
ರೈತ ಕುಟುಂಬದ ಯುವಕರಿಗೆ ಎದುರಾಗಿರುವ ವಧುಗಳ ಕೊರತೆಯೂ ಹಳ್ಳಿಗಾಡಿನಲ್ಲಿ ಸಾಮಾಜಿಕ ಸಮಸ್ಯೆಯಾಗಿದೆ
ಯುವ ರೈತರಿಗೆ ಬೇಕು ಸಂಗಾತಿ, ಹಳ್ಳಿ ನಿವಾಸಿಗಳಿಗೆ ಹೆಣ್ಣು ಕೊಡುವವರಿಲ್ಲ . ಹೀಗೆ ಹುಟ್ಟಿಕೊಂಡಿರುವ ಚರ್ಚೆಗಳು ರೈತ ಕುಟುಂಬದ ಯುವಕರಿಗೆ ಎದುರಾಗಿರುವ ವಧುಗಳ ಕೊರತೆಯೂ ಹಳ್ಳಿಗಾಡಿನಲ್ಲಿ ಸಾಮಾಜಿಕ ಸಮಸ್ಯೆಯಾಗಿದೆ ಎನ್ನುವ ಚರ್ಚೆಯನ್ನು ಮುನ್ನೆಲೆಗೆ ತಂದಿವೆ. ಇದು ಸಮಕಾಲಿನ ಸಂದರ್ಭದಲ್ಲಿ ಕೃಷಿ/ಗ್ರಾಮ ಸಮಾಜ ಎದುರಿಸುತ್ತಿರುವ ಗಂಡಾಂತರಗಳನ್ನು ಸೂಚಿಸುತ್ತದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಜ್ಞರು ಕೃಷಿಯನ್ನು ಘನತೆಯಿಂದ ನೋಡಬೇಕು; ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗಿರುವುದು; ಜಾತಿ-ಉಪಜಾತಿಗಳು ಮತ್ತು ವರ್ಗಗಳ ನಡುವೆ ವೈವಾಹಿಕ ಸಂಬಂಧಗಳಿಗೆ ನಾವು ಹೆಚ್ಚಿನ ಪ್ರಮಾಣದಲ್ಲಿ ತೆರೆದುಕೊಂಡಿಲ್ಲದಿರುವುದು ಇದಕ್ಕೆ ಕಾರಣ ಎಂದಿದ್ದಾರೆ. ಇದು ಮೇಲ್ನೋಟಕ್ಕೆ ಸರಿ ಎನ್ನಿಸಿದರು ಹೆಚ್ಚು ಸರಳಿಕೃತ ದೃಷ್ಟಿಕೋನವಾಗಿದೆ. ಏಕೆಂದರೆ ಹಳ್ಳಿ ಯುವಕರನ್ನು ಮದುವೆಯಾಗಲು ಹೆಣ್ಣು ಮಕ್ಕಳು ಮುಂದೆ ಬರುತ್ತಿಲ್ಲ ಎನ್ನುವ ವಿದ್ಯಮಾನವು ಹೆಚ್ಚು ಸಂಕೀರ್ಣವಾಗಿದ್ದು, ಬಹು ಆಯಾಮಗಳ ಸ್ವರೂಪವನ್ನು ಹೊಂದಿದೆ. ಈ ವಿದ್ಯಮಾನವನ್ನು ಬಹು ಆಯಾಮಗಳ ಅನುಸಂಧಾನಗಳ (ಮಲ್ಟಿಪಲ್ ಅಪ್ರೋಚ್) ಮೂಲಕವೇ ಅರ್ಥ ಮಾಡಿಕೊಳ್ಳಬೇಕಾಗಿದೆ.
ಕೃಷಿ ಸಮಾಜ ಎದುರಿಸುತ್ತಿರುವ ಗಂಡಾಂತರಗಳನ್ನು ಸಮಕಾಲಿನ ಅನುಭವಗಳ ಆಧಾರದಲ್ಲಿ ಅರ್ಥಮಾಡಿಕೊಳ್ಳುವುದು ಅಗತ್ಯ. ಸಾಮಾಜಿಕ ವಿದ್ಯಮಾನಗಳನ್ನು ಗ್ರಹಿಸುವಾಗ, ಅರ್ಥ ಮಾಡಿಕೊಳ್ಳುವಾಗ ನಾವು ವಸ್ತುನಿಷ್ಠವಾಗಿರುವಾಗಲೇ ವ್ಯಕ್ತಿನಿಷ್ಠ ಜೀವನಾನುಭವಗಳಿಗೆ ತೆರೆದುಕೊಳ್ಳುತ್ತೇವೆ. ಅಂದರೆ ವಾಸ್ತವಿಕತೆಯನ್ನು ವಸ್ತುನಿಷ್ಠವಾಗಿ ನೋಡುವಾಗಲೇ ನಾವು ವ್ಯಕ್ತಿನಿಷ್ಠ ಅನುಭವಗಳಿಗೆ ಒಳಪಡುತ್ತೇವೆ. ಅನುಭವಗಳ ಆಧಾರದಲ್ಲಿ ಸಾಮಾಜಿಕ ರಚನೆಯಿಂದ ರೂಪುಗೊಳ್ಳುವ ಪ್ರಜ್ಞೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಹಳ್ಳಿಯ ಯುವಕರನ್ನು ಮದುವೆಯಾಗಲು ಹೆಣ್ಣುಮಕ್ಕಳು ಏಕೆ ಮುಂದೆ ಬರುತ್ತಿಲ್ಲ? ಇದಕ್ಕೆ ಕೃಷಿಯಲ್ಲಿ ಉಂಟಾಗಿರುವ ಸ್ಥಿತ್ಯಂತರಗಳು ಎಷ್ಟರಮಟ್ಟಿಗೆ ಕಾರಣವಾಗಿವೆ? ಅಭಿವೃದ್ಧಿ ನೀತಿಗಳು ಎಷ್ಟರ ಮಟ್ಟಿಗೆ ಕಾರಣವಾಗಿವೆ? ಇದಕ್ಕೆ ರಚನೆಯಲ್ಲಿರುವ ಅಸಮಾನತೆಗಳು ಹೇಗೆ ಕಾರಣವಾಗಿವೆ? ಇನ್ನು ಮುಂತಾದ ಪ್ರಶ್ನೆಗಳ ಮೂಲಕ ಹಳ್ಳಿವಾಸಿಗಳಿಗೆ ಹೆಣ್ಣು ಕೊಡುವವರಿಲ್ಲ ಎನ್ನುವ ವಿದ್ಯಮಾನವನ್ನು ಕೃಷಿ ಸಮಾಜದ ದುಡಿಮೆ ಮತ್ತು ಆರ್ಥಿಕ ಸ್ವರೂಪದಲ್ಲಿ ಉಂಟಾಗಿರುವ ಸ್ಥಿತ್ಯಂತರಗಳ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದು
ಮೊದಲಿಗೆ ಕೃಷಿ ಸಮಾಜದ ದುಡಿಮೆಯ ಸ್ವರೂಪದಲ್ಲಿನ ಉಂಟಾಗಿರುವ ಸ್ಥಿತ್ಯಂತರಗಳನ್ನು ನೋಡೋಣ. ಡಿಜಿಟಲ್ ತಂತ್ರಜ್ಞಾನವು ನಮ್ಮ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಬದುಕಿನ ಬಹು ಆಯಾಮಗಳನ್ನು ಮರುರೂಪಿಸುವ, ನಿಯಂತ್ರಿಸುವ, ನಿರ್ದೇಶಕ ಕೆಲಸ ಮಾಡುತ್ತಿವೆ. ಡಿಜಿಟಲ್ ತಂತ್ರಜ್ಞಾನವು ನಮ್ಮನ್ನು ಹಿಂದಿಗಿಂತಲೂ ಹೆಚ್ಚು ಬುದ್ಧಿವಂತರನ್ನಾಗಿ, ತಿಳಿದವರನ್ನಾಗಿ, ಶ್ರೀಮಂತರನ್ನಾಗಿ, ಮತ್ತು ಸಂತೋಷಗಳನ್ನಾಗಿ ಮಾಡಿದೆ. ಇದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಮನುಷ್ಯನ ಸಾಧ್ಯತೆಗಳನ್ನು ಎಲ್ಲಾ ಬಗೆ ತಂತ್ರಜ್ಞಾನಗಳು ವಿಸ್ತರಿಸಿವೆ. ಜೊತೆಗೆ ಹೊಸ ಹೊಸ ಅವಕಾಶಗಳನ್ನು, ಹೆಚ್ಚು ಶ್ರಮವಿಲ್ಲದ ದುಡಿಮೆಯ ಸಾಧ್ಯತೆಗಳನ್ನೂ ಸಹ ಸೃಷ್ಟಿಸುತ್ತಿದೆ. ಡಿಜಿಟಲ್ ತಂತ್ರಜ್ಞಾನ ನೀಡಿದ ಅವಕಾಶವನ್ನು ಬಳಸಿಕೊಂಡು ಗಳಿಸಿಕೊಂಡಿರುವ ನಾವು, ವೈಯಕ್ತಿಕ ಸ್ವಾತಂತ್ರ್ಯ ಸೇರಿ ಮತ್ತಿತರ ಸೌಲಭ್ಯಗಳನ್ನು ಉಳಿಸಿಕೊಳ್ಳುವ ಸಲುವಾಗಿ ಹೋರಾಡುತ್ತಿದ್ದೇವೆ. ಹಾಗೆಯೇ ಜೀವನದ ಕೆಲವು ಮೂಲಭೂತ ಜವಾಬ್ದಾರಿಗಳನ್ನೇ ಕೈಬಿಡುವ ಸ್ಥಿತಿಗೆ ತಲುಪಿದ್ದೇವೆ. ಅದರಲ್ಲಿಯೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ಪರಿಣಾಮವಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ವಿಸ್ತೃತವಾದ ಬದಲಾವಣೆಗಳು ಮತ್ತು ಸ್ಥಿತ್ಯಂತರಗಳು ಉಂಟಾಗುತ್ತಿವೆ. ಒಂದು ಕಡೆ ಉದ್ಯೋಗ ಅವಕಾಶಗಳು ಕುಗ್ಗುತಿವೆ ಮತ್ತೊಂದು ಕಡೆ ಕೌಶಲ್ಯ ಆಧಾರಿತ ಉದ್ಯೋಗಗಳು ವಿಸ್ತರಣೆ ಆಗುತ್ತಿವೆ ಎಂದು ಹೇಳುತ್ತಿದ್ದೇವೆ. ಇದಕ್ಕೆ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಉಂಟಾಗುತ್ತಿರುವ ದೊಡ್ಡ ಮಟ್ಟದ ಆವಿಷ್ಕಾರಗಳು ಕಾರಣವಾಗಿವೆ. ಇದನ್ನು ಒಂದು ನಿದರ್ಶನದ ಮೂಲಕ ನೋಡಬಹುದು.

