಮುಸ್ಲಿಮರ ಮೇಲೆ, ಸಂವಿಧಾನದ ವಿರುದ್ಧ, ಸೆಕ್ಯುಲಾರಿಸಂ ವಿರುದ್ಧ ಮಾಡುತ್ತಿರುವ ದಾಳಿಯ ಬಗ್ಗೆ ದೇವೇಗೌಡರಾಗಲೀ, ಜೆಡಿಎಸ್ ಆಗಲೀ ಚಕಾರವೆತ್ತ್ತಿಲ್ಲ. ಮಹಿಳಾ ಪೀಡಕ ಬ್ರಿಜ್ ಬೂಷಣನ ಮಗನಿಗೆ , ಹತ್ರಾಸಿನಲ್ಲಿ ದಲಿತ ಯುವತಯನ್ನು ಅತ್ಯಾಚಾರ ಮಾಡಿ ಕೊಂದವರನ್ನ ಸಮರ್ಥಿಸಿಕೊಳ್ಳುವರಗೆ ಟಿಕೆಟ್ ಕೊಡುವ ಬಿಜೆಪಿ ಹಾಗೂ ಎಲ್ಲಾ ಗೊತ್ತಿದ್ದು ಕೀಚಕ ಪ್ರಜ್ವಲನಿಗೆ ಟಿಕೆಟು ಕೊಡಿಸುವ ಜೆಡಿಎಸ್ ಪಿತಾಮಹರು .. ಯಾವ ದೊಡ್ಡ ವ್ಯತ್ಯಾಸವೂ ಇಲ್ಲ.

ಅದೇರೀತಿ ಕಾಂಗ್ರೆಸ್ಸಿನಲ್ಲೂ ಇನ್ನು ಬಯಲಾಗದ ಹಲವು ಮಹಿಳಾ ಪೀಡಕರೂ, ಗುಪ್ತ ಹಿಂದೂತ್ವವಾದಿಗಳು ಇದ್ದಾರೆ.

ಈ ಶಕ್ತಿಗಳ ಪಕ್ಷಾತೀತ ಸಮರ್ಥನೆ ಮತ್ತು ರಕ್ಷಣೆಯಿಂದಲೇ ಯಾವ ಪಕ್ಶ್ಗ ಅಧಿಕಾರಕ್ಕೆ ಬಂದರೂ ಹಿಂದೂತ್ವ ಹಾಗೂ ಪುರುಷಾಧಿಪತ್ಯ ಅಧಿಕಾರ ಮಾಡತ್ತದೆ.

ಸೆಕ್ಯುಲಾರಿಸಂ ಬಗ್ಗೆ ಉದಾರವಾದಿ ಕುರುಡು ಕಳೆದು ನೈಜ ಪ್ರಜಾತಾಂತ್ರಿಕ ಸೆಕ್ಯಲಾರಿಸಂ ನ ಬೀದಿ ಸಂಘರ್ಷ ಮಾತ್ರ ಪುರಶಾಧಿಪತ್ಯವನ್ನು ಫ್ಯಾಸಿಸಂ ಅನ್ನು ಸೋಲಿಸಬಹುದು.

ಅಲ್ಲವೇ?

-ಶಿವಸುಂದರ್

Tags: #CMSiddaramaiah #DCMDKShivakumar #modi #PrajwalRevanna RASHOK ##PrajwalRevannaPenDriveCase #jdspratidh#CMSiddaramaiahBJPCongress PartyhddevegowdaHdKumaraswamyprajwalrevannaPrajwalRevanna Caseಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

Prajwal Revanna: ರೇಪಿಸ್ಟ್‌ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್; ಪ್ರಜ್ವಲ್ ಗೆ ಜೀವನ ಪರ್ಯಾಂತ ಜೀವಾವಧಿ ಶಿಕ್ಷೆ..!!

