ಸಮುದಾಯ ವಿಜ್ಞಾನ ಮಹಾವಿದ್ಯಾಲಯ ಪದವೀಧರರ ಸಂಘ ಉದ್ಘಾಟಿಸಿದ ಸಚಿವರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಂದಿನ ನೇಮಕಾತಿ ಸಂದರ್ಭದಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಕನಿಷ್ಠ ಶೇಕಡಾ 20 ರಿಂದ 25 ರಷ್ಟು ಮೀಸಲಾತಿ ನೀಡಲು ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.

ಗ್ರಾಮೀಣ ಗೃಹ ವಿಜ್ಞಾನ ಮಹಾವಿದ್ಯಾಲಯ / ಸಮುದಾಯ ವಿಜ್ಞಾನ ಮಹಾವಿದ್ಯಾಲಯ ಪದವೀಧರರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ನನ್ನ ಇಲಾಖೆಗೆ ಅಗತ್ಯವಾದ ಕೌಶಲಗಳನ್ನು ಇಲ್ಲಿ ಕಲಿಸಲಾಗುತ್ತದೆ. ಇಲ್ಲಿ ಪದವಿ ಪಡೆದವರು ನಮ್ಮ ಇಲಾಖೆಗೆ ಹೆಚ್ಚು ಸೂಕ್ತವಾಗುತ್ತಾರೆ. ಈಗಾಗಲೇ ಸಾಕಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಮುಂದಿನ ನೇಮಕಾತಿ ಸಂದರ್ಭದಲ್ಲಿ ಹೆಚ್ಚು ಆದ್ಯತೆ ನೀಡುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುವೆ, ಜೊತೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಕೌಶಾಲ್ಯಭಿವೃದ್ದಿ ಸಚಿವರ ಜೊತೆಗೂ ಚರ್ಚೆ ನಡೆಸಿ ಕೂಸಿನ ಮನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಹೆಚ್ಚು ಅವಕಾಶ ಸಿಗುವಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ಈ ಹಿಂದೆ ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗಿದ್ದರು. ಅಂತಹ ಸಂದರ್ಭದಲ್ಲಿ ಈ ಕಾಲೇಜು ಆರಂಭವಾಗಿದೆ. ಆ ಸಂದರ್ಭದಲ್ಲೂ ಸಾಕಷ್ಟು ಮಹಿಳೆಯರು ಈ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಕಲಿಯುವ ಉತ್ಸಾಹ ಇದ್ದರೆ, ಎಲ್ಲವೂ ಸಾಧ್ಯ ಎನ್ನುವುದನ್ನು ತೋರಿಸಿದ್ದಾರೆ. ಕೆಲವರಿಗೆ ಅವಕಾಶ ಕಡಿಮೆ ಸಿಗಬಹುದು, ಕೆಲವರಿಗೆ ಜಾಸ್ತಿ ಸಿಗಬಹುದು. ಆದರೆ ಅದನ್ನು ಸದುಪಯೋಗ ಪಡಿಸಿಕೊಳ್ಳುವ ಮನೋಭಾವ ಬೇಕು ಎಂದು ಸಚಿವರು ಹೇಳಿದರು.

ಈಗ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜ ತುಂಬಾ ಬದಲಾಗಿದೆ. ಗಂಡಸರ ಯೋಚನಾ ರೀತಿ ಸಹ ಬದಲಾಗಿದೆ. ಗಂಡು ಹೆಣ್ಣು ಎಂಬ ಬೇಧ ಭಾವ ಉಳಿದಿಲ್ಲ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಲಾಗುತ್ತಿದೆ. ನಮ್ಮ ದೇಶದ ಸಕಾರಾತ್ಮಕ ಬೆಳವಣಿಗೆಗೆ ಇದು ಕೂಡ ಕಾರಣವಾಗಿದೆ ಎಂದು ಹೇಳಿದರು.

ಧಾರವಾಡವನ್ನು ವಿದ್ಯಾಕಾಶಿ ಎಂದು ಕರೆಯುತ್ತೇವೆ. ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ನಮ್ಮ ಹೆಮ್ಮೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಣ್ಣಿಸಿದರು.

ಈ ವೇಳೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್. ಪಾಟೀಲ(Dr. P L Patil), ವಿದ್ಯಾಧಿಕಾರಿ ಡಾ.ಲತಾ ಪೂಜಾರ್(Dr. Latha Poojar), ನಿವೃತ್ತ ಡೀನ್ ಪುಷ್ಪ ಖಾದಿ(Deen Pushpa Khadi), ಪದವೀಧರರ ಸಂಘದ ಅಧ್ಯಕ್ಷರಾದ ಡಾ.ಸರೋಜಿನಿ ಕರಕಣ್ಣವರ್(Dr. Sarojinin Karakannavar), ಕಾರ್ಯದರ್ಶಿ ಡಾ. ವೀಣಾ ಜಾಧವ(Dr. Veena Jadhav), ಜಂಟಿ ಕಾರ್ಯದರ್ಶಿ ಡಾ.ಸಾಧನಾ ಕುಳ್ಳೊಳ್ಳಿ(Dr. Sadana Kullolli) ,ಖಜಾಂಚಿ ಡಾ.ಮಂಜುಳಾ ಪಾಟೀಲ(Dr. Manjula Patil), ಸಹ ಖಜಾಂಚಿ ಡಾ. ಉಮಾ ಕುಲಕರ್ಣಿ(Uma Kulakarni), ಸದಸ್ಯರಾದ ಡಾ.ಹೇಮಲತಾ(Dr. Hemalatha), ಡಾ.ರೇಣುಕಾ ಸಾಳುಂಕೆ(Dr. Renuka Salunke), ಡಾ.ಗೀತಾ ಚಿಟಗುಬ್ಬಿ(Dr. Geetha Chitagubbi), ಡಾ.ಪ್ರೇಮಾ ಪಾಟೀಲ(Dr. Prema Patil), ಡಾ.ರಾಜೇಶ್ವರಿ(Dr. rajeshwari),ಮಾಳವಿಕಾ ಮೊಕಾಶಿ(Malavika Mokashi) ಸೇರಿದಂತೆ ಹಲವರು ಉಪಸ್ಥಿತರಿದ್ದರು.