ಈ ಮೊದಲು ನಮ್ಮ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚು ಶ್ರಮ ಆಧಾರಿತವಾಗಿತ್ತು. ನಾಟಿ ಮಾಡುವುದು, ಕಳೆ ಕೀಳುವುದು, ಬೆಳೆಯ ಕಟಾವು, ಒಕ್ಕಣೆ ಮತ್ತು ಸುಗ್ಗಿ ಕಾಲದಲ್ಲಿ ಮಾನವ ಶ್ರಮ ಹೆಚ್ಚು ಬಳಕೆಯಾಗುತ್ತಿತ್ತು. ಈ ರೀತಿಯ ಶ್ರಮದಾಯಕ ಕೆಲಸಗಳಿಂದ ಕೃಷಿ ಸಮಾಜದಲ್ಲಿಯೇ ಇರುವ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ ಹಾಗೂ ಭೂ ರಹಿತ ಕೃಷಿ ಕಾರ್ಮಿಕರಿಗೆ ಸ್ಥಳೀಯವಾಗಿ ದುಡಿಯುವ ಅವಕಾಶಗಳು ದೊರಕುತ್ತಿದ್ದವು. ಈಗ ನಾಟಿ, ಕಟಾವು, ಒಕ್ಕಣೆ, ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಣೆ ಸೇರಿ ಬಹುತೇಕ ಎಲ್ಲಾ ಕೃಷಿ ಚಟುವಟಿಕೆಗಳು ಯಾಂತ್ರಿಕೃತವಾಗಿವೆ. ಕೃಷಿಗಳಿಗೆ ಬಳಸಲಾಗುತ್ತಿದ್ದ ಎತ್ತಿನ ಗಾಡಿ, ಮರದ ನೇಗಿಲು, ಕುಂಟೆ, ಕೂರಿಗೆ, ಹಲುಬೆ ಇನ್ನು ಮುಂತಾದ ಪಾರಂಪರಿಕ ಕೃಷಿ ಉಪಕರಣಗಳು ಮತ್ತು ಪರಿಕರಗಳು ಕಾಣದಾಗಿವೆ. ಗ್ರಾಮೀಣ ಸುರ್ತಿಗಳಿಗೆ/ ಕೌಶಲಗಳಿಗೆ ಕೆಲಸವಿಲ್ಲದಂತಾಗಿದೆ. ಮರದ ಕೃಷಿ ಸಲಕರಣೆಗೆ ಬದಲಾಗಿ ಕಬ್ಬಿಣದ ಕೃಷಿ ಸಲಕರಣೆಗಳು ಮತ್ತು ಉಪಕರಣಗಳು ಬಂದಿವೆ. ಆಧುನಿಕ ತಂತ್ರಜ್ಞಾನವನ್ನು ಸ್ವಲ್ಪಮಟ್ಟಿಗೆ ತಿಳಿದಿರುವ ಮತ್ತು ತರಬೇತಿ ಪಡೆದಿರುವವರು ವೆಲ್ಡಿಂಗ್ ಶಾಪ್ ಮತ್ತು ಚಿಕ್ಕಪುಟ್ಟ ಫೌಂಡ್ರಿಗಳ ಮೂಲಕ ಕಬ್ಬಿಣದ ಕೃಷಿ ಸಲಕರಣೆಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದಾರೆ. ಕಬ್ಬಿಣದ ಕೃಷಿ ಸಲಕರಣೆಗಳ ಬೆಲೆ ಕಡಿಮೆ. ಇವುಗಳ ಬಾಳಿಕೆ ಹೆಚ್ಚು ದೀರ್ಘಕಾಲಿಕ. ಈ ಕಾರಣಕ್ಕಾಗಿ ಬಹುತೇಕರು ಕಬ್ಬಿಣದ ಕೃಷಿ ಸಲಕರಣೆಗಳನ್ನು ಬಳಸುತ್ತಿದ್ದಾರೆ. ಈ ಬೆಳವಣಿಗೆಯಿಂದ ಕೃಷಿ ಸಮಾಜದ ಪಾರಂಪರಿಕ ಜ್ಞಾನ ಮತ್ತು ವೃತ್ತಿ ಆಧಾರಿತ ಕೌಶಲಗಳು ನಿಧಾನವಾಗಿ ನೆಲೆ ಕಳೆದುಕೊಳ್ಳುತ್ತಿವೆ.

ಇದರ ಪರಿಣಾಮವಾಗಿ ನಮ್ಮ ಪರಿಸರದಲ್ಲಿ ಈಗ ಎತ್ತಿನಗಾಡಿ ಕಾಣಸಿಗುತ್ತಿಲ್ಲ. ಎತ್ತಿನ ಗಾಡಿಯನ್ನು ಟ್ರ್ಯಾಕ್ಟರ್, ಟಿಲ್ಲರ್,, ಆಟೋಗಳು ಇನ್ನು ಮುಂತಾದ ಚಿಕ್ಕ ಪುಟ್ಟ ವಾಹನಗಳು ಆಕ್ರಮಣ ಮಾಡಿವೆ. ಇವುಗಳ ರಿಪೇರಿಯನ್ನು ತಾಂತ್ರಿಕ ಶಿಕ್ಷಣವಿಲ್ಲದೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಮೊದಲು ಸ್ಥಳೀಯ ವರ್ಕ್ ಶಾಪ್ ಗಳಲ್ಲಿಯೇ ವಾಹನಗಳಲ್ಲಿ ರಿಪೇರಿ ಮಾಡಲಾಗುತ್ತಿತ್ತು. ಆದರೆ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ತಂತ್ರಜ್ಞಾನದಲ್ಲಿ ಉಂಟಾಗಿರುವ ಬಹುದೊಡ್ಡ ಬದಲಾವಣೆ ಸ್ಥಳೀಯವಾಗಿ ಹೊಸ ವಾಹನಗಳನ್ನು ರಿಪೇರಿ ಮಾಡಲಾಗದಂತೆ ರೂಪಿಸಲಾಗಿದೆ. ಇದು ಬೃಹತ್ ಬಂಡವಾಳಶಾಹಿ ವ್ಯವಸ್ಥೆಯು ಹೊಸ ವಾಹನಕ್ಕೆ ನೀಡುವ ವಾರೆಂಟಿ ರಾಜಕಾರಣದ ಕಾರ್ಯತಂತ್ರವಾಗಿದೆ. ಇದನ್ನು ಇಲ್ಲಿ ಹೆಚ್ಚು ಚರ್ಚೆ ಮಾಡುವುದಿಲ್ಲ. ಅಷ್ಟು ಮಾತ್ರವಲ್ಲ ಈಗ ಸಾಮಾನ್ಯ ವೃತ್ತಿಯಾಗಿ ಟೈಯರ್ ಪಂಚರ್ ಹಾಕುವ ಕೆಲಸವೂ ಇಲ್ಲವಾಗಿದೆ. ಸೈಕಲ್ ರಿಪೇರಿ ಇಲ್ಲವಾಗಿದೆ. ಒಬ್ಬ ಸ್ಥಳೀಯ ಮೆಕ್ಯಾನಿಕ್ ತನ್ನ ಅನುಭವದ ಹಿನ್ನೆಲೆಯಲ್ಲಿ ರಿಪೇರಿಗೆ ನೀಡುವ ಸಲಹೆಗಳಿಗಿಂತಲೂ ಒಂದು ಎಲೆಕ್ಟ್ರಾನಿಕ್ ಡಿವೈಸ್ ನೀಡುವ ಸಲಹೆ ಮುಖ್ಯವಾಗಿದೆ. ಸಮಕಾಲೀನ ಹೊಸ ಡಿಜಿಟಲ್ ಆಟೋಮೊಬೈಲ್ ತಂತ್ರಜ್ಞಾನದಲ್ಲಿ ರಿಪೇರಿಗಿಂತ ರೀಪ್ಲೇಸ್ಮೆಂಟ್ಗೆ ಆದ್ಯತೆ ನೀಡುತ್ತಿದೆ. ಇದು ಸ್ಥಳೀಯ ಸಣ್ಣಪುಟ್ಟ ವರ್ಕ್ ಶಪ್ ಗಳು ಕೆಲಸವಿಲ್ಲದೆ ನಶಿಸುವಂತೆ ಮಾಡುತ್ತಿದೆ. ಜೊತೆಗೆ ವಾಹನಗಳನ್ನು ಬಿಚ್ಚುವ ಮತ್ತು ಜೋಡಿಸುವ ಕೆಲಸವು ಬಹುತೇಕ ಯಾಂತ್ರಿಕೃತವಾಗಿದೆ. ಇದು ಸಮಯದ ಉಳಿತಾಯವನ್ನು ಮಾಡುತ್ತದೆ. ಗುಣಮಟ್ಟದ ಖಾತರಿಯನ್ನು ನೀಡುತ್ತದೆ ಎಂದು ಆಟೊಮೊಬೈಲ್ ಮಾರುಕಟ್ಟೆ ಪ್ರತಿಪಾದಿಸುತ್ತದೆ.

ಹೀಗಾಗಿ ಸಣ್ಣ ಬೈಕ್ ರಿಪೇರಿಯಿಂದ ಹಿಡಿದು ಬೃಹತ್ ಗಾತ್ರದ ಯಂತ್ರಗಳ ರಿಪೇರಿಯು ಸ್ಥಳೀಯ ಮೆಕ್ಯಾನಿಕ್ ಗಳಿಗೆ ಬದಲಾಗಿ, ಬಂಡವಾಳಶಾಹಿಗಳ ಕಂಪನಿ ವಾಹನ ಶೋರೂಂಗಳನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನಗಳು ಮತ್ತು ಬೈಕ್ ರಿಪೇರಿ ಮಾಡುವವರು ಸಹ ಹೊಸ ತಂತ್ರಜ್ಞಾನಗಳನ್ನು ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಈ ವಾಹನಗಳ ರಿಪೇರಿಗೆ ಅಗತ್ಯವಾಗಿ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಮತ್ತು ಲ್ಯಾಪ್ ಟಾಪ್ ಗಳನ್ನು ಬಳಸಲೇಬೇಕಾದ ಪರಿಸ್ಥಿತಿಯಲ್ಲಿ ನಾವು ಇದ್ದೇವೆ. ತಂತ್ರಜ್ಞಾನದಲ್ಲಿ ಉಂಟಾಗುತ್ತಿರುವ ಹೊಸ ಹೊಸ ಆವಿಷ್ಕಾರಗಳ ಜ್ಞಾನವನ್ನು ಮತ್ತು ಅವುಗಳನ್ನು ಬಳಸುವ ಕೌಶಲ್ಯವನ್ನು ಪಡೆದುಕೊಳ್ಳಲೇಬೇಕಾಗಿದೆ. ಇಲ್ಲದೆ ಇದ್ದರೆ ವಾಹನ ರಿಪೇರಿ ಮಾಡುವ ವೃತ್ತಿಯನ್ನು ಅವಲಂಬಿಸಿದವರು ದುಡಿಯುವ ಅವಕಾಶವನ್ನು ಕಳೆದುಕೊಳ್ಳಬೇಕು. ಇಂತಹ ಪರಿಸ್ಥಿತಿಯಲ್ಲಿ ದುಡಿಯುವ ಅವಕಾಶಗಳನ್ನು ಸೃಷ್ಟಿಸಕೊಳ್ಳಬೇಕೆಂದರೆ ನಮ್ಮ ಕಲಿಕೆ ಮತ್ತು ಕೌಶಲ್ಯವನ್ನು ಹೊಸ ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಪೂರಕವಾಗಿ ಹೆಚ್ಚಿಸಿಕೊಳ್ಳಬೇಕಾಗಿದೆ. ಆದರೆ ನಮ್ಮ ಕೃಷಿ ಸಮಾಜದಲ್ಲಿ ರಿಪೇರಿ ಕೆಲಸಗಳನ್ನು ಮಾಡುತ್ತಿರುವವರು ಶಾಲೆಗಳನ್ನು ಮಧ್ಯದಲ್ಲಿಯೇ ಬಿಟ್ಟವರು, ಚಿಕ್ಕವಯಸ್ಸಿನಲ್ಲಿ ಹೊಟ್ಟೆಪಾಡಿಗಾಗಿ ಈ ಕೆಲಸ ಮಾಡಲು ಪ್ರಾರಂಭಿಸಿದವರು. ಈ ಕೌಶಲ್ಯವು ಅನುಭವದಿಂದ ಬಂದದ್ದು. ಡಿಜಿಟಲ್ ತಂತ್ರಜ್ಞಾನವು ಇಂತಹವರ ಉದ್ಯೋಗವಕಾಶಗಳನ್ನು ಇಗ್ಗಿಸುವುದಕ್ಕಿಂತಲೂ ಕುಗ್ಗಿಸುವ ಕಾರ್ಯತಂತ್ರವನ್ನು ತನ್ನೊಳಗಡೆ ಹೊಂದಿದೆ. ಇದು ಜಾಗತಿಕ ಬಂಡವಾಳಶಾಹಿ ಆಟೋಮೊಬೈಲ್ ಇಂಡಸ್ಟ್ರಿಗಳ ರಾಜಕೀಯ ಆರ್ಥಿಕತೆಯಾಗಿದೆ. ಆದರೆ ಎಷ್ಟು ಸಾಧ್ಯವೊ ಅಷ್ಟು ಮಾನವಶ್ರಮವನ್ನು ಕಡಿಮೆ ಮಾಡುವುದು ಲಾಭವನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಕೋನದಲ್ಲಿ ಕೃತಕ ಬುದ್ಧಿವಂತಿಕೆಯನ್ನು ಬಳಸುವುದು.
ಪ್ರತಿಯೊಬ್ಬ ಅಧಿಕಾರಿಯು ತನ್ನ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಆನ್ಲೈನ್ ಮೂಲಕ ತಿಳಿಸುವ ವ್ಯವಸ್ಥೆ ರೂಪಗೊಂಡಿದೆ. ಅವುಗಳನ್ನು ಮೇಲಾಧಿಕಾರಿಗಳಿಗೆ ಕಳಿಸುವ, ಅವರಿಂದ ಬಂದ ಆಡಳಿತಾತ್ಮಕ ನಿರ್ದೇಶನದ ಹಿನ್ನೆಲೆಯಲ್ಲಿ ಮರುಮಂಡಿಸುವ ಮತ್ತು ಆದೇಶಗಳನ್ನು ತಯಾರು ಮಾಡಲಾಗುತ್ತಿದೆ. ಬಹುತೇಕ ಎಲ್ಲಾ ಆಡಳಿತಾತ್ಮಕ ಪ್ರಕ್ರಿಯೆಗಳು ಇ-ಆಡಳಿತ ವ್ಯವಸ್ಥೆಗಳು ಡಿಜಿಟಲೀಕರಣ ಸ್ವರೂಪ ಪಡೆದುಕೊಂಡಿದೆ. ಇದುವರೆಗೂ ಒಂದು ಹಂತದ ಶಿಕ್ಷಣದ ನಂತರ ಮತ್ತು ಪದವಿಗಳನ್ನು ಪಡೆದ ನಂತರ ಕಚೇರಿಗಳಲ್ಲಿ ಸಹಾಯಕರ ಹುದ್ದೆಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ಇನ್ನು ಮುಂದೆ ಗುಮಾಸ್ತ ಅಥವಾ ಕ್ಲರಿಕಲ್ ಪೋಸ್ಟ್ ಸಹ ಇಲ್ಲದಂತೆ ಇ-ಆಡಳಿತ ಮಾಡುತ್ತಿದೆ.
