ಭದ್ರಾ ಮೇಲ್ದಂಡೆ ಯೋಜನೆಗೂ ಪರಿಷ್ಕೃತ ಅನುದಾನ ಕೇಳಿದ್ದೇವೆ
ಸರಕಾರದ ಖಾತೆಗೆ ಹಣ ಬಂದಾಗಲೇ ಖಾತರಿ

“ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ಒಟ್ಟು ₹11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ. ಕುಡಿಯುವ ನೀರಿನ ಉದ್ದೇಶದ ಎತ್ತಿನಹೊಳೆ ಯೋಜನೆಗೆ ಶೇ.25 ರಷ್ಟು ಆರ್ಥಿಕ ಸಹಾಯ, ಕಳಸಾ ಬಂಡೂರಿ ಯೋಜನೆ, ಕೃಷ್ಣಾ ನದಿ ನೀರಿನ ವಿಚಾರವಾಗಿ ಕೇಂದ್ರ ಜಲಶಕ್ತಿ ಹಾಗೂ ಪರಿಸರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ಹೇಳಿದರು.
ನವದೆಹಲಿಯ ಕರ್ನಾಟಕ ಭನವದಲ್ಲಿ (Delhi Karnaraka Bhavan) ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಬುಧವಾರ ಮಾಧ್ಯಮಗೋಷ್ಠಿ ನಡೆಸಿ ದೆಹಲಿ ಪ್ರವಾಸ ಹಾಗೂ ಕೇಂದ್ರ ಸಚಿವರ ಭೇಟಿ ವಿಚಾರವಾಗಿ ಮಾಹಿತಿ ನೀಡಿದರು.

“ಆರು ನೀರಾವರಿ ಯೋಜನೆಗಳಾದ ಸೊನ್ನತಿ ಏತ ನೀರಾವರಿ ಯೋಜನೆಗೆ ₹ 804.66 ಕೋಟಿ, ಯುಕೆಪಿಯ ಇಂಡಿ ಶಾಖಾ ಕಾಲುವೆಗೆ ₹2,666.70 ಕೋಟಿ, ಮಲಪ್ರಭಾ ಕಾಲುವೆ ಮೂರನೇ ಹಂತಕ್ಕೆ ₹3000 ಕೋಟಿ, ಘಟಪ್ರಭಾ ಬಲದಂಡೆ ಕಾಲುವೆ ಮತ್ತು ಚಿಕ್ಕೋಡಿ ಶಾಖಾ ನಾಲೆಗೆ ₹1,444.42 ಕೋಟಿ, ಬೆಣ್ಣೆಹಳ್ಳದ ಪ್ರವಾಹ ನಿಯಂತ್ರಣ ಹಾಗೂ ನಿರ್ವಹಣೆಗಾಗಿ ₹1,610 ಕೋಟಿ ಸೇರಿದಂತೆ ಒಟ್ಟು ₹11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ. ಇದರಲ್ಲಿ ಒಂದಕ್ಕೆ ಅನುದಾನ ನೀಡಲಾಗಿದೆ ಎಂಬ ಮಾಹಿತಿ ಬಂದಿದೆ. ಆದರೆ ನಮಗೆ ಇನ್ನು ಅಧಿಕೃತವಾಗಿ ತಿಳಿಸಿಲ್ಲ” ಎಂದು ತಿಳಿಸಿದರು.
“ಎತ್ತಿನಹೊಳೆ ಯೋಜನೆಯನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಎಂದು ಅನುಮೋದಿಸಿ ಶೇ.25 ರಷ್ಟು ಆರ್ಥಿಕ ಸಹಾಯ ನೀಡಬೇಕಾಗಿ ಮನವಿ ಮಾಡಿದ್ದೇನೆ. ಈ ಯೋಜನೆ ಕಾಮಗಾರಿಯನ್ನು ತುಮಕೂರು ಹಾಗೂ ಹಾಸನ ಭಾಗದಲ್ಲಿ ನಿಲ್ಲಿಸಲಾಗಿತ್ತು. ಯೋಜನೆ ಹಾದು ಹೋಗುವ ಕಡೆ ಕಂದಾಯ ಭೂಮಿ ಹೊಂದಿದ್ದ ರೈತರಿಗೆ ಪೋಡಿ ವಿತರಣೆ ಮಾಡಿ ಪರಿಹಾರವನ್ನೂ ನೀಡಲಾಗಿತ್ತು” ಎಂದರು.

