“500 ಕೋಟಿ ಟ್ರಿಪ್ ಗಳನ್ನು ಕಂಡಿರುವ ಶಕ್ತಿ ಯೋಜನೆ ಇಡೀ ದೇಶಕ್ಕೆ ಮಾದರಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಅವರು ಬಣ್ಣಿಸಿದರು.

“ಶಕ್ತಿ” ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣ 500 ಕೋಟಿ ಟ್ರಿಪ್ ಮುಟ್ಟಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ (DCM DK Shivakumar) ಅವರು ಬೆಂಗಳೂರಿನ ವಿಂಡ್ಸರ್ ವೃತ್ತದಲ್ಲಿ ಬಿಎಂಟಿಸಿ ಬಸ್ ನಲ್ಲಿ 500 ನೇ ಕೋಟಿಯ ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರಿಗೆ ಸೋಮವಾರ ವಿತರಿಸಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಎಲ್ಲಿಯವರೆಗೆ ದೇವರು ಶಕ್ತಿ ಹಾಗೂ ಜನ ಅಧಿಕಾರ ನೀಡುತ್ತಾರೋ ಅಲ್ಲಿಯತನಕ ಯೋಜನೆಗಳು ಮುಂದುವರೆಯುತ್ತವೆ” ಎಂದರು.

“ಕಾಂಗ್ರೆಸ್ ಪಕ್ಷ ಈ ದೇಶದ ಜನರಿಗೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದೆ. ಹಲಾವಾರು ಪಿಂಚಣಿ ಯೋಜನೆಗಳು, ನರೇಗಾ, ಬ್ಯಾಂಕ್ ರಾಷ್ಟ್ರೀಕರಣ ಸೇರಿದಂತೆ ನಮ್ಮ ಯೋಜನೆಗಳನ್ನು ಬಿಜೆಪಿ ಸೇರಿದಂತೆ ಯಾರೂ ಸಹ ನಿಲ್ಲಿಸಲು ಸಾಧ್ಯವಿಲ್ಲ. ಇವು ಜನರ ಹೃದಯ ಹಾಗೂ ಬದುಕಿಗೆ ಬೇಕಾದಂತಹ ಕಾರ್ಯಕ್ರಮಗಳು. ಇವು ನಿರಂತರವಾಗಿರುತ್ತವೆ” ಎಂದರು.
“ಈ ಯೋಜನೆಯಿಂದ ರಾಜ್ಯದ ಉದ್ದಗಲಕ್ಕೂ ಮಹಿಳೆಯರು ಉಚಿತವಾಗಿ ಸಂಚಾರ ಮಾಡಬಹುದು. ಯಾವುದೇ ಖರ್ಚು ಮಾಡದೇ ತಮ್ಮ ಪ್ರೀತಿಪಾತ್ರರ ಮನೆಗಳಿಗೆ ಹೋಗಬಹುದು. ಕೆಲಸಕ್ಕೆ ಹೋಗುವ ಅನೇಕ ಮಹಿಳೆಯರಿಗೆ ಪ್ರತಿ ತಿಂಗಳು 500 ರಿಂದ 1 ಸಾವಿರಕ್ಕೂ ಹೆಚ್ಚು ಹಣ ಉಳಿತಾಯವಾಗುತ್ತಿದೆ” ಎಂದರು.

“ಮಹಿಳೆಯೊಬ್ಬರು ಸಂತೋಷದಿಂದ ನನಗೆ ರೊಟ್ಟಿ, ಶೇಂಗಾ ಹೋಳಿಗೆ ನೀಡಿದರು. ನಮ್ಮ ಯೋಜನೆ ಬಗ್ಗೆ ಯಾರು ಎಷ್ಟೇ ಟೀಕೆ ಮಾಡಿದರೂ ಅವುಗಳು ಕಾಲಕ್ರಮೇಣ ಸತ್ತು ಹೋಗುತ್ತವೆ. ನಮ್ಮ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿರುವ ಕಾರಣಕ್ಕೆ ನಮಗೆ ಹೆಚ್ಚು ಸಂತೋಷವಾಗಿದೆ. ಇದೆಲ್ಲವನ್ನು ಜಾರಿ ಮಾಡಲು ಜನ ನೀಡುರುವ ಶಕ್ತಿಯಿಂದ ನಮಗೆ ಬಲಬಂದಿದೆ” ಎಂದರು.
ಮುಖ್ಯಮಂತ್ರಿಯವರಿಗೆ ಮುಂಚಿತವಾಗಿ ತಿಳಿಸಬೇಕಾಗಿತ್ತು

ಇದಕ್ಕೂ ಮುನ್ನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು. ಸಿಗಂದೂರು ನೂತನ ತೂಗುಸೇತುವೆ ಉದ್ಘಾಟನೆ ಸಂಬಂಧ ಮುಖ್ಯಮಂತ್ರಿಗಳ ಆಹ್ವಾನ ವಿವಾದದ ಬಗ್ಗೆ ಕೇಳಿದಾಗ, “ರಾಜ್ಯದ ಮುಖ್ಯಮಂತ್ರಿಗಳಿಗೆ ಮುಂಚಿತವಾಗಿ ತಿಳಿಸಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಅವರು ಪತ್ರ ಬರೆದು ತಿಳಿಸಿದ್ದಾರೆ. ಇಂದು ಇಂಡಿ ತಾಲ್ಲೂಕಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೂ ಅತ್ಯಂತ ಪ್ರಮುಖವಾದುದು. 2 ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ನೀರಾವರಿ ಇಲಾಖೆಯಿಂದ ನೀಡಲಾಗುತ್ತಿದೆ” ಎಂದರು.

ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗಿದೆಯೇ ಎಂದು ಕೇಳಿದಾಗ, “ಈ ರಾಜಕಾರಣವನ್ನು ಆನಂತರ ಮಾತನಾಡೋಣ” ಎಂದರು.