ಈ ರೀತಿಯ ದುಡಿಮೆಯ ಸ್ವರೂಪದಲ್ಲಿನ ಸ್ಥಿತ್ಯಂತರ ಕೃಷಿ ಚಟುವಟಿಕೆಗಳು, ವಾಹನ ರಿಪೇರಿ, ಕ್ಲಿರಿಕಲ್ ಪೋಸ್ಟ್ ಗಳಲ್ಲಿ ಮಾತ್ರ ಉಂಟಾಗಿಲ್ಲ. ಮಾರುಕಟ್ಟೆಗಳು ಆನ್ಲೈನ್ ಮಾರುಕಟ್ಟೆಗಳಾಗಿ ರೂಪಾಂತರವಾದರೆ, ಬ್ಯಾಂಕ್ ಕಾರ್ಯದರ್ಶಿಗಳು ಆನ್ಲೈನ್ ಮತ್ತು ಇ-ಕಾಮರ್ಸ್ ಸ್ವರೂಪ ಪಡೆದುಕೊಂಡಿದೆ. ಇನ್ನು ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು, ಆರೋಗ್ಯ ಸೇವೆಗಳು, ಪಡಿತರ ಸೇವೆಗಳು, ಸಮಾಜ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮಗಳು, ವಾಸತಿ ಯೋಜನೆಗಳು, ಬೆಳೆ ಸಮೀಕ್ಷೆ, ಭೂ ಸಮೀಕ್ಷೆ, ಬರ ಸಮೀಕ್ಷೆ, ಪ್ರವಾಹ ಸಮೀಕ್ಷೆ, ಸ್ವಾಭಾವಿಕ ಸಂಪನ್ಮೂಲಗಳ ಸಮೀಕ್ಷೆ, ಪ್ರಕೃತಿ ವಿಕೋಪಗಳ ಮುನ್ಸೂಚನೆಗಳಿಗೆ ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುತ್ತಿದೆ.

ಹೀಗೆ ಬಹುತೇಕ ಯೋಜನೆಗಳು ಇ-ಆಡಳಿತ ಪ್ರಕ್ರಿಯೆಗೆ ಒಳಪಟ್ಟಿದೆ. ಇದರಿಂದ ಅನೇಕ ಹಂತದ ಆಡಳಿತ ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗಳು ಮತ್ತು ಅಧಿಕಾರಿಗಳಿಗೆ ಉದ್ಯೋಗಗಳು ಮತ್ತು ಹುದ್ದೆ ಇಲ್ಲವಾಗಿದೆ. ಗ್ರಾಮ ಪಂಚಾಯಿತಿ ಮೂಲಕ ನಡೆಯುವ ಅಭಿವೃದ್ಧಿ ಕಾರ್ಯಚಟುವಟಿಕೆಗಳು, ಪ್ರತ್ಯೇಕ ಕಾಮಗಾರಿ, ಚರಂಡಿ ಕಾಮಗಾರಿ, ನರೇಗಾ ಕಾಮಗಾರಿಗಳ ಪ್ರತಿ ಹಂತದ ಪ್ರಗತಿಯನ್ನು ಜಿಪಿಎಸ್ ಮೂಲಕ ಫೋಟೋ ತೆಗೆದು ಅಪ್ಲೋಡ್ ಮಾಡಬೇಕು. ಆ ಮೂಲಕ ಕಾಮಗಾರಿಗಳ ಗುಣಮಟ್ಟ ಪ್ರತಿ ಹಂತದ ಪ್ರಗತಿ ಆಯಾ ಹಂತಕ್ಕೆ ತಗಲುವ ವೆಚ್ಚವನ್ನು ಬಿಡುಗಡೆ ಮಾಡಲಾಗುತ್ತಿದೆ. ಹಾಗೆ ಅಭಿವೃದ್ಧಿ ಕಾಮಗಾರಿಗಳ ದಾಖಲಾತಿಗಳನ್ನು ಡಿಜಿಟಲ್ ಆಡಳಿತ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತದೆ. ವಿವಿಧ ವಸತಿ ಯೋಜನೆಯ ಫಲಾನುಭವಿ ತಮ್ಮ ನಿರ್ದೇಶನದ ಸಂಖ್ಯೆಯಲ್ಲಿ ನಿಂತು ಜಿಪಿಎಸ್ ಮೂಲಕ ಫೋಟೋ ತೆಗೆದು ಕಳುಹಿಸಿದಾಗ ಮಾತ್ರ ಆಯಾ ಹಂತದ ಅಂತದ ಹಣ ಬಿಡುಗಡೆಯಾಗುತ್ತದೆ. ಇಲ್ಲವಾದರೆ ಹಣ ಬಿಡುಗಡೆ ಮಾಡದಂತೆ ನಿಯಮಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಹೀಗೆ ಡಿಜಿಟಲ್ ತಂತ್ರಜ್ಞಾನವನ್ನು ಪಾರದರ್ಶಕತೆ, ಸಮಯದ ಉಳಿತಾಯ ಇನ್ನೂ ಮುಂತಾದ ವಿಷಯಗಳ ದೃಷ್ಟಿಯಿಂದ ತ್ವರಿತಗತಿಯಲ್ಲಿ ಜಾರಿಗೆ ತಂದು ಮಾನವ ಶ್ರಮವನ್ನು ಸಂಪೂರ್ಣವಾಗಿ ಕುಗ್ಗಿಸಲಾಗಿದೆ. ಇದರ ಪರಿಣಾಮವಾಗಿ ಕೃಷಿ ಚಟುವಟಿಕೆಗಳು ಕೈಗಾರಿಕಾ ಸ್ವರೂಪ ಪಡೆಯಿತು. ಯಾಂತ್ರಿಕತೆ ಹೆಚ್ಚಾಯಿತು. ಕೃಷಿ ಸಮಾಜದಲ್ಲಿ ಬದುಕಿದ್ದ ಮಧ್ಯಮ, ಸಣ್ಣ, ಅತಿ ಸಣ್ಣ ರೈತರು ಹಾಗೂ ಭೂ ರಹಿತ ದುಡಿಮೆಗಾರರು ಕೃಷಿ ಚಟುವಟಿಕೆಯ ಜೊತೆಗೆ ಇತರ ಶ್ರಮ ಆಧಾರಿತ ದುಡಿಮೆಯ ಮೂಲಕ ತಮ್ಮ ಜೀವನ ಮತ್ತು ಜೀವನೋಪಾಯವನ್ನು ಕಟ್ಟಿಕೊಂಡರು ದೊಡ್ಡ ಮಟ್ಟದ ಗಂಡಾಂತರಗಳಿಗೆ ಒಳಗಾದರು.