“ಆದರೆ ತದ ನಂತರ ಅರಣ್ಯ ಇಲಾಖೆಯವರು ಇದು ನಮ್ಮ ಭೂಮಿ ಎಂದು ತಕರಾರು ತೆಗೆದರು. ಅವರ ಬಳಿ ಸಂಘರ್ಷ ಬೇಡ ಎಂದು ಬದಲಿ ಭೂಮಿ ನೀಡಿದ್ದೇವೆ. ಇದಕ್ಕೆ ಅರಣ್ಯ ಇಲಾಖೆಯವರು ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಬೇಕಿತ್ತು, ಆದರೆ ಮಾಡಿಲ್ಲ. ಕೆಲವು ತಕರಾರುಗಳನು ಹಾಕಿದ್ದಾರೆ. ಈಗಾಗಲೇ ಕೇಂದ್ರ ಸಚಿವರನ್ನು ಮೂರು ಬಾರಿ ಭೇಟಿ ಮಾಡಲಾಗಿತ್ತು ಆದರೂ ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಕಾಲುವೆ ತೆಗೆದಾಗ ಬರುವ ಮಣ್ಣನ್ನು ಇಲ್ಲಿಯೇ ಹಾಕಲಾಗುತ್ತಿದೆ. ಬದಲಾಗಿ 25 ಕಿಲೋ ಮೀಟರ್ ದೂರ ಹಾಕಿ ಎಂಬುದು ಅವರ ಪ್ರಮುಖ ತಕರಾರು. ಕೇಂದ್ರ ಸಚಿವರು ಸದ್ಯದಲ್ಲೇ ಇದನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ” ಎಂದರು.
ಖಾತೆಗೆ ಹಣ ಬರುವವರೆಗೂ ಖಾತರಿ ಇಲ್ಲ
ಭದ್ರಾ ಮೇಲ್ದಂಡೆ ವಿಚಾರವಾಗಿ ಕೇಳಿದಾಗ, “ಈ ಬಗ್ಗೆಯೂ ಅನುದಾನ ಕೇಳಿದ್ದೇವೆ. ಕೇಂದ್ರ ಸರ್ಕಾರದಿಂದ ಪರಿಷ್ಕೃತ ಅಂದಾಜು ಪಟ್ಟಿ ಕೇಳಿದ್ದರು ಅದನ್ನು ಕೂಡ ಸಲ್ಲಿಸಿದ್ದೇವೆ. ಈ ಹಿಂದೆ ಹೇಳಿದ್ದ ₹5,300 ಕೋಟಿಗಿಂತಲೂ ಹೆಚ್ಚು ಅನುದಾನದ ಪರಿಷ್ಕೃತ ಪಟ್ಟಿ ಕಳುಹಿಸಿದ್ದೇವೆ. ಈಗಾಗಲೇ ₹10,604 ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳಿದ್ದೇವೆ. ಹಣ ನೀಡುತ್ತೇವೆ ಎಂದು ಹೇಳಿದ್ದಾರೆ. ಹಣ ಸರ್ಕಾರದ ಖಾತೆಗೆ ಬರುವವರೆಗೂ ನಂಬಿಕೆಯಿಲ್ಲ” ಎಂದರು.

ಕಳೆದ ಎರಡು ವರ್ಷದಿಂದ ಅನುದಾನದ ಬಗ್ಗೆ ಹೇಳಿದ್ದನ್ನೇ ಕೇಂದ್ರ ಸರ್ಕಾರ ಹೇಳುತ್ತಿದೆ ಎಂದು ಕೇಳಿದಾಗ, “ಇದರ ಬಗ್ಗೆ ಕೇಂದ್ರ ಸರ್ಕಾರವನ್ನೇ ಕೇಳಬೇಕು. ಇದು ರಾಜಕೀಯವೇ? ಕೇಂದ್ರ ಸರ್ಕಾರದ ಬಳಿ ದುಡ್ಡಿಲ್ಲವೇ? ಎಂದು ಕೇಳಬೇಕು. ಯೋಜನೆಗೆ ಎಷ್ಟು ಖರ್ಚಾಗಿದೆ ಎಂದು ಮಾಹಿತಿ ಕೇಳಿದ್ದರು. ಅದನ್ನೂ ಸಹ ನೀಡಲಾಗಿದೆ. ಒಮ್ಮೆ ಮಾತ್ರ ಕ್ಯಾಬಿನೆಟ್ ಬಳಿ ಇದೆ ಎಂದು ಹೇಳಿದ್ದರು” ಎಂದು ತಿಳಿಸಿದರು.
ಡಿಪಿಆರ್ ಸಲ್ಲಿಸಿದ ಮೇಲೆ ₹5,300 ಕೋಟಿ ಘೋಷಣೆ ಮಾಡಿದ್ದರು ಈಗ ವಿಳಂಬವಾಗುತ್ತಿರುವುದು ಏಕೆ ಎಂದು ಕೇಳಿದಾಗ, “ಏನು ಮಾಡುವುದು ಅಧಿಕಾರಕ್ಕೆ ಕಾಂಗ್ರೆಸ್ ಸರ್ಕಾರ ಬಂದುಬಿಟ್ಟಿತ್ತಲ್ಲ” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ನಮಗೆ ಸಹಕಾರ ನೀಡಿದರೆ ಗೋವಾದವರಿಗೂ ಸಹಕಾರ