Next Post

Prajwal Revanna: ಪ್ರಜ್ವಲ್ ರೇವಣ್ಣ ತೀರ್ಪು ವಿಳಂಬಕ್ಕೆ ಶತ ಪ್ರಯತ್ನ ನಡೆದಿತ್ತು: ಬಿಕೆ ಸಿಂಗ್

Related Posts

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?
ಇದೀಗ

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

by ಪ್ರತಿಧ್ವನಿ
January 28, 2026
0

ಬೆಂಗಳೂರು : ವಿಧಾನಭೆಯಲ್ಲಿಂದು ಆಡಳಿತ ಮತ್ತು ವಿಪಕ್ಷಗಳ ನಡುವೆ ಟೀಕಾ ಪ್ರಹಾರ ಜೋರಾಗಿಯೇ ನಡೆದಿದೆ. ರಾಜ್ಯಪಾಲರಿಗೆ ಕೇಶವ ಕೃಪಾದಿಂದ ಫೋನ್‌ ಕರೆಗಳು ಬರುತ್ತವೆ. ಜಂಟಿ ಅಧಿವೇಶನದಲ್ಲಿ ಭಾಷಣ...

Read moreDetails
ಬಸ್ ಡ್ರೈವಿಂಗ್ ವೇಳೆ ಚಾಲಕರ ಮೊಬೈಲ್ ಬಳಕೆಗೆ ಕಡಿವಾಣ ಹಾಕಿ : ಸರ್ಕಾರಕ್ಕೆ ಜಯ ಕರ್ನಾಟಕ ಸಂಘಟನೆ ಒತ್ತಾಯ..!

ಬಸ್ ಡ್ರೈವಿಂಗ್ ವೇಳೆ ಚಾಲಕರ ಮೊಬೈಲ್ ಬಳಕೆಗೆ ಕಡಿವಾಣ ಹಾಕಿ : ಸರ್ಕಾರಕ್ಕೆ ಜಯ ಕರ್ನಾಟಕ ಸಂಘಟನೆ ಒತ್ತಾಯ..!

January 28, 2026
ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

January 28, 2026
Siddaramaiah: ಸಿಎಂ ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಬಿಗ್ ರಿಲೀಫ್

Siddaramaiah: ಸಿಎಂ ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಬಿಗ್ ರಿಲೀಫ್

January 28, 2026
ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?

January 28, 2026
Next Post

Prajwal Revanna: ಪ್ರಜ್ವಲ್ ರೇವಣ್ಣ ತೀರ್ಪು ವಿಳಂಬಕ್ಕೆ ಶತ ಪ್ರಯತ್ನ ನಡೆದಿತ್ತು: ಬಿಕೆ ಸಿಂಗ್

Recent News

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?
Top Story

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?

by ಪ್ರತಿಧ್ವನಿ
January 28, 2026
ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌
Top Story

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
January 28, 2026
‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!
Top Story

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

by ಪ್ರತಿಧ್ವನಿ
January 28, 2026
JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?
Top Story

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

by ಪ್ರತಿಧ್ವನಿ
January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್
Top Story

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 28, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

January 28, 2026
ಬಸ್ ಡ್ರೈವಿಂಗ್ ವೇಳೆ ಚಾಲಕರ ಮೊಬೈಲ್ ಬಳಕೆಗೆ ಕಡಿವಾಣ ಹಾಕಿ : ಸರ್ಕಾರಕ್ಕೆ ಜಯ ಕರ್ನಾಟಕ ಸಂಘಟನೆ ಒತ್ತಾಯ..!

ಬಸ್ ಡ್ರೈವಿಂಗ್ ವೇಳೆ ಚಾಲಕರ ಮೊಬೈಲ್ ಬಳಕೆಗೆ ಕಡಿವಾಣ ಹಾಕಿ : ಸರ್ಕಾರಕ್ಕೆ ಜಯ ಕರ್ನಾಟಕ ಸಂಘಟನೆ ಒತ್ತಾಯ..!

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada