ಪ್ರಶ್ನೆಯೊಂದಿಗೆ ಕನ್ನಡದ ಎಎಂಆರ್ ರಮೇಶ್
ರಾಜೀವ್ ಗಾಂಧಿ ಹತ್ಯೆ ಕುರಿತು ಚಿತ್ರ/ ವೆಬ್ ಸೀರೀಸ್ ಮಾಡಲು ಕಳೆದ ಮೂವತ್ತು ವರ್ಷಗಳಿಂದ ಕನಸುತ್ತಿರುವ ಕನ್ನಡದ ಎಎಂಆರ್ ರಮೇಶ್ ಈಗ ಮುಂದೇನು? ಎಂಬ ಪ್ರಶ್ನೆಯೊಂದಿಗೆ ʻಪ್ರತಿಧ್ವನಿʼʻ ಎದುರು ಕಾಣಿಸಿಕೊಂಡಿದ್ದಾರೆ.

Muralidhara Khajane
ʻದ ಹಂಟ್ʼ -ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯನ್ನು ಕುರಿತ ಏಳು ಕಂತುಗಳ ವೆಬ್ ಸೀರೀಸ್ ಅನ್ನು SONLY LIV ಶುಕ್ರವಾರ ಮುಂಜಾನೆಯಿಂದ ಪ್ರಸಾರ ಮಾಡುತ್ತಿದೆ. ಈ ವೆಬ್ ಸೀರೀಸ್ ಗೆ ಉತ್ತಮ ಪ್ರತಿಕ್ರಿಯೆಯೂ ಲಭ್ಯವಾಗಿದೆ. ಈ ವೆಬ್ ಸೀರೀಸ್ ಅನ್ನು ಖ್ಯಾತ ನಿರ್ದೇಶಕ ನಾಗೇಶ್ ಕುಕನೂರು ಅವರು ನಿರ್ದೇಶಿಸಿದ್ದಾರೆ. ಈ ವೆಬ್ ಸೀರೀಸ್ ಅನ್ನು ನಿರ್ಮಿಸಿರುವವರು ಹೇಳಿರುವಂತೆ,- ಇದು ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದವರನ್ನು ಪತ್ತೆ ಹಚ್ಚಿ ಅವರನ್ನು ಬೆನ್ನುಹತ್ತಿದ ತೊಂಭತ್ತು ದಿನಗಳ ಕಥನವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ. ಇದು, ರಾಜೀವ್ ಗಾಂಧಿ ಅವರ ಹಂತಕರನ್ನು ವಿಶೇಷ ತನಿಖಾ ತಂಡ (Special Investigation Team SIT) ಬೇಟೆಯಾಡಿದ ದೀರ್ಘ ಮತ್ತು ಎಲ್ಲ ವಿವರಗಳನ್ನೊಳಗೊಂಡ ಕಥನವಾಗಿದೆ. ಅಷ್ಟೇ ಅಲ್ಲದೆ ಇದುವರೆಗೆ ತಿಳಿದಿರದ ಹಲವು ಸಂಗತಿಗಳನ್ನು ಬಹಿರಂಗಗೊಳಿಸುತ್ತದೆ ಎಂದಿದ್ದಾರೆ. ನಾಗೇಶ್ ಕುಕನೂರು.
ʻದ ಹಂಟ್ʼ ಪ್ರಸಾರ ಆರಂಭವಾಗಿರು ಹಿನ್ನೆಲೆಯಲ್ಲಿ, ರಾಜೀವ್ ಗಾಂಧಿ ಹತ್ಯೆಯನ್ನು ಕುರಿತು, ಕಳೆದ ಮೂವತ್ತು ವರ್ಷಗಳಿಂದ ಸಂಶೋಧನೆ ನಡೆಸಿ, ದಾಖಲೆಗಳನ್ನು ಸಂಗ್ರಹಿಸಿ, ಸಂಬಂಧ ಪಟ್ಟ ಎಲ್ ಟಿ ಟಿ ಈ (LTTE) ಯ ಅಳಿದುಳಿದ ನಾಯಕರನ್ನು, ಮತ್ತು ಈ ಹತ್ಯೆಗೆ ಸಂಬಂಧಿಸಿದ ಪಾತ್ರದಾರಿಗಳನ್ನು ಮಾತನಾಡಿಸಿ. ಚಿತ್ರಕಥೆ ಸಿದ್ಧಪಡಿಸಿಕೊಂಡು ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದ್ದ, ಕನ್ನಡದವರೇ ಆದ ಎ. ಎಂ. ಆರ್ ರಮೇಶ್ ಅವರ ಮುಂದಿನ ಭವಿಷ್ಯವೇನು? ಎಂಬುದು ಈಗ ಕಾಡುತ್ತಿರುವ ಪ್ರಶ್ನೆ.
ತಾವು ಸಂಗ್ರಹಿಸಿದ ಮಾಹಿತಿಗಳನ್ನು ಆಧರಿಸಿ, ಹೆಚ್ಚುಕಡಿಮೆ ಕಳೆದ ಆರು ವರ್ಷದಿಂದ ಚಿತ್ರಕತೆಯನ್ನು ಸಿದ್ಧಪಡಿಸಿಕೊಂಡಿರುವ ರಮೇಶ್ ನಾಲ್ಕು ಭಾಷೆಗಳಲ್ಲಿ ಈ ಕಥೆಯನ್ನು ಮೊದಲು ಸಿನಿಮಾ ರೂಪದಲ್ಲಿ ಹೇಳಲು ಸಿದ್ಧತೆ ನಡೆಸಿದ್ದರು. ಮೂರು ವರ್ಷಗಳ ಹಿಂದೆ ಈ ಕುರಿತು ಮಾತನಾಡಿದ್ದ ರಮೇಶ್, ತಮ್ಮ ಕನ್ನಡ ಚಿತ್ರಕ್ಕೆ ʻಆಸ್ಫೋಟʼ ಎಂದು, ತಮಿಳಿನ ಆವೃತ್ತಿಗೆ ʻಮನಿದ ವೆಡಿಗುಂಡುʼ , ತೆಲುಗು ಮತ್ತು ಹಿಂದಿ ಭಾಷೆಯಲ್ಲಿʼ ಹ್ಯೂಮನ್ ಬಾಂಬ್ʼ ಎಂಬ ಶೀರ್ಷಿಕೆಗಳನ್ನು ಆಖೈರು ಮಾಡಿ, ಅದನ್ನು ರಿಜಿಸ್ಟರ್ ಕೂಡ ಮಾಡಿಸಿದ್ದರು. ಅಲ್ಲದೆ ತಮ್ಮ ಮೂವತ್ತು ಕಂತುಗಳ ವೆಬ್ ಸೀರೀಸ್ ಗೆ LTTE ಎಂದು ಹೆಸರಿಸಿದ್ದರು. ಅದರ ಟ್ಯಾಗಲೈನ್- One man ́ s terrorist ̧ another man ́s freedom fighter ́ ಎಂದು ರಿಜಿಸ್ಟರ್ ಮಾಡಿಸಿರುವುದಾಗಿ ಈ ಲೇಖಕನಿಗೆ ತಿಳಿಸಿದ್ದರು.

ಕಾರ್ತಿಕೇಯನ್ ಮಿಂಚಂಚೆ
ಹಾಗಾದರೆ ರಮೇಶ್ ಅವರ ಯೋಜನೆಗಳ ಕತೆ ಏನು? ಎಂದು ಅವರನ್ನು ʻಪ್ರತಿಧ್ವನಿʼ ಪ್ರಶ್ನಿಸಿದಾಗ ಅವರಿಂದ ದಕ್ಕಿದ ಉತ್ತರ ಮಾರ್ಮಿಕವಾಗಿತ್ತು. ರಾಜೀವ್ ಗಾಂಧಿ ಅವರ ಹತ್ಯೆಯನ್ನು ಕುರಿತು: “ಇದುವೆರೆಗೆ ಬಂದಿರುವ ಚಿತ್ರಗಳು ಹಾಗೂ ವೆಬ್ ಸೀರೀಸ್ ನಲ್ಲಿ ಶೇಕಡಾ ಹತ್ತರಷ್ಟು ಮಾತ್ರ ಸತ್ಯವಿದೆ. ಉಳಿದದ್ದೆಲ್ಲ ಊಹೆ. ನಾನು ಹೇಳಲು ಹೋರಟಿರುವುದು ನೂರಕ್ಕೆ ನೂರರಷ್ಟು ಸತ್ಯವಾದದ್ದು. ಅದು ಸಂಶೋಧನೆ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ನೂರಾರು ಮಂದಿಯ ಸಂದರ್ಶನಗಳನ್ನು ಆಧರಿಸಿ ರಚಿಸಿದ ಚಿತ್ರಕಥೆ. ಈ ರೀತಿಯ ವಿವರಗಳು ನನ್ನ ಹೊರತು ಯಾರ ಬಳಿಯೂ ಇರಲಿಲ್ಲ. ʻದ ಹಂಟ್ʼ ಸೀರೀಸ್ ಟ್ರೇಲರ್ ಹೊರಬೀಳುತ್ತಿದ್ದಂತೆ. ರಾಜೀವ್ ಗಾಂಧಿ ಅವರ ಹತ್ಯೆಯ ತನಿಖೆ ನಡೆಸಿದ SIT ಯ ನಾಯಕತ್ವ ವಹಿಸಿದ್ದ ಖ್ಯಾತ ಪೊಲೀಸ್ ಅಧಿಕಾರಿ ಕರ್ನಾಟಕ ಕೇಡರ್ ನ ಡಿ. ಆರ್. ಕಾರ್ತಿಕೇಯನ್ ನನಗೊಂದು ಸಂದೇಶ ಕಳುಹಿಸಿ, ಅದರಲ್ಲಿರುವ ಅಸತ್ಯಗಳನ್ನು ಹೊರಗೆಡವಿ, ನಿಜ ಕಥೆಯನ್ನು ಹೇಳುವ ಅಗತ್ಯವಿದೆ. ಅದನ್ನು ನೀವು ಮಾಡಬಲ್ಲಿರಿ. ಕೂಡಲೇ ನಿಮ್ಮ ಸಿನಿಮಾ ಮತ್ತು ವೆಬ್ ಸೀರೀಸ್ ನ ಕೆಲಸವನ್ನು ಕೂಡಲೇ ಆರಂಭಿಸಿ ಎಂದು ಒತ್ತಾಯಿಸಿದ್ದಾರೆ” ಎಂದು ಹೇಳಿ, ಈ ಲೇಖಕನಿಗೆ ಡಿ.ಆರ್. ಕಾರ್ತಿಕೇಯನ್ ಅವರ ಮಿಂಚಂಚೆ (email) ತೋರಿಸಿದರು.
ಅನ್ಯಾಯ-ನ್ಯಾಯಾಲಕ್ಕೆ ಮನವಿ
ಟ್ರೇಲರ್ ನೋಡುತ್ತಿದ್ದಂತೆಯೇ ರಮೇಶ್ ಅವರಿಗೆ ಅನುಮಾನ ಬಂದು ಹುಡುಕಾಡಿದಾಗ, ತಮ್ಮ ತಂಡದೊಂದಿಗೆ ಕೆಲಸ ಮಾಡಿದ ವ್ಯಕ್ತಿಯ ಹೆಸರು, ʻದ ಹಂಟ್ʼ ನ credit line ನಲ್ಲಿ ಕಾಣಿಸಿಕೊಂಡಾಗ ಅದು ದೃಢವಾಯಿತು. ಹಾಗಾಗಿ ರಮೇಶ್ ಅವರು ಬೆಂಗಳೂರಿನ ಕಮರ್ಷಿಯಲ್ ಕೋರ್ಟ್ ನ ಬಾಗಿಲು ತಟ್ಡಿ, ತಮಗೆ ವೆಬ್ ಸೀರೀಸ್ ತೋರಿಸಿ, ತಮ್ಮದೇನೂ ಆಭ್ಯಂತರವಿಲ್ಲ. ತಮ್ಮ ಸ್ಕ್ರಿಪ್ಟ್ ನಲ್ಲಿರುವ ಯಾವುದೇ ದೃಶ್ಯ (ಅವರು ಕಲ್ಪಿಸಿದಂತೆ) ಇಲ್ಲ ಎಂದು ಖಚಿತಪಡಿಸಿಕೊಂಡ ನಂತರ. ಆ ವೆಬ್ ಸೀರೀಸ್ ಗೆ ಅನುಮತಿ ನೀಡಿ ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡರು. ಆದರೆ ನ್ಯಾಯಾಲಯ ಸದ್ಯಕ್ಕೆ ಸಮಯದ ಕೊರತೆ, ಮತ್ತು ರಮೇಶ್ ಕೊಟ್ಟ ವಿವರಗಳು ದಾಖಲೆಗಳು ಸಾಕಾಗುವುದಿಲ್ಲ, ಎಲ್ಲ ವಿವರ, ದಾಖಲೆಗಳನ್ನು ಕೂಡಲೇ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿ, ಪ್ರಕರಣವನ್ನು ಮುಂಡೂಡಿದ್ದಾರೆ ಮತ್ತು, ಇದರಿಂದ ʻದ ಹಂಟ್ʼ ನಿನ್ನೆ ಬಿಡುಗಡೆಯಾಗಿ ಪ್ರದರ್ಶನ ಕಂಡಿದೆ.
ತಮ್ಮ ಮೂವತ್ತು ಕಂತುಗಳ ವೆಬ್ ಸೀರೀಸ್ ಗೆ LTTE – One man ́ s terrorist ̧ another man ́s freedom fighter ́ ತಾವು ಮೂವತ್ತು ವರ್ಷಗಳ ಕಾಲ ಕಷ್ಟಪಟ್ಟು ಸಂಗ್ರಹಿಸಿದ ಮಾಹಿತಿ,, ಇತ್ಯಾದಿಗಳನ್ನು ಕುರಿತು ರಮೇಶ್ ದೀರ್ಘವಾಗಿ ʻಪ್ರತಿಧ್ವನಿʼಗಾಗಿ ಮಾತನಾಡಿದ್ದಾರೆ. ಅದರ ವೀಡಿಯೋ ಸಂದರ್ಶನ ಶೀಘ್ರದಲ್ಲಿ ʻಪ್ರತಿಧ್ವನಿʼ ಓದುಗರಿಗೆ, ಕೇಳುಗರಿಗೆ, ನೋಡುಗರಿಗೆ ಲಭ್ಯವಾಗಲಿದೆ.

ತಮ್ಮ ನೈಜ ಕಥಾನಕಗಳ ಮೂಲಕ ಮತ್ತು ಪ್ರೇಕ್ಷಕರನ್ನು ಆಸನದ ಅಂಚಿಗೆ ಕೂರಿಸಿ ಕುತೂಹಲ ಹುಟ್ಟಿಸುವ ಪ್ರತಿಭೆ ಇರುವ ರಮೇಶ್ ದಕ್ಷಿಣ ಭಾರತದ ಅತ್ಯುತ್ತಮ ಚಿತ್ರ ನಿರ್ದೇಶಕರಲ್ಲಿ ಒಬ್ಬರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಇನ್ನೇನು ತಮ್ಮ ಚಿತ್ರ, ವೆಬ್ ಸೀರೀಸ್ ಕಥೆ ಚಿತ್ರೀಕರಣ ಅರಂಭಿಸಬೇಕೆಂದು ತಯಾರಿ ನಡೆಸುತ್ತಿರುವಾಗ ಶ್ರೀಲಂಕೆಯಲ್ಲಿ ಎಲ್ ಟಿ ಟಿ ಈ ಮತ್ತು ಸಿಂಹಳದ ಸರ್ಕಾರದ ನಡುವೆ ನಡೆಯುತ್ತಿದ್ದ ದಶಕಗಳ ಕಾಲದ ಸಂಘರ್ಷಕ್ಕೆ ಅಂತಿಮ ತೆರೆ ಬಿತ್ತು. ಎಲ್ ಟಿ ಟಿ ಈ ಹೆಚ್ಚುಕಡಿಮೆ ನಿಶ್ಯೇಷವಾಯಿತೆಂದೇ ಹೇಳಬೇಕು. ಹಾಗಾಗಿ ಈ ಚಿತ್ರದ ಚಿತ್ರೀಕರಣಕ್ಕೆ ಸಾಕಷ್ಟು ತೊಂದರೆಯಾಯಿತು. ಲಂಕೆಯಲ್ಲಿ ನಡೆದ ಮುಳ್ಳಿವೈಕುಲ್ ದಿನಾಚರಣೆ, ಚಿತ್ರೀಕರಣ ಸಾಧ್ಯವಾಗದಿರಲು ಕಾರಣವಾಯಿತು. ಈ ವೇಳೆಗೆ ಭಾರತ್ ಸರ್ವೋಚ್ಛ ನ್ಯಾಯಾಲಯ ರಾಜೀವ್ ಗಾಂಧಿ ಅವರ ಹತ್ಯೆಯಲ್ಲಿ ಸಿವರಾಸನ್ ಅವರಿಗೆ ನೆರವಾದ ಎ.ಜಿ. ಪೇರರಿವಾಳನ್ ಅವರನ್ನು ಬಿಡುಗಡೆ ಮಾಡಿತು.

ಸೈನೈಡ್ ರೀ ರಿಲೀಸ್
ರಮೇಶ್ ಅವರು ಇತ್ತೀಚೆಗೆ ತಮ್ಮ ʻಸೈನೈಡ್ʼ ಚಿತ್ರವನ್ನು ಬಿಡುಗಡೆ ಮಾಡಿ ಅದರೊಂದಿಗೆ, ತಾವು ಈಗಾಗಲೇ ಚಿತ್ರೀಕರಿಸಿರುವ ಇಪ್ಪತ್ತು ನಿಮಿಷಗಳ ಭಾಗವನ್ನು ಸೇರಿಸಿ ಬಿಡುಗಡೆ ಮಾಡಿದರು. ಆದರೆ ಮತ್ತೆ ಬಿಡುಗಡೆಯಾದ ʻಸೈನೈಡ್ʼ ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಂಥ ಪರಿಣಾಮ ಬೀರಲಿಲ್ಲ
ಇಲ್ಲೊಂದು ಸಂಗತಿಯನ್ನು ಹೇಳಲೇ ಬೇಕು. ರಾಜೀವ್ ಗಾಂಧಿ ಹತ್ಯೆ ಸಿನಿಮಾದ ಮಂದಿಗೆ ಅತಿ ಆಕರ್ಷಣೆ ಹುಟ್ಟಿಸಿದ subject . ಎಷ್ಟು ಮಂದಿ ಪ್ರಯತ್ನಿಸಿದರೂ, ಹೇಳಲು ಇನ್ನೂ ಸಂಗತಿಗಳು ಉಳಿದೇ ಇರುತ್ತವೆ ಎಂಬುದು ಖಂಡಿತ.