ಈ ಪರಿಸ್ಥಿತಿಯಲ್ಲಿ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳ ಸದಸ್ಯರು, ಭೂರಹಿತ ಬಡ ಜನರು ಜೀವವನ್ನು ಉಳಿಸಿಕೊಳ್ಳಲು ದುಡಿಮೆಯನ್ನು ಅರಸಿ ನಗರ ಪ್ರದೇಶಗಳಿಗೆ ವಲಸೆ ಬಂದು ದುಡಿಮೆಯನ್ನು ಬೇಟೆಯಾಡಲು ಪ್ರಾರಂಭಿಸಿದರು. ಬಡವರು ಜೀವನೋಪಾಯಕ್ಕೆ ದುಡಿಮೆಯನ್ನು ಅರಸಿ, ಊರಿಂದ ಊರಿಗೆ ವಲಸೆ ಹೋಗತೊಡಗಿದ್ದರು. . ವಲಸೆ ಹೋಗಿ ಅನೌಪಚಾರಿಕ ಕಾರ್ಮಿಕ ವಲಯದಲ್ಲಿ ದುಡಿಯುತ್ತಿರುವವರಿಗೆ ತಮ್ಮ ದುಡಿಮೆಯ ವಲಯ ಸ್ಥಗಿತಗೊಂಡಾಗ ‘ಮನೆ’ಗೆ ಹಿಂದಿರುಗುವುದನ್ನು ಬಿಟ್ಟು ಬೇರೆ ಪರ್ಯಾಯವಿಲ್ಲ. ಏಕೆಂದರೆ ಯಾವುದೇ ಗಳಿಕೆ ಇಲ್ಲದೆ ನಗರದಲ್ಲಿ ಉಳಿಯುವುದು/ಬದುಕುವುದು ಅಸಾಧ್ಯ. ಆದರೆ ಹುಟ್ಟಿ ಬೆಳೆದ ಊರಿಗೆ ಹಿಂದಿರುಗುವುದು ಅವರ ಪ್ರಾಮಾಣಿಕವಾದ ಆಯ್ಕೆಯಾಗಿರಲಿಲ್ಲ. ಇದಕ್ಕೆ ಕಾರಣ ಗ್ರಾಮೀಣ ಆರ್ಥಿಕತೆಯಲ್ಲಿ ದುಡಿಯುವ ಅವಕಾಶಗಳ ಕೊರತೆ ಇರುವುದು, ತಳಮಟ್ಟದ ದುಡಿಯುವ ವರ್ಗಗಳ ದೃಷ್ಟಿಕೋನದಿಂದ ನೋಡುವುದಾದರೆ, ಈ ಸಂಯೋಜಕ ಬಿಕ್ಕಟ್ಟು ವಾಸ್ತವವಾಗಿ ರಚನಾತ್ಮಕವಾಗಿದೆ. ನಿಯಮಿತ ಮತ್ತು ಘನತೆಯನ್ನು ದುಡಿಯುವ ಉದ್ಯೋಗದ ಕೊರತೆ ಹೆಚ್ಚುತ್ತಿರುವುದು ಎದ್ದು ಕಾಣುತ್ತಿದೆ. ಅನೌಪಚಾರಿಕ ಆರ್ಥಿಕತೆಯ ಕೆಳಭಾಗದಲ್ಲಿರುವ ಬೃಹತ್ ಕಾರ್ಮಿಕರ ಪಡೆ ಶಾಶ್ವತವಾಗಿ ಬಿಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಇದು ಅಸಮಾನತೆಯ ತತ್ವ ಮತ್ತು ಅಭ್ಯಾಸಗಳು ಅತ್ಯಂತ ಗಟ್ಟಿಯಾಗಿದ್ದ 19ನೆಯ ಶತಮಾನದ ನಂಬಿಕೆಗಳಿಗೆ ಮರಳುವುದನ್ನು ಸೂಚಿಸುತ್ತದೆ

ಇಂತಹ ಹಲವು ಕಾರಣಗಳಿಂದ ಕಳೆದೆ 20 ವರ್ಷಗಳಿಂದ ಇಂಡಿಯಾದಲ್ಲಿ ಸರಾಸರಿ ಪ್ರತಿದಿನ 2035 ಪ್ರಮುಖ ಕೃಷಿ ಕುಟುಂಬಗಳು ವ್ಯವಸಾಯದಿಂದ ಮುಕ್ತಿ ಪಡೆಯುತ್ತಿದ್ದಾರೆ/ ಹೊರಹೋಗುತ್ತಿದ್ದಾರೆ. ಆರ್ಥಿಕ ಸುಧಾರಣೆಯ ನಂತರದ ವರ್ಷಗಳಲ್ಲಿ ಕೃಷಿ ಕೂಲಿಯು 1980 ರಲ್ಲಿ ಶೇ.5ರ ಪ್ರಮಾಣದಲ್ಲಿ ಹೆಚ್ಚಳ ಕಂಡಿದ್ದರೆ 1990ರಲ್ಲಿ ಶೇ.2ರಷ್ಟು ಬೆಳವಣಿಗೆ ಕಂಡರೆ 2000ರ ಮೊದಲ ಅರ್ಧದಲ್ಲಿ ಶೂನ್ಯವಾಗಿದೆ. ಇದರ ಪರಿಣಾಮವಾಗಿ ಕೃಷಿ ಆಧಾರಿತ ಉದ್ಯೋಗಗಳಿಂದ ಕೃಷಿಯೇತರ ಉದ್ಯೋಗಗಳಿಗೆ ಗ್ರಾಮೀಣ ಜನರು ಬದಲಾಗುತ್ತಿದ್ದಾರೆ. MGNREGA ಗ್ರಾಮೀಣ ಕೂಲಿಯ ಹೆಚ್ಚಳಕ್ಕೆ ಪೂರಕವಾಗಿದ್ದರು ಹೊಸ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಅದರ ಪ್ರಭಾವವು ಹೆಚ್ಚು ಸೀಮಿತವಾಗಿದೆ. ಈ ಸಂದರ್ಭದಲ್ಲಿ ಉದ್ಯೋಗ ಖಾತರಿ ಯೋಜನೆಯ ಕೂಲಿಯನ್ನು ಕೋವಿಡ್ 19 ಸಮಯದಲ್ಲಿ ₹20ಗಳನ್ನು ಹೆಚ್ಚು ಮಾಡಿದೆ. ಆದರೆ ಈ ಯೋಜನೆಯ ಅನುಷ್ಠಾನವು ಬಹುತೇಕ ಪ್ರಕರಣದಲ್ಲಿ ಪ್ರಜಾತಾತ್ಮಕ ಮತ್ತು ಪಾರದರ್ಶಕ ಮೌಲ್ಯವನ್ನು ಒಳಗೊಳ್ಳದಿರುವುದು ನಮ್ಮ ನಿಮ್ಮ ಅನುಭವವಾಗಿದೆ. ಸಾಂಕ್ರಾಮಿಕ ಅವಧಿಯಲ್ಲಿ ಮಾರ್ಚ್ 2020 ರಿಂದ ನವೆಂಬರ್ 2021 ರವರೆಗೆ ಭಾರತದಲ್ಲಿ, ಬಿಲಿಯನೇರ್ ಗಳ ಸಂಪತ್ತು ಭಾರತದ ರೂಪಾಯಿ ಮೌಲ್ಯದಲ್ಲಿ ₹23.14 ಲಕ್ಷ ಕೋಟಿಯಿಂದ (USD 313 ಶತ ಕೋಟಿ) ಭಾರತ ಮೌಲ್ಯದಲ್ಲಿ ₹53.16 ಲಕ್ಷ ಕೋಟಿಗೆ (USD 719 ಶತಕೋಟಿ) ಹೆಚ್ಚಾಗಿದೆ. ಇದೆ ಸಮಯದಲ್ಲಿ ಅಂದರೆ 2020ರಲ್ಲಿ 4.6 ಕೋಟಿಗೂ ಹೆಚ್ಚು ಭಾರತೀಯರು ತೀವ್ರ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಈ ಪ್ರಮಾಣವು ವಿಶ್ವ ಸಂಸ್ಥೆಯ ಅಂದಾಗಿನ ಪ್ರಕಾರ ಜಾಗತಿಕ ಹೊಸ ಬಡವರಲ್ಲಿ ಅರ್ಧದಷ್ಟು. ಭಾರತದಲ್ಲಿನ ಸಂಪೂರ್ಣ ಸಂಪತ್ತಿನ ಅಸಮಾನತೆಯು ಬಡವರು ಮತ್ತು ಅಂಚಿನಲ್ಲಿ ಇರುವವರ ವಿರುದ್ಧವಾಗಿ ಅತಿ ಶ್ರೀಮಂತರ ಅಥವಾ ಸೂಪರ್ ರಿಚ್ ಗಳ ಪರವಾಗಿ ಸಜ್ಜುಗೊಂಡಿರುವ ಆರ್ಥಿಕ ನೀತಿಗಳ ಪರಿಣಾಮವಾಗಿದೆ. ಅಂದರೆ ದೇಶದ ಆರ್ಥಿಕ ಬೆಳವಣಿಗೆಯ ರೀತಿಯಾಗಲಿ, ದೇಶದ ಅತಿ ಶ್ರೀಮಂತ ಸಂಪತ್ತಿನಲ್ಲಿ ಉಂಟಾದ ಹೆಚ್ಚಳದಂತೆ ಬಡವರ ದುಡಿಯುವ ಜನರ ಆದಾಯದಲ್ಲಿ ಮಹತ್ವದ ಹೆಚ್ಚಳ ಉಂಟಾಗಿಲ್ಲ. ಇಂತಹ ಅಭಿವೃದ್ಧಿ ಬಿಕ್ಕಟ್ಟುಗಳನ್ನು ಮಾರ್ಕ್ಸಿಸ್ಟ್ ಭೂಗೋಳಶಾಸ್ತ್ರ ಜ್ಞ ಡೇವಿಡ್ ಹಾರ್ವೆ ‘ಅಕ್ಯುಮುಲೇಷನ್ ಬೈ ಡಿಸ್ಪೋಸೆಷನ್’ ಎಂದು ಕರೆದಿದ್ದಾನೆ.
