
ಬೆಂಗಳೂರು: ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆದಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ಮಾಡಲಾಗಿದೆ. ವಿಧಾನಸೌಧದ ಕ್ಯಾಬಿನೆಟ್ ಹಾಲ್ನಲ್ಲಿ ನಡೆದ ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ.
ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಣಯಗಳು ಏನು ಅನ್ನೋದನ್ನು ನೋಡೋದಾದರೆ ಗುತ್ತಿಗೆಯಲ್ಲಿ ಮುಸ್ಲೀಮರಿಗೆ ಮೀಸಲಾತಿ ವಿಚಾರವಾಗಿ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ಸದನಕ್ಕೆ ವಿಧೇಯಕ ತರಲು ಕ್ಯಾಬಿನೆಟ್ನಲ್ಲಿ ಸಮ್ಮತಿ ಸಿಕ್ಕಿದೆ. ಒಂದು ಕೋಟಿವರೆಗಿನ ಕಾಮಗಾರಿಗಳಲ್ಲಿ ಮುಸ್ಲೀಮರಿಗೆ ಮೀಸಲಾತಿ ನೀಡುವುದು. ಹಿಂದುಳಿದ, ಇತರೇ ಹಿಂದುಳಿದ ವರ್ಗಗಳಿಗೆ ಮಾತ್ರ ಇದ್ದ ಕಾಮಗಾರಿ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೂ ಮೀಸಲಾತಿ ವಿಸ್ತರಿಸಿ ಗುತ್ತಿಗೆ ನೀಡಲು ಅವಕಾಶ ಕೊಡಲು ನಿರ್ಧಾರ ಮಾಡಲಾಗಿದೆ.

ಎಸ್ಸಿ ಎಸ್ಟಿ ಸಮುದಾಯಕ್ಕೆ ಈ ಹಿಂದೆ ಇದ್ದ 1 ಕೋಟಿವರೆಗಿನ ಮೊತ್ತ ವಿಸ್ತರಿಸಿ 2 ಕೋಟಿವರೆಗೆ ಮೀಸಲಾತಿ ಅವಕಾಶ ಕಲ್ಪಿಸಲಿದೆ. ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಇನ್ನು ಇ-ಖಾತಾ ನಿರೀಕ್ಷೆಯಲ್ಲಿದ್ದವರಿಗೂ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗ್ರಾಮೀಣ ಭಾಗದಲ್ಲಿ ಇ ಖಾತಾ ನೀಡಲು ಸಚಿವ ಸಂಪುಟದ ಒಪ್ಪಿಗೆ ನೀಡಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಧೇಯಕಕ್ಕೆ ಅನುಮೋದನೆ ಕೊಡಲಾಗಿದೆ.

ಈ ವಿಧೇಯಕ ಅಂಗೀಕಾರ ಆದರೆ ಗ್ರಾಮೀಣ ಭಾಗದ ಕಂದಾಯ ಬಡಾವಣೆ, ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಮನೆ ನಿವೇಶನಗಳು ಸಕ್ರಮ ಮಾಡಲಾಗುತ್ತದೆ. ಕೆಪಿಎಸ್ಸಿಯಲ್ಲಿ ಲೋಪ ದೋಷಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಸುಧಾರಣಾ ಕ್ರಮಗಳ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಲಾಗಿದೆ. ಲೋಕಸೇವಾ ಆಯೋಗದ ಪರೀಕ್ಷೆ ಆಡಳಿತ ಸುಧಾರಣೆಗೆ ಪ್ರತ್ಯೇಕ ಸಮಿತಿ ರಚನೆಗೆ ಸಂಪುಟ ಒಪ್ಪಿಗೆ ನೀಡಿದೆ. ಸಮಿತಿ ಶಿಫಾರಸುಗಳನ್ನು ಪಾಲನೆ ಮಾಡುವ ಬಗ್ಗೆಯೂ ಕ್ಯಾಬಿನೆಟ್ ಸಮಾಲೋಚನೆ ಮಾಡಲಾಗಿದೆ. ಲೋಕಸೇವಾ ಆಯೋಗದ ಸಮಗ್ರ ಸುಧಾರಣೆಗೆ ಕ್ರಮ ವಹಿಸಲು ಕ್ಯಾಬಿನೆಟ್ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಅಧಿವೇಶನದ ಹೊತ್ತಿಗೆ ಸಮಗ್ರ ಸುಧಾರಣಾ ವಿಧೇಯಕ ಮಂಡನೆ ಮಾಡುವ ಸಾಧ್ಯತೆ ಇದೆ.