ರಾಜೀವ್ ಹತ್ಯೆಯ ಕುರಿತ ಇದುವರೆಗಿನ ಚಿತ್ರ-ವೆಬ್ ಸೀರೀಸ್ ಗಳು
ಈಗಾಗಲೇ ಆರ್. ಕೆ. ಸೆಲ್ವಮಣಿ ೨೦೦೭ರಲ್ಲಿ ʻಕುಟ್ರಪತ್ರಿಕೈʼ Kuttrapatrikai (Charge Sheet) in 2007 ಸಿನಿಮಾ ಬಿಡಿಗಡೆ ಮಾಡಿದರು. ಅದು ಜಾಳುಜಾಳಾಗಿ, ವಿಷಯಗಳನ್ನೇ ಮರೆಮಾಚಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಿವೃತ್ತ ಸೇನಾಧಿಕಾರಿ ಎ. ಕೆ. ರವೀಂದ್ರನ್ made Mission 90 Days starring Mammmooty in 2007 ಎಂಬ ಚಿತ್ರ ನಿರ್ದೇಶಿಸಿದರು. ಅದು ಕೂಡ ಯಶಸ್ವಿಯಾಗಲಿಲ್ಲ. ಇದರಲ್ಲಿ ಮಮ್ಮೂಟಿ ನಟಿಸಿದರು. ಇದಾದ ನಂತರ ʼಕೇಸ್ ಫೈಲ್ಸ್ ಎಂಬ ವೆಬ್ ಸಿರೀಸ್ ಬಂತು. ಅದನ್ನು ಸಮೀರ್ ದೀಕ್ಷಿತ್, ಜತೀಶ್ ವರ್ಮಾ ಮತ್ತು ಗಿರೀಶ್ ಜೋಹರ್ ಜಂಟಿಯಾಗಿ ನಿರ್ಮಿಸಿದರು. ಸ್ಪಲ್ಪ ಕಾಲಾವಧಿಯ ನಂತರ ಶೂಜಿತ್ ಸರ್ಕಾರ್ , ʻಮದ್ರಾಸ್ ಕೆಫೆ ʼ ಎಂಬ ಚಿತ್ರ ನಿರ್ಮಿಸಿದರು. ಇದರಲ್ಲಿ ಜಾನ್ ಅಬ್ರಾಹಮ್ ಮತ್ತು ಕನ್ನಡದ ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಇದು ವಾಸ್ತವಕ್ಕೆ ಹತ್ತಿರವಾಗಿದ್ದಲ್ಲದೇ, ರಾಜೀವ್ ಹತ್ಯೆಯ ಒಳಸುಳಿಗಳನ್ನು ಸ್ವಲ್ಪಮಟ್ಟಿಗೆ ಪರಿಚಯಿಸಿತು. ಅಲ್ಲದೆ ಇಂಡಿಯನ್ನ ಪೀಸ್ ಕೀಪಿಂಗ್ ಫೋರ್ಸ್ ನ ಬಗ್ಗೆ ಹಲವು ವಿವರಗಳನ್ನು ಬಿಚ್ಚಿಟ್ಟಿತು. ಇತ್ತೀಚೆಗೆ ರಾಜ್ ಮತ್ತು ಡಿಕೆ ಅವರು ಜಂಟಿ ಪ್ರಯತ್ನದಲ್ಲಿ ʻಫ್ಯಾಮಿಲಿ ಮ್ಯಾನ್- ಎರಡು ವೆಬ್ ಸಿರೀಸ್ ಬಂತು. ಇದು ಕಾಲ್ಪನಿಕ ಕಥೆಯಾದರೂ, ವಾಸ್ತವದಲ್ಲಿ ನಡೆದು ಶ್ರೀಲಂಕಾ ರಾಜಕಾರಣ, ಎಲ್ ಟಿ ಟಿ ಈ ವಿಘಟನೆಯನ್ನು ಅಣುಅಣುವಾಗಿ ಬಿಡಿಸಿಟ್ಟಿತು.

