
ದುಬೈನಿಂದ ಭಾರತಕ್ಕೆ ಚಿನ್ನವನ್ನು ಕಳ್ಳ ಸಾಗಣೆ ಮಾಡ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಶ್ವನಾಥ್ ಸಿ ಗೌಡರ್ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.
ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ ಆಗಿರುವ ಹಿನ್ನಲೆಯಲ್ಲಿ ಇಂದು ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಟಿ ರನ್ಯಾ ರಾವ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆಗೆ ತಯಾರಿ ಮಾಡಿಕೊಂಡಿದ್ದಾರೆ.

ನಟಿ ರನ್ಯಾ ಜಾಮೀನು ಅರ್ಜಿ ವಜಾ ಆಗಲು ಕಾರಣಗಳೇನು ಅನ್ನೋದನ್ನು ನೋಡೋದಾದರೆ, ರನ್ಯಾ ರಾವ್ ಕೇಸ್ ನಲ್ಲಿ ಅಂತಾರಾಷ್ಟ್ರೀಯ ಲಿಂಕ್ಗಳು ಇವೆ. ಕಸ್ಟಮ್ಸ್ ಬ್ಯಾಗೇಜ್ ನಿಯಮ ಉಲ್ಲಂಘನೆ ಮಾಡಲಾಗಿದೆ. ಜೈಲಿನಿಂದ ಇಷ್ಟು ಬೇಗ ಹೊರ ಬಂದಲ್ಲಿ ಸಾಕ್ಷಿಗಳ ನಾಶ ಹಾಗೂ ಪ್ರಕರಣವನ್ನೇ ಮಿಸ್ ಲೀಡ್ ಮಾಡಬಹುದು.
ನಟಿ ರನ್ಯಾ ರಾವ್ ಕಳೆದ ಒಂದು ವರ್ಷದ ಅವಧಿಯಲ್ಲಿ ಇಪತ್ತೇಳು ಬಾರಿ ವಿದೇಶಿ ಪ್ರಯಾಣ ಮಾಡಿದ್ದಾರೆ.ಈ ವೇಳೆ ಅಕ್ರಮ ಚಿನ್ನ ಸಾಗಣೆ ಮಾಡಿದ್ದು, ಇದರಿಂದ ಮೂವತ್ತೆಂಟು ಪರ್ಸೆಂಟ್ ಕಸ್ಟಮ್ಸ್ ಸುಂಕ ವಂಚನೆ ಆಗಿದೆ. ಇದರಿಂದ ಒಟ್ಟು 4,83,72,694 ರೂಪಾಯಿ ಸುಂಕ ವಂಚನೆ ಆಗಿದೆ ಎಂದು ಕೋರ್ಟ್ ಗಮನಕ್ಕೆ ತರಲಾಗಿದೆ. ಜೊತೆಗೆ ಆಕೆಯ ಬಳಿ ದುಬೈ ರೆಸಿಡೆಂಟ್ ಐಡೆಂಟಿಟಿ ಕಾರ್ಡ್ ಇದೆ ಎಂದಿದ್ದಾರೆ ವಕೀಲರು.
ಎಲ್ಲಾ ಅಂಶಗಳನ್ನು ಪರಿಗಣಿಸಿರುವ ಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಈ ಬೆನ್ನಲ್ಲೇ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಎರಡನೇ ಆರೋಪಿ ತರುಣ್ ರಾಜ್ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬರಲಿದೆ. ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ನಲ್ಲಿ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ನಡೆಯಲಿದೆ.

ತರುಣ್ ರಾಜ್ ಜಾಮೀನು ಅರ್ಜಿ ವಿಚಾರಣೆಗೂ ಮುನ್ನವೇ ತರುಣ್ ರಾಜ್ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಡಿಆರ್ಐ ಪರ ವಕೀಲರು ತಯಾರಿ ಮಾಡಿಕೊಂಡಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತರುಣ್ ರಾಜ್ಗೆ ಕೋರ್ಟ್ ಜಾಮೀನು ನೀಡುತ್ತಾ..? ಅನ್ನೋದನ್ನು ಕಾದು ನೋಡ್ಬೇಕು.