ದೇಶದಾದ್ಯಂತ ಅಣೆಕಟ್ಟುಗಳ ಕಟ್ಟಿ ನಾವು
ಬೆಳೆದದ್ದೇನು ಬರಿ ಹಸಿವೆ?
ಹೊಲಗದ್ದೆಗಳ ತುಂಬಾ ತೆನೆಯೆತ್ತಿ ತೂಗುವುದೇನು?
ಹಸಿರೇ ಅಥವಾ ನಿಟ್ಟುಸಿರೇ ?
ಯೋಜನೆಯಿಂದ ಯೋಜನೆಗಿಳಿದು

ತಳದ ಕೆಸರಲ್ಲಿ ಹೂತು ಹೋಗಿದೆ ಬುದ್ದಿ
ಇದ್ದಂತ ಕಾಳು ಕಡಿಯೆಲ್ಲ
ಕಗ್ಗತ್ತಲಲ್ಲಿ ತಪಸ್ಸು
ಸಿದ್ದಿ – ಚಿನ್ನದ ಕನಸು.
ತೆರೆದ ಅಂಗಡಿಯೆದುರು ಬೆಳಗಿನ ಸಂಜೆಯ ತನಕ
ಒಂಟಿ ಕಾಲಿನ ಧ್ಯಾನ
ಹದ್ದುಗಣ್ಣಿನ ಕೆಳಗೆ ಏರಿಳಿವ ತಕ್ಕಡಿಯ ನೆರಳಿನ ಕೆಳಗೆ
ಹಸಿದ ಮೌನ.
ಬಂತೆ ದೀಪಾವಳಿ? ಇಷ್ಟೊಂದು ಹಣತೆಗಳಲ್ಲಿ
ಎಣ್ಣೆಯಿಲ್ಲ.
ಬರೀ ಮಾತುಗಳ ಕಡ್ಡಿ ಗೀಚುವೆಯಲ್ಲ
ನಿನಗೆ ನಾಚಿಕೆ ಇಲ್ಲ.
ಉದ್ಯೋಗ ಅವಕಾಶದ ಸೃಷ್ಟಿಯಲ್ಲಿ ನೆಲಕಚ್ಚಿರುವ ನಮ್ಮ ಅಭಿವೃದ್ಧಿ ಮಾದರಿಯೂ; ಕೃಷಿಯಿಂದ ವಿಮುಕ್ತಿ ಪಡೆದವರು ಜೀವನ ನಿರ್ವಹಣೆಗೆ ಪಟ್ಟಣದ ಹಾಗೂ ನಗರ ಪ್ರದೇಶಗಳಲ್ಲಿ ಅತ್ಯಂತ ಕನಿಷ್ಠ ವೇತನಕ್ಕೆ ಹೆಚ್ಚು ಸಮಯ ಮತ್ತು ಶ್ರಮ ಆಧಾರಿತ ದುಡಿಮೆಯನ್ನು ಅಸಂಘಟಿತ ವಲಯದಲ್ಲಿ ಮಾಡುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಡ್ರೈವರ್, ಹೋಟೆಲ್, ಆಸ್ಪತ್ರೆಗಳಲ್ಲಿ ಸ್ವಚ್ಛತಾ ಕೆಲಸ, ವಾಚ್ಮನ್, ಮಾರುಕಟ್ಟೆಗಳಲ್ಲಿ ಕೂಲಿ, ಕಟ್ಟಡ ಕೆಲಸ, ಇಟ್ಟಿಗೆ ಗೂಡುಗಳು, ಗಾರ್ಮೆಂಟ್ ಕೆಲಸ, ಕಬ್ಬುಕಟಾವು, ರಸ್ತೆ ನಿರ್ಮಾಣ, ಇಟ್ಟಿಗೆ ಭಟ್ಟಿಗಳಲ್ಲಿ ದುಡಿಮೆ, ಕಲ್ಲಿನ ಕ್ವಾರಿಗಳು, ರೈಲ್ವೆ ಗ್ಯಾಗ್ಮ ಮೆನ್ ಕೆಲಸ, ಬಂದರೂ ಹಮಾಲಿ ಕೆಲಸ, ಯಾಂತ್ರಿಕೃತ ಮೀನುಗಾರಿಕೆಯಲ್ಲಿ ಶ್ರಮ ಆಧಾರಿತ ದುಡಿಮೆ, ಮನೆ ಕೆಲಸ ಇನ್ನು ಮುಂತಾದ ದುಡಿಮೆಗೆ ಹತ್ತಿರ ಪಟ್ಟಣ, ದೂರದ ನಗರಗಳನ್ನು ಅವಲಂಬಿಸುವಂತಾಗಿದೆ. ಇಂತಹ ದುಡಿಮೆಯನ್ನು ಅವಲಂಬಿಸಿರುವ ಬಹುತೇಕರು ಸಣ್ಣ ಮತ್ತು ಅತಿ ಸಣ್ಣ ಭೂ ಹಿಡುವಳಿ ಕುಟುಂಬಗಳು ಅದರಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ-ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು.

ಇವರು ಹಳ್ಳಿಯಿಂದ ದುಡಿಮೆಯ ಬೇಟೆಯ ಮೇಲೆ ಊರಿಂದ ಊರಿಗೆ ಅಲೆಯುತ್ತಿದ್ದಾರೆ. ದುಡಿಯುವ ಸ್ಥಳದಲ್ಲಿ ಇವರಿಗೆ ಯಾವುದೇ ಕಾರ್ಮಿಕ ಕಾನೂನುಗಳಾಗಲಿ, ಕನಿಷ್ಠ ವೇತನವಾಗಲಿ, ಸಾಮಾಜಿಕ ಭದ್ರತೆಗಳು ಇರುವುದಿಲ್ಲ. ಗ್ರಾಮ ಸಮಾಜದ ಬಡವರು ಬದುಕಿಗೆ ಅತ್ಯಂತ ಅಪಾಯಕಾರಿ ಪರಿಸರದಲ್ಲಿ ದುಡಿಯಲೇ ಬೇಕಾದ ವಿಷವರ್ತುಲಕ್ಕೆ ತಳ್ಳಲ್ಪಡುತ್ತಿದ್ದಾರೆ. ಹಾಗಾಗಿ ಹಿಂದುಳಿದ ಪ್ರದೇಶಗಳಿಂದ ಹಿಂದುಳಿದ ಸಮುದಾಯಗಳ ಅದರಲ್ಲಿ ಅಭಿವೃದ್ಧಿಯಲ್ಲಿ ಹೆಚ್ಚು ದುಸ್ಥಿತಿಯಲ್ಲಿ ಇರುವ ಕುಟುಂಬಗಳ ಹೆಣ್ಣು ಮಕ್ಕಳು ದುಡಿಮೆಯನ್ನು ಅರಸಿ ನಗರ ಪ್ರದೇಶಗಳಿಗೆ ಪ್ರತಿದಿನ ಬಂದು ಹೋಗುತ್ತಿದ್ದಾರೆ. ಇವರಿಗೆ ದೊರಕುವ ವೇತನ ಮತ್ತು ದುಡಿಮೆಯ ಪರಿಸ್ಥಿತಿಗಳು ಅತ್ಯಂತ ಕಳಪೆಯಾಗಿರುತ್ತದೆ. ಇವರ ಮೇಲೆ ನಡೆಯುವ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳಿಗೆ ಲೆಕ್ಕವಿಲ್ಲ. ಈ ಎಲ್ಲಾ ಅಂಶಗಳು ಮಹಿಳಾ ಕಾರ್ಮಿಕರನ್ನು ಚೌಕಾಸಿಗೆ ಮಾಡದಂತೆ, ಯಾವುದೇ ರೀತಿಯ ಕೆಲಸವನ್ನು ಮಾಡುವ ಬಂಧನಕ್ಕೆ ಸಿಲುಕಿಸಿದೆ. ಕಾರಣ ಸಾಲದ ಸ್ಥಿತಿಯಿಂದ ಶಾಶ್ವತವಾಗಿ ಹೊರಬರಲಾಗದ ಸ್ಥಿತಿಯಲ್ಲಿ ಇವರು ಇರುವುದು. ‘ಉದ್ಯೋಗವಿಲ್ಲದ ಬೆಳವಣಿಗೆ’ಯು (Jobless growth) ಬಡವರು ತಮ್ಮ ದುಡಿಮೆಯನ್ನು /ಶ್ರಮವನ್ನು ಯಾವುದೇ ರೀತಿಯ ಚೌಕಾಸಿ ಮಾಡದೆ ಮುಕ್ತವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಲೇಬೇಕಾದ ನವ ಬಂಧನವನ್ನು ನಾವು ಅನುಸರಿಸುತ್ತಿರುವ ಅಭಿವೃದ್ಧಿ ನೀತಿಗಳು ಮತ್ತು ಅದರ ಕಾರ್ಯತಂತ್ರಗಳು ಸೃಷ್ಟಿಸಿವೆ.