ರಮೇಶ್‌ಗೆ ಹೇಳಲಿಕ್ಕಿರುವುದಾದರೂ ಏನು?
ಈ ಎಲ್ಲ ನಿರ್ದೇಶಕರು, ರಾಜೀವ್ ಗಾಂಧಿ ಅವರ ಹತ್ಯೆಯ ಹಲವು ಮುಖಗಳನ್ನು ಬಿಡಿಸಿಟ್ಟಿರುವಾಗ, ಅವರು ರಮೇಶ್ ಅವರಿಗೆ ಹೇಳಲು ಏನನ್ನು ಉಳಿಸಿದ್ದಾರೆ ಎಂಬ ಪ್ರಶ್ನೆ ಏಳುವುದು ಸಹಜ. ಈ ಕುರಿತು ರಮೇಶ್ ಅವರನ್ನು ಪ್ರಶ್ನಿಸಿದರೆ; “ಇವರೆಲ್ಲರೂ ಇದುವರೆಗೆ ತೋರಿಸಿರುವುದ ಸತ್ಯದ ಕೇವಲ ಶೇ ಹತ್ತರಷ್ಟು ಮಾತ್ರ. ನನ್ನ ಅಧ್ಯಯನದಲ್ಲಿ ಸಿಕ್ಕ ವಸ್ತುಗಳನ್ನು ಕ್ರೂಢೀಕರಿಸಿ ಹೇಳುವ ಪ್ರಯತ್ನದಲ್ಲಿ ಇನ್ನೂ ಶೇ ತೊಂಭತ್ತರಷ್ಟು ಹೇಳುವಷ್ಟು ವಿಷಯವಿದೆ. ಪ್ರತಿ ಸಂಗತಿಯನ್ನೂ ನಾನು ಆಳವಾದ ವಿವರಗಳೊಂದಿಗೆ ಪ್ರಸ್ತುತ ಪಡಿಸುತ್ತೇನೆ ಎಂದು ತಾವು ಸಿದ್ಧ ಪಡಿಸಿಕೊಂಡಿರುವ ಸ್ಟೋರಿ ಬೋರ್ಡ್ ಪುಟಗಳನ್ನು ತೆರೆದು ತೋರಿಸುತ್ತಾರೆ. “ ನನ್ನ ಚಿತ್ರ ಮತ್ತು ವೆಬ್ ಸೀರೀಸ್ ರಾಜೀವ್ ಗಾಂಧಿ ಅವರ ಹತ್ಯೆಯ ಜೊತೆಗೆ ಎಲ್ ಟಿ ಟಿ ಈ ಯ ಉಚ್ಛ್ರಾಯ ಸ್ಥಿತಿ ಮತ್ತು ಕುಸಿತ ಎಲ್ಲವನ್ನೂ ವಿವರವಾಗಿ ನಿಮ್ಮ ಮುಂದಿಡುತ್ತದೆ. ಮುಂದಿನ ದಿನಗಳಲ್ಲಿ ಇದೊಂದು ದೃಶ್ಯ ಭಂಡಾರವಾಗಿ ಉಳಿಯತ್ತದೆ್ ದೇಶದ ಪ್ರಧಾನಿಯೊಬ್ಬರ ಹತ್ಯೆಯೊಂದು ಕೇವಲ ಅಮೆರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿಯ ಹತ್ಯೆಯ ತನಿಖೆಯಂತಾಗದೆ, ನಿಜವಾದ ಕಾರಣ-ಕಾರಣರನ್ನು ತೋರಿಸುತ್ತದೆ” ಎನ್ನುತ್ತಾರೆ ಅಡ್ಯಾರ್ ಚಿತ್ರ ಶಾಲೆಯಲ್ಲಿ ಕಲಿತ ರಮೇಶ್.