ಗೋವಾದವರು ನಮ್ಮ ಭಾಗದಲ್ಲಿ ವಿದ್ಯುತ್ ಮಾರ್ಗ ಹಾಕಲು ನಾವು ತಕರಾರು ತೆಗೆದಿದ್ದೇವೆ ಎಂದು ಹೇಳಿದ್ದಾರೆ. ನೀವು ನಮಗೆ ಸಹಕಾರ ನೀಡುವುದಾದರೆ ನಾವು ನಿಮಗೆ ನೀಡುತ್ತೇವೆ ಎಂದು ಹೇಳಿದ್ದೇವೆ. ಒಂದು ವಾರದಲ್ಲಿ ಇದರ ಬಗ್ಗೆ ಕೇಂದ್ರ ಪರಿಸರ ಸಚಿವರು ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ. ಮುಂದಿನ ಸಂಸತ್ ಅಧಿವೇಶನ ನಡೆಯುವುದರ ಒಳಗಾಗಿ ಮತ್ತೆ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದೇನೆ” ಎಂದರು.
“ಕಳಸಾ ಬಂಡೂರಿ ಕಾಮಗಾರಿ ಸಂಬಂಧವಾಗಿ ಬಿಜೆಪಿ ಸರ್ಕಾರವಿದ್ದ ವೇಳೆ ಕೆಲಸ ಮಾಡಬಹುದು ಎಂದು ಹೇಳಿದರು. ಈ ಪ್ರಕಾರವಾಗಿ ನಾವು ಟೆಂಡರ್ ಅನ್ನು ಕೂಡ ಕರೆಯಲಾಯಿತು. ಆದರೆ ಗೋವಾ ಸರ್ಕಾರ 09.01.2023 ರಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ನಮ್ಮ ಅಧಿಕಾರಿಗಳು ತಕ್ಷಣ ಉತ್ತರ ನೀಡಿ ʼನೀವು ಶೋಕಾಸ್ ನೋಟಿಸ್ ನೀಡಲು ಬರುವುದಿಲ್ಲʼ ಎಂದು ಹೇಳಿದ್ದಾರೆ. ಈ ವ್ಯಾಜ್ಯ ನ್ಯಾಯಾಲಯದಲ್ಲಿದೆ” ಎಂದರು.

“ಈ ವಿಚಾರವನ್ನು ಕೇಂದ್ರ ಸಚಿವರ ಗಮನಕ್ಕೆ ತಂದು ʼಗೋವಾ ಸರ್ಕಾರ (Goa Govt) ನಮಗೆ ಶೋಕಾಸ್ ನೋಟಿಸ್ ನೀಡಲು ಯಾರುʼ ಎಂದು ಕೇಳಿದ್ದೇನೆ. ನಮ್ಮ ಜಾಗದಲ್ಲಿ ನಾವು ಕಾಮಗಾರಿ ನಡೆಸುತ್ತೇವೆ. ನೀವು ಈ ವಿಚಾರವಾಗಿ ಅವರಿಗೆ ತಿಳಿಹೇಳಿ. ಇದರ ಬಗ್ಗೆ ಪ್ರಹ್ಲಾದ್ ಜೋಶಿ (Prahlad Joshi) ಅವರೂ ಸಹ ಬಂದು ಮಾತನಾಡಿದರು ಎಂದು ಕೇಂದ್ರ ಸಚಿವರು ಹೇಳಿದರು. ಗೋವಾ ತಕರಾರಿನ ಬಗ್ಗೆ ಈಗಾಗಲೇ ನ್ಯಾಯಲಯದಲ್ಲಿ ದಾವೆ ಹೂಡಲಾಗಿದೆ. ನಮ್ಮ ಅರಣ್ಯ ಭೂಮಿ ಬಗ್ಗೆ ಕೇಂದ್ರ ಸರ್ಕಾರ ನಮ್ಮ ಬಳಿ ಕೇಳುತ್ತದೆ. ಗೋವಾ ನಮಗೆ ಸೂಚನೆ ನೀಡಲು ಯಾರು” ಎಂದು ಪುರುಚ್ಚರಿಸಿದರು.
“ಮೇಕೆದಾಟು ವಿಚಾರವಾಗಿ ಅಪ್ರೇಸಲ್ ವರದಿಯನ್ನು ಕೇಂದ್ರ ಸರ್ಕಾರ ನೀಡಬೇಕು. ಸಿಡ್ಬ್ಯೂಸಿಗೆ ಅಪ್ರೇಸಲ್ ವರದಿ ನೀಡಿ ಡಿಪಿಆರ್ ಗೆ ಅನುಮತಿ ನೀಡಬೇಕು ಎಂದು ಹೇಳಿದ್ದೇನೆ. ಸಿಡ್ಬ್ಯೂಎಂಎ ಅವಾರ್ಡ್ ಅನ್ನು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೇ ಮಾಡಿ ನೀಡಿದ್ದೇವೆ. ನೀವು ನ್ಯಾಯಲಯಕ್ಕೆ ಏನು ಬೇಕಾದರೂ ವರದಿ ನೀಡಿ. ನ್ಯಾಯಲಯ ತನ್ನ ತೀರ್ಮಾನ ತಿಳಿಸಲಿ ಎಂದು ಹೇಳಿದ್ದೇವೆ. ನಮಗಿಂತ ಹೆಚ್ಚು ತಮಿಳುನಾಡಿಗೆ ಉಪಯೋಗ ಎಂದು ತಿಳಿಸಿದ್ದೇವೆ. ಇದರ ಬಗ್ಗೆ ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ” ಎಂದರು.

