
ಮಂಡ್ಯದ ಜನ ಛತ್ರಿಗಳು ಎಂದು ಡಿ.ಕೆ ಶಿವಕುಮಾರ್ ಹೇಳಿರುವ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಧಿಕಾರದ ಮದ ಅವರನ್ನ ಹೀಗೆ ಮಾತನಾಡಿಸ್ತಿದೆ. ಅಧಿಕಾರ ಶಾಶ್ವತ ಎಂದು ಕೊಂಡಿದ್ದಾರೆ. ದೇಶದ ಎರಡನೇ ಶ್ರೀಮಂತ ಶಾಸಕ ಡಿ.ಕೆ ಶಿವಕುಮಾರ್. ಆ ಕಾರಣಕ್ಕೆ ಹೀಗೆಲ್ಲಾ ಮಾತಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಜನ ಇವರನ್ನ ಕೇಳ್ಬೇಕು, ಮೇಕೆದಾಟು ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ್ರು. ಮಂಡ್ಯಕ್ಕೆ ಏನ್ ಕೊಟ್ಟಿದ್ದಾರೆ ಕಾಂಗ್ರೆಸ್ ಸರ್ಕಾರದಲ್ಲಿ..? ಮಂಡ್ಯದ ಜನ ಛತ್ರಿಗಳು ಎಂದು ಹೇಳಿರುವ ಡಿ.ಕೆ ಶಿವಕುಮಾರ್ ವಿರುದ್ಧ ಮಂಡ್ಯದ ಜನ ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಛತ್ರಿಗಳು ಎಂದು ಮಂಡ್ಯದ ಜನರನ್ನ ಕರೆದಿರುವ ಡಿ.ಕೆ ಶಿವಕುಮಾರ್ ಮಾತಿಗೆ, ಅಧಿಕಾರದ ಮದ ಎಂದು ವಿಜಯೇಂದ್ರ ಟೀಕಿಸಿರುವ ವಿಚಾರವಾಗಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಹೌದಪ್ಪ ನನಗೆ ಮದ ಜಾಸ್ತಿ ಇದೆ . ಮದ ಇದ್ರೆ ಕಡಿಮೆ ಮಾಡಲಿ ಬಿಡು ಅವರು. ಯಾವ ಛತ್ರಿ ಎಂದು ಹೇಳಿದ್ದೇನೆ ? ಯಾರಿಗೆ ಹೇಳಿದ್ದೆ..? ಇವನೇನಾದರೂ ನೋಡಿದ್ನಾ ಇವನು ಎಂದು ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ.
ನಾನು ಬೇಕಾದವರನ್ನ ಏನಾದರೂ ಕರಿತಿನಿ, ಕೆಲವರು ಕಳ್ನನ್ನ ಮಗನೆ ಎನ್ನುತ್ತಾರೆ. ಸುಳ್ನನ್ನ ಮಗನೆ ಎನ್ನುತ್ತಾರೆ. ಪ್ರೀತಿಯಿಂದ ಇನ್ನೊಂದು ರೀತಿ ಮಾತಾಡ್ತಾರೆ. ಅದು ನಮ್ಮ ಇಂಟರ್ನಲ್ ವಿಚಾರ. ಯಾವ ಛತ್ರಿನೂ ಇಲ್ಲ ಎಂದಿದ್ದಾರೆ.

ಇನ್ನು ರಾಜ್ಯದಲ್ಲಿ ಪ್ರಭಾವಿ ಸಚಿವರಿಂದ ಹನಿಟ್ರ್ಯಾಪ್ ಅನ್ನೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಯಾರಾದರೂ ಇದ್ರೆ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಡಲಿ. ಮೊದಲು ಕಂಪ್ಲೇಂಟ್ ಕೊಡಲಿ, ಯಾರೇ ಇದ್ದರೂ ತನಿಖೆ ಮಾಡೋಣ ಎಂದು ವಿಷಯವನ್ನೇ ತೇಲಿಸಿದ್ದಾರೆ.