ರಾಜೀವ್ ಸಾವನ್ನು ಕಂಡವರು, ರಂಗನಾಥ್ ಅವರಿಗೆ ಹತ್ತಿರದವರು
ರಾಜೀವ್ ಗಾಂಧಿ ಅವರ ಹತ್ಯೆಯಾದಾಗ ರಮೇಶ್ ಮದ್ರಾಸ್ (ಇಂದಿನ ಚೆನ್ನೈ)ನಲ್ಲೇ ಇದ್ದರು. ಆಗ ನಡೆದಿರುವುದನ್ನೆಲ್ಲ ಕಣ್ಣಾರೆ ಕಂಡವರು. ಆಸ್ಪತ್ರೆಗಳನ್ನು ಅಲೆದವರು. ರಾಜೀವ್ ಪಾರ್ಥೀವ ಶರೀರವನ್ನು ಹತ್ತಿರದಿಂದ ಕಂಡವರು. ಈ ಅನ್ಯಾಯವಾದ ಸಾವು ಅವರನ್ನು ಕಲುಕಿದ್ದು ಸಹಜವೇ. Investigative journalist ನಂತೆ ಪ್ರತಿವಿವರವನ್ನು ಸಂಗ್ರಹಿಸಿಟ್ಟುಕೊಂಡು, ಈ ಕುರಿತು ಏನಾದರೂ ಮಾಡಲೇಬೆಂದು ನಿರ್ಧರಿಸಿವರು ರಮೇಶ್. ಅಷ್ಟೇ ಅಲ್ಲ ರಾಜೀವ್ ಹಂತಕರು ಬೆಂಗಳೂರಿನಲ್ಲಿದ್ದಾರೆ ಎಂದು ತಿಳಿದಾಗ ಕೂಡಲೇ ಬೆಂಗಳೂರಿಗೆ ಧಾವಿಸಿದವರು. ಸಿವರಾಸನ್ ಅವರಿಗೆ ನೆಲೆ ನೀಡಿದ ರಂಗನಾಥ ಇವರ ಮನೆಯ ಪಕ್ಕದಲ್ಲಿದ್ದವರೆಂದರೆ, ರಮೇಶ್ ಬಳಿ ಎಂತೆಂಥ ಮಾಹಿತಿ ಇರುಬಹುದೆಂದು ಓದುಗರು ಊಹಿಸಿಕೊಳ್ಳಬಹುದು. ಅವರ ಚಿತ್ರಕ್ಕೆ Human Bomb ಎಂದು ಹೆಸರಿಡಲು ಕಾರಣವೇನೆಂದು ಕೇಳಿದರೆ; “ಧನು ರಾಜೀವ್ ಹತ್ಯೆಯಲ್ಲಿ Human Bomb ಹಾಗಾಗೇ ಆ ಶೀರ್ಷೀಕೆ ಎನ್ನತ್ತಾರೆ ರಮೇಶ್.

ಸಂಗ್ರಹಿಸಿದ ವಿವರ ದೃಶ್ಯ ಭಂಡಾರ
ರಮೇಶ್ ಭೇಟಿಮಾಡದ ಅಧಿಕಾರಿಗಳಿಲ್ಲ. ಪತ್ರಕರ್ತನ ಸೋಗಿನಲ್ಲಿ Intelligence Bureau ಹಾಗೂ Research Analysis Wing (RAW)̧ ಪೊಲೀಸ್ ಅಧಿಕಾರಿಗಳನ್ನು ಬೇಟಿಯಾಗಿ ಸಂಗ್ರಹಿಸಿದ ಮಹಿತಿಗಳ ಮಹಾಪೂರ ಇವರ ಮನೆಯ ಕಪಾಟಿನಲ್ಲಿ ಅಡಗಿದೆ. ಅಷ್ಟೇ ಅಲ್ಲ, ಶ್ರೀಲಂಕಾಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳು, ಎಲ್ ಟಿ ಟಿ ಈ ಬಗ್ಗೆ ಸಹಾನುಭೂತಿ ಉಳ್ಳವರು ಹಾಗೂ, ಅಳಿದುಳಿದ ತಮೀಳ್ ಈಳಂ ನಾಯಕರನ್ನು ಭೇಟಿಮಾಡಿ ಅವರ ಚಿತ್ರ, ಹಾಗೂ ಸಂದರ್ಶನಗಳನ್ನು ದಾಖಲಿಸಿಕೊಂಡವರು. ಇವರು ಕಳೆದ ಕಾಲ ಹರಿಸಿದ ಬೆವರಿಗೆ ಬೆಲೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ರಮೇಶ್ ಅವರದು. ಇವರ ಬಗ್ಗೆ ತಿಳಿದುಕೊಂಡ ತೆಲುಗಿನ ನಟ ರಾಣಾ ದಗ್ಗುಬಾಟಿ ಇವರೊಂದಿಗೆ ಕೂಡಿ ಸಿನಿಮಾ ಮತ್ತು ವೆಬ್ ಸೀರೀಸ್ ಮಾಡಲು ತಯಾರಿ ನಡೆಸಿದರು. ಅದಕ್ಕಾಗಿ ರಮೇಶ್, ತಮ್ಮ ನೆರವಿಗಾಗಿ ಹದಿನೈದು ಮಂದಿ ಬರಹಗಾರರ ತಂಡ ಕಟ್ಟಿಕೊಂಡು ಹೈದರಾಬಾದ್ ನಲ್ಲಿ ಎರಡು ವರ್ಷಗಳ ಕಾಲ ಠಿಕಾಣಿ ಹೂಡಿ, ಬರವಣಿಗೆ ನಡೆಸಿದರು. ಆ ತಂಡದಲ್ಲಿದ್ದ ಒಬ್ಬರು. ತಮ್ಮ ಕಥೆಯ ವಿವರಗಳನ್ನು ʻದ ಹಂಟ್ʼ ತಂಡಕ್ಕೆ ನೀಡಿದ್ದಾರೆ ಎಂಬುದು ರಮೇಶ್ ಅವರ ಆರೋಪ. ರಾಣಾ ದಗ್ಗುಬಾಟಿ ಕೂಡ ತಮಗೆ ಅನ್ಯಾಯ ಮಾಡಿದ್ದಾರೆ ಎಂಬುದು ಅವರ ಅಳಲು.