“ಕೃಷ್ಣಾ ನದಿ ನೀರಿನ ವಿಚಾರವಾಗಿ ಸಭೆಯ ದಿನಾಂಕ ನಿಗಧಿಯಾಗಿತ್ತು. ಆದರೆ ಇದ್ದಕ್ಕಿದ್ದಂತೆ ಸಭೆ ರದ್ದಾಯಿತು. ಜುಲೈ ತಿಂಗಳಿನಲ್ಲಿಯೇ ಮತ್ತೊಮ್ಮೆ ಸಭೆ ಕರೆಯುವುದಾಗಿ ಜಲಶಕ್ತಿ ಸಚಿವರು ತಿಳಿಸಿದ್ದಾರೆ. ಏಕೆಂದರೆ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳದ ಬಗ್ಗೆ ತೀರ್ಮಾನವಾಗಿದ್ದರೂ 10 ವರ್ಷದಿಂದ ನಮ್ಮ ಪಾಲಿನ ನೀರು ಸಿಗದೇ ಕಾಯುತ್ತಿದ್ದೇವೆ. 1.40 ಲಕ್ಷ ಎಕರೆಗೆ ನೀರಾವರಿ ನೀಡಲು ನಾವು ತಯಾರಿ ಮಾಡಿಕೊಂಡಿದ್ದೇವೆ. ಇದರ ಬಗ್ಗೆ ಒಪ್ಪಂದವೂ ಆಗಿದೆ. ಕೇಂದ್ರದಿಂದ ಗೆಜೆಟ್ ನೋಟಿಫಿಕೇಷನ್ ಮಾತ್ರ ಆಗಬೇಕು. ನಮ್ಮ ನೀರನ್ನು ಬಳಸಿಕೊಳ್ಳುವುದಕ್ಕೆ ಮಹಾರಾಷ್ಟ್ರ ಏಕೆ ತಕರಾರು ಹಾಕಬೇಕು. ಮಹಾರಾಷ್ಟ್ರ, ಆಂಧ್ರ, ತೆಲಂಗಾಣವನ್ನು ಕರೆದು ಮಾತನಾಡಬೇಕು ಎಂದು ಹೇಳಿದ್ದೇನೆ. ಇದರ ಬಗ್ಗೆ ಸಭೆಯನ್ನು ಸಂಸತ್ ಅಧಿವೇಶನದ ಒಳಗಾಗಿ ಕರೆಯುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ. ಕೇಂದ್ರ ಸಚಿವರು, ಸಂಸದರಿಗೆ ಈ ವಿಚಾರವಾಗಿ ಒತ್ತಡ ಏರಬೇಕು ಎಂದು ಮತ್ತೊಮ್ಮೆ ಮನವಿ ಮಾಡುತ್ತೇನೆ” ಎಂದರು.
“ಕೇಂದ್ರ ಸಚಿವರುಗಳನ್ನು ಭೇಟಿ ಮಾಡುವ ವೇಳೆ ಇದೇ ವೇಳೆ ಜೊತೆಯಲ್ಲಿ ಕೇಂದ್ರ ಸಚಿವರಾದ ಸೋಮಣ್ಣ (V Somanna) ಅವರು ಸಹ ಇದ್ದರು. ಪ್ರಹ್ಲಾದ್ ಜೋಶಿ (Prahlad Joshi) ಅವರನ್ನೂ ಭೇಟಿ ಮಾಡಲಾಯಿತು” ಎಂದು ಹೇಳಿದರು.