ಈ ಪರಿಸ್ಥಿತಿಯು ಉದ್ಯೋಗ ನೀಡುವವರು ಮತ್ತು ದುಡಿಯುವವರ ನಡುವಿನ ಸಂಬಂಧವು ಹೆಚ್ಚು ಅನಿಶ್ಚಿತವು, ಅಲ್ಪಾವಧಿಯು, ನಿರಾಕರವೂ, ಕಡಿಮೆ ಗಳಿಕೆಯ ಒಪ್ಪಂದಳ ಪರಿಸ್ಥಿತಿಯ ವಿಷ ವರ್ತಲವನ್ನು ಸೃಷ್ಟಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವಾಗಲೂ ಬಂಡವಾಳಸ್ಥರು ಹಾಗೂ ದುಡಿದುಕೊಳ್ಳುವವರ ಸಂಪತ್ತು ಮತ್ತು ಆಸ್ತಿ ನಿರಂತರವಾಗಿ ಹೆಚ್ಚುತಲಿರುತ್ತದೆ. ಪರಿಣಾಮವಾಗಿ ಭೂರಹಿತ ಬಡವರು ಮತ್ತು ದುಡಿಯುವ ಜನರ ನಿಂತ ನೆಲವೇ ಕುಸಿಯುತ್ತದೆ. ಬಡವರ ದುಃಖ ಆಳದಲ್ಲಿ ನಿರಂತರವಾಗಿ ಮಡುಗಟ್ಟುತ್ತಿರುತ್ತದೆ. ಬಡತನವು ಅವರ ಸ್ಥಿತಿಯನ್ನು ಪ್ರದರ್ಶನಕ್ಕೆ ಇಡುತ್ತದೆ. ಅವರು ವಾಸಿಸುವ ಮಣ್ಣಿನ ಗುಡಿಸಲುಗಳಿಗೆ, ಹುಲ್ಲಿನ ಚಾವಣಿಗಳಿಗೆ, ಜೋಪಡಿ, ಟೆಂಟುಗಳಿಗೆ ಬಾಗಿಲುಗಳಿಲ್ಲ ಮತ್ತು ಕಿಟಕಿಗಳಿಲ್ಲ. ಇನ್ನೂ ಕೆಲವರು ಪ್ಲಾಸ್ಟಿಕ್ ಟೆಂಟ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವುಗಳ ಒಳಗೆ ಚಳಿಗಾಳಿ, ಬೀಸಿಗಾಳಿ, ಗಾಳಿ ನುಗ್ಗಿದಾಗ, ಮಳೆ ಸುರಿದಾಗ, ನೀರೂ ನುಗ್ಗಿದಾಗ, ಅವರ ನಿಟ್ಟುಸಿರಲ್ಲಿ ‘ಮೇರ ಭಾರತ ಮಹಾನ್’ ಎಂಬ ಉದ್ಘಾರ ಕೇಳುತ್ತದೆ. ಈ ಕುರಿತು ವಿಡಂಬಾರಿ ಅವರು ಬರೆದ ‘ಮೇರ ಭಾರತ ಮಹಾನ್’ ಮತ್ತು ” ಕವಿತೆಗಳು ಇನ್ನಷ್ಟು ಸ್ಪಷ್ಟತೆಯನ್ನು ನೀಡುತ್ತವೆ.
ಮೇರಾ ಭಾರತ ಮಹಾನ್
ಚಳಿ ಮಳೆಗೆ ತಾಪಕ್ಕೆ ವರ್ಷವೂ ಮತ್ತೆ
ಅಸಂಖ್ಯ ಮಂದಿಗಳು ಸಾಯುವವರು ಗೊತ್ತೆ
ಯಾರೆಂದು ಬಲ್ಲಿರಾ ಸಾಯುತಿಹ ಜನರು
ಒಡಲಿರದ ಸೂರಿರದ ಕೂಳಿಲ್ಲದವರು ಹಸಿವೆ
ಕಪ್ಪು ಹಣ ಕೂಡಿಡುವ ಲೋಭಿಗಳ ಜಾಲ
ಬಲ್ಲಿರಾ ಈ ಹಸಿವೆ ಎಂಬುದಕ್ಕೆ ಮೂಲ
ದೇಶಕ್ಕೆ ಮನುಷ್ಯತ್ವ ಉಳ್ಳವನು ಒಬ್ಬ
ಅಧಿಪತಿಯು ಆದಾಗ ಆ ದಿನವೇ ಹಬ್ಬ.
ಈ ಎಲ್ಲಾ ವಿದ್ಯಮಾನಗಳು ಕೃಷಿ ಸಮಾಜದ ಬಡವರು ಜೀವನೋಪಾಯಕ್ಕೆ ಕೃಷಿಯೇತರ ಉದ್ಯೋಗಕ್ಕೆ ರೂಪಾಂತರಗೊಳ್ಳುತ್ತಿರುವುದನ್ನು ತಿಳಿಸುತ್ತದೆ. ಇದಕ್ಕೆ ನಾವು ಕಳೆದ 30 ವರ್ಷಗಳಿಂದ ಅನುಸರಿಸುತ್ತಿರುವ ಅಭಿವೃದ್ಧಿ ನೀತಿಗಳು ಮತ್ತು ಅದರ ಕಾರ್ಯತಂತ್ರಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ಜಾಗತಿಕ ಮಾರುಕಟ್ಟೆ ನೀತಿಗಳಿಗೆ ಪರ್ಯಾಯವಾಗಿ ಸ್ಥಳೀಯ ಅಭಿವೃದ್ಧಿ ಮಾದರಿಗಳನ್ನು ರೂಪಿಸಲು ಸಾಧ್ಯವಾಗದಿರುವುದು ಕಾರಣವಾಗಿದೆ. ಅಂದರೆ ವಸಾಹತುಶಾಹಿ ಪೂರ್ವ ಮತ್ತು ವಸಾಹತುಶಾಹಿ ನಂತರದ (ಸ್ವಾತಂತ್ರ ನಂತರ) ಅವಧಿಯಲ್ಲಿ ಗ್ರಾಮೀಣ ಕೃಷಿ ಸಮಾಜದಲ್ಲಿ ಇದ್ದ ಗುಲಾಮಗಿರಿಯ ಅಭ್ಯಾಸಗಳು ದೊಡ್ಡ ಮಟ್ಟದ ಬದಲಾವಣೆಗೆ ಒಳಗಾಗಿಲ್ಲ. ಭೂರಹಿತ ಕಾರ್ಮಿಕರ ಸ್ಥಿತಿಯೂ ನಾಮಮಾತ್ರಕ್ಕೆ ಮಾತ್ರ ಜೀತದಿಂದ ಮುಕ್ತರಾಗಿದ್ದಾರೆ. ಹೊಸ ರೂಪದ ಅಭಿವೃದ್ಧಿ ಕಾರ್ಯತಂತ್ರಗಳು ದುಡಿಯುವ ಜನರನ್ನು ‘ನವ-ಬಂಧನ’ಕ್ಕೆ ತಳ್ಳುತ್ತಿದೆ. ಹೇಗೆ ದುಡಿಯುವ ಜನರು ಶೋಷಣೆಗೆ, ಆಸುರಕ್ಷಿತ ಕೆಲಸಗಳಲ್ಲಿ ಸಿಕ್ಕಿಬಿದ್ದಿದ್ದಾರೆ ಎಂಬುದನ್ನು ಜಯಂತಿ ಘೋಷ್, ವಾಸವಿ, ಬ್ರೇಮಾನ್, ಹರ್ಷ ಮಂದರ್, ಅಭಿಜಿತ್ ಬ್ಯಾನರ್ಜಿ, ರಾಷ್ಟ್ರ ಮತ್ತು ರಾಜ್ಯಮಟ್ಟದ ವರದಿಗಳು, ಜನ ಸಂಘಟನೆಗಳ ವರದಿಗಳು, ಹಾಗೂ ಕನ್ನಡ ವಿಶ್ವವಿದ್ಯಾಲಯ ನಡೆಸಿದ ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ.