ಗಳಿಸಿಕೊಂಡಿದ್ದು, ಕಳೆದುಕೊಂಡಿದ್ದು
“ಕಳೆದ ಕೆಲವು ವರ್ಷಗಳಲ್ಲಿ ನಾನು ಮುನ್ನೂರಕ್ಕೂ ಹೆಚ್ಚು ಮಂದಿಯ ಸಂದರ್ಶನ ಮಾಡಿ ದಾಖಲಿಸಿಕೊಂಡಿದ್ದೇನೆ. ಆ ಪೈಕಿ. ಎಲ್ ಟಿ ಟಿ ಯ ಅಳಿದುಳಿದ ನಾಯಕರು, ಭಾರತೀಯ ಸೇನೆಯ ಅಧಿಕಾರಿಗಳು, ಪೊಲೀಸರು, ಜೈಲಿನಲ್ಲಿರುವ ಹಾಗೂ ಜೈಲಿನಿಂದ ಬಿಡುಗಡೆ ಹೊಂದಿರುವವರು. ಕೆನಡಾ, ಇಂಡಿಯಾ ಮತ್ತು ಡೆನ್ಮಾರ್ಕನಲ್ಲಿರುವ ವಿ. ಪ್ರಭಾಕರನ್ ಅವರ ಸೋದರ ಸಂಬಂಧಿಗಳು ಎಲ್ಲರ ಮಾತುಗಳ ದಾಖಲೆ ನನ್ನ ಬಳಿ ಇದೆ. ಆರು ಬಾರಿ ಶ್ರೀಲಂಕೆಗೆ ಹೋಗಿ ಬಂದಿದ್ದೇನೆ. ಇದಕ್ಕಾಗಿ ನನ್ನ ಮನೆ, ಮಠ ಎಲ್ಲವನ್ನೂ ಕಳೆದುಕೊಂಡಿದ್ದೇನೆ” ಎನ್ನುತ್ತಾರೆ ರಮೇಶ್.

ಪ್ರಿಯಾಂಕಾ ಗಾಂಧಿ ಅವರಿಂದ ಆರಂಭವಾಗುವ ಕಥನ
“ನನ್ನ ಸಿನಿಮಾ ಮತ್ತು ವೆಬ್ ಸೀರೀಸ್ ಆರಂಭವಾಗುವುದೇ, ಪ್ರಿಯಾಂಕಾ ಗಾಂಧಿ, ಜೈಲಿನಲ್ಲಿರುವ ನಳಿನಿ ಅವರನ್ನು ಬೇಟಿ ಮಾಡುವ ಮೂಲಕ. ಸತ್ಯ ಅರಿತ ಪ್ರಿಯಾಂಕರಿಂದ ದೊರೆತ ಸಹಾಯ” ಎಂದು ಸೂಚ್ಯವಾಗಿ ತಮ್ಮ ಸಿನಿಮಾದ ಸುಳಿವು ನೀಡುತ್ತಾರೆ. ಅದರೆ ವಿವರ ಬಿಟ್ಟುಕೊಡುವುದಿಲ್ಲ. ರಂಗಾಯಣದಲ್ಲಿ ಕಲಿತ ಇವರ ಮಗಳು ವಿಜೇತ ಇವರ ಚಿತ್ರದಲ್ಲಿ ʻಧನುʼ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಾಗಾದರೆ ರಮೇಶ್ ಚಿತ್ರೀಕರಣ ಯಾವಾಗ ಆರಂಭ ಎಂದರೆ; ಮಳೆಗಾಲ ಕಳೆದ ನಂತರ, ನನ್ನ ಬದುಕಿನಲ್ಲಿ ಆಕಾಶದಲ್ಲಿ ಸೂರ್ಯ ಉದಯಿಸಿದ ನಂತರ ಎಂದು ಮುಗುಳ್ನಗುತ್ತಾರೆ.