
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy stadium) ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣ ಸಿಐಡಿ ಗೆ (CID) ವರ್ಗಾವಣೆ ಮಾಡುತ್ತಿದ್ದಂತೆ ಸಿಐಡಿ ಫುಲ್ ಆಕ್ಟೀವ್ ಆಗಿದೆ. ನಿನ್ನೆ ತಡರಾತ್ರಿಯೇ ನಾಲ್ವರು ಆರೋಪಿಗಳ ಹೇಳಿಕೆ ಪ್ರತಿ ಪಡೆದುಕೊಂಡಿದ್ದು, ಸ್ಥಳ ಮಹಜರು ವೇಳೆ ಏನೆಲ್ಲ ಪರಿಶೀಲನೆ ಮಾಡಲಾಗಿತ್ತು, ಎಂಬುದರ ಕುರಿತು ಮತ್ತೊಮ್ಮೆ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ.

ಇದೇ ವೇಳೆ ಕಬ್ಬನ್ ಪಾರ್ಕ್ ಪೊಲೀಸರು ಕಲೆಹಾಕಿರುವ ಸಿಸಿಟಿವಿ ದೃಶ್ಯಗಳನ್ನು ಸಿಐಡಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣದ ತನಿಖೆ ಸಂಬಂಧ ತಡರಾತ್ರಿಯೇ ಹಿರಿಯ ಅಧಿಕಾರಿಗಳ ಜೊತೆಗೆ ತನಿಖಾಧಿಕಾರಿ ಚರ್ಚೆ ನಡೆಸಿದ್ದಾರೆ.
ಈ ವಿಚಾರದಲ್ಲಿ ಕೆ.ಎಸ್.ಸಿ.ಎ ಮ್ಯಾನೇಜ್ಮೆಂಟ್ ಗೆ ಇವತ್ತೇ ನೋಟಿಸ್ ನೀಡುವ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದೆ. ನಿನ್ನೆಯಷ್ಟೆ ಹೈಕೋರ್ಟ್ KSCA ವಿರುದ್ದ ಬಲವಂತವಾದ ಕ್ರಮ ಕೈಗೊಳ್ಳದಂತೆ ಆದೇಶ ನೀಡಿತ್ತು.ಆದರೆ ಪೊಲೀಸರ ತನಿಖೆಗೆ ಸಹಕರಿಸಲು ಹೈಕೋರ್ಟ್ ಸೂಚನೆ ನೀಡಿದೆ.

ಹೀಗಾಗಿ ಕೆ.ಎಸ್.ಸಿ.ಎ ಮ್ಯಾನೇಜ್ಮೆಂಟ್ ಗೆ ನೋಟಿಸ್ ಕೊಡುವುದರ ಬಗ್ಗೆ ಚರ್ಚೆಯಾಗಿದೆ. ಸದ್ಯ ಹಿರಿಯ ಅಧಿಕಾರಿಗಳ ಆದೇಶಕ್ಕೆ ತನಿಖಾಧಿಕಾರಿ ಸಿಐಡಿ ಎಸ್ಪಿ ಶುಭನ್ವಿತ ಕಾಯುತ್ತಿದ್ದಾರೆ. ಕೆ.ಎಸ್.ಸಿ.ಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಶಂಕರ್, ಖಜಾಂಚಿ ಜೈರಾಮ್ ಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿಐಡಿ ಮುಂದಾಗಿದೆ.