ಒಟ್ಟಾರೆ ಭೂಸುಧಾರಣೆಗಳು ಸೇರಿದಂತೆ ಅಭಿವೃದ್ಧಿಯ ಜೊತೆ ಉಲ್ಲೇಖಿಸಲಾಗುವ ಮತ್ತು ಹೆಚ್ಚು ಬಳಸಲಾಗುವ ಪರಿಕಲ್ಪನೆಗಳು ಭೂರಹಿತ ಬಡವರ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿಲ್ಲ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಿಮ್ಮ ವರ್ಗಕ್ಕೆ ಸೇರಿದವರು, ಅದರಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರನ್ನು ಜೀವನೋಪಾಯಕ್ಕೆ ಯಾವುದೇ ಕೆಲಸವನ್ನು ಮಾಡುವಂತೆ ಒತ್ತಾಯಿಸುತ್ತಿದೆ. ಅನೌಪಚಾರಿಕ ವಲಯದಲ್ಲಿ ಅತ್ಯಂತ ದುಸ್ಥಿತಿಯಲ್ಲಿ ದುಡಿಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿರುವುದು ಎತ್ತಿ ತೋರಿಸುತ್ತದೆ. ಇಲ್ಲಿ ದುಡಿಯುವವರು ಪಡೆಯುವ ಯಾವುದೇ ರೀತಿಯ ಕೂಲಿ ಅತ್ಯಂತ ಕಡಿಮೆ. ದುಡಿಯುವ ಜನರು ಸಂಕಷ್ಟ ಕಾಲದಲ್ಲಿ ಉದ್ಯೋಗ ನೀಡುವವರು ಅಥವಾ ಮಧ್ಯವರ್ತಿ ಮೇಸ್ತ್ರಿಯಿಂದ ಸಾಲವಾಗಿ ಪಡೆಯುವ ಮುಂಗಡದಿಂದ ಅವರ ಶೋಷಣೆ ಪ್ರಾರಂಭವಾಗುತ್ತದೆ. ನಂತರ ಕಾರ್ಮಿಕರು ಕೆಲಸ ನೀಡಿದವರ ಆದೇಶದ ಮೇರೆಗೆ ಕೆಲಸಗಳನ್ನು ಮಾಡುವ ಮೂಲಕ ಅನಿಯಮಿತ ದುಡಿಮೆಗೆ ಒಳಪಡುತ್ತಾರೆ. ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡಲು ಗುತ್ತಿಗೆ ಪಡೆಯುತ್ತಾರೆ. ಆದರೆ ದುಡಿಮೆಗಾರರ ಶ್ರಮದ ಶೋಷಣೆಯು ತುಂಡುಗುತ್ತಿಗೆ, ಕೂಲಿಯ ನಿಧಾನ ಪಾವತಿ, ಅನಿರೀಕ್ಷಿತ ಸಮಯಗಳಲ್ಲಿ ಅನಿಶ್ಚಿತತೆ ಇನ್ನು ಮುಂತಾದ ದುಡಿಮೆಯ ಸ್ವರೂಪಕ್ಕೆ ಗ್ರಾಮೀಣ ಜನರು ಒಳಪಟ್ಟಿದ್ದಾರೆ.
ಇದಕ್ಕೆ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ರಚನೆಯಲ್ಲಿಯೇ ಇರುವ ವ್ಯತ್ಯಾಸಗಳು ಸಮತೆ, ಸ್ವಾತಂತ್ರ ಮತ್ತು ಸಹೋದರತ್ವವನ್ನು ಪ್ರತಿಪಾದಿಸುವುದಕ್ಕೆ ಬದಲಾಗಿ ಇನ್ನಷ್ಟು ಬೇರ್ಪಡಿಸುತ್ತಿರುವುದು ಕಾರಣವಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶ ಎನ್ನುವುದು ಕಂದಾಯ ಇಲಾಖೆ ಆಡಳಿತಾತ್ಮಕ ದೃಷ್ಟಿಯಿಂದ ನಿಂತಿರುವ ಬಾಂಧುಗಲ್ಲುಗಳ ರೀತಿ ಇಲ್ಲ. ಇದು ಜಾಗತಿಕ ಮುಕ್ತ ಮಾರುಕಟ್ಟೆಯ ಆಶಯಗಳ ಉದ್ದೇಶಗಳಿಗೆ ಪೂರಕವಾಗಿ ಮಾನವ ಮಾನವ ಸಂಪನ್ಮೂಲಗಳು ಸೇರಿದಂತೆ ಹಾಲು-ಮೊಸರು, ಕೋಳಿ-ಮಾಂಸ ಹಾಗೂ ಆಹಾರ ಪದಾರ್ಥಗಳು ಉತ್ಪಾದಿಸುವ ಮತ್ತು ಪೂರೈಸುವ ಕೇಂದ್ರ ಮಾತ್ರವಾಗಿಲ್ಲ. ರಾಷ್ಟ್ರೀಯತೆಯ ರಾಜಕಾರಣ ವಿದ್ಯಮಾನಗಳಿಗೆ ಪ್ರತಿಕ್ರಿಸುವ ಹಾಗೆ ಜಾಗತಿಕ ಆರ್ಥಿಕ ವಿದ್ಯಮಾನಗಳಿಗೆ ಮತ್ತು ಅದರ ಪ್ರಭಾವಕ್ಕೆ ಒಳಪಟ್ಟಿರುತ್ತದೆ. ಹೀಗಾಗಿ ಅಲ್ಲಿ ಘನತೆಯ ಬದುಕು ಎನ್ನುವುದು ಇಲ್ಲವಾಗಿದೆ. ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಮೇಲ್ಮುಖ ಚಲನೆಯನ್ನು ಸಾಧಿಸಿದ್ದರು ಜಾತಿ, ಮತ, ಧರ್ಮ ಆಧಾರಿತ ಕ್ರೌರ್ಯಗಳು ಇನ್ನಷ್ಟು ಗಟ್ಟಿಯಾಗುತ್ತಿವೆ. ಈ ನೆಲೆಯಲ್ಲಿ ಗ್ರಾಮೀಣ ಬದುಕು ಬಹಳ ದೊಡ್ಡ ಮಟ್ಟದಲ್ಲಿ ಗಂಡಾಂತರಕ್ಕೆ ಒಳಗಾಗಿದೆ ಎನ್ನುವುದು ಹೆಚ್ಚುತ್ತಿರುವ ಮರ್ಯಾದೆಗೇಡು ಹತ್ಯೆಗಳು ಎತ್ತಿ ತೋರಿಸುತ್ತಿವೆ.

ಇದು ಹೊಸ ತಲಮಾರಿನ ಜನರು ಗ್ರಾಮೀಣ ಪ್ರದೇಶದಲ್ಲಿ ನೆಲೆಯೂರದಂತೆ ಮಾಡಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಉಳಿದು ಏನನ್ನಾದರೂ ಸಾಧಿಸಬೇಕು ಎನ್ನುವ ಯುವಕರಿಗೆ ಹೆಣ್ಣು ಕೊಡಲು ಯಾರು ಮುಂದೆ ಬಾರದ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಈ ಕುರಿತು ಇನ್ನಷ್ಟು ಚರ್ಚೆ, ಸಂವಾದ ಮತ್ತು ಅಧ್ಯಯನಗಳು ನಡೆಯಬೇಕಿದೆ. ಜಾಗತಿಕ ಮುಕ್ತ ಮಾರುಕಟ್ಟೆ ನಮ್ಮ ಗ್ರಾಮ ಸಮಾಜದಲ್ಲಿ ಕೃಷಿಕರು, ಅವಕಾಶ ವಂಚಿತರು, ಸಮಾಜದ ಹಂಚಿನಾಚೆಗೆ ಇರುವವರ ಬದುಕಿನಲ್ಲಿ ತಂದಿರುವ ಬಿಕ್ಕಟ್ಟುಗಳನ್ನು ಹೆಚ್ಚು ಗಟ್ಟಿ ದ್ವನಿಯಲ್ಲಿ ಸಾಮೂಹಿಕವಾಗಿ ಎತ್ತಿ ತೋರಿಸಬೇಕಾಗಿದೆ. ಆ ಮೂಲಕ ಅಭಿವೃದ್ಧಿ ನೀತಿಗಳನ್ನು ವಿಮರ್ಶೆಗೆ ಒಳಪಡಿಸಿ ತಳಮಟ್ಟದಿಂದ ಮರುರೂಪಿಸಬೇಕಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಉಳಿದು ಏನನ್ನಾದರೂ ಸಾಧಿಸಬೇಕು ಎನ್ನುವ ಯುವಕರಿಗೆ ಹೆಣ್ಣು ಕೊಡಲು ಯಾರು ಮುಂದೆ ಬಾರದ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಈ ಕುರಿತು ಇನ್ನಷ್ಟು ಚರ್ಚೆ, ಸಂವಾದ ಮತ್ತು ಅಧ್ಯಯನಗಳು ನಡೆಯಬೇಕಿದೆ.
ನವೀನ ಹೆಚ್ ಎ ಹನುಮನಹಳ್ಳಿ ಅಂಕಣಕಾರ ಲೇಖಕರು ಕೆಆರ್ ನಗರ